ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮದಲ್ಲಿ ಹಿಂದುಳಿದ ವರ್ಗ ಶಕ್ತಿ ಪ್ರದರ್ಶನ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿಕೆ
Last Updated 8 ಮಾರ್ಚ್ 2018, 10:12 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಇದೇ 10ರಂದು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಪಕ್ಷ ತನ್ನ ಶಕ್ತಿ ಪ್ರದರ್ಶಿಸಲಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಸಮಾವೇಶದ ಅಂಗವಾಗಿ ಬುಧವಾರ ಸಂಜೆ ಇಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಂದು ಬೆಳಿಗ್ಗೆ 11ಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸಮಾವೇಶಕ್ಕೆ ಚಾಲನೆ ಕೊಡುವರು. ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಹಾಗೂ ಚಿಕ್ಕೋಡಿಯ ಜನ ಭಾಗವಹಿಸುವರು. ಎರಡನೇ ಸಮಾ ವೇಶ ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ನಡೆಯಲಿದೆ. ಅಂದಿನ ಸಮಾವೇಶದಲ್ಲಿ ಇತರೆ ಜಿಲ್ಲೆಗಳ ಜನ ಪಾಲ್ಗೊಳ್ಳುವರು. ಈ ಎರಡೂ ಸಮಾವೇಶಗಳ ಮೂಲಕ ಹಿಂದುಳಿದ ವರ್ಗದವರು ಬಿಜೆಪಿ ಜತೆಗಿದ್ದಾರೆ ಎನ್ನುವುದನ್ನು ತೋರಿಸಿಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಹಿಂದುಳಿದ ವರ್ಗದ ಜನ ಬಿಜೆಪಿ ಜತೆಗಿದ್ದಾರೆ. ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್‌ ಶೆಟ್ಟರ್‌ ಅವರು ಸಿ.ಎಂ. ಆಗಿದ್ದಾಗ ಮಹರ್ಷಿ ವಾಲ್ಮೀಕಿ, ಕನಕದಾಸರು ಸೇರಿದಂತೆ ಇತರೆ ಮಹಾನುಭಾವರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಲಿತ, ಹಿಂದುಳಿದ ವರ್ಗಗಳ ಶಾಲೆ, ವಸತಿ ನಿಲಯ, ಆಸ್ಪತ್ರೆಗಳಿಗೆ ₹ 100 ಕೋಟಿ ಅನುದಾನ ಕೊಟ್ಟಿದ್ದರು’ ಎಂದರು.

‘ಮೋದಿ ಅವರು ಪ್ರಧಾನಿಯಾದ ಬಳಿಕ ಹಿಂದುಳಿದವರಿಗೆ ಸಂವಿಧಾನ ಬದ್ಧವಾದ ಹಕ್ಕು ಒದಗಿಸಿಕೊಡಲು ಲೋಕಸಭೆಯಲ್ಲಿ ಮಸೂದೆ ಪಾಸಾಗುವಂತೆ ಮಾಡಿದರು. ಆದರೆ, ರಾಜ್ಯಸಭೆ ಯಲ್ಲಿ ಕಾಂಗ್ರೆಸ್ಸಿನ ವಿರೋಧದಿಂದ ಅದು ನನೆಗುದಿಗೆ ಬಿದ್ದಿದೆ. ಸಿದ್ದರಾಮಯ್ಯನವರು ಆ ವರ್ಗದವರಿಗೆ ಏನೂ ಮಾಡದಿದ್ದರೂ ಆ ವರ್ಗದ ಚಾಂಪಿಯನ್‌ ಎಂದು ಹೇಳಿ ಕೊಂಡಿದ್ದಾರೆ. ಆದರೆ, ನಿಜವಾದ ಚಾಂಪಿಯನ್‌ ನರೇಂದ್ರ ಮೋದಿ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಶ್ರೀನಿವಾಸ ಪೂಜಾರ, ಎಚ್‌.ಆರ್‌.ಗವಿಯಪ್ಪ, ನೇಮಿರಾಜ ನಾಯ್ಕ, ಚಂದ್ರ ನಾಯ್ಕ, ಸೋಮಲಿಂಗಪ್ಪ, ರಾಣಿ ಸಂಯುಕ್ತಾ, ಅನಿಲ್‌ ಜೋಶಿ, ಅನಂತ ಪದ್ಮನಾಭ, ಬಸವರಾಜ ನಾಲತ್ವಾಡ ಇದ್ದರು.

**

‘ಆನಂದ್‌ ಸಿಂಗ್‌ಗೆ ಉಸಿರುಗಟ್ಟಲಿಲ್ಲವೇ?’

‘ಬಿಜೆಪಿ ಧರ್ಮ ಒಡೆಯುವ ಪಕ್ಷ. ಆ ಪಕ್ಷದಲ್ಲಿ ಬಹಳ ಉಸಿರುಗಟ್ಟುತ್ತಿತ್ತು. ಈ ಕಾರಣಕ್ಕಾಗಿಯೇ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದೇನೆ ಎಂದು ಆನಂದ್‌ ಸಿಂಗ್‌ ಹೇಳಿದ್ದಾರೆ. ಆದರೆ, ಅವರು ಎರಡು ಬಾರಿ ಬಿಜೆಪಿಯಿಂದ ಶಾಸಕರಾದಾಗ, ಸಚಿವರಾಗಿದ್ದಾಗ ಉಸಿರುಗಟ್ಟಲಿಲ್ಲವೇ?’ ಎಂದು  ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆನಂದ್‌ ಸಿಂಗ್‌ ಮೇಲೆ ಸಿದ್ದರಾಮಯ್ಯನವರ ನೆರಳು ಬಿದ್ದಿದೆ. ಬೊಗಳೆ ಸಿದ್ದರಾಮಯ್ಯನ ರೀತಿಯಲ್ಲಿ ಆನಂದ್‌ ಸಿಂಗ್‌ ಹಾವಭಾವ ಬದಲಾಗಿದೆ. ಬಿಜೆಪಿಗೆ ದ್ರೋಹ ಮಾಡಿದವರಿಗೆ ಜನ ಪಾಠ ಕಲಿಸುತ್ತಾರೆ’ ಎಂದು ಭವಿಷ್ಯ ನುಡಿದರು.

**

ಅತ್ಯಾಚಾರ, ಕೊಲೆ ರಾಜ್ಯ ದಲ್ಲಿ ಸಾಮಾನ್ಯವಾಗಿವೆ. ಮುದ್ದೇ ಬಿಹಾಳದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ಈ ರೀತಿಯ ಘಟನೆಗಳು ಹಿಂದೆಂದೂ ಆಗಿರಲಿಲ್ಲ.

–ಕೆ.ಎಸ್‌. ಈಶ್ವರಪ್ಪ, ವಿಧಾನಸಭೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT