ನೋವು ಮರೆಸಿದ ಸಾಧನೆ

7

ನೋವು ಮರೆಸಿದ ಸಾಧನೆ

Published:
Updated:
ನೋವು ಮರೆಸಿದ ಸಾಧನೆ

ಮೂರು ವರ್ಷದವಳಿದ್ದಾಗ ಪೋಲಿಯೊಗೆ ತುತ್ತಾಗಿ ಎಡಗಾಲು ಮತ್ತು ಬೆನ್ನುಮೂಳೆ ಊನಗೊಂಡಿತು. ಲಿಂಗರಾಜಪುರದಲ್ಲಿರುವ ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ ಐಟಿಐ ಮುಗಿಸಿದೆ. ಅಖಿಲ ಭಾರತ ಅಂಗವಿಕಲರ ಕ್ರೀಡಾ ಸಂಸ್ಥೆಯ ರಮೇಶ್ ಟೀಕಾರಾಮ್ ಮತ್ತು ತುಳಸೀಧರ್ ಅವರ ಸಹಾಯದಿಂದ ಬ್ಯಾಡ್ಮಿಂಟನ್ ಮತ್ತು ಡಿಸ್ಕಸ್ ಥ್ರೋನಲ್ಲಿ ಆಸಕ್ತಿ ಬೆಳೆಯಿತು. ಇದರ ನಡುವೆ ಪದವಿ ಮುಗಿಸಿದೆ. ಕೆಲಸದ ಅನಿವಾರ್ಯದಿಂದ ವಿದ್ಯಾರ್ಹತೆ ಲೆಕ್ಕಿಸದೆ ಎಂಟು ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆ ಕೆಲಸಕ್ಕೆ ನೇಮಕಗೊಂಡೆ.

ಕಳೆದ ವರ್ಷ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂಗವಿಕಲರ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಹ್ವಾನ ಬಂದಾಗ ಕೈಯಲ್ಲಿ ನಾಲ್ಕು ಬಿಡಿಗಾಸು ಇರಲಿಲ್ಲ. ಸ್ಥಳೀಯ ಶಾಸಕರ ಸಹಾಯ ಪಡೆಯಲೆಂದು ಅವರ ಮನೆಗೆ ಹೋಗಿದ್ದೆ. ರಾತ್ರಿ– ಹಗಲು ಪರಿವೆಯೇ ಇಲ್ಲದೆ ಸತತ ಅಭ್ಯಾಸ ನಡೆಸಿ ಪರಿಶ್ರಮದಿಂದ ಗಳಿಸಿದ ಪ್ರಶಸ್ತಿ ಪದಕ, ಪ್ರಮಾಣ ಪತ್ರಗಳನ್ನು ಅವರ ಮುಂದೆ ಇಟ್ಟಾಗ ಅವುಗಳತ್ತ ಕಣ್ಣೆತ್ತಿಯೂ ನೋಡದೆ ಅಸಡ್ಡೆ ತೋರಿದರು. ಆ ಕ್ಷಣ ಅವಮಾನದಿಂದ ಕುಗ್ಗಿ ಹೋದೆ.

17 ವರ್ಷಗಳ ಕ್ರೀಡಾ ಜೀವನದಲ್ಲಿ ಅಥ್ಲೆಟಿಕ್ ಆರ್ಟಗಾರ್ತಿಯಾಗಿ ಸತತ ಪ್ರಯತ್ನ ಮತ್ತು ಛಲದಿಂದ ಗಳಿಸಿದ ಪದಕಗಳಿಂದ ದೇಶದ ಘನತೆ ಮತ್ತು ಹಿರಿಮೆ ಎತ್ತಿ ಹಿಡಿದಿದ್ದೇನೆ. ಆದರೆ, ಕ್ಷಣಾರ್ಧದಲ್ಲಿ ಜನಪ್ರತಿನಿಧಿ ತೋರಿದ ನಿಂದನೆ ಮಾತು, ತುಚ್ಛ ನೋಟದಿಂದ ಮನಸು ಘಾಸಿಗೊಂಡಿತು.

ಸ್ವಾಭಿಮಾನಿ ನಡೆ ಜಾಗೃತವಾಯಿತು: ನನ್ನೂರು ಕೋಲಾರ ಜಿಲ್ಲೆ. ಅಲ್ಲಿಯ ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಹಳ್ಳಿಯಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ ತುಂಡು ಜಮೀನು ಮಾರಿದ ಅಮ್ಮ ನನಗೆ ಸಹಾಯ ಮಾಡಿದರು. ಹೈದರಾಬಾದ್, ಚಂಡೀಗಡ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ, ಪುರಸ್ಕಾರ ಪಡೆದೆ.

2018 ಜನವರಿಯಲ್ಲಿ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲೂ ಚಿನ್ನ, ಬೆಳ್ಳಿ ಪದಕ ಪಡೆದೆ. ಎಳನೀರು ಮಾರುವ ಸಹೋದರನ ದುಡಿಮೆ ಹಣ ಈ ಕ್ರೀಡಾ ಸಾಧನೆಗೆ ಬಳಕೆಯಾಗಿದೆ. ಸೋದರಿಯ ಕರಿಮಣಿ ಸರದಲ್ಲಿದ್ದ ಚಿನ್ನದ ಲಕ್ಷ್ಮೀ ಕಾಸು ಮಾರಿ ಕ್ರೀಡೆಯ ಇತರ ಖರ್ಚು ನಿಭಾಯಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನೆರವು ಸಿಕ್ಕಿದೆ. ಹೀಗಾಗಿ ಕೆಲಸದ ಒತ್ತಡದ ನಡುವೆಯೂ ಕ್ರೀಡಾ ಆಸಕ್ತಿ ಕಿಂಚಿತ್ತೂ ಕುಗ್ಗಿಲ್ಲ. ಎದುರಾದ ಸವಾಲುಗಳನ್ನು ಹಿಮ್ಮೆಟ್ಟಿಸಿ ಮುನ್ನಡೆಯುತ್ತಿರುವೆ. ಕ್ರೀಡೆ ಪರಿಜ್ಞಾನ ಇಲ್ಲದ ಸಹೋದ್ಯೋಗಿಗಳು ಕಚೇರಿಯ ಸಭೆಗಳಲ್ಲಿ ಕೊಂಕು ಮಾತನಾಡುತ್ತಾರೆ.

ಕ್ರೀಡಾಕೂಟಗಳಿಗೆ ಬರುವ ವಿವಿಧ ರಾಜ್ಯಗಳ ಪ್ರತಿನಿಧಿಗಳು ಅಲ್ಲಿನ ಸೌಲಭ್ಯಗಳ ಬಗ್ಗೆ ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತಾರೆ. ಗುಜರಾತ್‌ನ ಕ್ರೀಡಾಪಟು ಸ್ನೇಹಿತೆಯೊಬ್ಬರಿಗೆ, ಅಲ್ಲಿನ ಶಾಸಕರು ಸಂಪೂರ್ಣ ಜವಾಬ್ದಾರಿ ಹೊತ್ತು ಅವರ ಕ್ರೀಡಾ ಸಾಧನೆಗೆ ಬೆನ್ನಲುಬಾಗಿ ನಿಂತಿದ್ದಾರೆ. ಆಂಧ್ರಪ್ರದೇಶದಲ್ಲೂ ಉತ್ತಮ ಸೌಕರ್ಯಗಳಿವೆ. ಸ್ವಂತ ಖರ್ಚಿನಲ್ಲಿಯೇ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗುತ್ತದೆ. ನಂತರ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದರೆ ಸರ್ಕಾರದ ನೆರವು ಸಿಗುತ್ತದೆ. ನಮಗೂ ಸರ್ಕಾರದಿಂದ ಮುಂಗಡವಾಗಿಯೇ ಹಣಕಾಸಿನ ನೆರವು ಸಿಕ್ಕರೆ ದಾನಿಗಳ ಬಳಿ ಕೈಯೊಡ್ಡುವ ಪ್ರಸಂಗ ಎದುರಾಗುವುದಿಲ್ಲ. ಅವಮಾನ, ನಿಂದನೆ, ಅ‍ಪಹಾಸ್ಯಕ್ಕೆ ಒಳಗಾಗುವ ಮುಜಗರದ ಸ್ಥಿತಿ ನಿರ್ಮಾಣವಾಗುವುದಿಲ್ಲ. ಈಗಾಗಲೇ ಮಾಡಿಕೊಂಡಿರುವ ₹3ಲಕ್ಷ ಸಾಲಕ್ಕೆ ಬೆಟ್ಟದಷ್ಟು ಬಡ್ಡಿ ಬೆಳೆಯುತ್ತಲೇ ಹೋಗುತ್ತಿದೆ.

ತ್ರಿಚಕ್ರ ವಾಹನ, ಉಚಿತ ಬಸ್ ಪಾಸ್, ಒಂದಷ್ಟು ಪಿಂಚಣಿ ನೀಡಿದರೆ ಸಬಲೀಕರಣ ಸಾಧ್ಯವಾಗುವುದಿಲ್ಲ. ಪ್ರತಿಭಾವಂತರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ, ಸ್ವಂತ ಸೂರು ಅವಶ್ಯ. ಬಡ ಕುಟುಂಬದ ಪ್ರತಿಭೆಗಳಿಗೆ ಅದರಲ್ಲೂ, ಮಹಿಳಾ ಅಂಗವಿಕಲರಿಗೆ ಯಾವುದೇ ಪ್ರೋತ್ಸಾಹ ಇಲ್ಲ. ಕೇವಲ ಹೀಯಾಳಿಕೆಯೇ ಅವರಿಗೆ ಸಿಗುವ ಬಳುವಳಿ. ದೈಹಿಕ ನ್ಯೂನತೆ ಮರೆತು ಸಾಧನೆಗಾಗಿ ಕಷ್ಟಪಡುವ ಬಡ ಮಹಿಳೆಯರ ಪಾಡಂತೂ ಹೇಳತೀರದಾಗಿದೆ.

ಪತಿ ಪೇಂಟಿಂಗ್‌ ಕೆಲಸ ಮಾಡುತ್ತಾರೆ. ನಿರ್ದಿಷ್ಟ ಆದಾಯ ಇಲ್ಲ. ಇನ್ನೂ ಅಂಗನವಾಡಿ ಕಾರ್ಯಕರ್ತೆ ಕೆಲಸದಿಂದ ಬರುವ ಅಲ್ಪ ಸಂಬಳದಲ್ಲಿ ಮನೆ ಸಂಸಾರ, ಮಕ್ಕಳ ಓದು ಸಾಗಬೇಕಿದೆ. ಕ್ರೀಡಾ ಸಾಧನೆಗೆ ಪ್ರೋತ್ಸಾಹದಾಯಕವಾಗಿ ಇಡೀ ಕುಟುಂಬವೇ ಬೆಂಬಲವಾಗಿ ನಿಂತಿದೆ. ಅವರಿಗೆಲ್ಲಾ ವೈಯಕ್ತಿಕವಾಗಿ ಇದರಿಂದ ಲಾಭ ಇಲ್ಲದಿರಬಹುದು. ಪ್ರತಿನಿಧಿಸುವ ರಾಜ್ಯ, ದೇಶ, ಸಂಸ್ಥೆಗಳಿಗೆ ಗೌರವ ಸಿಗುತ್ತದೆ. ಆದರೆ, ಈ ವ್ಯವಸ್ಥೆ ನಮ್ಮಂಥವರ ಪಾಲಿಗೆ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ. ಇನ್ನು ಮಾಧ್ಯಮಗಳಲ್ಲೂ ಸೂಕ್ತ ಪ್ರಾಧ್ಯಾನ್ಯ ಸಿಗದೆ ನಮ್ಮ ನೋವು, ನಲಿವು ಕೇಳುವವರೇ ಇಲ್ಲವಾಗಿದೆ.

ಏಪ್ರಿಲ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹೋಗಬೇಕಾಗಿದೆ. ₹90 ಸಾವಿರದ ಅವಶ್ಯಕತೆ ಇದೆ. ಅಂಗನವಾಡಿ ಕಾರ್ಯಕರ್ತೆ ಆಗಿರುವ ನನಗೆ ಆರ್ಥಿಕ ಸಹಾಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ವೈಯಕ್ತಿಕ ನೋವು, ಕಷ್ಟ ಕೋಟಲೆಯ

ಕಲ್ಲು – ಮುಳ್ಳಿನ ಹಾದಿಯಲ್ಲಿ ಪಯಣ ಸಾಗಿದೆ.

ಸಂಪರ್ಕ: 85530 47108

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry