ಟಗರಿನ ಓಟ, ಸಂತೋಷ ಕೂಟ

7

ಟಗರಿನ ಓಟ, ಸಂತೋಷ ಕೂಟ

Published:
Updated:
ಟಗರಿನ ಓಟ, ಸಂತೋಷ ಕೂಟ

ಶಿವಣ್ಣ – ಸೂರಿ ಜೋಡಿಯ ‘ಟಗರು’ ಸಖತ್ತಾಗಿ ಓಡುತ್ತಿದೆಯಂತೆ. ಅಂದರೆ, ‘ಟಗರು’ ಸಿನಿಮಾಕ್ಕೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿ, ಸಿನಿಮಾ ಮಂದಿರಗಳಿಗೆ ಬಂದು ಟಗರಿನ ಓಟವನ್ನು ನೋಡಿ ಸಂಭ್ರಮಿಸುತ್ತಿದ್ದಾರಂತೆ. ಇದನ್ನೆಲ್ಲ ಹೇಳಿಕೊಳ್ಳಲು ನಿರ್ದೇಶಕ ಸೂರಿ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಅದನ್ನು ಪತ್ರಿಕಾಗೋಷ್ಠಿ  ಎಂದು ಕರೆದುಕೊಳ್ಳದೆ, ‘ಸಂತೋಷ ಕೂಟ’ ಎಂದು ಹೇಳಿಕೊಂಡರು.

ನಾಯಕ ನಟ ಶಿವರಾಜ್‌ ಕುಮಾರ್‌, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ ಇಡೀ ಚಿತ್ರತಂಡ ಅವರ ಜೊತೆ ಇತ್ತು. ‘ಟಗರು ಚಿತ್ರದ ಎರಡನೆಯ ಭಾಗ ಸಿನಿಮಾ ರೂಪ ತಳೆಯುವುದು ಬಹುತೇಕ ಖಚಿತ. ಈ ಬಗ್ಗೆ ನಾನು ಸೂರಿ ಜೊತೆ ಮಾತನಾಡುವೆ’ ಎಂದು ಖುಷಿಯಿಂದ ಹೇಳಿದರು ಶಿವಣ್ಣ.

ಸಂತೋಷ ಕೂಟದಲ್ಲಿ ಗಮನ ಸೆಳೆದವರು ಡಾಲಿ ಪಾತ್ರಕ್ಕೆ ಜೀವ ತುಂಬಿದ ಧನಂಜಯ್. ಕಾರ್ಯಕ್ರಮ ಆರಂಭವಾದ ಕೆಲವೇ ನಿಮಿಷಗಳ ನಂತರ ಸೂರಿ ಅವರು ಧನಂಜಯ್ ಕೈಗೆ ಮೈಕ್‌ ಒಪ್ಪಿಸಿದರು.

ಈ ಸಂದರ್ಭದಲ್ಲಿ ಧನಂಜಯ್ ತುಸು ಭಾವುಕ ಆಗಿದ್ದರು. ‘ಸೂರಿ ಸರ್‌ ಕೈಗೆ ನಾನು ಸಿಕ್ಕಿದೆ. ಅವರು ನನ್ನನ್ನು ಉದ್ದೇಶಿಸಿ, ನೀನು ಶಿಲೆಯಲ್ಲ, ನೀನು ಮಣ್ಣು ಎಂದು ಹೇಳಿದರು. ಧನಂಜಯ್ ಎನ್ನುವ ಮಣ್ಣನ್ನು ಕಲಸಿ, ಅದಕ್ಕೆ ಬೇರೊಂದು ರೂಪ ಕೊಟ್ಟರು ಸೂರಿ ಸರ್. ನನ್ನ ಪಾಲಿಗೆ ದೊರೆತ ಅದ್ಭುತ ತಂಡ ಇದು’ ಎಂದು ಒತ್ತರಿಸಿ ಬರುತ್ತಿದ್ದ ಖುಷಿಯ ನಡುವೆಯೇ ಹೇಳಿಕೊಂಡರು.

ಧನಂಜಯ್ ಮಾತಿಗೆ ತಮ್ಮದೊಂದು ಮಾತು ಸೇರಿಸಿ ಶಿವಣ್ಣ, ‘ಡಾಲಿ ಪಾತ್ರ ಈ ಸಿನಿಮಾದ ಭಾಗವಾಗಿರುವ ನನ್ನನ್ನೂ ಕಾಡಿದೆ. ಹೀಗಿರುವಾಗ, ಇದು ವೀಕ್ಷಕರನ್ನು ಇನ್ನೆಷ್ಟು ಕಾಡಿರಬಹುದು’ ಎಂದು ಅವಲೋಕನದ ಧಾಟಿಯಲ್ಲಿ ಹೇಳಿದರು.

‘ಟಗರು ಸಿನಿಮಾದ ಭಾಗವಾಗಲು ಶಿವಣ್ಣ ಒಪ್ಪಿದ್ದಾರೆ ಎಂಬುದು ಖಚಿತವಾದಾಗಲೇ ಸಿನಿಮಾ ಯಶಸ್ಸು ಕಾಣುತ್ತದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೆ. ಶಿವಣ್ಣ ನಿಮ್ಮ ಜೊತೆ ಇರುತ್ತಾರೆ, ಮುಂದುವರಿಯಿರಿ ಎಂದು ಗೀತಕ್ಕ (ಗೀತಾ ಶಿವರಾಜ್‌ ಕುಮಾರ್‌) ಹೇಳಿದ್ದೇ ಈ ಸಿನಿಮಾ ನಿಮ್ಮ ಮುಂದೆ ಬರಲು ಕಾರಣ’ ಎಂದರು ಶ್ರೀಕಾಂತ್.

ಇಷ್ಟು ಹೇಳಿದ ಅವರು, ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry