ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊನೆಭಾಗಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಿ’

Last Updated 8 ಮಾರ್ಚ್ 2018, 10:39 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿಗೆ ಭದ್ರಾನಾಲೆಗೆ ನೀರು ಬಿಟ್ಟು ಎರಡು ತಿಂಗಳಾದರೂ ಕೊನೆಭಾಗದ ತೋಟ ಹಾಗೂ ಭತ್ತದ ಗದ್ದೆಗಳಿಗೆ ಒಮ್ಮೆಯೂ ನೀರು ಮುಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಬಳಿ ರೈತರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಕೊನೆಭಾಗದ ರೈತರು ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಡಿಸಿ ಹಾಗೂ ಎಸ್‌ಪಿ ಸಮಸ್ಯೆ ಆಲಿಸಿದರು.

ಕೊನೆಭಾಗದ ರೈತರ ಜಮೀನು, ತೆಂಗಿನ ತೋಟ ನೀರಿಲ್ಲದೆ ಒಣಗಿವೆ. ರೈತ ಸಮುದಾಯ ಸಂಕಷ್ಟದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ವಿವಿಧ ಇಲಾಖೆ ನಡುವೆ ಸಾಮರಸ್ಯ ಇಲ್ಲ. ಬೆಸ್ಕಾಂ, ನೀರಾವರಿ, ಪೊಲೀಸ್ ಇಲಾಖೆ ಒಗ್ಗೂಡಿ ಅಕ್ರಮ ಪಂಪ್‌ಸೆಟ್ ತೆರವು ಮಾಡಿ ಕೊನೆಭಾಗಕ್ಕೆ ನೀರು ಹರಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಿ ಎಂದು ಮನವಿ ಮಾಡಿದರು.

ನೀರಾವರಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಮಸ್ಯೆ ಉಲ್ಬಣಿಸಿದೆ. ನಾಲೆಯ ಗೇಟ್ 10 ದಿನ ಆನ್ 10 ದಿನ ಆಫ್ ಮಾಡುವ ಆಂತರಿಕ ಸರದಿ ಸರಿಯಾಗಿ ಪಾಲಿಸುತ್ತಿಲ್ಲ.

ಮೇಲ್ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆದುಕೊಂಡಿದ್ದಾರೆ ಎಂದು ಅಂಕಿ ಅಂಶ ಸಹಿತ ವಿವರಿಸಿದ ರೈತ ಮುಖಂಡ ಫಾಲಾಕ್ಷಪ್ಪ ಹೊಳೆಸಿರಿಗೆರೆ, ಚಂದ್ರಪ್ಪ, ಮಲ್ಲೇಶಪ್ಪ, ಬಸವರಾಜಪ್ಪ ಹೊಳೆಸಿರಿಗೆರೆ ಎಂಜಿನಿಯರ್‌ ವಿರುದ್ಧ ದೂರಿದಾಗ ವಾಗ್ವಾದ ನಡೆಯಿತು.

ಇದಕ್ಕೆ ಪ್ರತಿಯಾಗಿ ಎಇಇ ಗವಿಸಿದ್ದೇಶ್ವರ ತಾವು ಲಭ್ಯವಿರುವ ನೀರನ್ನು ಹರಿಸಲು ತೆಗೆದುಕೊಂಡ ಕ್ರಮ ವಿವರಿಸಿದರು.

ನಿಯಂತ್ರಣ ಎರಡಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ರಾತ್ರಿ ವೇಳೆ ನಾಲೆ ಗೇಟ್ ಎತ್ತುವುದು, ಅಕ್ರಮ ಪಂಪ್ ಸೆಟ್ ಸಮಸ್ಯೆ ಇದೆ. ಬೇಸಿಗೆ ವೇಳೆ ನೀರಿನ ಬೇಡಿಕೆ ಹೆಚ್ಚಾಗಿದೆ, ಕೊನೆಭಾಗಕ್ಕೆ ನೀರು ತಲುಪಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಭಾರ ಇಇ ಮಲ್ಲಿಕಾರ್ಜುನ ಮಾತನಾಡಿ, ಮೇಲ್ಬಾಗದಲ್ಲಿ ನಾಲೆಯನ್ನು 12 ದಿನ ಆಫ್, 4 ದಿನ ಆನ್ ಮಾಡುವ ಪದ್ಧತಿ ಜಾರಿಯಲ್ಲಿದೆ.

ಹೊಸ ಪದ್ಧತಿ ಅಳವಡಿಸಲು ರೈತರು ಒಪ್ಪುತ್ತಿಲ್ಲ. ನಾಲೆ ಗೇಟ್ ಹಾಕಲು ಹೋದರೆ ರೈತರು ಕಲ್ಲಿನಿಂದ ಹೊಡೆಯುತ್ತಾರೆ ಎಂದರು.

ಈಗ ಭದ್ರಾ ನಾಲೆಗೆ 144ನೇ ವಿಧಿ ಹಾಕಲಾಗಿದೆ. ಕಂದಾಯ, ಪೊಲೀಸ್, ಬೆಸ್ಕಾಂ ಸಿಬ್ಬಂದಿಯೊಂದಿಗೆ ನಾಲೆ ಮೇಲೆ ಓಡಾಡಿ, ಅಕ್ರಮ ತಡೆಗಟ್ಟಿ ಕೊನೆಭಾಗಕ್ಕೆ ನೀರು ತಲುಪಿಸಿ ಎಂದು ಜಿಲ್ಲಾಧಿಕಾರಿ, ಹಾಗೂ ಎಸ್ಪಿ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಅಧಿಕಾರಿಗಳು ಕೊನೆಭಾಗಕ್ಕೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ರೆಹಾನ್ ಪಾಷಾ, ಸಿಪಿಐ ಲಕ್ಷ್ಮಣ್ ನಾಯ್ಕ್, ಪಿಎಸ್ಐ ಸುನೀಲ್ ಕುಮಾರ್, ಕಂದಾಯ ನಿರೀಕ್ಷಕ ರವಿ ನಾಯ್ಕ್ , ವಿವಿಧ ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳು, ರೈತರು ಇದ್ದರು.

ಇದೇ ವೇಳೆ ಭದ್ರಾ ನಾಲೆ 11ನೇ ಉಪನಾಲೆ ಬಳಿ ಹಾಕಿದ್ದ ಅಕ್ರಮಪಂಪ್ ಸೆಟ್ ಹಾಗೂ ಒಂದು ಟ್ರಾಕ್ಟರ್ ಟ್ರೈಲರನ್ನು ಪೊಲೀಸರು ವಶಪಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT