‘ಕೈ’ ಬಾಗಿನ ಯಾತ್ರೆ; ಕಮಲ ಜಾತ್ರೆ!

7
ಪ್ರತಿಷ್ಠಿತ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ರಂಗೇರಿದ ಅಖಾಡ

‘ಕೈ’ ಬಾಗಿನ ಯಾತ್ರೆ; ಕಮಲ ಜಾತ್ರೆ!

Published:
Updated:

ವಿಜಯಪುರ: ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಿದಂತೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಅಖಾಡವೂ ರಂಗೇರುತ್ತಿದೆ. ಚುನಾವಣಾ ಬಿಸಿ ತಾರಕಕ್ಕೇರುತ್ತಿದೆ.

ಕೃಷ್ಣೆಯ ಕೃಪೆಯಿಂದ ಮೈದುಂಬಿದ ಕೆರೆಗಳಿಗೆ, ಕಾಲುವೆಗಳಿಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸಾರಥ್ಯದಲ್ಲಿ ‘ಕೈ’ ಪಡೆ ಬಾಗಿನ ಅರ್ಪಿಸುವುದನ್ನು ಮುಂದುವರಿಸುತ್ತಿದ್ದಂತೆ, ಕಮಲ ಪಾಳೆಯವೂ ತನ್ನ ಚಟುವಟಿಕೆ ಚುರುಕುಗೊಳಿಸಿದೆ.

ಎಂ.ಬಿ.ಪಾಟೀಲ ಫೌಂಡೇಷನ್‌ ನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌, ಬಾಗಿನ ಅರ್ಪಿಸಿದ ನಾರಿಯರಿಗೆ ಉಡಿ ತುಂಬಿ ಸೀರೆ, ಕೊಡದ ಉಡುಗೊರೆ, ಯುವಕರಿಗೆ ಕ್ರಿಕೆಟ್‌ ಕಿಟ್‌ ಸೇರಿದಂತೆ ಇನ್ನಿತರ ಕ್ರೀಡಾ ಸಾಮಗ್ರಿ, ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೂ ಬಾಂಡೆ ಸಾಮಗ್ರಿ ನೀಡಿದ್ದಕ್ಕೆ ಪ್ರತಿಯಾಗಿ, ಬಿಜೆಪಿ ‘ಕಮಲ ಜಾತ್ರೆ’ ಮೂಲಕ ಮತದಾರರನ್ನು ಆಕರ್ಷಿಸಲು ಮುಂದಾಗಿದೆ.

ಎರಡನೇ ಹಂತದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ರಾಹುಲ್‌ ಗಾಂಧಿ ಸಾರಥ್ಯದಲ್ಲಿ ಫೆ. 24ರಂದು ಮಹಿಳಾ ಸಮಾವೇಶ ನಡೆಸಿದ ತಿಕೋಟಾದಲ್ಲಿಯೇ ‘ಕಮಲ ಜಾತ್ರೆ’ ಮಾರ್ಚ್‌ 9ರಿಂದ ಮೂರು ದಿನ ನಡೆಯಲಿರುವುದು ವಿಶೇಷ.

ತುಬಚಿ–ಬಬಲೇಶ್ವರ ಏತ ನೀರಾವರಿ ಯೋಜನೆಯ ತಿಕೋಟಾ ಮುಖ್ಯ ಕಾಲುವೆಗೆ ರಾಹುಲ್‌ ಗಾಂಧಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಅಹೋರಾತ್ರಿ ಶ್ರಮಿಸಿದರೂ, ಸಮಯಕ್ಕೆ ಸರಿಯಾಗಿ ನೀರು ಹರಿದಿರಲಿಲ್ಲ. ಇದರಿಂದ ರಾಹುಲ್‌ ಬಾಗಿನ ಅರ್ಪಿಸಿರಲಿಲ್ಲ. ಇದೀಗ ಪ್ರಾಯೋಗಿಕವಾಗಿ ನೀರು ಹರಿಯುತ್ತಿದ್ದು, ಸಚಿವ, ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಮಾರ್ಚ್‌ 9ರ ಶುಕ್ರವಾರ ಬೆಳಿಗ್ಗೆ ಬಾಗಿನ ಅರ್ಪಿಸಲಿದ್ದಾರೆ.

‘ಕೈ’ ಪಡೆಯ ಬಾಗಿನ ಯಾತ್ರೆ, ಬಿಜೆಪಿಯ ಕಮಲ ಜಾತ್ರೆ ತಿಕೋಟಾದಲ್ಲಿ ಒಂದೇ ದಿನ ನಿಗದಿಯಾಗಿವೆ. ಎರಡೂ ಕಾರ್ಯಕ್ರಮಕ್ಕೂ ಅಪಾರ ಸಂಖ್ಯೆಯ ಜನರನ್ನು ಜಮಾಯಿಸುವ ಕಸರತ್ತು ಬಿರುಸುಗೊಂಡಿದೆ.

ಮಾರ್ಚ್‌ 10ರ ಶನಿವಾರ ಕಾಖಂಡಕಿ ಬಳಿ ಮುಳವಾಡ ಏತ ನೀರಾವರಿ ಯೋಜನೆಯ ಮಲಘಾಣ ಪಶ್ಚಿಮ ಕಾಲುವೆಗೆ ಸಚಿವರು ಬಾಗಿನ ಅರ್ಪಿಸುವ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ‘ಬಾಗಿನ ಯಾತ್ರೆ’ ಮುಂದುವರೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಿಎಸ್‌ವೈ ಪ್ರತಿಷ್ಠೆ: ‘ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರತಿಷ್ಠೆಯ ಪಣವನ್ನಾಗಿ ಸ್ವೀಕರಿಸಿದ್ದು, ಜಿಲ್ಲೆಗೊಂದರಂತೆ ನಡೆಯಲಿರುವ ‘ಕಮಲ ಜಾತ್ರೆ’ಯನ್ನು ಬಿಎಸ್‌ವೈ ಖುದ್ದು ಆಸಕ್ತಿಯಿಂದ ಸಚಿವರ ಮತಕ್ಷೇತ್ರದಲ್ಲೇ ನಡೆಸುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಮೂರು ದಿನದ ಜಾತ್ರೆಗೆ ಕನಿಷ್ಠ 1 ಲಕ್ಷ ಜನ ಭೇಟಿ ನೀಡುವಂತೆ ನೋಡಿಕೊಳ್ಳಿ. ಕ್ಷೇತ್ರದ ವಿವಿಧೆಡೆಯಿಂದ ಜನರನ್ನು ಜಾತ್ರೆಗೆ ಕರೆ ತನ್ನಿ. ನಿತ್ಯ 30 ಸಾವಿರ ಜನರು ಪಾಲ್ಗೊಳ್ಳಲೇಬೇಕು. ಎಲ್ಲ ಸಿದ್ಧತೆಗಳನ್ನು ಅದ್ಧೂರಿಯಿಂದ ನಡೆಸಲು ಹೇಳಿದ್ದಾರೆ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ತಿಳಿಸಿದರು.

**

ಜಾತ್ರೆ ಆಕರ್ಷಣೆ

ಮೂರು ದಿನದ ಜಾತ್ರೆ. ಮಧ್ಯಾಹ್ನ 3ಕ್ಕೆ ಆರಂಭ. ರಾತ್ರಿ 9ಕ್ಕೆ ಮುಕ್ತಾಯ. ಜನರ ಕಲ್ಯಾಣಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶ.

ಮೆಗಾ ಲೇಸರ್‌ ಶೋ, ಮಕ್ಕಳಿಗಾಗಿ ವಿವಿಧ ಆಟೋಟ, ನಗೆ ಕೂಟ, ಕ್ರೀಡೆಗಳು, ನೃತ್ಯ, ಸೆಲ್ಪಿ ಬೂತ್, ಜಾದೂ ಪ್ರದರ್ಶನ, ಚಾಯ್ ಪೇ ಚರ್ಚಾ, ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು ಸೇರಿದಂತೆ ಇನ್ನಿತರೆ ಮನರಂಜನೆ ಕಾರ್ಯಕ್ರಮ ನಡೆಯಲಿವೆ.

**

ತಿಕೋಟಾ ಬಸ್‌ ನಿಲ್ದಾಣ ಸನಿಹ ಜಾತ್ರೆ ನಡೆಯಲಿದೆ. 15ಕ್ಕೂ ಹೆಚ್ಚು ಮಳಿಗೆ ತೆರೆಯಲಾಗುವುದು. ಪುರುಷರು, ಮಹಿಳೆಯರು, ಮಕ್ಕಳನ್ನು ಈ ಜಾತ್ರೆ ಆಕರ್ಷಿಸಲಿದೆ.

-ವಿಠ್ಠಲ ಕಟಕದೊಂಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry