ಬಾಯಿ ಕಟ್ಟಿದ್ರೆ ಒಳ್ಳೇ ಬಾಡಿ

7

ಬಾಯಿ ಕಟ್ಟಿದ್ರೆ ಒಳ್ಳೇ ಬಾಡಿ

Published:
Updated:
ಬಾಯಿ ಕಟ್ಟಿದ್ರೆ ಒಳ್ಳೇ ಬಾಡಿ

ನನ್ನದು ಶೃಂಗೇರಿ ಸಮೀಪದ ಕಿಗ್ಗಾ. ಏಳು ವರ್ಷದ ಹಿಂದೆ ಊರಿನವರು ರೌಡಿ ಪಟ್ಟ ಕಟ್ಟಿ, ಅಪಹಾಸ್ಯ ಮಾಡಿದ್ದರು. ಹೀಗಾಗಿ ಊರು ತೊರೆದು ಬೆಂಗಳೂರು ಸೇರಿದೆ. ನಾನು ಊರು ಬಿಡಲು ಕಾರಣವಾಗಿದ್ದ ನನ್ನ ಎತ್ತರದ ದೇಹವನ್ನೇ ಬಳಸಿಕೊಂಡು ದೇಹದಾರ್ಢ್ಯ ಪಟುವಾಗಿ ಬೆಳೆದೆ. ಈಗ ನಾನು ‘ಎಡ್‌ಹ್ಯಾರ್ಡಿ’ ಎಂಬ ಉಡುಪುಗಳ ಬ್ರಾಂಡ್‌ಗೆ ಭಾರತದ ‘ಪುರುಷ ಮಾಡೆಲ್‌’ ಆಗಿದ್ದೇನೆ.

ಊರು ಬಿಟ್ಟು ಬೆಂಗಳೂರು ಬಸ್‌ ಹತ್ತಿದಾಗ ನನ್ನ ಕೈಲಿದ್ದುದು ಕೇವಲ ₹250. ಮೂರು ದಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲೇ ಕಾಲ ಕಳೆದೆ. ಅಲ್ಲಿಗೆ ಬಂದ ದಲ್ಲಾಳಿಯೊಬ್ಬರು ನನ್ನನ್ನು ರಾಜಾಜಿನಗರದ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಸಿದರು. ಕೆಲಸದಲ್ಲಿ ಬಿಡುವು ಸಿಕ್ಕಾಗ ವ್ಯಾಯಾಮ ಮಾಡುತ್ತಾ ದೇಹ ಹುರಿಗೊಳಿಸಿಕೊಂಡೆ. ಏಸ್‌, ಫಾಸ್ಟ್‌ಟ್ರಾಕ್, ಕೆಟಲ್‌ ಬೆಲ್‌, ಟಿಆರ್‌ಎಸ್‌ ಮುಂತಾದ ಫಿಟ್‌ನೆಸ್‌ ಕೋರ್ಸ್‌ ಮುಗಿಸಿದೆ. ಇಂಗ್ಲಿಷ್ ಮಾತನಾಡುವುದು ಕಲಿತೆ.

ನಂತರ ಇಂದಿರಾನಗರದ ಜಿಮ್‌ನಲ್ಲಿ ತರಬೇತುದಾರರಾಗಿ ಸೇರಿಕೊಂಡೆ. ಸೆಂಚುರಿಸ್‌ ಲೈಫ್‌ಸ್ಟೈಲ್‌ನ ಸಿಇಒ ಕೃಷ್ಣದಾಸ್‌ ಅವರ ಸಹಕಾರದಿಂದ ಫಿಟ್‌ನೆಸ್‌ ಸ್ಪರ್ಧೆಗಳಿಗೆ ಹೋದೆ. ಗೆಲುವು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಕೆಲ ಚಾನೆಲ್‌ಗಳಲ್ಲಿ ಫಿಟ್‌ನೆಸ್‌ ಬಗ್ಗೆ ಮಾಹಿತಿ ನೀಡುವ ಅವಕಾಶ ಸಿಕ್ಕಿತು. ಇಂದಿರಾನಗರದಲ್ಲಿ ನನ್ನದೇ ಸ್ವಂತ ಜಿಮ್ ತೆಗೆಯಬೇಕೆನ್ನುವ ಆಸೆ ಇದೆ. ಮಣಿಪಾಲ ಆಸ್ಪತ್ರೆಯ ಐವರು ವೈದ್ಯರು ಸೇರಿ ಹಲವು ಯುವಕರು ಫಿಟ್‌ನೆಸ್‌ ತರಬೇತಿ ಪಡೆಯುತ್ತಿದ್ದಾರೆ.

ಎಡ್‌ಹ್ಯಾರ್ಡಿ ಗಾರ್ಮೆಂಟ್ಸ್‌ಗೆ ಪುರುಷ ರೂಪದರ್ಶಿ ಆಗುವ ಅವಕಾಶ ಸಿಕ್ಕ ನಂತರ ಊರಿನ ಜನರು ನನ್ನನ್ನು ‘ನಮ್ಮೂರಿನ ಹುಡುಗ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರೌಡಿ ಎಂದು ಕಾಲೇಜಿನಿಂದ ಹೊರ ಹಾಕಿದ್ದ ಪ್ರಾಂಶುಪಾಲರಿಂದ ಸನ್ಮಾನವೂ ಸಿಕ್ಕಿದೆ. ಶೃಂಗೇರಿಯಲ್ಲಿರುವ ಒಂದು ಜಿಮ್‌ನಲ್ಲಿ ನನ್ನ ಪೋಸ್ಟರ್ ಹಾಕಿದ್ದಾರೆ.

ದೇಹ ಕಟ್ಟುವ ಕಲೆ

ದೇಹ ಹುರಿಗಟ್ಟಿಸುವ ಆಸೆ ಇರುವವರು ಮನಸ್ಸನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಒಂದು ದಿನ ಡಯೆಟ್‌–ವರ್ಕೌಟ್ ಮಾಡಿ, ಆಮೇಲೆ ಬಿಟ್ಟುಬಿಟ್ಟರೆ ಏನೂ ಪ್ರಯೋಜನವಾಗುವುದಿಲ್ಲ. ನಿರಂತರ ಪರಿಶ್ರಮದ ಜೊತೆಗೆ ಬಾಯಿ ಕಟ್ಟುವುದನ್ನೂ ರೂಢಿಸಿಕೊಳ್ಳಬೇಕು. ರುಚಿಯೇ ಇಲ್ಲದ ಆಹಾರ ಸೇವಿಸುವ ಮನಸ್ಥಿತಿ ಇದ್ದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

ಸ್ಪರ್ಧೆಗೆಂದು ಸಿದ್ಧತೆ ಮಾಡಿಕೊಳ್ಳುವಾಗ ಒಂದು ಬಾರಿಗೆ ತಲಾ 6 ಮೊಟ್ಟೆಯಂತೆ 24 ಮೊಟ್ಟೆ ತಿನ್ನುತ್ತೇನೆ. ಒಂದು ಬಾರಿಗೆ ತಲಾ 250 ಗ್ರಾಂನಂತೆ ದಿನಕ್ಕೆ ಅರ್ಧ ಕೆ.ಜಿ. ಚಿಕನ್‌ ತಿನ್ನುತ್ತೇನೆ. ಇದರ ಜತೆಗೆ ತರಕಾರಿ, ಹಣ್ಣು, ಬ್ರೌನ್‌ ರೈಸ್ ಸೇರಿದಂತೆ ಪ್ರೋಟೀನ್ ಹೆಚ್ಚಾಗಿ ಇರುವ ಆಹಾರ ಸೇವಿಸುತ್ತೇನೆ. ದಿನಕ್ಕೆ ಐದರಿಂದ ಆರು ಲೀಟರ್‌ ನೀರು ಕುಡಿಯುತ್ತೇನೆ.

ಫಿಟ್‌ನೆಸ್ ಮತ್ತು ದೇಹದಾರ್ಢ್ಯ ಪಟುಗಳು ಆಹಾರದಂತೆ ವರ್ಕ್‌ಔಟ್‌ ಕಡೆಗೂ ಗಮನ ನೀಡಬೇಕು. ಎದೆ, ಬೆನ್ನು, ಬೈಸೆಪ್ಸ್‌, ಟ್ರೈಸೆಪ್ಸ್‌, ಭುಜ ಹೀಗೆ ದೇಹದ ಸಮಗ್ರ ಆಕಾರವನ್ನು ಮನದಲ್ಲಿರಿಸಿಕೊಂಡು ವರ್ಕೌಟ್ ಮಾಡಬೇಕು. ಸ್ಪರ್ಧೆ ವೇಳೆ ಮುಂಜಾನೆ ಕಾರ್ಡಿಯೊ, ಖಾಲಿಹೊಟ್ಟೆಯಲ್ಲಿ ಆ್ಯಬ್ಸ್‌, ಸಂಜೆ ತೂಕ ಹೆಚ್ಚಿಸುವ ವ್ಯಾಯಾಮ ಮಾಡುತ್ತೇನೆ. ಫಿಟ್‌ನೆಸ್ ಪಟುಗಳು ದಿನಕ್ಕೆ 7 ರಿಂದ 8 ಗಂಟೆ ನಿದ್ದೆ ಮಾಡಬೇಕು. ತಿಂದ ಆಹಾರ ದೇಹಕ್ಕೆ ಸೇರಬೇಕಾದರೆ, ವರ್ಕೌಟ್‌ ಮಾಡುವಾಗ ಹಾನಿಯಾದ ಮಾಂಸಖಂಡ ಮತ್ತೆ ಬೆಳೆಯಬೇಕಾದರೆ ಸೂಕ್ತ ವಿಶ್ರಾಂತಿ ಆಗತ್ಯ.

ಭರತ್‌ಗೌಡ ಬಗ್ಗೆ ಒಂದಿಷ್ಟು

* ಎತ್ತರ: 6.1 ಅಡಿ

* ತೂಕ: 97

* ಬೈಸೆಪ್ಸ್‌: 18–20

* ಸಾಧನೆ: ಮಸಲ್ ಮೇನಿಯಾ, ಮಿಸ್ಟರ್ ಕರ್ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಜೆರಾಯಿ ಪುರುಷ ರೂಪದರ್ಶಿ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಬಾಡಿಪವರ್‌ ಎಕ್ಸ್‌ಪೊಗೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಮಿಸ್ಟರ್ ಇಂಡಿಯಾ ಮೇಲ್‌ ಮಾಡೆಲ್‌ ಸ್ಪರ್ಧಿ

* ಸಂಪರ್ಕಕ್ಕೆ: facebook.com/bharathgowdafitnessguru

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry