ಬಿಜೆಪಿಯವರಿಗೆ ಸಂಸ್ಕಾರ ಇಲ್ಲ: ಸಿ.ಎಂ

ಭಾನುವಾರ, ಮಾರ್ಚ್ 24, 2019
31 °C

ಬಿಜೆಪಿಯವರಿಗೆ ಸಂಸ್ಕಾರ ಇಲ್ಲ: ಸಿ.ಎಂ

Published:
Updated:
ಬಿಜೆಪಿಯವರಿಗೆ ಸಂಸ್ಕಾರ ಇಲ್ಲ: ಸಿ.ಎಂ

ಬೆಂಗಳೂರು: ‘ನನಗೂ ಮಾತನಾಡಲು ಬರುತ್ತದೆ. ಆದರೆ, ಬಿಜೆಪಿಯವರ ಮಟ್ಟಕ್ಕೆ ಇಳಿದು ಮಾತನಾಡಲಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದರು.

‘ನಾನು ಯಾವತ್ತೂ ಕೆಳಮಟ್ಟಕ್ಕೆ ಇಳಿದು ಮಾತನಾಡಿಲ್ಲ. ಬಿಜೆಪಿ ನಾಯಕರ ಟೀಕೆಗಳು ಅವರ ಸಂಸ್ಕೃತಿಯನ್ನು ತೋರುತ್ತದೆ. ಅವರಿಗೆ ಸಂಸ್ಕಾರ, ಮನುಷ್ಯತ್ವ ಯಾವುದೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕೆ ಮಾಡಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಕನ್ನಡಿಗರು ಇಂಥದ್ದನ್ನು ಸಹಿಸುವುದಿಲ್ಲ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದೂ ಹೇಳಿದರು.

‘ಉಡುಪಿಗೆ ಬಂದರೆ ಬಡಿಗೆ ತೆಗೆದುಕೊಂಡು ಹೊಡೆಯುವುದಾಗಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಒಬ್ಬ ರಾಜಕಾರಣಿಯಾಗಿ ಅವರು ಆ ರೀತಿ ಮಾತನಾಡುವುದು ಸರಿಯೇ. ಇಂಥ ಹೇಳಿಕೆಗಳ ಮೂಲಕ ಅವರು ಪ್ರಚೋದನೆ ನೀಡುತ್ತಿದ್ದಾರೆ’ ಎಂದೂ ಟೀಕಿಸಿದರು.

‘ಅಶೋಕ ಖೇಣಿ ಕಾಂಗ್ರೆಸ್ ಸೇರಿರುವುದರಿಂದ ಯಾವುದೇ ಮುಜುಗರ ಆಗಿಲ್ಲ. ಇಷ್ಟಕ್ಕೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಭರವಸೆ ನೀಡಿಲ್ಲ. ಅವರು ಬೇಷರತ್ ಆಗಿ ಪಕ್ಷ ಸೇರಿದ್ದಾರೆ. ಖೇಣಿ ಅವರಿಗೆ ಟಿಕೆಟ್ ಕೊಡುವುದು ಅಥವಾ ಬಿಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ’ ಎಂದರು.

‘ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಕಡಿದುಕೊಳ್ಳುವುದಾಗಿ ಜೆಡಿಎಸ್ ನಾಯಕರು ಹೇಳಿದ್ದಾರೆ. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ತಿಳಿಸಿದರು.

‘ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ನೀಡುತ್ತಿದ್ದ ಅನುದಾನವನ್ನು ಕಾನೂನು ಪ್ರಕಾರವೇ ವಾಪಸು ಪಡೆಯಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದು ಟೀಕಿಸಿದರು.

ಚಿಕ್ಕೋಡಿ ಜಿಲ್ಲೆ ಘೋಷಿಸಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕಂದಾಯ ವಿಭಾಗವನ್ನು ಜಿಲ್ಲೆಯಾಗಿ ಘೋಷಿಸುವಂತೆ ಸಂಸದ ಪ್ರಕಾಶ್ ಹುಕ್ಕೇರಿ ನೇತೃತ್ವದ, ಮಠಾಧೀಶರನ್ನು ಒಳಗೊಂಡ ನಿಯೋಗ ಮನವಿ ಸಲ್ಲಿಸಿತು.

‘ಶಶಿಕಲಾಗೆ ರಾಜಾತಿಥ್ಯಕ್ಕೆ ಸೂಚಿಸಿಲ್ಲ’

ಬೆಂಗಳೂರು:
‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಶಿಕಲಾಗೆ ರಾಜಾತಿಥ್ಯ ನೀಡುವಂತೆ ಬಂದಿಖಾನೆ ಇಲಾಖೆಯ ಡಿಜಿಪಿಗೆ ನಾನು ಸೂಚನೆ ನೀಡಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸೂಚನೆ ಮೇರೆಗೆ ಶಶಿಕಲಾ ಅವರಿಗೆ ಹಾಸಿಗೆ ಮತ್ತು ದಿಂಬು ಸೌಲಭ್ಯ ಒದಗಿಸಿರುವುದಾಗಿ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್ ಹೇಳಿಕೆಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

‘ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ತನಿಖೆಯನ್ನು ಎಸಿಬಿಗೆ ವಹಿಸಲಾಗಿದೆ. ಹೀಗಾಗಿ ಸತ್ಯನಾರಾಯಣರಾವ್ ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಕಾರಾಗೃಹದಲ್ಲಿ ಶಶಿಕಲಾಗೆ ಮೂಲಸೌಕರ್ಯ ಒದಗಿಸಿಲ್ಲ ಎಂದು ತಮಿಳುನಾಡಿನ ಒಂದು ನಿಯೋಗ ದೂರು ನೀಡಿತ್ತು. ಹೀಗಾಗಿ ಕಾನೂನು ರೀತಿಯಲ್ಲಿ ಹಾಗೂ ಜೈಲಿನ ಮ್ಯಾನ್ಯುಯಲ್‌ ಪ್ರಕಾರವೇ ಸೌಲಭ್ಯಗಳನ್ನು ಶಶಿಕಲಾಗೆ ಕೊಡುವಂತೆ ರಾವ್‌ಗೆ ಸೂಚಿಸಲಾಗಿತ್ತು. ಆದರೆ, ರಾಜಾತಿಥ್ಯ ಒದಗಿಸುವಂತೆ ಹೇಳಿರಲಿಲ್ಲ’ ಎಂದೂ ಮುಖ್ಯಮಂತ್ರಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry