ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯ ಮಾಂತ್ರಿಕ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕ್ಯಾಮೆರಾವನ್ನು ಕುಂಚದಂತೆ ಬಳಸಿ ಪರದೆ ಮೇಲೆ ಚಮತ್ಕಾರ ತೋರಿಸುವ ಛಾಯಾಗ್ರಾಹಕ ಅನಾಮಿಕ. ಅವನ ಕಸುಬುದಾರಿಕೆ, ಜಾಣ್ಮೆ ಬಹುತೇಕ ವೇಳೆ ಪ್ರೇಕ್ಷಕರ ಅರಿವಿಗೆ ಬರುವುದಿಲ್ಲ. ಆದರೆ, ಯಶಸ್ವಿ ಚಿತ್ರಗಳಲ್ಲಿ ಅವನದ್ದು ದೊಡ್ಡ ಪಾಲಿರುತ್ತದೆ. ಆತ ಕೂಡ ಆ ಸಿನಿಮಾದ ಹೀರೊ ಎಂದರೆ ಅಚ್ಚರಿಪಡಬೇಕಿಲ್ಲ.

‘ಬ್ಯೂಟಿಪುಲ್‌ ಮನಸುಗಳು’ ಚಿತ್ರ ನೋಡಿದವರು ಅಲ್ಲಿನ ದೃಶ್ಯಗಳಿಗೆ ಮನಸೋತಿದ್ದರು. ಈ ಚಿತ್ರದಲ್ಲಿ ಕ್ಯಾಮೆರಾ ಕೈಚಳಕ ಪ್ರದರ್ಶಿಸಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದು ಛಾಯಾಗ್ರಾಹಕ ಕಿರಣ್‌ ಹಂ‍ಪಾಪುರ. ಅವರು ಬಣ್ಣದ ಬದುಕಿಗೆ ಹೆಜ್ಜೆ ಇಟ್ಟಿದ್ದು ಕೂಡ ಅನಿರೀಕ್ಷಿತ. ದೃಶ್ಯಗಳ ಮೂಲಕ ಚೆಂದದ ಕವಿತೆ ಕಟ್ಟುವ ಕಲೆಯೂ ಅವರಿಗೆ ಕರಗತ. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಅವರೀಗ ಚಂದನವನದಲ್ಲಿ ಬಹುಬೇಡಿಕೆಯ ಛಾಯಾಗ್ರಾಹಕ.

ಕಿರಣ್‌ ಅವರ ಹುಟ್ಟೂರು ಕೆ.ಆರ್‌. ನಗರ ತಾಲ್ಲೂಕಿನ ಹಂಪಾಪುರ. ಪದವಿಪೂರ್ವ ಕಾಲೇಜಿನ ಮೆಟ್ಟಿಲು ಹತ್ತಿದರೂ ಶಿಕ್ಷಣ ಅರ್ಧಕ್ಕೆ ಮೊಟಕುಗೊಂಡಿತು. ಮನೆಯಲ್ಲಿ ಬಡತನ. ದುಡಿಮೆಗೆ ಹೋಗುವುದು ಅವರಿಗೆ ಅನಿವಾರ್ಯವಾಯಿತು. ಓದು ನಿಲ್ಲಿಸಿದ ಪುತ್ರನ ಬಗ್ಗೆ ಅಮ್ಮನಿಗೆ ಆತಂಕ ಇತ್ತು. ಅವರ ದೂರದ ಸಂಬಂಧಿಯೊಬ್ಬರು ಕಿರುತೆರೆಗೆ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುತ್ತಿದ್ದರಂತೆ. ಅಮ್ಮನಿಗೆ ಅವರ ಪರಿಚಯ ಇತ್ತು. ಅವರ ಮುಂದೆ ಮಗನ ಸ್ಥಿತಿಯನ್ನು ಬಿಡಿಸಿಟ್ಟರು. ಅವರಿಂದ ಕೆಲಸ ಕೊಡಿಸುವ ಭರವಸೆ ಸಿಕ್ಕಿತು.

ಅವರು ಕಿರಣ್‌ನನ್ನು ಕರೆತಂದು ಬಿಟ್ಟಿದ್ದು ಗಾಂಧಿನಗರಕ್ಕೆ. ಧಾರಾವಾಹಿಗಳಲ್ಲಿ ಅವರಿಗೆ ಕೆಲಸ ಕೊಡಿಸಿದರು. ಬಳಿಕ ಕಿರಣ್‌ ಅವರನ್ನು ಸೆಳೆದಿದ್ದು ಸಿನಿಮಾ ಲೋಕ. ಲೈಟ್‌ಬಾಯ್‌ ಆಗಿ ಎಂಟು ವರ್ಷ ಕಾಲ ದುಡಿದರು. ಆ ವೇಳೆ ಅವರನ್ನು ಕ್ಯಾಮೆರಾ ಆಕರ್ಷಿಸಿತು. ಖ್ಯಾತ ಛಾಯಾಗ್ರಾಹಕರ ಬಳಿ ಸಹಾಯಕರಾಗಿ ಸೇರಿಕೊಂಡರು.

‘ನಟ ದರ್ಶನ್ ಅಭಿನಯದ ‘ಕಲಾಸಿಪಾಳ್ಯ’, ‘ಲಾಲಿ ಹಾಡು’, ‘ಧ್ರುವ’ ಸೇರಿದಂತೆ ಐದಾರು ಚಿತ್ರಗಳಲ್ಲಿ ಲೈಟ್‌ಬಾಯ್‌ ಆಗಿ ಕೆಲಸ ಮಾಡಿದೆ. ಅದೇ ವೇಳೆಗೆ ಕ್ಯಾಮೆರಾದತ್ತೆ ಆಕರ್ಷಿತನಾದೆ. ಛಾಯಾಗ್ರಾಹಕರಾದ ಶೇಖರ್‌ಚಂದ್ರ ಹಾಗೂ ಸುಧಾಕರ್‌ ಸರ್‌ ಬಳಿ ಸಾಕಷ್ಟು ಕಲಿತೆ. ಇದು ಈಗ ನೆರವಿಗೆ ಬರುತ್ತದೆ’ ಎಂದು ಸ್ಮರಿಸುತ್ತಾರೆ.

‘ಅದ್ವೈತ’ ಚಿತ್ರದ ಮೂಲಕ ಕಿರಣ್‌ ಸ್ವತಂತ್ರ ಛಾಯಾಗ್ರಾಹಕರಾದರು. ಬಳಿಕ ‘ಜಟ್ಟ’, ‘ಗೊಂಬೆಗಳ ಲವ್‌’, ‘ಮಡಮಕ್ಕಿ’, ‘ಬ್ಯೂಟಿಪುಲ್ ಮನಸುಗಳು’, ‘ಅಮರಾವತಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಕೆಲಸ ಮಾಡಲು ಅವರಿಗೆ ಅವಕಾಶ ಸಿಕ್ಕಿತು. ಇಲ್ಲಿಯವರೆಗೆ ಹದಿನೇಳು ಚಿತ್ರಗಳಿಗೆ ಅವರ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿರುವ ‘ಓ... ಪ್ರೇಮವೇ’, ‘ವೆನಿಲ್ಲಾ’ ಚಿತ್ರಕ್ಕೂ ಅವರ ಕ್ಯಾಮೆರಾ ಕೈಚಳಕವಿದೆ. ಚಿತ್ರೀಕರಣದ ಹಂತದಲ್ಲಿರುವ ‘ಲೌಡ್‌ ಸ್ಪೀಕರ್’, ‘ಪ್ರಯಾಣಿಕರ ಗಮನಕ್ಕೆ’ ಚಿತ್ರಕ್ಕೂ ಅವರದ್ದೇ ಛಾಯಾಗ್ರಹಣ.

‘ದೃಶ್ಯಗಳನ್ನು ಸೆರೆ ಹಿಡಿಯುವುದು ಕಲೆ. ಛಾಯಾಗ್ರಾಹಕನಿಗೆ ತಾಳ್ಮೆ ಬೇಕು. ಚಿತ್ರತಂಡ ಚಿತ್ರೀಕರಣದ ಸ್ಥಳ ಗುರುತಿಸುತ್ತದೆ. ಲೊಕೇಶನ್‌ನಲ್ಲಿ ಲೈಟ್‌ ಬೇಕೇ ಅಥವಾ ನೈಸರ್ಗಿಕ ಬೆಳಕು ಸಾಕಾಗುತ್ತದೆಯೇ ಎಂಬುದನ್ನು ನಾನು ಪರಿಶೀಲಿಸುತ್ತೇನೆ. ಲೊಕೇಶನ್‌ಗೆ ತಕ್ಕಂತೆ ಕಾಸ್ಟ್ಯೂಮ್‌ ಕೂಡ ಮುಖ್ಯ. ಆಗ ಮಾತ್ರ ದೃಶ್ಯವೊಂದು ಕಾವ್ಯವಾಗಿ ಅರಳಲು ಸಾಧ್ಯ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT