ರಾಜಕೀಯ ಹವಾದಲ್ಲಿ ‘ಧ್ವಜ’ನ ಹಾರಾಟ

7

ರಾಜಕೀಯ ಹವಾದಲ್ಲಿ ‘ಧ್ವಜ’ನ ಹಾರಾಟ

Published:
Updated:
ರಾಜಕೀಯ ಹವಾದಲ್ಲಿ ‘ಧ್ವಜ’ನ ಹಾರಾಟ

ಚಂದನವನ’ದಲ್ಲಿ ರಾಜಕೀಯದ ಸದ್ದು ಮತ್ತೆ ಕೇಳಿಬರುತ್ತಿದೆ. ಅಂದರೆ, ರಾಜಕೀಯ ಆಧರಿಸಿದ ಸಿನಿಮಾವೊಂದು ತೆರೆಗೆ ಬರಲು ಅಣಿಯಾಗಿದೆ. ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ, ರಾಜ್ಯದ ಚುನಾವಣಾ ಕಣದ ಕಾವು ದಿನೇ ದಿನೇ ಹೆಚ್ಚಾಗುತ್ತಿರುವುದು ತೆರೆಗೆ ಬರುತ್ತಿರುವ ಸಿನಿಮಾಗಳಲ್ಲೂ ಗೊತ್ತಾಗುತ್ತಿದೆ ಎನ್ನಲು ಅಡ್ಡಿಯಿಲ್ಲ!

ಈ ಬಾರಿ ರಾಜಕೀಯ ಕಥೆ ಇರುವ ಸಿನಿಮಾ ಸಿದ್ಧಪಡಿಸಿರುವವರು ನಿರ್ದೇಶಕ ಅಶೋಕ್ ಕಶ್ಯಪ್. ಅವರ ಕನಸಿನ ಸಿನಿಮಾಕ್ಕೆ ನಟರಾದ ರವಿ, ಪ್ರಿಯಾಮಣಿ ಮತ್ತು ದಿವ್ಯಾ ಉರುಡುಗ ಬಣ್ಣ ತುಂಬಿದ್ದಾರೆ. ಅಂದಹಾಗೆ, ಅಶೋಕ್ ಕಶ್ಯಪ್ ಅವರು ನಿರ್ದೇಶಿಸುತ್ತಿರುವುದು ತಮಿಳಿನ ‘ಕೋಡಿ’ ಸಿನಿಮಾದ ರಿಮೇಕ್‌ಅನ್ನು. ಇದಕ್ಕೆ ಅವರು ‘ಧ್ವಜ’ ಎಂಬ ಶೀರ್ಷಿಕೆ ನೀಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು.

ಸಿನಿಮಾದ ಟ್ರೇಲರ್ ತೋರಿಸಿದ ಅಶೋಕ್‌, ನಂತರ ಮಾತು ಆರಂಭಿಸಿದರು. ‘ಇದು ತಮಿಳು ಸಿನಿಮಾದ‌ ರಿಮೇಕ್‌. ರವಿ ಮುಖ್ಯ ಪಾತ್ರದಲ್ಲಿ ಇದ್ದಾರೆ. ಅವರು ಉಪ್ಪಿ2 ಸಿನಿಮಾದಲ್ಲಿ ಕೆಲಸ ಮಾಡಿದವರು. ಸಿನಿಮಾ ಪೂರ್ಣಗೊಂಡಿದೆ’ ಎಂದರು. ರವಿ ಅವರು ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಸಿನಿಮಾದ ಮುಹೂರ್ತ ನಡೆದಾಗ, ಅದರ ಬಗ್ಗೆ ಸಿನಿತಂಡ ಪತ್ರಿಕಾಗೋಷ್ಠಿ ನಡೆಸಿರಲಿಲ್ಲ. ‘ಮುಹೂರ್ತದ ಪತ್ರಿಕಾಗೋಷ್ಠಿಯನ್ನು ನಾವು ಆಯೋಜಿಸಿರಲಿಲ್ಲ. ಸಿನಿಮಾ ಮಾಡುವ ಮೊದಲೇ ನಾವು ಪತ್ರಿಕಾಗೋಷ್ಠಿ ನಡೆಸಿ, ಅದು ಮಾಡುತ್ತೇವೆ – ಇದು ಮಾಡುತ್ತೇವೆ ಎಂದು ಹೇಳಿಕೊಳ್ಳುವುದು ಬೇಡ ಎಂದು ತೀರ್ಮಾನಿಸಿದ್ದೆವು. ಹಾಗಾಗಿ, ಸಿನಿಮಾ ಪೂರ್ಣಗೊಂಡ ನಂತರವೇ ಅದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ’ ಎಂದರು ಅಶೋಕ್.

ಸಿನಿಮಾದ ಟೀಸರ್‌ಅನ್ನು ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರಂತೆ. ಕಬಾಲಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರೇ ಈ ಸಿನಿಮಾಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಇದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಆಗಿರಲಿದೆಯಂತೆ. ‘ನಮ್ಮ ಸಿನಿಮಾ ಇಂದಿನ ರಾಜಕೀಯದ ಹವಾಕ್ಕೆ ಹತ್ತಿರವಾಗಿದೆ. ಪಕ್ಷವೊಂದರ ಕಾರ್ಯಕರ್ತ ಕೊಲೆಯಾಗುವುದು ಸಿನಿಮಾದಲ್ಲಿದೆ. ನಟ ರವಿ ಅವರ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರಿಸಲು ದ್ವಿಪಾತ್ರ ಸೃಷ್ಟಿಸಲಾಗಿದೆ. ಒಂದು ಟಫ್ ಆಗಿರುವ ಪಾತ್ರ, ಇನ್ನೊಂದು ಕಾಲೇಜು ಉಪನ್ಯಾಸಕನ ಪಾತ್ರ’ ಎಂದು ಅಶೋಕ್ ವಿವರಿಸಿದರು.

ಪ್ರಿಯಾಮಣಿ

ನಿರ್ದೇಶಕರಿಂದ ಮೈಕ್ ಪಡೆದುಕೊಂಡ ರವಿ, ‘ಇಲ್ಲಿ ಯಾವುದೂ ನನ್ನಿಂದ ಆಗಿಲ್ಲ. ಎಲ್ಲವೂ ನಮ್ಮ ತಂಡದ ಸೃಷ್ಟಿ’ ಎಂದರು. ತಮ್ಮ ಜೊತೆ ನಟಿಸಲು ಒಪ್ಪಿಕೊಂಡ ಪ್ರಿಯಾಮಣಿ ಅವರಿಗೆ ಧನ್ಯವಾದ ಸಮರ್ಪಿಸಿದರು. ‘ನಾಯಕ ನಟ ಹೊಸಬ ಎಂಬುದು ಗೊತ್ತಾದರೆ, ಅವನ ಜೊತೆ ನಟಿಸಲು ಎಲ್ಲ ನಟಿಯರೂ ಒಪ್ಪುವುದಿಲ್ಲ. ಹೀಗಿದ್ದರೂ ಪ್ರಿಯಾಮಣಿ ನನ್ನ ಜೊತೆ ನಟಿಸಲು ಒಪ್ಪಿಕೊಂಡರು’ ಎಂದರು.

ಈ ಸಿನಿಮಾಕ್ಕೂ, ನಟಿ ಮತ್ತು ರಾಜಕಾರಣಿ ರಮ್ಯಾ ಅವರ ಜೀವನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಿಯಾಮಣಿ ಸ್ಪಷ್ಟನೆ ನೀಡಿದರು. ಈ ಚಿತ್ರದ ನಾಯಕಿಯ ಹೆಸರು ರಮ್ಯಾ. ‘ನನಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಎದುರಾದಾಗ ಅದನ್ನು ಒಪ್ಪಿಕೊಂಡೆ. ರವಿ ಅವರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಇಷ್ಟೊಂದು ಚೆನ್ನಾಗಿ ಅಭಿನಯಿಸುವ ಮೂಲಕ ಅವರು ನನ್ನನ್ನು ಮೂಕವಿಸ್ಮಿತಗೊಳಿಸಿದರು’ ಎಂದರು ಪ್ರಿಯಾಮಣಿ.

ದಿವ್ಯಾ ಉರುಡುಗ ಅವರದ್ದು ಹಾಸ್ಯದ ಸ್ಪರ್ಶ ಇರುವ ಬಬ್ಲಿ ಹುಡುಗಿಯ ಪಾತ್ರವಂತೆ. ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಈ ಸಿನಿಮಾದ ದೊಡ್ಡ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ‘ಈ ಸಿನಿಮಾದ ಬಿಡುಗಡೆ ಚುನಾವಣೆ ಸಂದರ್ಭದಲ್ಲೇ ಆಗುತ್ತದೆ. ಈಗಿನ ರಾಜಕೀಯದಲ್ಲಿ ಕಾಣುತ್ತಿರುವ ಹಲವು ಮೇಲಾಟಗಳು ಸಿನಿಮಾದಲ್ಲಿ ಕೂಡ ಕಾಣುತ್ತವೆ’ ಎಂದರು ಅಶೋಕ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry