ಅಕ್ರಮ ಮರಳು ದಂಧೆ ನಿರಾತಂಕ

7
ಜಿಲ್ಲೆಯಲ್ಲಿ ಲೋಕಾಯುಕ್ತ, ಎಸಿಬಿ ಸತ್ತು ಹೋಗಿದೆ: ಶಾಸಕ ರೇವಣ್ಣ

ಅಕ್ರಮ ಮರಳು ದಂಧೆ ನಿರಾತಂಕ

Published:
Updated:
ಅಕ್ರಮ ಮರಳು ದಂಧೆ ನಿರಾತಂಕ

ಹಾಸನ: ‘ಜಿಲ್ಲೆಯಲ್ಲಿ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದ್ದು, ಎಲ್ಲ ಇಲಾಖೆಗಳಿಗೆ ಮಾಮೂಲಿ ಕಮಿಷನ್ ತಪ್ಪದೇ ಹೋಗುತ್ತಿದೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

‘ಪ್ರತಿ ದಿನ 50ರಿಂದ 100 ಲೋಡ್‌ ಮರಳನ್ನು ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿದೆ. ಆರ್‌ಟಿಒ ಕಚೇರಿಗೆ ತಿಂಗಳಿಗೆ ₹ 50 ಲಕ್ಷದಿಂದ ₹ 1 ಕೋಟಿ ನೀಡಲಾಗುತ್ತಿದೆ. ಪರ್ಮಿಟ್‌ ಇಲ್ಲದೆ ಮ್ಯಾಕ್ಸಿ ಕ್ಯಾಬ್‌ ಸಂಚರಿಸುತ್ತಿರುವ ಕಾರಣ ಕೆಎಸ್‌ಆರ್‌ಟಿಸಿಗೆ ತಿಂಗಳಿಗೆ ₹ 1 ಕೋಟಿ ನಷ್ಟವಾಗುತ್ತಿದೆ. ಮ್ಯಾಕ್ಸಿಕ್ಯಾಬ್‌ ಮಾಲೀಕರಿಂದಲೂ ಹಣ ವಸೂಲು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಅವರು ಪರಿಶೀಲನೆ ನಡೆಸಿ ಪೊಲೀಸ್‌ ಇಲಾಖೆ ಮತ್ತು ಆರ್‌ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಗ್ರಾನೈಟ್‌ ಕಲ್ಲುಗಳನ್ನು ಲೈಸೆನ್ಸ್‌ ಇಲ್ಲದೆ ಸಾಗಿಸಲಾಗುತ್ತಿದೆ. ಬ್ರೇಕ್‌ ಇನ್‌ಸ್ಪೆಕ್ಟರ್‌ಗಳು ಹಣ ವಸೂಲು ಮಾಡುವುದರಲ್ಲಿ ನಿರತರಾಗಿದ್ದಾರೆ. ಪ್ರತಿ ಇನ್‌ಸ್ಪೆಕ್ಟರ್‌ಗೆ ತಿಂಗಳಿಗೆ ₹ 1 ಕೋಟಿ ವರಮಾನ ಇದೆ. ಅಧಿಕಾರಿಗಳನ್ನ ಪ್ರಶ್ನಿಸಿದರೆ ಉಸ್ತುವಾರಿ ಸಚಿವರಿಗೆ ತಲುಪಿಸಬೇಕು ಅಂತಾರೆ. ಒಂದೊಂದು ಲಾರಿಯಿಂದ ಕನಿಷ್ಠ ಒಂದು ಲಕ್ಷ ವಸೂಲಿ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಒಬ್ಬೊಬ್ಬ ಆರ್‌ಟಿಒ ಇನ್‌ಸ್ಪೆಕ್ಟರ್ ₹ 500 ಕೋಟಿ ಹಣ ಮಾಡಿದ್ದಾರೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಲೋಕಾಯುಕ್ತ ಸಂಸ್ಥೆ ಸತ್ತು ಹೋಗಿದೆ. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಪಿ.ಶೆಟ್ಟಿ ಅವರು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವಾಗಿದೆ. ಕಮಿಷನ್ ಸರ್ಕಾರ ಅಂಥ ಪ್ರಧಾನ ಮಂತ್ರಿ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಯಡಿಯೂರಪ್ಪ ದುಡ್ಡು ಹೊಡೆದರು ಕೆಲಸ ಮಾಡಿದ್ದಾರೆ. ಆದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವವರನ್ನು ಬಿಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ಕುಡಿಯಲು ನೀರು ಬಿಡದಿದ್ದರೆ ವಾರದೊಳಗೆ ಮುತ್ತಿಗೆ ಹಾಕಲಾಗುವುದು. ಮುಖ್ಯಮಂತ್ರಿ ನಿರ್ದೇಶನದಂತೆ ಕೆಆರ್‌ಎಸ್‌ನಿಂದ ನೀರು ಬಿಡಲಾಗಿದೆ. ಅದೇ ರೀತಿ ಜನ, ಜಾನುವಾರುಗಳಿಗೆ ಅರ್ಧ ಟಿಎಂಸಿ ನೀರು ಬಿಡುವಂತೆ’ ಒತ್ತಾಯಿಸಿದರು.

‘ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಗಮನಕ್ಕೂ ತರಲಾಗಿದೆ. ₹ 40 ಕೋಟಿ ಬಿಡುಗಡೆ ಇನ್ನೂ ಆಗಿಲ್ಲ. ಹೊಳೆನರಸೀಪುರ ವಿಧಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿ, ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂಬುದರ ಮಾಹಿತಿ ತರಿಸಿಕೊಳ್ಳಲಾಗಿದೆ. ಹೇಮಾವತಿಯಲ್ಲಿ ಡೆಡ್‌ ಸ್ಟೋರೆಜ್‌ ಕಳೆದು 3 ಟಿಎಂಸಿ ನೀರು ಇದೆ. ಬೆಳೆಗೂ ನೀರು ಬಿಟ್ಟಿಲ್ಲ, ಕನಿಷ್ಠ ಕುಡಿಯಲು ನೀರು ಕೊಡಿ’ ಎಂದು ಮನವಿ ಮಾಡಿದರು.

**

ಕಾಂಗ್ರೆಸ್‌ಗೆ ಇಂತಹ ಪರಿಸ್ಥಿತಿ

ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಅಶೋಕ್‌ ಖೇಣಿ ಅವರನ್ನು ಸೇರಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ರೇವಣ್ಣ ವ್ಯಂಗ್ಯವಾಡಿದರು.

‘ಗಾಂಧೀಜಿ ಬಹಳ ವರ್ಷಗಳ ಹಿಂದೆಯೇ ಕಳ್ಳರು–ಕಾಕರು ಕಾಂಗ್ರೆಸ್‌ ಸೇರುತ್ತಾರೆ ಎಂದು ಎಚ್ಚರಿಸಿದ್ದರು. ಅವರ ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಲಿ’ ಎಂದು ಲೇವಡಿ ಮಾಡಿದರು.

**

ಸರ್ಕಾರ ನೀರಾವರಿ ಸಲಹಾ ಸಮಿತಿ ರಚಿಸಲಿ ಅಥವಾ ಏನಾದರೂ ಮಾಡಿಕೊಳ್ಳಲಿ. ಕುಡಿಯಲು ನೀರು ಬಿಟ್ಟರೆ ಸಾಕು.

–ಎಚ್‌.ಡಿ.ರೇವಣ್ಣ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry