ಅಳಿವಿನಂಚಿಗೆ ಉತ್ತನಹಳ್ಳಿ ಕೆರೆ

7
ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಗೆ ಅಡ್ಡಿ

ಅಳಿವಿನಂಚಿಗೆ ಉತ್ತನಹಳ್ಳಿ ಕೆರೆ

Published:
Updated:
ಅಳಿವಿನಂಚಿಗೆ ಉತ್ತನಹಳ್ಳಿ ಕೆರೆ

ವರುಣಾ: ಸರ್ಕಾರಗಳು ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೂ ಹಲವಾರು ಕೆರೆಗಳು ಅಳಿವಿನಂಚಿಗೆ ಸಾಗುತ್ತಿವೆ. ಅಂತಹವುಗಳ ಸಾಲಿನಲ್ಲಿ ಹೋಬಳಿಯ ಉತ್ತನಹಳ್ಳಿ ಕೆರೆಯೂ ಒಂದು. ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಹಲವು ವರ್ಷಗಳ ಇತಿಹಾಸ ಹೊಂದಿರುವ ಕೆರೆ ಪಾಚಿಯ ತಾಣವಾಗಿದೆ.

ಈ ಕೆರೆ ಸುಮಾರು 15 ಎಕರೆ ವಿಸ್ತೀರ್ಣ ಹೊಂದಿದೆ. ಚಾಮುಂಡಿಬೆಟ್ಟ ದಲ್ಲಿರುವ ದೇವಿಕೆರೆ ಕೊಡಿ ನೀರು ಇಲ್ಲಿಗೆ ಬರುತ್ತದೆ. ಈ ಕೆರೆಯಲ್ಲಿ ಮೀನುಗಾರಿಕೆಗೆ ಗ್ರಾಮ ಪಂಚಾಯಿತಿ ಅವಕಾಶ ನೀಡಿದೆ. 15 ವರ್ಷದಿಂದ ಕೆರೆ ತುಂಬಿರಲಿಲ್ಲ. ಆದರೆ, ಈ ಬಾರಿ ಉತ್ತಮ ಮಳೆಯಾದ್ದರಿಂದ ಕೆರೆ ಭರ್ತಿಯಾಗಿದ್ದು, ಮೀನು ಕೃಷಿ ಕೈಗೊಳ್ಳಲಾಗಿದೆ. ಕೆರೆ ಒತ್ತುವರಿ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಗ್ರಾಮದ ಪಕ್ಕದಲ್ಲಿರುವ ಈ ಕೆರೆಯಲ್ಲಿ ಪಾತ್ರೆ ತೊಳೆಯುವುದು, ಜಾನು ವಾರು ಮೈ ತೊಳೆಯುವುದು, ಬಟ್ಟೆ ಹೊಗೆಯುವುದು ಸೇರಿದಂತೆ ಇತರೆ ಚಟುವಟಿಕೆಗಳಿಂದಾಗಿ ಕೆರೆ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೆರೆ ಅಭಿವೃದ್ಧಿಗೆ ಎರಡು ವರ್ಷದ ಹಿಂದೆ ₹ 25 ಲಕ್ಷ ಅನುದಾನ ಬಿಡುಗಡೆ ಯಾಗಿತ್ತು. ಆದರೆ, ಕಾಮಗಾರಿಗೆ ಕೆಲವರು ಅಡ್ಡಿ ಉಂಟು ಮಾಡಿದರು. ಇದರಿಂದ ಕಾಮಗಾರಿ ಸ್ಥಗಿತಗೊಂಡಿತು. ಅನೇಕ ವರ್ಷಗಳಿಂದ ಹೂಳೆತ್ತಿಲ್ಲ. ಹೀಗಾದರೆ ಕೆರೆ ಉಳಿಯುವುದಾದರೂ ಹೇಗೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಪ್ರಶ್ನಿಸುತ್ತಾರೆ.

ಬೇಸಿಗೆ ಕಾಲ ಆರಂಭವಾಗಿದೆ. ಕೊಳಚೆ ನೀರು ಸೇರಿ ಸಾಂಕ್ರಾಮಿಕ ರೋಗಗಳು ಹರಡುವ ಮೊದಲೇ ಕೆರೆ ಶುಚಿಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

‘ಗ್ರಾಮ ಸಮೀಪದ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೆರೆ ಏರಿ ಮೇಲೆ ಹಾದುಹೋಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಯಾವುದೇ ತಡೆಗೋಡೆ ಇಲ್ಲ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ, ರಕ್ಷಣಾ ತಡೆಗೋಡೆ ನಿರ್ಮಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry