4

ಮನುಷ್ಯನ ಆಲೋಚನೆಗೆ ದೃಶ್ಯರೂಪ

Published:
Updated:
ಮನುಷ್ಯನ ಆಲೋಚನೆಗೆ ದೃಶ್ಯರೂಪ

‘ಸಿ3’ ಚಿತ್ರದಲ್ಲಿ ಮನುಷ್ಯನ ಆಲೋಚನೆಗಳು ದೃಶ್ಯರೂಪ ತಾಳಿವೆ ಎಂದರು ನಿರ್ದೇಶಕ ಕೃಷ್ಣಕುಮಾರ್ ಬಿ. ಹೊಂಗನೂರು.

ಕಿರುತೆರೆಯಲ್ಲಿ ದಶಕಕ್ಕೂ ಹೆಚ್ಚುಕಾಲ ದುಡಿದಿರುವ ಅವರಿಗೆ ಹಿರಿತೆರೆ ಹೊಸದು. ವ್ಯಕ್ತಿಯೊಬ್ಬ ಏಕಾಂಗಿಯಾಗಿದ್ದ ವೇಳೆ ಅವನ ಮನಸ್ಸು ‍ಪೈಶಾಚಿಕವಾದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಚಿತ್ರದಲ್ಲಿ ಎರಡು ಪಾತ್ರಗಳಿವೆ. ಒಂದೇ ಮನೆಯಲ್ಲಿ ಕಥೆ ನಡೆಯುತ್ತದೆ. ರಾತ್ರಿ 7ಗಂಟೆಯಿಂದ ಬೆಳಿಗ್ಗೆ 9ಗಂಟೆವರೆಗೆ ನಡೆಯುವ ಘಟನೆಯೇ ಕಥಾಹಂದರ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಸಿನಿಮಾ ನಿರ್ದೇಶನ ನನಗೆ ಹೊಸದು. ಜನರಿಗೆ ಇಷ್ಟವಾಗುವಂತೆ ಚಿತ್ರ ಮಾಡಿದ್ದೇನೆ’ ಎಂದು ಮಾತು ಮುಗಿಸಿದರು ನಿರ್ದೇಶಕ ಕೃಷ್ಣಕುಮಾರ್.

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಖ್ಯಾತಿಯ ವಿಜಯ್‌ಕುಮಾರ್ ಮೊದಲ ಬಾರಿಗೆ ನಾಯಕ ನಟರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ನಿಭಾಯಿಸಿರುವ ಅವರಿಗೆ ನಾಯಕನ ‍ಪಾತ್ರ ಒಲಿದಿದ್ದು ಕೂಡ ಅದೃಷ್ಟವಂತೆ.

‘ನಾನು ಈ ಚಿತ್ರದಲ್ಲಿ ಸಹನಟನಾಗಿ ಅಭಿನಯಿಸಲು ಬಂದೆ. ಕೊನೆಗೆ, ನಿರ್ದೇಶಕರು ಮತ್ತು ನಿರ್ಮಾಪಕರು ಮುಖ್ಯಪಾತ್ರ ನಿಭಾಯಿಸಲು ಸಲಹೆಯಿತ್ತರು. ಅವರ ನಿರ್ಧಾರದಿಂದ ನಾನಿಂದು ನಾಯಕ ನಟನಾಗಿದ್ದೇನೆ’ ಎಂದರು.

‘ಬೆಳಿಗ್ಗೆ ಧಾರಾವಾಹಿಯ ಶೂಟಿಂಗ್‌ನಲ್ಲಿ  ‍ಪಾಲ್ಗೊಳ್ಳುತ್ತಿದ್ದೆ.  ರಾತ್ರಿಪೂರ್ತಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ನನಗೆ ಇದು ಸವಾಲಿನ ಪಾತ್ರ. ಎಲ್ಲರ ಸಹಕಾರದಿಂದ ಉತ್ತಮವಾಗಿ ಅಭಿನಯಿಸಿದ್ದೇನೆ’ ಎಂದರು.

‘ಹಳ್ಳಿ ಹುಡುಗ ಪ್ಯಾಟೆಗ್‌ ಬಂದ’ ಕಾರ್ಯಕ್ರಮದ ಖ್ಯಾತಿಯ ಐಶ್ವರ್ಯ ಈ ಚಿತ್ರದ ನಾಯಕಿ. ‘ಚಿತ್ರದಲ್ಲಿ ಕಾಮಿಡಿ, ಥ್ರಿಲ್ಲರ್, ಹಾರರ್‌ ಇದೆ. ನನ್ನದು ಬಬ್ಲಿ ಹುಡುಗಿಯ ಪಾತ್ರ. ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಚಿತ್ರದಲ್ಲಿ ಒಂದು ಹಾಡಿದ್ದು, ಆದಿಲ್‌ ನದಾಫ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ಪ್ರಕಾಶ್‌ ಮತ್ತು ಜೋಗಿ ಸಂಗೀತಾ ಇದಕ್ಕೆ ಧ್ವನಿಯಾಗಿದ್ದಾರೆ. ಆರ್‌. ಗಿರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬಿ.ಎಂ. ಚೇತನ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಸೆನ್ಸಾರ್‌ ಮಂಡಳಿಯ ಮುಂದಿದ್ದು, ಶೀಘ್ರವೇ ತೆರೆಗೆ ಬರಲು ತಂಡ ಸಿದ್ಧತೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry