ನಲಪಾಡ್‌ ಜಾಮೀನು ಅರ್ಜಿ ವಿಚಾರಣೆ 9ಕ್ಕೆ

7

ನಲಪಾಡ್‌ ಜಾಮೀನು ಅರ್ಜಿ ವಿಚಾರಣೆ 9ಕ್ಕೆ

Published:
Updated:
ನಲಪಾಡ್‌ ಜಾಮೀನು ಅರ್ಜಿ ವಿಚಾರಣೆ 9ಕ್ಕೆ

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮದ್‌ ನಲಪಾಡ್ ಹ್ಯಾರಿಸ್‌ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ 2 ದಿನಗಳ ಕಾಲಾವಕಾಶ ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ 9ರ (ಶುಕ್ರವಾರ) ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದೆ.

ಬುಧವಾರ ಮಧ್ಯಾಹ್ನ ವಿಚಾರಣೆ ವೇಳೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಂ.ಎಸ್.ಶ್ಯಾಮಸುಂದರ್‌, ‘ಆಕ್ಷೇಪಣೆ ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಇದೇ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ಮಧ್ಯಂತರ ಜಾಮೀನು ಮನವಿ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಪೀಠಕ್ಕೆ ಕೋರಿದರು.

ಇದನ್ನು ಆಕ್ಷೇಪಿಸಿದ ಶ್ಯಾಮಸುಂದರ್‌, ‘ಮಧ್ಯಂತರ ಜಾಮೀನು ಅಂಶದ ಮೇಲೆ ವಿಚಾರಣೆ ನಡೆದರೆ ಸುದೀರ್ಘ ಆಕ್ಷೇಪಣೆ ಸಲ್ಲಿಸುತ್ತೇವೆ. ಇದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮುಖ್ಯ ಮನವಿಯ ಮೇಲೆಯೇ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದರು.

ಸೇರ್ಪಡೆ ಅರ್ಜಿ: ‘ಪ್ರಕರಣದಲ್ಲಿ ಪ್ರಾಸಿಕ್ಯೂಟರ್‌ಗೆ ಸಹಕರಿಸಲು ನನ್ನನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು’ ಎಂಬ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಅವರ ಅರ್ಜಿಯನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ಇದಕ್ಕೂ ಮುನ್ನ ಬೆಳಗಿನ ಕಲಾಪದಲ್ಲಿ ನಲಪಾಡ್‌ ಪರ ವಕೀಲರು ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಆದರೆ, ನ್ಯಾಯಪೀಠ, ವಿಚಾರಣೆಗೆ ನಮೂದಾದ ದೈನಂದಿನ ಪ್ರಕರಣಗಳ ಪಟ್ಟಿಯ (ಕಾಸ್‌ಲಿಸ್ಟ್‌) ಸರದಿ ಅನುಸಾರವೇ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಯು.ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಮೊಹಮದ್ ನಲಪಾಡ್‌ ಹ್ಯಾರಿಸ್‌ ಕಳೆದ ತಿಂಗಳು 17ರಂದು ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ನಲಪಾಡ್‌ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry