ಹಾದಿಯಾ-ಶಫೀನ್ ವಿವಾಹ ಕಾನೂನುಬದ್ಧ; ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

7

ಹಾದಿಯಾ-ಶಫೀನ್ ವಿವಾಹ ಕಾನೂನುಬದ್ಧ; ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

Published:
Updated:
ಹಾದಿಯಾ-ಶಫೀನ್ ವಿವಾಹ ಕಾನೂನುಬದ್ಧ; ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಕೇರಳದ ವೈಕಂ ನಿವಾಸಿ ಹಾದಿಯಾ ಮತ್ತು ಕೊಲ್ಲಂ ನಿವಾಸಿ ಶಫಿನ್ ಜಹಾನ್ ಅವರು ವಿವಾಹವನ್ನು ರದ್ದು ಮಾಡಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್ ಈ ವಿವಾಹ ಕಾನೂನುಬದ್ಧ ಎಂದು ಹೇಳಿದೆ.

 2017 ಮೇ 24ರಂದು ಹಾದಿಯಾ-ಶಫೀನ್ ವಿವಾಹವನ್ನು ಹೈಕೋರ್ಟ್ ರದ್ದು ಮಾಡಿತ್ತು. ಈ ತೀರ್ಮಾನವನ್ನು ಪ್ರಶ್ನಿಸಿ ಶಫೀನ್ ಜಹಾನ್ ಸುಪ್ರೀಂಕೋರ್ಟ್ ಗೆ ಮೆಟ್ಟಿಲೇರಿದ್ದರು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಈ ವಿವಾಹ ಕಾನುನಬದ್ಧ ಎಂಬ ತೀರ್ಪು ನೀಡಿದೆ.

ಹೈಕೋರ್ಟ್ ನೀಡಿದ ತೀರ್ಮಾನ ಸರಿಯಲ್ಲ. ಹೇಬಿಸ್ ಕಾರ್ಪಸ್ ಪರಿಗಣಿಸಿ ವಿವಾಹ ರದ್ದು ಮಾಡಲಾಗುವುದಿಲ್ಲ. ಹಾದಿಯಾಳಿಗೆ ಶಫೀನ್ ಜಹಾನ್ ಜತೆ ಹೋಗಬಹುದು ಮತ್ತು ಶಿಕ್ಷಣ ಮುಂದುವರಿಸಬಹುದು. ಅದೇ ವೇಳೆ ಶಫೀನ್ ಜಹಾನ್ ವಿರುದ್ಧ ಆರೋಪದ ಬಗ್ಗೆ  ಎನ್‍ಐಎ ತನಿಖೆ ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಏನಿದು ಪ್ರಕರಣ?

ದೇಶದಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿದ ಪ್ರಕರಣವಾಗಿದೆ ಕೇರಳದ ಅಖಿಲಾ (ಹಾದಿಯಾ) ಎಂಬ ಯುವತಿಯ ಅಂತರ್‌ಧರ್ಮೀಯ ವಿವಾಹ ಪ್ರಕರಣ.

ತಮಿಳುನಾಡಿನ ಸೇಲಂನಲ್ಲಿ ಹೋಮಿಯೋಪಥಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಅಖಿಲಾ, ಶಫಿನ್ ಜಹಾನ್ ಎಂಬ ಮುಸ್ಲಿಂ ಯುವಕನನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ವರಿಸಿದ್ದರು. ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಹಾದಿಯಾ ಎಂದು ಬದಲಾಯಿಸಿಕೊಂಡಿದ್ದರು.

ಈ ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು. ‘ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಆಕೆಯನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಯತ್ನ ಇದು’ ಎಂದು ಆರೋಪಿಸಿದ್ದ ಆಕೆಯ ತಂದೆ ಅಶೋಕನ್‌ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮೇ ತಿಂಗಳಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ ಶಫಿನ್‌–ಹಾದಿಯಾ ಮದುವೆಯನ್ನು ಅಸಿಂಧುಗೊಳಿಸಿತ್ತಲ್ಲದೇ ಯುವತಿಯನ್ನು ಪೋಷಕರಿಗೆ ಒಪ್ಪಿಸಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಶಫಿನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿತ್ತು. ಮದುವೆ ಅಸಿಂಧುಗೊಳಿಸುವ ಹಕ್ಕು ಹೈಕೋರ್ಟ್‌ಗೆ ಇದೆಯೇ ಎಂದು ಕೇಳಿತ್ತು. ಅಲ್ಲದೇ, ಇದು ಬಲವಂತದ ಮದುವೆ ಹೌದೇ ಅಲ್ಲವೇ ಎಂಬುದನ್ನು ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಸೂಚಿಸಿತ್ತು.ನವೆಂಬರ್‌ 27ರಂದು ಸುಪ್ರೀಂ ಕೋರ್ಟ್‌ ಮುಂದೆ ಖುದ್ದಾಗಿ ಹಾಜರಾದ ಹಾದಿಯಾ, ಹೋಮಿಯೋಪಥಿ ಶಿಕ್ಷಣವನ್ನು ಮುಂದುವರೆಸುವ ಬಯಕೆ ವ್ಯಕ್ತಪಡಿಸಿದ್ದಲ್ಲದೆ ಪತಿ ಶಫಿನ್ ಜೊತೆಗೆ ಹೋಗುವುದಾಗಿಯೂ ತಿಳಿಸಿದರು.

ಹಾದಿಯಾ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್‌, ಸೇಲಂನಲ್ಲಿ ವ್ಯಾಸಂಗ ಮುಂದುವರೆಸಲು ಅವಕಾಶ ಕಲ್ಪಿಸಿತು. ಹಾದಿಯಾಗೆ ಅಗತ್ಯ ಭದ್ರತೆ ನೀಡುವಂತೆ ಕೇರಳ ಪೊಲೀಸರಿಗೆ ಸೂಚಿಸಿದೆ. ಕಾಲೇಜಿನ ಡೀನ್‌ ಅವರನ್ನು ಪಾಲಕರನ್ನಾಗಿಯೂ ನೇಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry