ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.11ಕ್ಕೆ ಜಿಲ್ಲೆಯಲ್ಲಿ ಪೋಲಿಯೊ ಅಭಿಯಾನ

ಜನದಟ್ಟಣೆ ಪ್ರದೇಶದಲ್ಲಿ ಲಸಿಕೆ ಬೂತ್; ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿಕೆ
Last Updated 8 ಮಾರ್ಚ್ 2018, 9:45 IST
ಅಕ್ಷರ ಗಾತ್ರ

ಕೋಲಾರ: ‘ಪೋಲಿಯೊ ಎರಡನೇ ಸುತ್ತಿನ ಲಸಿಕೆ ಅಭಿಯಾನದಲ್ಲಿ ಶೇ 100ರಷ್ಟು ಲಸಿಕೆ ಹಾಕುವ ಗುರಿಯಿದ್ದು, ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮನವಿ ಮಾಡಿದರು.

ಪೋಲಿಯೊ ಲಸಿಕೆ ಅಭಿಯಾನ ಕುರಿತು ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮೊದಲ ಸುತ್ತಿನ ಅಭಿಯಾನ ಮುಗಿದಿದೆ. ಮಾ.11ರಿಂದ 13ರವರೆಗೆ ಎರಡನೇ ಸುತ್ತಿನ ಅಭಿಯಾನ ನಡೆಯಲಿದೆ. 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.

ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಇಟ್ಟಿಗೆ ಹಾಗೂ ಕಲ್ಲು ಗಣಿಗಾರಿಕೆ ಪ್ರದೇಶಗಳಿದ್ದು, ಆ ಸ್ಥಳಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಬೇಕು. ನಗರ ಪ್ರದೇಶದಲ್ಲಿ ಮೊದಲ ಸುತ್ತಿನ ಅಭಿಯಾನದಲ್ಲಿ ಕೆಲ ಲೋಪಗಳಾಗಿವೆ. ಈ ತಪ್ಪುಗಳು ಮರುಕಳಿಸಬಾರದು. ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ ಹಾಗೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಲಸಿಕೆ ಬೂತ್‌ಗಳನ್ನು ಸ್ಥಾಪಿಸಬೇಕು. ಅಭಿಯಾನದ ಬಗ್ಗೆ ಕರಪತ್ರ ಹಂಚಬೇಕು ಮತ್ತು ಬ್ಯಾನರ್ ಹಾಕಬೇಕು. ಶಿಕ್ಷಣ ಇಲಾಖೆಯ ವಾಹನಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಸಂಗತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಯ ಗಮನಕ್ಕೆ ತಂದು ಬೇರೆ ಇಲಾಖೆಗಳ ವಾಹನಗಳನ್ನು ಅಭಿಯಾನಕ್ಕೆ ವ್ಯವಸ್ಥೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

ಪ್ರಮಾಣಪತ್ರ ಪಡೆದಿದೆ: ‘ಪೋಲಿಯೊ ನಿರ್ಮೂಲನೆಯಲ್ಲಿ ದೇಶವು ಗಣನೀಯ ಪ್ರಗತಿ ಸಾಧಿಸಿದ್ದು, 2011ರ ಜನವರಿ ನಂತರ ಯಾವುದೇ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ಭಾರತವು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಪೋಲಿಯೊ ಮುಕ್ತ ರಾಷ್ಟ್ರವೆಂದು ಪ್ರಮಾಣಪತ್ರ ಪಡೆದಿದೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಮಾತ್ರ ಪೋಲಿಯೊ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿವೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್ ವಿವರಿಸಿದರು.

ಜಾಗತಿಕವಾಗಿ 2015ರಲ್ಲಿ -74, 2016ರಲ್ಲಿ -37 ಹಾಗೂ 2017ರಲ್ಲಿ 20 ಪೋಲಿಯೊ ಪ್ರಕರಣಗಳು ವರದಿಯಾಗಿವೆ. ಪಾಕಿಸ್ತಾನ, ಆಫ್ಘಾನಿಸ್ತಾನದಲ್ಲಿ ಪೋಲಿಯೊ ಪ್ರಕರಣಗಳು ಪತ್ತೆ ಆಗಿರುವುದರಿಂದ ಮತ್ತು ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇರುವ ಕಾರಣ ಸಾರ್ವತ್ರಿಕ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಸರ್ವೇಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ನಿರ್ವಹಿಸಬೇಕು ಎಂದರು.

ಜಿಲ್ಲೆ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ. 175 ಮೇಲ್ವಿಚಾರಕರು ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ವಿಜಯಕುಮಾರಿ, ಕುಟುಂಬ ಯೋಜನಾಧಿಕಾರಿ ಡಾ.ಭಾರತಿ ಭಾಗವಹಿಸಿದ್ದರು.

*

ರಾಜ್ಯದಲ್ಲಿ ಕೊನೆಯ ಪೋಲಿಯೊ ಪ್ರಕರಣವು 2017ರ ನವೆಂಬರ್‌ನಲ್ಲಿ ವಲಸೆ ಬಂದಿದ್ದ ಗುಂಪಿನಲ್ಲಿ ಪತ್ತೆಯಾಗಿತ್ತು. ನಂತರ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಡಾ.ಚಂದನ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ

**

1,63,245: ಮಕ್ಕಳಿಗೆ ಲಸಿಕೆ ಹಾಕುವ ಗುರಿ

735: ಬೂತ್‌ಗಳು ನಿರ್ಮಾಣ

167: ಟ್ರಾನ್ಸಿಟ್‌ ಕೇಂದ್ರ

2: ಸಂಚಾರ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT