ದುರಸ್ತಿಯಾಗದ ಕ್ರೀಡಾಂಗಣದ ಕಾಂಪೌಂಡ್‌

ಸೋಮವಾರ, ಮಾರ್ಚ್ 25, 2019
31 °C
ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಮೂರು ಕಡೆ ಕೆಡವಿದ್ದ ಗೋಡೆ

ದುರಸ್ತಿಯಾಗದ ಕ್ರೀಡಾಂಗಣದ ಕಾಂಪೌಂಡ್‌

Published:
Updated:
ದುರಸ್ತಿಯಾಗದ ಕ್ರೀಡಾಂಗಣದ ಕಾಂಪೌಂಡ್‌

ಹೊಸಪೇಟೆ: ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ನಿಮಿತ್ತ ಕೆಡವಿದ್ದ ನಗರದ ತಾಲ್ಲೂಕು ಕ್ರೀಡಾಂಗಣದ ಕಾಂಪೌಂಡ್‌ ಇದುವರೆಗೂ ದುರಸ್ತಿಯಾಗಿಲ್ಲ.

ಫೆ. 10ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಹೋಗಿ ಬರುವಾಗ ನೂಕು ನುಗ್ಗಲು ಉಂಟಾಗಿ ಕಾರ್ಯಕರ್ತರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಮೂರು ಕಡೆ ಕಾಂಪೌಂಡ್‌ ಒಡೆಯಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದು ತಿಂಗಳಾಗುತ್ತ ಬಂದಿದೆ. ಆದರೆ, ಅದನ್ನು ದುರಸ್ತಿಗೊಳಿಸಲು ಕ್ರಮ ಕೈಗೊಂಡಿಲ್ಲ.

ಬೀದಿ ನಾಯಿಗಳು, ಬಿಡಾಡಿ ದನಗಳು ಕ್ರೀಡಾಂಗಣದೊಳಗೆ ನುಗ್ಗಬಾರದು. ಅಲ್ಲಿನ ಆವರಣ ಹೊಲಸು ಆಗಬಾರದು ಎನ್ನುವ ಕಾರಣಕ್ಕಾಗಿ ಕ್ರೀಡಾಂಗಣದ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ‘ತಾತ್ಕಾಲಿಕವಾಗಿ ಕಾಂಪೌಂಡ್‌ ಒಡೆಯುತ್ತಿದ್ದು, ಕಾರ್ಯಕ್ರಮ ಮುಗಿದ ಬಳಿಕ ಮೊದಲಿನಂತೆ ನಿರ್ಮಿಸಲಾಗುವುದು’ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಇದುವರೆಗೆ ಆ ನಿಟ್ಟಿನಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಇದರಿಂದ ಈಗ ಇಡೀ ಕ್ರೀಡಾಂಗಣ ಬಿಡಾಡಿ ದನಗಳು, ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ.

ಬೀದಿ ನಾಯಿಗಳು ಗುಂಪು ಗುಂಪಾಗಿ ಕೂರುತ್ತಿರುವುದರಿಂದ ಜನ ಬೆಳಿಗ್ಗೆ ಹಾಗೂ ಸಂಜೆ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ವಾಹನ ನಿಲುಗಡೆ ಜಾಗವಾಗಿ ಬದಲಾಗಿದೆ. ಅಷ್ಟೇ ಅಲ್ಲ, ಕೆಲವರು ತಡರಾತ್ರಿ ಕ್ರೀಡಾಂಗಣದೊಳಗೆ ಕುಳಿತು ಮದ್ಯ ಸೇವಿಸಿ, ಅಲ್ಲೇ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.

‘ರಾಜಕೀಯ ಸಭೆ, ಸಮಾರಂಭಗಳಿಗೆ ಸರ್ಕಾರಿ ಕ್ರೀಡಾಂಗಣದ ಜಾಗ ಕೊಡುವುದೇ ತಪ್ಪು. ಒಂದುವೇಳೆ ಕೊಟ್ಟರೂ ಕಾರ್ಯಕ್ರಮ ಮುಗಿಯುವವರೆಗೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗುವಂತೆ ಷರತ್ತು ವಿಧಿಸಿ ಕೊಡಬೇಕು. ಏನಾದರೂ ಹಾನಿಯಾದರೆ ಕಾರ್ಯಕ್ರಮದ ಆಯೋಜಕರಿಂದಲೇ ದಂಡ ವಸೂಲಿ ಮಾಡಬೇಕು. ಆದರೆ, ಈ ಪ್ರಕರಣದಲ್ಲಿ ಹಾಗೆ ಆಗಿರುವಂತೆ ಕಾಣುತ್ತಿಲ್ಲ. ಏಕೆಂದರೆ ಕಾರ್ಯಕ್ರಮ ಸಂಘಟಿಸಲು ಇಡೀ ಸರ್ಕಾರದ ಆಡಳಿತ ಯಂತ್ರವೇ ಇಲ್ಲಿಗೆ ಬಂದಿತ್ತು. ಅದಕ್ಕೆ ಮಣಿದು ಸ್ಥಳೀಯ ಅಧಿಕಾರಿಗಳು ಮೌನ ವಹಿಸಿರಬಹುದು’ ಎಂದು ವಕೀಲ ಯೂಸುಫ್‌ ಪಟೇಲ್‌ ಆರೋಪಿಸಿದರು.

‘ಸರ್ಕಾರಿ ಆಸ್ತಿಯೆಂದರೆ ಜನಸಾಮಾನ್ಯರ ಆಸ್ತಿ. ಈ ರೀತಿಯ ಘಟನೆಗಳಾದಾಗ ಜನ ಮೌನ ವಹಿಸಿ ಸುಮ್ಮನೆ ಕೂರಬಾರದು. ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲವಾದಲ್ಲಿ ಇದೇ ರೀತಿ ಇತರೆ ಸಾರ್ವಜನಿಕ ಆಸ್ತಿ ಕೂಡ ಮನಸ್ಸಿಗೆ ಬಂದಂತೆ ಬಳಸಿಕೊಳ್ಳಬಹುದು. ಗೋಡೆಯನ್ನು ಕೂಡಲೇ ಅದನ್ನು ದುರಸ್ತಿಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ಹುಲುಗಪ್ಪ ಆಗ್ರಹಿಸಿದರು.

‘ಕಾಂಪೌಂಡ್‌ ನಿರ್ಮಿಸುವವರೆಗೆ ಬಿಡಾಡಿ ದನಗಳು, ಬೀದಿ ನಾಯಿಗಳು ಹೋಗದಂತೆ ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲ, ವಾಹನಗಳನ್ನು ನಿಲ್ಲಿಸಿದರೆ ಅಂತಹವರ ಮೇಲೆ ಕ್ರಮ ಜರುಗಿಸುವಂತೆ ಸಂಚಾರ ಪೊಲೀಸರಿಗೆ ಸೂಚಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಹೇಳಿದರು.

**

ಕಾಂಗ್ರೆಸ್‌ನಿಂದ ಠೇವಣಿ ಇರಿಸಿಕೊಂಡು ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಆ ಹಣದಿಂದಲೇ ಕಾಂಪೌಂಡ್‌ ದುರಸ್ತಿಗೊಳಿಸಲಾಗುವುದು.

–ಗಾರ್ಗಿ ಜೈನ್‌, ಉಪವಿಭಾಗಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry