ರಾಮನಗರ ರಾಜಕಾರಣ; ಮಹಿಳೆಗಿಲ್ಲ ಆದ್ಯತೆ

ಭಾನುವಾರ, ಮಾರ್ಚ್ 24, 2019
32 °C
ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬೆರಳೆಣಿಕೆಯ ಸ್ತ್ರೀಯರಷ್ಟೇ ಸ್ಪರ್ಧೆ; ಒಮ್ಮೆ ಮಾತ್ರ ವಿಜಯದ ನಗೆ

ರಾಮನಗರ ರಾಜಕಾರಣ; ಮಹಿಳೆಗಿಲ್ಲ ಆದ್ಯತೆ

Published:
Updated:
ರಾಮನಗರ ರಾಜಕಾರಣ; ಮಹಿಳೆಗಿಲ್ಲ ಆದ್ಯತೆ

ರಾಮನಗರ: ಜಿಲ್ಲೆಯಲ್ಲಿ ಒಟ್ಟು ಮತದಾರರ ಪೈಕಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಆದರೆ ರಾಜಕೀಯವಾಗಿ ಇಲ್ಲಿ ಅವರಿಗೆ ಸ್ಥಾನಮಾನ ದೊರೆತದ್ದು ಕಡಿಮೆಯೇ ಎನ್ನುತ್ತವೆ ಅಂಕಿ–ಅಂಶಗಳು.

ತೇಜಸ್ವಿನಿ ಗೌಡ, ಅನಿತಾ ಕುಮಾರಸ್ವಾಮಿ, ಕಲ್ಪನಾ ಶಿವಣ್ಣ, ಮಮತಾ ಹೆಗಡೆ, ಆರ್‌.ವಿ. ಸುಶೀಲಮ್ಮ... ಹೀಗೆ ಬೆರಳೆಣಿಕೆಯ ಮಹಿಳೆಯರಷ್ಟೇ ಇಲ್ಲಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಅದರಲ್ಲೂ ಒಮ್ಮೆ ಮಾತ್ರ ಯಶಸ್ಸು ಮಹಿಳೆಯರ ಕೈ ಹಿಡಿದಿದೆ. ಟಿಕೆಟ್‌ ಹಂಚಿಕೆ ಹಾಗೂ ಸ್ಪರ್ಧೆಯ ವಿಚಾರದಲ್ಲಿ ಮಹಿಳೆಯರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಆದಾಗ್ಯೂ ಕೆಲವು ಕ್ಷೇತ್ರಗಳಲ್ಲಿನ ಚುನಾವಣೆಗಳು ಮಹಿಳೆಯರ ಸ್ಪರ್ಧೆಯಿಂದ ರಂಗೇರಿದ್ದು ಸುಳ್ಳಲ್ಲ.

ಗೌಡರನ್ನು ಮಣಿಸಿದ್ದ ತೇಜಸ್ವಿನಿ: ಜಿಲ್ಲೆಯ ರಾಜಕಾರಣದಲ್ಲಿ ನೆನಪಿನಲ್ಲಿ ಇಡಬಹುದಾದ ಬಹುದೊಡ್ಡ ಘಟನೆಗಳಲ್ಲಿ 2004ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಗೌಡರ ಗೆಲುವು ಒಂದಾಗಿದೆ. ಟಿ.ವಿ. ನಿರೂಪಕರಾಗಿ ಗಮನ ಸೆಳೆದಿದ್ದ ತೇಜಸ್ವಿನಿ ಅದೇ ಜನಪ್ರಿಯತೆ ಮುಂದಿಟ್ಟುಕೊಂಡು ಇಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದರು. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ರಾಮಚಂದ್ರೇಗೌಡ ಕಣಕ್ಕೆ ಇಳಿದಿದ್ದರು. ಒಟ್ಟು ಐವರ ನಡುವೆ ಸ್ಪರ್ಧೆ ನಡೆದಿತ್ತು. ಅಂತಿಮವಾಗಿ 5.84 ಲಕ್ಷ ಮತ ಗಳಿಸುವ ಮೂಲಕ ತೇಜಸ್ವಿನಿ ಗೆಲುವಿನ ನಗೆ ಬೀರಿದ್ದರು. ರಾಮಚಂದ್ರೇಗೌಡರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ದೇವೇಗೌಡರು ಮೂರನೇ ಸ್ಥಾನಕ್ಕೆ ಕುಸಿದಿದ್ದರು.‌

ಆದರೆ ಮುಂದಿನ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. 2008ರಲ್ಲಿ ರಾಮನಗರ ಜಿಲ್ಲೆಯನ್ನು ಒಳಗೊಂಡು ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಹೊಸದಾಗಿ ರಚನೆಯಾಯಿತು. ಈ ಚುನಾವಣೆಯಲ್ಲಿಯೂ ತೇಜಸ್ವಿನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಪ್ರತಿಸ್ಪರ್ಧಿಯಾಗಿದ್ದರು. ಅಂತಿಮವಾಗಿ ಎಚ್‌ಡಿಕೆ ವಿಜಯದ ನಗೆ ಬೀರುವ ಮೂಲಕ ತಂದೆ ಸೋಲಿನ ಸೋಡು ತೀರಿಸಿಕೊಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ. ಯೋಗೇಶ್ವರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ತೇಜಸ್ವಿನಿ ಮೂರನೇ ಸ್ಥಾನಕ್ಕೆ ಇಳಿದಿದ್ದರು.

ಎಚ್‌ಡಿಕೆ ವಿರುದ್ಧ ಮಮತಾ ಸ್ಪರ್ಧೆ: 2008ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಮಮತಾ ಹೆಗಡೆ ನಿಚ್ಚಾನಿ ಅವರನ್ನು ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಪುತ್ರಿಯಾದ ಮಮತಾ ತೀವ್ರ ಸ್ಪರ್ಧೆ ಒಡ್ಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ 23,678 ಮತಗಳನ್ನು ಪಡೆಯುವ ಮೂಲಕ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಅನಿತಾಗೆ ಸಿಗದ ಗೆಲುವು: ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದ ಅನಿತಾ ಕುಮಾರಸ್ವಾಮಿ ಅವರಿಗೆ ರಾಮನಗರ ರಾಜಕಾರಣದಲ್ಲಿ ಮಾತ್ರ ಇನ್ನೂ ಯಶಸ್ಸು ಕೈಹಿಡಿದಿಲ್ಲ.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಿತಾ ಗೆಲ್ಲುವ ಕನಸು ಹೊಂದಿದ್ದರು. ಆದರೆ ಚನ್ನಪಟ್ಟಣದ ಮತದಾರರ ಪೂರ್ಣ ಬೆಂಬಲ ಸಿಗಲಿಲ್ಲ. ಸೈಕಲ್ ಚಿಹ್ನೆಯಡಿ ಸ್ಪರ್ಧಿಸಿದ್ದ ಸಿ.ಪಿ. ಯೋಗೇಶ್ವರ್‌ 80,099 ಮತಗಳೊಂದಿಗೆ ಆಯ್ಕೆಯಾದರೆ, ಜೆಡಿಎಸ್ ಅಭ್ಯರ್ಥಿ 73,635 ಮತ ಪಡೆದು ನಿರಾಸೆ ಅನುಭವಿಸಿದರು.

2013ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅನಿತಾ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಒಡ್ಡಿದರು. ಅವರ ಪ್ರತಿಸ್ಪರ್ಧಿಯಾಗಿದ್ದ ಡಿ.ಕೆ. ಸುರೇಶ್‌ 5.78 ಲಕ್ಷ ಮತಗಳಿಕೆಯ ಮೂಲಕ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅನಿತಾ 4.41 ಲಕ್ಷ ಮತ ಪಡೆದು ನಿರಾಸೆ ಅನುಭವಿಸಿದರು.

ಕಲ್ಪನಾ ಸ್ಪರ್ಧೆ: 2008ರ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಲ್ಪನಾ ಶಿವಣ್ಣ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿತ್ತು. ಜೆಡಿಎಸ್‌ನಿಂದ ಎಚ್.ಸಿ. ಬಾಲಕೃಷ್ಣ ಹಾಗೂ ಬಿಜೆಪಿಯಿಂದ ಪಿ. ನಾಗರಾಜು ಕಣದಲ್ಲಿ ಇದ್ದರು. ಕಲ್ಪನಾರಿಗೆ ನಿರೀಕ್ಷೆಯಷ್ಟು ಜನಬೆಂಬಲ ಸಿಗಲಿಲ್ಲ. ಕೇವಲ 10,399 ಮತಗಳನ್ನು ಪಡೆಯುವ ಮೂಲಕ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಾಲಕೃಷ್ಣ ಬರೋಬ್ಬರಿ 75,991 ಮತಗಳೊಂದಿಗೆ ವಿಜೇತರಾದರು.

ಉಳಿದಂತೆ 1972ರ ಚುನಾವಣೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಆರ್‌.ವಿ. ಸುಶೀಲಮ್ಮ ಎಂಬುವರು ಸ್ಪರ್ಧೆ ಮಾಡಿದ್ದರು.

**

ಚುನಾವಣೆ ಕಬ್ಬಿಣದ ಕಡಲೆ

‘ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮಹಿಳೆಯರು ಸ್ಪರ್ಧಿಸುವುದು ಕಬ್ಬಿಣದ ಕಡಲೆಯೇ ಸರಿ’ ಎನ್ನುತ್ತಾರೆ ಕಲ್ಪನಾ ಶಿವಣ್ಣ.

‘2008ರಲ್ಲಿ ನಾನು ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಮುಂಜಾನೆಯೇ ನಾಯಕರ ಮನೆಯ ಬಾಗಿಲು ಮುಟ್ಟಿ, ನಂತರ ದಿನವಿಡೀ ಪ್ರಚಾರ ಕೈಗೊಳ್ಳಬೇಕಿತ್ತು. ಬರೋಬ್ಬರಿ 7,700 ಕಿ.ಮೀ. ಸುತ್ತಿದರೂ ಪೂರ್ತಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಾಗಲಿಲ್ಲ. ಕೈಯಲ್ಲಿ ಹೆಚ್ಚಿಗೆ ಹಣ ಇರಲಿಲ್ಲ. ಕುಟುಂಬದವರನ್ನು ಹೊರತುಪಡಿಸಿದರೆ ಹಿರಿಯರು, ಪಕ್ಷದ ನಾಯಕರ ಬೆಂಬಲವೂ ಸಿಗಲಿಲ್ಲ’ ಎಮದು ಅವರು ಅವರು ಹೇಳಿದರು.

‘ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮಹಿಳೆಯರು ಸ್ಪರ್ಧಿಸಬಹುದು. ಆದರೆ ಸದ್ಯದಲ್ಲಿ ವಿಧಾನಸಭೆ, ಲೋಕಸಭೆಗೆ ಸ್ಪರ್ಧಿಸುವುದು ಕಷ್ಟವೇ. ಇಲ್ಲಿಯೂ ಸ್ತ್ರೀಯರಿಗೆ ರಾಜಕೀಯ ಮೀಸಲಾತಿ ದೊರೆತಿದ್ದೇ ಆದಲ್ಲಿ ಚಿತ್ರಣ ಕೊಂಚ ಬದಲಾಗಬಹುದು’ ಎಂದು ಅವರು ಹೇಳಿದರು.

‘ಇವತ್ತು ಪ್ರತಿ ಚುನಾವಣೆಯೂ ಜಿದ್ದಿನಿಂದ ಕೂಡಿರುತ್ತದೆ. ಸಾಕಷ್ಟು ಒತ್ತಡ ಇರುತ್ತದೆ. ಎಲ್ಲವನ್ನೂ ಎದುರಿಸಿ ಪ್ರಚಾರ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ವಿಚಲಿತರಾಗುತ್ತಾರೆ. ಹೀಗಾಗಿ ವಿಧಾನಸಭೆ ಚುನಾವಣೆಗಳು ಇಂದಿಗೂ ಪುರುಷ ಪ್ರಧಾನವೇ ಆಗಿವೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.

**

ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಿದ ಅನುಭವ ಇದ್ದಾಗ್ಯೂ ವಿಧಾನಸಭೆ ಚುನಾವಣೆ ವೇಳೆ ನಾನು ಸಾಕಷ್ಟು ತೊಂದರೆ ಅನುಭವಿಸಿದೆ. ಅದರಿಂದ ಹೊರಬರಲು ವರ್ಷಗಳೇ ಬೇಕಾಯಿತು

-ಕಲ್ಪನಾ ಶಿವಣ್ಣ, ಮಾಗಡಿ

**

ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಒತ್ತಡ ಹೆಚ್ಚು. ಸಾರ್ವಜನಿಕ ಸಭೆ, ಪ್ರವಾಸದ ವೇಳೆಯಲ್ಲೆಲ್ಲ ಮಹಿಳೆಯರು ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಟಿಕೆಟ್‌ ಆಕಾಂಕ್ಷಿಗಳೂ ಕಡಿಮೆ

-ಸಿ.ಎಂ. ಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry