ಮೂರು ಕಾಡಾನೆ ಸಾವು:ಆತಂಕ

ಬುಧವಾರ, ಮಾರ್ಚ್ 20, 2019
31 °C
ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷ: ಗಜಪಡೆಗೆ ಕರಾಳ ವರ್ಷ

ಮೂರು ಕಾಡಾನೆ ಸಾವು:ಆತಂಕ

Published:
Updated:
ಮೂರು ಕಾಡಾನೆ ಸಾವು:ಆತಂಕ

ಮುಂಡಗೋಡ: ಆಹಾರ ಅರಸುತ್ತ ರಹದಾರಿಯಲ್ಲಿ ವಾರ್ಷಿಕ ಸಂಚಾರ ನಡೆಸುವ ಗಜಪಡೆಗೆ ಈ ವರ್ಷ ‘ಸುಗಮ ಸಂಚಾರ’ವಾಗದೇ, ಐದು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಕಾಡಾನೆಗಳು ಸಾವನ್ನಪ್ಪಿವೆ.

ಅಕ್ಟೋಬರ್‌ ಮಧ್ಯಭಾಗದಿಂದ ಕಿರವತ್ತಿ ಅರಣ್ಯದ ಮೂಲಕ ತಾಲ್ಲೂಕಿಗೆ ಬರುವ ಕಾಡಾನೆಗಳು, ನಂತರ 2–3 ತಂಡಗಳಾಗಿ ಬೇರ್ಪಟ್ಟು, ಮುಂಡಗೋಡ ಹಾಗೂ ಕಾತೂರ ಅರಣ್ಯ ವಲಯದಲ್ಲಿ ಸುಮಾರು ನಾಲ್ಕು ತಿಂಗಳು ಕಾಲ ಸಂಚರಿಸಿ, ರೈತರ ಬೆಳೆಯೊಂದಿಗೆ ಚೆಲ್ಲಾಟವಾಡುತ್ತವೆ.  ಹಾಗಾಗಿ ಆನೆ–ಮಾನವ ಸಂಘರ್ಷ ಇಲ್ಲಿ ಸಾಮಾನ್ಯವಾಗಿದೆ.

ಆದರೆ, ಈ ವರ್ಷ ಫೆಬ್ರುವರಿ ಮುಗಿದರೂ ಕಾಡಾನೆಗಳು ಮರಳಿ ಕಾಡಿನತ್ತ ಮುಖ ಮಾಡದೇ, ಕಾತೂರ ಅರಣ್ಯ ವಲಯದಲ್ಲಿ ಬೀಡುಬಿಟ್ಟು ಅಡಿಕೆ, ಬಾಳೆ ತೋಟಗಳಿಗೆ ದಾಳಿ ಮಾಡುವುದು ನಿರಂತರವಾಗಿದೆ. ಈ ವರ್ಷ ಬೆಳೆ ಕೊಯ್ಲಿಗೆ ಮುಂಚೆಯೇ ತಾಲ್ಲೂಕಿಗೆ ಬಂದಿದ್ದ ಕಾಡಾನೆಗಳು, ವಾರ್ಷಿಕ ಸಂಚಾರದ ಅವಧಿ ಮುಗಿದರೂ, ಇಲ್ಲಿಯೇ ಉಳಿದಿವೆ.

ದುರಂತ ಸಾವು ಕಂಡ ಆನೆಗಳು: ಆಹಾರ ಅರಸುತ್ತ ನಾಡಿನ ಸನಿಹವೇ ಬಂದು ಹೋಗುವ ಗಜಪಡೆಗೆ ಈ ವರ್ಷ ಕರಾಳವಾಗಿ ಪರಿಣಮಿಸಿತು. ಪ್ರತ್ಯೇಕವಾಗಿ ಮೂರು ಕಾಡಾನೆಗಳ ಸಾವು ಅರಣ್ಯ ರೋದನವಾಗಿ ದಾಖಲಾಯಿತು. ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶದ ಕೆರೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಸುಮಾರು ಹತ್ತು ವರ್ಷದ ಗಂಡಾನೆ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿತ್ತು. ಕೆಲ ದಿನಗಳ ಹಿಂದೆ ಬೆಡಸಗಾಂವ್‌ ಸನಿಹ ಕಾಣಿಸಿಕೊಂಡಿದ್ದ ಹೆಣ್ಣಾನೆಯೊಂದು ನಡೆಯಲು ಆಗದೇ ನಿತ್ರಾಣಗೊಂಡು, ಮಾರನೇ ದಿನ ಬನವಾಸಿ ಅರಣ್ಯ ಪ್ರದೇಶದ ಉಲ್ಲಾಳ ಸನಿಹ ಜೀವ ಕಳೆದುಕೊಂಡಿತ್ತು. ತನ್ನೊಂದಿಗೆ ಗರ್ಭದಲ್ಲಿದ್ದ ಮರಿ ಆನೆಯೂ ಮೃತಪಟ್ಟಿತ್ತು. ಇದೇ ಅರಣ್ಯ ವ್ಯಾಪ್ತಿಯಲ್ಲಿ 30 ವರ್ಷ ವಯಸ್ಸಿನ ಹೆಣ್ಣಾನೆಯೊಂದು ಮೃತಸ್ಥಿತಿಯಲ್ಲಿ ಕಂಡುಬರುವ ಮೂಲಕ ಗಜಪಡೆಯ ಸಾವಿನ ಸಂಖ್ಯೆ ಮೂರಕ್ಕೇರಿತು.

ಜಿಂಕೆಗಳ ನಂತರ ಕಾಡಾನೆ ಸರದಿ: ಕಳೆದ ವರ್ಷ ಆಹಾರ ಅರಸುತ್ತ ನಾಡಿನತ್ತ ಬಂದಿದ್ದ ಜಿಂಕೆಗಳು, ನಾಯಿ ದಾಳಿಗೆ ಬಲಿಯಾಗಿದ್ದವು. 30ಕ್ಕೂ ಹೆಚ್ಚು ಜಿಂಕೆಗಳು ನಾಯಿ ದಾಳಿ ಇಲ್ಲವೇ ಆಹಾರ, ನೀರು ಸಿಗದೇ ಮೃತಪಟ್ಟಿದ್ದವು. ಜಿಂಕೆಗಳ ಮರಣ ಮೃದಂಗದ ನಂತರ ಕಾಡಾನೆಗಳ ದುರಂತ ಸಾವು ಮುಂದುವರೆದಿದೆ.

‘ಕಾಡಾನೆಗಳಿಗೆ ಗಾಯವಾದಾಗ ಒಳಗೊಳಗೆ ತೀವ್ರಗೊಂಡು ದೇಹ ನಿತ್ರಾಣವಾಗುತ್ತದೆ. ಏನೂ ತಿನ್ನಲಾರದೇ, ಚಲಿಸಲಾರದೇ ಸಾವು ಸಂಭವಿಸುವ ಸಾಧ್ಯತೆಯಿರುತ್ತದೆ. ಗುಂಜಾವತಿಯಲ್ಲಿ ಆನೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿತ್ತು. ಉಲ್ಲಾಳದಲ್ಲಿಯೂ ಸಹ ಗಾಯಗೊಂಡು ಮೃತಪಟ್ಟಿರಬಹುದು. ಬೆಡಸಗಾಂವ್ (ಬಾಳೆಕೊಪ್ಪ) ಸನಿಹ ಸತ್ತಿರುವ ಆನೆ ಮರಣೋತ್ತರ ವರದಿ ಬರಬೇಕಾಗಿದೆ.

ಆನೆಗಳಿಗೆ ದಿನವೊಂದಕ್ಕೆ 200–250 ಕೆ.ಜಿ ಆಹಾರ ಬೇಕಾಗುತ್ತದೆ. ತೀವ್ರ ಹಸಿವಾದಾಗ ಮರದ ತೊಗಟೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮರ್ಪಕವಾಗಿ ಆಗದೇ ‘ಸೆಪ್ಟಿಮಿಸಿಯಾ’ ಎಂಬ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಮುಂದೆ ಪೂರ್ಣವಾಗಿ ವ್ಯಾಪಿಸಿ ಜೀವಕ್ಕೂ ಹಾನಿಯಾಗುತ್ತದೆ. ಆನೆಗಳಿಗೆ ಇಂತಹ ಸಂದರ್ಭದಲ್ಲಿ ಒಮ್ಮೆಲೆ ಚಿಕಿತ್ಸೆ ಕೊಡಿಸಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ ನಿಖರ ಕಾರಣ ತಿಳಿದರೆ ಗುಣಮುಖ ಮಾಡಬಹುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್‌.ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು.

*

ಕಾಡಿನಲ್ಲಿ ಆಹಾರ, ನೀರಿನ ಕೊರತೆಯಿಂದ ಆನೆಗಳು ಮರಳಿ ಕಾಡಿಗೆ ಹೋಗುತ್ತಿಲ್ಲ. ನಮ್ಮೂರ ಬದಿಯಲ್ಲಿ ಗಜಲಕ್ಷ್ಮಿ ಸಾವು ಕಂಡಿರುವುದು ಮುಂದೆ ಏನೋ ತೊಂದರೆಯಾಗುವ ಲಕ್ಷಣಗಳಿವೆ.

–ಸುಶೀಲಾ ನಾಯ್ಕ, ಗ್ರಾಮಸ್ಥೆ

*

ಶಾಂತೇಶ ಬೆನಕನಕೊಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry