ಬಿಬಿಎಂಪಿ ಅಕ್ರಮ: ಬಹಿರಂಗ ಚರ್ಚೆಗೆ ಬಿಜೆಪಿ ಆಹ್ವಾನ

7

ಬಿಬಿಎಂಪಿ ಅಕ್ರಮ: ಬಹಿರಂಗ ಚರ್ಚೆಗೆ ಬಿಜೆಪಿ ಆಹ್ವಾನ

Published:
Updated:
ಬಿಬಿಎಂಪಿ ಅಕ್ರಮ: ಬಹಿರಂಗ ಚರ್ಚೆಗೆ ಬಿಜೆಪಿ ಆಹ್ವಾನ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) 2013– 14ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು 21,700 ‍ಪುಟಗಳಷ್ಟು ದಾಖಲೆಗಳನ್ನು ಪ್ರದರ್ಶಿಸಿದ ಬಿಜೆಪಿ ಮುಖಂಡರು, ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದರು.

‘ಬಿಬಿಎಂಪಿಯ 74 ಹಗರಣಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ಯಾವುದೂ ನಕಲಿ ಅಲ್ಲ. ನಮ್ಮ ಪಕ್ಷದ ನಗರ ಘಟಕದ ವಕ್ತಾರ ಎನ್‌.ಆರ್. ರಮೇಶ್ ಬಿಡುಗಡೆ ಮಾಡಿದ್ದರು. ಆರೋಪಗಳಿಗೆ ದಾಖಲೆ ಕೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಬೇಕು’ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಒತ್ತಾಯಿಸಿದರು.

‘ಹೈಕಮಾಂಡ್‌ಗೆ ಸಿದ್ದರಾಮಯ್ಯ ಎಟಿಎಂ ಇದ್ದಂತೆ. ಆದ ಕಾರಣ ಕ್ರಮ ಕೈಗೊಳ್ಳುತ್ತಿಲ್ಲ. ಅವರ ವಿರುದ್ಧವೇ ಆರೋಪಗಳಿದ್ದರೂ ಹೈಕಮಾಂಡ್ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಳ್ಳನ ಕೈಗೆ ಬೀಗದ ಕೀ ಸಿಕ್ಕಿದಂತಾಗಿದೆ’ ಎಂದರು.

ಎನ್.ಆರ್ ರಮೇಶ್ ಮಾತನಾಡಿ, ‘ಎಲ್ಲ ಹಗರಣಗಳ ಬಗ್ಗೆ ದಾಖಲೆ ಇಟ್ಟುಕೊಂಡೆ ಆರೋಪ ಮಾಡಿದ್ದೇವೆ. ಕಾಂಗ್ರೆಸ್‌ನವರು ದಿನಾಂಕ ನಿಗದಿ ಮಾಡಿದರೆ ಇಷ್ಟೂ ದಾಖಲೆಗಳನ್ನು ಟೌನ್‌ ಹಾಲ್ ಮುಂದೆ ಪ್ರದರ್ಶನಕ್ಕೆ ಇಡುತ್ತೇವೆ. ಅಲ್ಲೇ ಬಹಿರಂಗ ಚರ್ಚೆ ನಡೆಸೋಣ’ ಎಂದು ಸವಾಲ ಹಾಕಿದರು.‌

‘ಈ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ.ಶಿವಕುಮಾರ್‌‌ಗೂ ಪಾಲು ಹೋಗಿದೆ. ಈ ಆರೋಪ ಸುಳ್ಳಾಗಿದ್ದರೆ ನನ್ನ ವಿರುದ್ಧ ಯಾರೊಬ್ಬರೂ ಏಕೆ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ಈ ಆರೋಪಗಳ ಬಗ್ಗೆ ಮಂಪುರು ಪರೀಕ್ಷೆಗೆ ಒಳಪಡಲು ನಾನು ಸಿದ್ಧನಿದ್ದೇನೆ. ಕಿಕ್‌ ಬ್ಯಾಕ್ ಪಡೆದಿಲ್ಲ ಎಂದರೆ ಕಾಂಗ್ರೆಸ್ ನಾಯಕರು ಮಂಪರು ಪರೀಕ್ಷೆಗೆ ಸಿದ್ಧರಾಗಲಿ’ ಎಂದರು.

‘ಬಿಬಿಎಂಪಿ ಸ್ವತ್ತುಗಳನ್ನು ಬಿಜೆಪಿ ಮಾತ್ರ ಅಡಮಾನ ಇಟ್ಟಿಲ್ಲ. ಕಾಂಗ್ರೆಸ್ ಆಡಳಿದ ಅವಧಿಯಲ್ಲೂ ಕೆಂಪೇಗೌಡ ಮ್ಯೂಸಿಯಂ ಅಡವಿಟ್ಟು ₹ 1,430 ಕೋಟಿ ಸಾಲ ಪಡೆಯಲಾಗಿದೆ. ವಿಶ್ವ ವಾಣಿಜ್ಯ ಕಟ್ಟಡದ ಮಾದರಿಯಲ್ಲಿ ಕಟ್ಟಡ ನಿರ್ಮಿಸಲು ಸಾಲ ಪಡೆಯಲಾಗಿದೆ. ಆದರೆ, ಆ ಕಟ್ಟಡ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮಹಾರಾಜ ಕಾಂಪ್ಲೆಕ್ಸ್‌ ಮಾರಾಟ ಮಾಡಿದ್ದು ಯಾರು’ ಎಂದು ಅವರು ಪ್ರಶ್ನಿಸಿದರು.

‘ಮಾರುಕಟ್ಟೆಯಲ್ಲಿ ಪೆಟಿಕೋಟ್ ಮಾರಾಟ ಮಾಡುತ್ತಿದ್ದ ಚಂದ್ರಪ್ಪ ಎಂಬಾತ ಹಲವು ವಾಣಿಜ್ಯ ಕಟ್ಟಡಗಳನ್ನು ಖರೀದಿಸಿದ್ದಾನೆ. ಆತ ದಿನೇಶ್ ಗುಂಡೂರಾವ್ ಆಪ್ತ ಎಂಬುದು ಬಹಿರಂಗ ಸತ್ಯ. ಇದನ್ನು ಅವರು ಒಪ್ಪಿಕೊಳ್ಳಲಿ’ ಎಂದೂ ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry