ಮೊದಲಿನ ಸ್ನೇಹ ಸಂಬಂಧದತ್ತ ಜನರ ಹೆಜ್ಜೆ

ಶನಿವಾರ, ಮಾರ್ಚ್ 23, 2019
34 °C
ನಾವುಂದ ಅಂಡರ್‌ಪಾಸ್ ಪುರಾಣಕ್ಕೆ ತೆರೆ

ಮೊದಲಿನ ಸ್ನೇಹ ಸಂಬಂಧದತ್ತ ಜನರ ಹೆಜ್ಜೆ

Published:
Updated:
ಮೊದಲಿನ ಸ್ನೇಹ ಸಂಬಂಧದತ್ತ ಜನರ ಹೆಜ್ಜೆ

ಬೈಂದೂರು: ನಾವುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಹೆದ್ದಾರಿ ಅಂಡರ್‌ಪಾಸ್ ಬೇಕು, ಅದು ಬೇಡ ‘ಯು’ ತಿರುವು ಸಾಕು ಎಂದು ಸರಿಸುಮಾರು ಎರಡು ವರ್ಷ ನಡೆದ ಹೊಯ್ದಾಟ ಈಗ ಅಂತಿಮವಾಗಿ ಸಮಸ್ಥಿತಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಮೂಲ ಯೋಜನೆಯಂತೆ ಅಂಡರ್‌ಪಾಸ್ ಕಾಮಗಾರಿ ಆರಂ ಭವಾಗಿ, ದಿನದಿಂದ ದಿನಕ್ಕೆ ವೇಗ ಪಡೆಯುವುದರೊಂದಿಗೆ ಎರಡು ತೀವ್ರಾಭಿಪ್ರಾಯಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ ಇಲ್ಲಿನ ನಾಗರಿಕರು.

ಮೂಲ ಯೋಜನೆಯಂತೆ ಇಲ್ಲಿ ಅಂಡರ್‌ಪಾಸ್ ರಚನೆಯಾಗಬೇಕು. ಆದರೆ ಇದಕ್ಕೆ ಒಂದಷ್ಟು ಜನ ವಿರೋಧ ನಿಲುವು ತಾಳುತ್ತಿದ್ದಂತೆ ಅದಕ್ಕೆ ಪರವಾದ ಇನ್ನೊಂದು ಬಣ ಹುಟ್ಟಿಕೊಂಡಿತು. ಇಬ್ಬಣಗಳೂ ತಮ್ಮವೇ ಆದ ಪ್ರಬಲ ಕಾರಣಗಳನ್ನು ಮುಂದಿಟ್ಟುಕೊಂಡು ಪತ್ರ ವ್ಯವಹಾರ, ನಾಯಕರ ಭೇಟಿ, ಅಧಿಕಾರಿಗಳ ಮೇಲೆ ಒತ್ತಡ, ಸಭೆ, ಪ್ರತಿಭಟನೆ ಮಾರ್ಗ ಅನುಸರಿಸಿದವು. ಹೆದ್ದಾರಿ ಕಾಮಗಾರಿ ಊರನ್ನು ಭೌಗೋಳಿಕವಾಗಿ ಪೂರ್ವ–ಪಶ್ಚಿಮವಾಗಿ ಇಬ್ಭಾಗ ಮಾಡಿದ್ದರೆ, ಅಂಡರ್‌ಪಾಸ್–ಯು ಟರ್ನ್ ಜನರನ್ನು ಇಬ್ಭಾಗ ಮಾಡಿದವು.

ಗ್ರಾಮ ಪಂಚಾಯಿತಿ ಸಭೆ, ಕೆಳ ಹಂತದ ನಾಯಕರ ಮಧ್ಯಸ್ಥಿಕೆ ಫಲ ನೀಡದಿದ್ದಾಗ ಸಂಸದರ ಪ್ರತಿನಿಧಿ ಬಂದು ಉಭಯ ಬಣಗಳ ನಡುವೆ ರಾಜಿಗೆ ಯತ್ನಿಸಿದರು. ಹೊಂದಾಣಿಕೆ ಅಸಾಧ್ಯವಾದಾಗ ಜಿಲ್ಲಾಧಿಕಾರಿಗಳನ್ನು, ಹೆದ್ದಾರಿ ಅಧಿಕಾರಿಗಳನ್ನು ಕರೆತಂದು ಸಾರ್ವಜನಿಕ ಅಭಿಪ್ರಾಯ ಆಲಿಸಿದರು. ಒಂದೊಂದು ಬಾರಿಯೂ ಜಯಾಪಜಯಗಳು ತೂಗುಯ್ಯಾಲೆಯಾಡಿದುವು. ಒಮ್ಮೆ ಒಂದು ಬಣ ಗೆದ್ದಿತು ಎಂದು ಭಾವಿಸಿ ಬೀಗಿದರೆ, ಇನ್ನೊಮ್ಮೆ ಇನ್ನೊಂದು ಬಣ ಜಯ ನಮ್ಮದಾಯಿತು ಎಂದು ಘೋಷಿಸಿಕೊಂಡಿತು.

ಈ ನಡುವೆ ಸ್ಥಗಿತಗೊಂಡ ಕಾಮ ಗಾರಿ ಆಡಳಿತಾತ್ಮಕ ಸಮಸ್ಯೆ ಸೃಷ್ಟಿಸಿತು. ಹೆದ್ದಾರಿ ಪ್ರಾಧಿಕಾರ ಯೋಜನೆಯಂತೆ ಕೆಲಸ ನಡೆಸದೆ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ದಂಡ ವಿಧಿಸುವ ಎಚ್ಚರಿಕೆ ನೀಡಿತು. ಕಾಮಗಾರಿಗೆ ಅಡ್ಡಿಯಾಗದಂತೆ ಪೊಲೀಸ್ ಬೆಂಬಲ ಒದಗಿಸುವಂತೆ ಜಿಲ್ಲಾಧಿಕಾರಿಗೆ ತಾಕೀತು ಮಾಡಿತು. ಗುತ್ತಿಗೆದಾರರು ಕಾಮಗಾರಿ ಕಣಕ್ಕಿಳಿದರು. ಅದರೊಂದಿಗೆ ಎರಡು ವರ್ಷಗಳ ಕಾಲ ಮತ್ತಮತ್ತೆ ಸುದ್ದಿ ಮಾಡಿದ ಮಿನಿಕದನ ಅಂತ್ಯಗೊಂಡಿತು ಎನ್ನುತ್ತಾರೆ ಸ್ಥಳೀಯರು.

ಇನ್ನೇನು ಒಂದೆರಡು ತಿಂಗಳಲ್ಲಿ ಎರಡೂ ಬಣಗಳ ಜನ ಅಂಡರ್‌ ಪಾಸ್‌ನಲ್ಲಿ ದಿನನಿತ್ಯ ಸಂಧಿಸಿ ಮೊದಲಿನ ತಮ್ಮ ಸ್ನೇಹ ಸಂಬಂಧಕ್ಕೆ ಮರಳಲಿದ್ದಾರೆ.

**

ಅಂಡರ್‌ಪಾಸ್ ದ್ವಂದ್ವ ಶೀಘ್ರವೇ ಕೊನೆ

ಕುಂದಾಪುರ–ಶಿರೂರು ನಡುವೆ ತ್ರಾಸಿ, ನಾವುಂದ, ನಾಗೂರು, ಕೆರ್ಗಾಲು, ಉಪ್ಪುಂದ, ಬೈಂದೂರು ಮತ್ತು ಶಿರೂರಿನಲ್ಲಿ ಅಂಡರ್‌ಪಾಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಬೈಂದೂರಿನಲ್ಲಿ ಅಂಡರ್‌ಪಾಸ್ ಬದಲಿಗೆ ಮೇಲ್ಸೇತುವೆ ಬೇಕು ಎಂಬ ಕ್ಷೀಣ ಧ್ವನಿಯನ್ನು ಅಡಗಿಸಿ ಕಾಮಗಾರಿ ಆರಂಭಿಸಲಾಗಿದ್ದರೆ, ನಾಗೂರಿನಲ್ಲಿ ಆರಂಭ ಹಂತ ದಾಟಿದ್ದ ಕೆಲಸ ಪರವಿರೋಧದ ಕಾರಣ ಸ್ಥಗಿತವಾಗಿದೆ. ಉಳಿದೆಡೆ ಯಾವುದೇ ಪ್ರತಿರೋಧ ನಡೆಯದ ಕಾರಣ ಕೆಲಸ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿವೆ. ನಾಗೂರಿನ ಕಾಮಗಾರಿ ಪ್ರಸಂಗ ಸುಖಾಂತ್ಯಗೊಂಡರೆ ಕುಂದಾಪುರ–ಶಿರೂರು ನಡುವಿನ ಅಂಡರ್‌ಪಾಸ್ ದ್ವಂದ್ವ ಕೊನೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry