ಹೊಸ ಚಿತ್ರಕ್ಕೆ ಮುಹೂರ್ತ

7

ಹೊಸ ಚಿತ್ರಕ್ಕೆ ಮುಹೂರ್ತ

Published:
Updated:
ಹೊಸ ಚಿತ್ರಕ್ಕೆ ಮುಹೂರ್ತ

ಗಾಂಧಿನಗರದಲ್ಲಿ ತಂತ್ರಜ್ಞರು ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿರುವುದು ಸರ್ವೇಸಾಮಾನ್ಯ. ಈ ಸಾಲಿಗೆ ಕೃಪಾಕರ್ ಹೊಸ ಸೇರ್ಪಡೆ. 45 ಚಿತ್ರಗಳಿಗೆ ಸುಮಧುರ ಹಾಡು ನೀಡಿ ವೈಯಕ್ತಿಕ ಕಾರಣದಿಂದ ಚಿತ್ರರಂಗದಿಂದ ದೂರ ಸರಿದಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ‘ಪ್ರಿಯಾಂಕ’ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮತ್ತೊಮ್ಮೆ ಗುರುತಿಸಿಕೊಂಡು ತೆಲುಗು ಸೇರಿದಂತೆ ನಾಲ್ಕು ಚಿತ್ರಗಳಿಗೆ ಬುಕ್ ಆಗಿದ್ದಾರೆ. ಈ ನಡುವೆಯೇ ನಾಯಕನಾಗಿ ಹೆಸರಿಡದ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಗವಿಗಂಗಾಧರೇಶ್ವರ ದೇಗುಲದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿತು.

ಇದು ಐವರು ದಂಪತಿಯ ಪಯಣದ ಕಥೆ. ಟ್ರಾವೆಲ್ ಫೋಟೊಗ್ರಾಫರ್ ಆಗಿ ಕೃಪಾಕರ್ ನಟಿಸಲಿದ್ದಾರೆ. ಜೀವನವನ್ನು ಗೊಂದಲಕ್ಕೆ ಬಿಡದೆ ಅರ್ಥ ಮಾಡಿಕೊಂಡಲ್ಲಿ ಬದುಕು ಸುಂದರವಾಗಿರುತ್ತದೆ ಎನ್ನುವ ಪಾತ್ರದಲ್ಲಿ ಹೈದ‌ರಾಬಾದ್ ಮೂಲದ ಡೊಲಿಶಶಾ ನಾಯಕಿ. ಉಳಿದಂತೆ ಮುಸ್ಲಿಂ ಜೋಡಿಗಳಾಗಿ ಬಿರಾದಾರ್- ಪಂಕಜಾ ರವಿಶಂಕರ್ ಇದ್ದಾರೆ. ಉಳಿದಂತೆ ಮೋಹನ್‍ ಜುನೇಜ- ರೇಖಾದಾಸ್, ಶ್ರೀಹರಿ- ಐಶ್ವರ್ಯಗೌಡ, ಸಚಿನ್-ಚಂದನಾ, ಖಳನಾಗಿ ಉಗ್ರಂ ರವಿ, ಡ್ಯಾನಿ ಕುಟ್ಟಪ್ಪ ತಾರಾಬಳಗದಲ್ಲಿದ್ದಾರೆ.

ಹಲವು ನಿರ್ದೇಶಕರ ಬಳಿ ಕೆಲಸ ಮಾಡಿ ಕಿರುಚಿತ್ರ ನಿರ್ದೇಶನ ಮಾಡಿರುವ ಮಿಥುನ್ ಮೊದಲ ಬಾರಿಗೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಬೆಂಗಳೂರು, ಸಕಲೇಶಪುರ, ಮಂಗಳೂರು, ಗೋಕರ್ಣದ ಸುಂದರ ತಾಣಗಳಲ್ಲಿ ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಐದು ಹಾಡುಗಳಿಗೆ ಸ್ನೇಹಪ್ರಿಯ ನಾಗರಾಜ್, ವಿಜಯ್‌ ಭರಮಸಾಗರ ಮತ್ತು ಸೋಮೇಶ್ ಪಿ. ನವೋದಯ, ಟಿ.ಜಿ. ನಂದೀಶ್‍ ತೀರ್ಥಹಳ್ಳಿ, ಸಿ.ಪಿ. ಪ್ರವೀಣ್ ಅವರ ಸಾಹಿತ್ಯವಿದೆ.

ಥ್ರಿಲ್ಲರ್ ಮಂಜು ಸಾಹಸ ಇರುವ ಈ ಚಿತ್ರಕ್ಕೆ ಉದಯನ್ ಅವರ ಛಾಯಾಗ್ರಹಣವಿದೆ.

ಗಣಪ ವಿಶನ್ಸ್ ಸಂಸ್ಥೆ ಮೂಲಕ ಮಿಥುನ್, ಕೃಪಾಕರ್, ವಿಜಯ್ ಹಾಗೂ ಉಮೇಶ್ ನಿರ್ಮಾಣದ ಸಾರಥ್ಯವಹಿಸಿದ್ದಾರೆ. ಚಿತ್ರಕ್ಕೆ ಕ್ಲಾ‍ಪ್ ಮಾಡಿದ ಕೆ.‍ಪಿ.ಸಿ.ಸಿ. ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಚಿತ್ರತಂಡಕ್ಕೆ ಶುಭ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry