‘ಹಣವೊಂದರಿಂದಲೇ ಯಶಸ್ಸು ಸಿಗದು’

7

‘ಹಣವೊಂದರಿಂದಲೇ ಯಶಸ್ಸು ಸಿಗದು’

Published:
Updated:
‘ಹಣವೊಂದರಿಂದಲೇ ಯಶಸ್ಸು ಸಿಗದು’

ಹೊಸಪೇಟೆ: ಜಿಲ್ಲಾ ಆಡಳಿತದಿಂದ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ, ಪಿ.ಯು. ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ ಹಾಗೂ ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮ ಬುಧವಾರ ಸಂಜೆ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಕಾರ್ಯಕ್ರಮ ಉದ್ಘಾಟಿಸಿ, ಒಟ್ಟು 11,296 ವಿದ್ಯಾರ್ಥಿಗಳಿಗೆ ₹3.25 ಕೋಟಿ ಪ್ರೋತ್ಸಾಹ ಧನದ ಚೆಕ್‌ಗಳನ್ನು ಆಯಾ ಶಾಲೆ ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ವಿತರಿಸಿದರು. ಪ್ರೌಢಶಾಲೆಯ ತಲಾ ಒಬ್ಬ ವಿದ್ಯಾರ್ಥಿಗೆ ₹ 2 ಸಾವಿರ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಲಾ ₹4 ಸಾವಿರ ಪ್ರೋತ್ಸಾಹ ಧನ ಸಿಗಲಿದೆ. ಇದೇ ವೇಳೆ ಯು.ಪಿ.ಎಸ್‌.ಸಿ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ನಗರದ ಸುಜಾತಾ ಎಂಬ ವಿದ್ಯಾರ್ಥಿನಿಗೆ ₹ 1.20 ಲಕ್ಷದ ಚೆಕ್‌ ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ‘ಹಣವಿದ್ದರೆ ಯಶಸ್ಸು ಸಿಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ, ಅದು ನಿಜವಲ್ಲ. ಹಾಗಿದ್ದರೆ ಎಲ್ಲ ಹಣವಂತರು ಯಶಸ್ಸು ಸಾಧಿಸುತ್ತಿದ್ದರು. ಧೈರ್ಯ, ಆತ್ಮವಿಶ್ವಾಸ, ಛಲ ಇರಬೇಕು. ಅದೇ ಯಶಸ್ಸಿಗೆ ಮೆಟ್ಟಿಲು’ ಎಂದು ಹೇಳಿದರು.

‘ಜೀವನದಲ್ಲಿ ಎಂದೂ ಬೇರೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬರಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ. ಅದನ್ನು ಹೊರಹಾಕಿ ಸಾಧನೆ ಮಾಡಬೇಕು. ಇದು ಸ್ಪರ್ಧಾತ್ಮಕ ಜಗತ್ತು. ಎಲ್ಲರೂ ತಮ್ಮ ಶಕ್ತಿ, ಸಾಮರ್ಥ್ಯ ಏನು ಎಂಬುದನ್ನು ಗುರುತಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

‘ಜೀವನದಲ್ಲಿ ಸಾವು ಖಚಿತ. ಉಳಿದದ್ದೆಲ್ಲ ತಾತ್ಕಾಲಿಕ. ಇರುವವರೆಗೆ ಬೇರೆಯವರಿಗೆ ಒಳ್ಳೆಯದನ್ನು ಮಾಡಬೇಕು. ಕೇದಾರನಾಥದಲ್ಲಿ ಜಲಪ್ರಳಯದಿಂದ ಸಂಭವಿಸಿದ್ದ ಸಾವು ನೋವು ಕಣ್ಣಾರೆ ಕಂಡಿದ್ದೇನೆ. ಕನ್ನಡಿಗರನ್ನು ಅಲ್ಲಿಂದ ಸುರಕ್ಷಿತವಾಗಿ ತರಲು ಸರ್ಕಾರ ನನ್ನನ್ನು ಅಲ್ಲಿಗೆ ಕಳಿಸಿತ್ತು. ಅಲ್ಲಿನ ಚಿತ್ರಣ ನೋಡಿ ನನ್ನಲ್ಲಿ ಸಾಕಷ್ಟು ಬದಲಾವಣೆ ಬಂದಿದೆ’ ಎಂದು ಹೇಳಿ ಭಾವುಕರಾಗಿ ಕಣ್ಣೀರು ಹಾಕಿದರು. ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋ ಹರ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ, ಅಕ್ಷಯ್‌ ಲಾಡ್‌, ಹಾಲಪ್ಪ, ಮುಂಡರಗಿ ನಾಗರಾಜ ಇದ್ದರು.

*

ವಿದ್ಯಾರ್ಥಿಗಳು ಸಿಗರೇಟು, ತಂಬಾಕು, ಮದ್ಯ ಸೇವಿಸಬಾರದು. ನನಗೀಗ 43 ವರ್ಷ. ಇಲ್ಲಿಯವರೆಗೆ ತಂಬಾಕು, ಮದ್ಯ ಮುಟ್ಟಿಲ್ಲ. ಅದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

–ಸಂತೋಷ್‌ ಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry