ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಭಕ್ತರು ಕೊಲೆಗಡುಕರಾಗಿದ್ದರೆ ಮೊದಲ ಗುರಿ ಶಾಸಕ!

ಗಂಗಾವತಿ: ರಾಮರಾಜ್ಯ ರಥಯಾತ್ರೆಯಲ್ಲಿ ಚೈತ್ರಾ ಕುಂದಾಪುರ ಭಾಷಣ
Last Updated 8 ಮಾರ್ಚ್ 2018, 9:18 IST
ಅಕ್ಷರ ಗಾತ್ರ

ಗಂಗಾವತಿ: 'ರಾಮನ ಭಕ್ತರು ನಿಜವಾಗಿಯೂ ಲೂಟಿಕೋರರು, ಕೊಲೆಗಡುಕರಾಗಿದ್ದರೆ ಅವರ ಮೊದಲ ಗುರಿ ಶಾಸಕ ಇಕ್ಬಾಲ್‌ ಅನ್ಸಾರಿ ಅವರೇ ಆಗಿರುತ್ತಿದ್ದರು' ಎಂದು ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.

ಆಯೋಧ್ಯೆಯ ರಾಮದಾಸ ಮಿಷನ್ ಆಯೋಜಿಸಿರುವ ಅಯೋಧ್ಯೆಯಿಂದ ರಾಮೇಶ್ವರಕ್ಕೆ ಹೊರಟ ರಾಮರಾಜ್ಯ ರಥಯಾತ್ರೆ ಮಂಗಳವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾತ್ರಿ ಇಲ್ಲಿನ ಜಗಜೀವನರಾಮ್ ವೃತ್ತದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

'ರಾಮನ ಭಕ್ತರು ಲೂಟಿಕೋರರು, ಕೊಲೆಗಡುಕರು, ದರೋಡೆಕೋರರು ಎಂದು ಅವಹೇಳನಕಾರಿಯಾಗಿ ಸಾರ್ವಜನಿಕವಾಗಿ ಶಾಸಕ ಅನ್ಸಾರಿ ಆರೋಪ ಮಾಡುತ್ತಾರೆ. ಶಾಸಕ ಆರೋಪ ಮಾಡಿದಂತೆ ನಿಜವಾಗಿಯೂ ರಾಮನ ಭಕ್ತರು ಅಂಥವರಾಗಿದ್ದರೆ ಅವರ ಮೊದಲ ಗುರಿ ಶಾಸಕರೇ ಆಗಿರುತ್ತಿದ್ದರು. ಆದರೆ ರಾಮನ ಭಕ್ತರು ಅಂಥಹ ಹೇಯ ಕೃತ್ಯ ಎಸಗುವವರಲ್ಲ. ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ ಎಲ್ಲರೂ ಸರ್ವನಾಶವಾದ ಇತಿಹಾಸವಿದೆ. ಇಂತಹ ದೌರ್ಜನ್ಯಗಳಿಗೆ ರಾಜ್ಯದಲ್ಲೂ ಕೊನೆ ಹಾಡುವ ಅವಕಾಶ ಈಗ ಬಂದಿದೆ. ಶಾಸಕ ಅನ್ಸಾರಿ ಅವರ ರಾಜಕೀಯ ಜೀವನವು ಇನ್ನೆರಡು ತಿಂಗಳಲ್ಲಿ ಅಂತ್ಯವಾಗಲಿದೆ' ಎಂದು ಭವಿಷ್ಯ ನುಡಿದರು.

'ರಾಮನ ಮತ್ತು ಹನುಮನ ಬಗ್ಗೆ ಅನುಮಾನದಿಂದ ಮಾತನಾಡುವ ಕೆ.ಎಸ್‌. ಭಗವಾನ್‌ ಅವರಂಥ ಬುದ್ಧಿಜೀವಿಗಳು ಒಮ್ಮೆ ಗಂಗಾವತಿಯ ಕಿಷ್ಕಿಂಧೆಗೆ ಭೇಟಿ ನೀಡಿದರೆ ಜೀವನದಲ್ಲಿ ಇನ್ನೆಂದೂ ಅಂತಹ ಸಂದೇಹಕ್ಕೆ ಅವಕಾಶ ಸಿಗದು ಎಂದ ಚೈತ್ರಾ, ಸುಳ್ಳು ಕೇಸುಗಳ ಮೂಲಕ ಪೊಲೀಸರು ಆಡುವ ಆಟಕ್ಕೂ ಕಡಿವಾಣ ಬೀಳಲಿದೆ' ಎಂದರು.

ಕಾರ್ಯಕ್ರಮ ಕುರಿತು ರಥಯಾತ್ರೆ ರೂವಾರಿ ಶಕ್ತಿಶಾಂತಾನಾಂದ ಮಹರ್ಷಿ ಮಾತನಾಡಿ, 'ಪಠ್ಯಗಳಲ್ಲಿ ಪೌರಾಣಿಕ ಕತೆ, ರಾಮಾಯಣ ಅಳವಡಿಕೆ, ಗುರುವಾರ ರಾಷ್ಟ್ರೀಯ ರಜೆ, ರಾಮರಾಜ್ಯ ಪುನರ್ ಸ್ಥಾಪನೆ, ವಿಶ್ವ ಹಿಂದೂ ದಿನಾಚರಣೆಯಂಥ ಉದ್ದೇಶಕ್ಕೆ ಈ ರಥಯಾತ್ರೆ ನಡೆಯುತ್ತಿದೆ'.

'ಮುಂದಿನ 14 ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ. ರಾಮನಿಗೆ ಆತನ ಭಕ್ತರಿಗೆ ಅವಮಾನ ಮಾಡುವ ವ್ಯಕ್ತಿಗಳಿಗೆ ಇಡೀ ಹಿಂದೂ ಸಮಾಜ ತಕ್ಕ ಉತ್ತರ ನೀಡುತ್ತದೆ. ಅಧ್ಯಾತ್ಮವಿಲ್ಲದೇ ಭಾರತ ಬದುಕಲಾರದು ಎಂಬುದು ಎಲ್ಲರು ಮನಗಾಣಬೇಕು' ಎಂದರು.

ರಾಮದಾಸ ಮಿಷನ್ನಿನ ಅರುಣಾನಂದಜೀ, ಪ್ರಭಾಕರ ಸುಬ್ರಮಣ್ಯಸ್ವಾಮಿ, ಶ್ರೀನಿವಾಸ ರಾಮದಾಸಜಿ, ಹರೀ ಭಾಗವತ್ ಆಚಾರ, ತಾತಯ್ಯಸ್ವಾಮಿ, ಕೃಷ್ಣಪ್ಪ ನಾಯಕ ಇದ್ದರು. ಇದಕ್ಕೂ ಮೊದಲು ನಗರದಲ್ಲಿ ರಥಯಾತ್ರೆ ನಡೆಯಿತು.

ಬಿಜೆಪಿ, ಸಂಘ ಪರಿವಾರದ ಪ್ರಮುಖರು ಪಾಲ್ಗೊಂಡಿದ್ದರು.

**

ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ

ರಾಮರಾಜ್ಯ ರಥಯಾತ್ರೆ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಹಿಂದು ಸಂಘಟನೆ, ಸಂಘ ಪರಿವಾರ, ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್, ಜೆಡಿಎಸ್‌ ಕಾರ್ಯಕರ್ತರೂ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು.

ಬಾಬು ಜಗಜೀವನರಾಂ ವೃತ್ತದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಭಿಕರ ಸಾಲಲ್ಲಿ ಕುಳಿತಿದ್ದ ಬಿಜೆಪಿಯೇತರ ಪಕ್ಷಗಳ ಕಾರ್ಯಕರ್ತರು ಚೈತ್ರಾ ಕುಂದಾಪುರ ಭಾಷಣಕ್ಕೆ ಸಿಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT