‘ಪರೀಕ್ಷೆ ಎಂಬ ಭಯ ಬೇಡ’

ಶುಕ್ರವಾರ, ಮಾರ್ಚ್ 22, 2019
24 °C
ಎಸ್ಸೆಸ್ಸೆಲ್ಸಿ ಯಶಸ್ಸಿನ ಪ್ರಮುಖ ಹತ್ತು ವಿಚಾರಗಳನ್ನು ಹಂಚಿಕೊಂಡ ಪೃಥ್ವಿ ಮಾಂಡ್ರೆ

‘ಪರೀಕ್ಷೆ ಎಂಬ ಭಯ ಬೇಡ’

Published:
Updated:
‘ಪರೀಕ್ಷೆ ಎಂಬ ಭಯ ಬೇಡ’

ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ದಿನಗಣನೆ ಪ್ರಾರಂಭವಾಗಿದೆ. ಹೀಗಾಗಿ ಜಿಲ್ಲೆಯಲ್ಲೂ ‘ಪರೀಕ್ಷಾ ಜ್ವರ’ ಶುರುವಾಗಿದ್ದು, ವಿದ್ಯಾರ್ಥಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಪ್ರತಿ ಬಾರಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಾಗ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ. 2016–17 ಸಾಲಿನಲ್ಲಿ ಪರೀಕ್ಷೆ ಬರೆದ ಇಲ್ಲಿನ ವಿದ್ಯಾ ನಗರದ ಪೃಥ್ವಿ ರವಿಕಾಂತ ಮಾಂಡ್ರೆ (620/625) ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಅಂದು, ಪರೀಕ್ಷೆಗೆ ತಾವು ಸಿದ್ಧತೆ ಮಾಡಿಕೊಂಡಿದ್ದ ಬಗೆಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

‘ಪರೀಕ್ಷೆಗೆ ಇಷ್ಟೇ ಓದಬೇಕು ಎಂದು ಇಲ್ಲ. ದಿನಗಳು ಸಮೀಪಿಸುತ್ತಿರುವ ಕಾರಣ ಪಠ್ಯ ಕ್ರಮದ ಬಗ್ಗೆಯೇ ಕೇಂದ್ರೀಕರಿಸಬೇಕು. ಮತ್ತೆ ಮತ್ತೆ ಓದಿ–ಬರೆದು ಮನನ ಮಾಡಿಕೊಳ್ಳಬೇಕು’ ಎಂದು ಕೊನೆಯ ಎರಡು ವಾರಗಳಲ್ಲಿ ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಅವರು ತಿಳಿಸಿದರು.

‘ಪರೀಕ್ಷೆ ಹತ್ತಿರ ಬಂದಂತೆ ಹೆದರಬಾರದು. ಬದಲಾಗಿ ಮಾನಸಿಕ ಸ್ಥೈರ್ಯದಿಂದ ದಿನಾಲೂ 2 ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ–ಉತ್ತರಿಸಲು ಪ್ರಾರಂಭಿಸಬೇಕು. ಇದರಿಂದ ಬೇಗ ಬರೆಯುವುದು ಹಾಗೂ ಬರವಣಿಗೆಯ ಸುಧಾರಣೆ ಸಾಧ್ಯ’ ಎನ್ನುತ್ತಾರೆ ಅವರು. ಪ್ರಸ್ತುತ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ (ಪಿಸಿಎಂಬಿ)ಯಲ್ಲಿ ಓದುತ್ತಿದ್ದಾರೆ.

ಪರೀಕ್ಷೆ ದಿನಗಳಲ್ಲಿ ಅವಸರ ಮಾಡದೇ, ಶಾಂತಿ ಸಮಾಧಾನ ಹಾಗೂ ಛಲದಿಂದ ಪ್ರಶ್ನೆಪತ್ರಿಕೆಗಳನ್ನು ನಿಧಾನವಾಗಿ ಬಿಡಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಯಾರ ಜೊತೆಯಲ್ಲೂ ಮಾತನಾಡದೇ, ನಮಗೆ ಅನಿಸಿದ್ದನ್ನು, ನಮ್ಮದೇ ಶೈಲಿಯಲ್ಲಿ ಬರೆದರೆ, ಉತ್ತಮ ಅಂಕ ಗಳಿಸಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಧನಾತ್ಮಕವಾಗಿ ಬೆರೆಯಿರಿ: ‘ಪರೀಕ್ಷೆ ಎದುರಿಸುವ ಧೈರ್ಯ ಬರಲು ಗುರುಗಳು, ತಂದೆ–ತಾಯಿ, ಸಹಪಾಠಿಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯ. ಅವರ ಜೊತೆ ಧನಾತ್ಮಕವಾಗಿ ಚಿಂತನೆ ಮಾಡಿದಲ್ಲಿ ಜಯಶೀಲರಾಗುವುದು ಸುಲಭ ಸಾಧ್ಯ’ ಎಂದು ಅನುಭವ ಹಂಚಿಕೊಂಡರು.

‘ಓದು ಒಂದು ತಪಸ್ಸು. ಯಾವುದೇ ಅಡೆತಡೆಗಳಿಲ್ಲದೇ, ಏಕಾಗ್ರತೆಯಿಂದ ದಿನಕ್ಕೆ ನಾಲ್ಕು ಗಂಟೆ ಓದುವುದು– ಬರೆಯುವುದು ಮಾಡಬೇಕು. ಇದರಿಂದ ನಮ್ಮ ಗುರಿಯ ಅಂಕವನ್ನು ಪಡೆಯಬಹುದು’ ಎಂದರು.

ಅರ್ಥೈಸಿಕೊಂಡು ಬರೆಯಿರಿ: ‘ನಾನು ಅಂದಿನ ಕೆಲಸವನ್ನು ಅಂದೇ ಮುಗಿಸುತ್ತಿದ್ದೆನೆ. ಪ್ರತಿ ನೋಟ್ಸ್‌ಗಳನ್ನು ನಾನೇ ಬರೆಯುತ್ತಿದ್ದೆನು. ಅಲ್ಲದೇ, ಸಂಪೂರ್ಣವಾಗಿ ಅರ್ಥೈಸಿದ ಬಳಿಕವೇ ನೋಟ್ಸ್ ಮಾಡಿಕೊಳ್ಳುತ್ತಿದ್ದೆನು. ಯಾವುದೇ ಸಮಸ್ಯೆಗಳು– ಗೊಂದಲಗಳು ಉಳಿದುಕೊಂಡರೆ ಶಿಕ್ಷಕರ ಬಳಿ ಚರ್ಚಿಸಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದೆನು’ ಎಂದು ಹೇಳಿದರು.

‘ಕಠಿಣ ವಿಷಯಗಳನ್ನು ಪದೇ ಪದೇ ಓದಿ–ಬರೆದು ಮನನ ಮಾಡಿಕೊಳ್ಳುತ್ತಿದ್ದೆನು. ಪರೀಕ್ಷೆ ಇದೆ ಎಂಬ ಆಲೋಚನೆಯನ್ನು ಬದಿಗಿಟ್ಟು, ತಿಳವಳಿಕೆ, ಸಂತೋಷ, ಅರ್ಥೈಸುವ ಸಲುವಾಗಿ ಓದುತ್ತಿದ್ದೇನೆ ಎಂದು ನನಗೆ ನಾನೇ ಮನವರಿಕೆ ಮಾಡಿಕೊಳ್ಳುತ್ತಿದ್ದೆನು’ ಎಂದರು.

ಇತರ ಚಟುವಟಿಕೆಗಳೂ ಮುಖ್ಯ: ‘ಕೇವಲ ಓದು ಮಾತ್ರವಲ್ಲ, ಸ್ನಾನ, ಅರ್ಧಗಂಟೆ ಟಿ.ವಿ ವೀಕ್ಷಣೆ, 15ನಿಮಿಷ ವಾಕಿಂಗ್‌, ವ್ಯಾಯಾಮ, 10 ನಿಮಿಷ ಧ್ಯಾನ ಮಾಡುತ್ತಿದ್ದೆನು. ಆ ಮೂಲಕ ಏಕಾಗ್ರತೆಯಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದೆನು. ಪರೀಕ್ಷೆ ಹತ್ತಿರ ಬಂದಂತೆ ಆರೋಗ್ಯದ ಕಾಳಜಿಯೂ ಬಹುಮುಖ್ಯ. ಒಳ್ಳೆಯ ಗಾಳಿ, ಪರಿಶುದ್ಧ ನೀರು, ಸಮತೋಲನ ಆಹಾರ ಬಹಳ ಅವಶ್ಯಕ, ದಿನಾಲೂ ಯಾವುದಾದರು ಒಂದು ಹಣ್ಣು ತಿನ್ನುತ್ತಿದ್ದೆನು ಎಂದು ಪೃಥ್ವಿ ಮಾಂಡ್ರೆ ಅಂದು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದ್ದನ್ನು ವಿವರಿಸಿದರು.

*

ನಿದ್ದೆಗೆಟ್ಟು ಹಾಗೂ ಒತ್ತಡ ಮಾಡಿಕೊಂಡು ಓದುವುದೇ ಇಲ್ಲ. ಇದರಿಂದ ಆರೋಗ್ಯ ಹಾಳಾಗಿ, ಇನ್ನಷ್ಟು ನೆನಪಿನ ಶಕ್ತಿ ಕಡಿಮೆಯಾಗುತ್ತದೆ

-ಪೃಥ್ವಿ ರವಿಕಾಂತ ಮಾಂಡ್ರೆ, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯಲ್ಲಿ ಸಾರ್ವಕಾಲಿಕ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry