ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಧ್ವಂಸ: ನಾಚಿಕೆಗೇಡಿನ ಸಂಗತಿ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆಳುತ್ತಿರುವ ಪಕ್ಷವೊಂದು ಚುನಾವಣೆಯಲ್ಲಿ ಬಹುಮತ ಕಳೆದುಕೊಂಡು ಅಧಿಕಾರದಿಂದ ಚ್ಯುತಿಹೊಂದಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬರುವುದು ಪ್ರಜಾಪ್ರಭುತ್ವದಲ್ಲಿ ತೀರಾ ಸಹಜವಾದದ್ದು. ಈ ಎಪ್ಪತ್ತು ವರ್ಷಗಳಲ್ಲಿ ಭಾರತೀಯರಿಗೆ ಈ ವಿಚಾರ ಮನವರಿಕೆಯಾಗಿರುವಷ್ಟು ಮಟ್ಟಿಗೆ ಬೇರೆ ಯಾರಿಗೂ ಆಗಿರಲಾರದು. ಅದೊಂದು ಸಹಜ ಪ್ರಕ್ರಿಯೆ ಎಂಬುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.

ಸುದೀರ್ಘ ಕಾಲದ ಕಮ್ಯುನಿಸ್ಟ್ ಆಳ್ವಿಕೆಯನ್ನು ಕಂಡಿದ್ದ ತ್ರಿಪುರಾದ ಜನರಿಗೆ, ಒಂದು ಬದಲಾವಣೆ ಬೇಕೆನಿಸಿ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಆರಿಸಿರಬಹುದು. ಬದಲಾವಣೆ ಯಾವತ್ತಿಗೂ ಉತ್ತಮವಾದದ್ದಕ್ಕೆ ಆಗಬೇಕೇ ವಿನಾ ಇನ್ನಷ್ಟು ಅಧಃಪತನದತ್ತ ಕೊಂಡೊಯ್ಯುವುದಕ್ಕಲ್ಲ. ಅಲ್ಲಿ ಇನ್ನೂ ಸರ್ಕಾರ ರಚನೆಯ ಪ್ರಕ್ರಿಯೆಯೇ ಪೂರ್ಣವಾಗದಿರುವಾಗ, ಗೆದ್ದ ಪಕ್ಷದ ಕಾರ್ಯಕರ್ತರೆನಿಸಿಕೊಂಡವರು ನಡೆಸಿರುವ ದಾಂದಲೆಯನ್ನು ನೋಡಿದಾಗ, ‘ಮಗಳು ಮಾಡೋದೂ ಹಂಗೇ, ಊರಾಡೋದೂ ಹಂಗೇ’ ಎಂಬ ಕನ್ನಡದ ಗಾದೆ ನೆನಪಾಗುತ್ತದೆ. ಗೆದ್ದಿರುವ ಪಕ್ಷವು ಈ ದಾರಿಯನ್ನು ಹಿಡಿದಿರುವುದು ಖಂಡಿತಾ ಒಳ್ಳೆಯ ಲಕ್ಷಣವಲ್ಲ. ಅದರಲ್ಲೂ ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡಿರುವುದು ಅತ್ಯಂತ ಹೇಯ ಕೃತ್ಯ. ವಿವೇಕವಿದ್ದವರು ಯಾರೇ ಆದರೂ ಆ ಕೃತ್ಯವನ್ನು ಪ್ರಬಲವಾಗಿ ಖಂಡಿಸಬೇಕು.

ಒಂದು ವೇಳೆ ಇದು ವಿಜಯದ ಉತ್ಸಾಹದಲ್ಲಿ ವಿವೇಕಕ್ಕೆ ಅಷ್ಟಾಗಿ ಕಿವಿಗೊಡದ ಗುಂಪಿನ ಕೃತ್ಯವಷ್ಟೇ ಆಗಿದ್ದರೆ ಅದನ್ನು ಕಡೆಗಣಿಸಿಬಿಡಬಹುದಿತ್ತೇನೋ! ಅದು ಬಿಟ್ಟು, ‘ಕಮ್ಯುನಿಸ್ಟ್ ನಾಯಕ ಲೆನಿನ್ ಒಬ್ಬ ಭಯೋತ್ಪಾದಕ. ಅಂಥ ವ್ಯಕ್ತಿಯ ಪ್ರತಿಮೆಯನ್ನು ಭಾರತದಲ್ಲಿ ಸ್ಥಾಪಿಸಿರುವುದನ್ನು ಪ್ರಶ್ನಿಸಲೇಬಾರದು ಎಂದರೆ ಹೇಗೆ?’ (ಪ್ರ.ವಾ., ಮಾ. 8) ಎಂದು ಸುಬ್ರಮಣಿಯನ್‌ ಸ್ವಾಮಿಯವರಂಥ, ವಿವೇಕಿ– ಧೀಮಂತ ಎಂದು ನಾವೆಲ್ಲ ತಿಳಿದುಕೊಂಡಿರುವಂಥ ವ್ಯಕ್ತಿ ಪ್ರತಿಕ್ರಿಯಿಸಿರುವುದು ಬೌದ್ಧಿಕ ದಿವಾಳಿತನವಲ್ಲದೆ ಬೇರೆಯಲ್ಲ.

ಕಮ್ಯುನಿಸ್ಟ್‌ ಸಿದ್ಧಾಂತ ನಮಗೆ ಇಷ್ಟವಾಗದಿರಬಹುದು. ಆದರೆ ಮಾರ್ಕ್ಸ್‌, ಲೆನಿನ್ ಮುಂತಾದವರು ಜಗತ್ತಿನ ಉದಾತ್ತ ಚಿಂತಕರು. ಮಾರ್ಕ್ಸ್‌ ಅಂತೂ ಈ ಜಗತ್ತಿನ ಬಡವರ ದುಃಖವನ್ನು ಕಿಂಚಿತ್ತಾದರೂ ಕಡಿಮೆ ಮಾಡಬೇಕೆಂಬ ಕಳಕಳಿಯಿಂದ ವರ್ಷಗಟ್ಟಲೆ ಅಧ್ಯಯನ, ಸಂಶೋಧನೆಗಳನ್ನು ನಡೆಸಿ ಕಮ್ಯುನಿಸ್ಟ್ ಸಿದ್ಧಾಂತ ರೂಪಿಸಿ, ‘ದಾಸ್ ಕ್ಯಾಪಿಟಲ್‍’ನಂಥ ಮಹಾನ್ ಕೃತಿ ರಚಿಸಿದ ಶ್ರೇಷ್ಠ ಚಿಂತಕ. ಲೆನಿನ್, ರಷ್ಯಾದಲ್ಲಿ ಆ ಸಿದ್ಧಾಂತವನ್ನು ಪ್ರಥಮ ಬಾರಿಗೆ ಕೃತಿಗಿಳಿಸಿದ ಮಹಾನ್ ಕ್ರಾಂತಿಕಾರಿ, ಮುತ್ಸದ್ದಿ ಮತ್ತು ಚಿಂತಕ. ಅದನ್ನು ಕೃತಿಗಿಳಿಸುವ ಸಂದರ್ಭದಲ್ಲಿ ಒಂದಿಷ್ಟು ಹಿಂಸಾಚಾರ ನಡೆದಿರಬಹುದು. ಆದರೆ ‘ಅಕ್ಟೋಬರ್ ಕ್ರಾಂತಿ’ ಎಂದು ಜಗತ್ತೆಲ್ಲಾ ಕೊಂಡಾಡುವ ಮಹಾ ಘಟನೆಗೆ ಕಾರಣನಾದ ಮತ್ತು ಆ ಕ್ರಾಂತಿಯ ಬೆಳಕಿನಲ್ಲಿ ಒಂದು ದೊಡ್ಡ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದ ಧೀಮಂತ ಲೆನಿನ್‌. ಇದು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಗೊತ್ತಿಲ್ಲದೆ ಇರಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಸಿದ್ಧಾಂತ ನಮಗೆ ಒಪ್ಪಿಗೆಯಾಗುತ್ತಿಲ್ಲವೆಂಬ ಕಾರಣಕ್ಕೆ ಈ ಜಗತ್ತಿಗೆ ಒಂದು ನೂತನ ದೃಷ್ಟಿದರ್ಶನ ಮಾಡಿಸಿದ ವ್ಯಕ್ತಿಯನ್ನು ಇಷ್ಟೊಂದು ಕೇವಲವಾಗಿ ಕಾಣುವುದು ಅಕ್ಷಮ್ಯ.

ದಶಕಗಳ ಹಿಂದೆ ತಾಲಿಬಾನಿಗಳು ಅಫ್ಗಾನಿಸ್ತಾನದಲ್ಲಿ ಎತ್ತರದ ಪ್ರಾಚೀನ ಬುದ್ಧ ಪ್ರತಿಮೆಗಳನ್ನು ನಾಶಗೊಳಿಸಿದರು. ಅವರು ಮೂರ್ತಿಪೂಜೆ ವಿರೋಧಿಗಳೂ ಬುದ್ಧನ ಮಹಾನತೆ ಅರಿಯದ ಅವಿವೇಕಿಗಳೂ ಆಗಿದ್ದರು. ಇಡೀ ಜಗತ್ತು ಅದನ್ನು ಖಂಡಿಸಿತು. ಮೂರ್ತಿಪೂಜೆ ವಿರೋಧಿಗಳಿಗೆ ಯಾವ ಮೂರ್ತಿಯೂ ಇಷ್ಟವಾಗುವುದಿಲ್ಲ ಅಂದಾಕ್ಷಣ, ಜಗತ್ತಿಗೆ ಬೆಳಕು ತೋರಿದ ಯಾವುದೇ ಮಹಾ ವ್ಯಕ್ತಿಯದ್ದೇ ಆದರೂ ಪ್ರತಿಮೆಯನ್ನು ಹೊಡೆದುರುಳಿಸಬೇಕೆಂದು ಅರ್ಥವೇ? ಇದು ಲೆನಿನ್‌ನನ್ನು ಪ್ರಶ್ನಿಸುವ ರೀತಿಯೇ? ಈ ಕೃತ್ಯಕ್ಕೆ ಪ್ರತಿಯಾಗಿಅವರು ಶ್ಯಾಮಪ್ರಸಾದ್ ಮುಖರ್ಜಿಯವರಂಥ ಪ್ರಾತಃಸ್ಮರಣೀಯರ ಪ್ರತಿಮೆಗೆ ಹಾನಿ ಮಾಡಿದ್ದಾರೆ.

ಸ್ವಾಮಿಯವರ ಸಿದ್ಧಾಂತವನ್ನೇ ಮುಂದುವರೆಸಿದರೆ, ಬ್ರಿಟಿಷ್ ಆಡಳಿತದ ವಿರುದ್ಧ ಸುಮಾರು ಅರ್ಧಶತಮಾನದ ಕಾಲ ನಮ್ಮ ದೇಶದ ಇಡೀ ಜನಸಮುದಾಯವನ್ನು ಬಡಿದೆಬ್ಬಿಸಿ, ಅಖಂಡ ಸಾತಂತ್ರ್ಯ ಹೋರಾಟ ನಡೆಸಿ ಕೊನೆಗೆ ಬ್ರಿಟಿಷರು ಇಂಡಿಯಾವನ್ನೇ ಕಳೆದುಕೊಳ್ಳುವಂತೆ ಮಾಡಿದ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಇಂಗ್ಲೆಂಡಿನಲ್ಲೂ ಹೊಡೆದುರುಳಿಸಬೇಕಲ್ಲವೇ? ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ಅವರಿಗಂತೂ ಗಾಂಧಿಯನ್ನು ಕಂಡರೆ ಆಗುತ್ತಿರಲಿಲ್ಲ.

ಬಹುಶಃ ಚರ್ಚಿಲ್ ದೃಷ್ಟಿಯಲ್ಲಿ ಗಾಂಧಿ, ಬ್ರಿಟಿಷ್ ಸರ್ಕಾರದ ವಿರೋಧಿ ಮತ್ತು ಬ್ರಿಟಿಷ್ ಇಂಡಿಯಾದ ಅಂತ್ಯಕ್ಕೆ ಕಾರಣನಾದ ಭಯೋತ್ಪಾದಕ. ಆದರೆ ಬ್ರಿಟಿಷರು ಸ್ವಾಮಿಯವರಂಥ ಕುಬ್ಜ ಮನಸ್ಸಿನವರಲ್ಲ. ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಗಾಂಧಿಯ ಪ್ರತಿಮೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಏಕಾದರೂ ಸ್ಥಾಪಿಸಬೇಕಾಗಿತ್ತು?

ನಮ್ಮಲ್ಲಿ ತಮಗಾಗದ ತತ್ವ, ಸಿದ್ಧಾಂತಗಳನ್ನು ವಿರೋಧಿಸಿದ ಆಚಾರ್ಯರು, ಅವುಗಳನ್ನು ಖಂಡಿಸಲು ಮಹಾ ಗ್ರಂಥಗಳನ್ನೇ ರಚಿಸಿದ್ದಾರೆ. ಆದರೆ ಅವರ ಮಠಗಳನ್ನು ನಾಶ ಮಾಡುವ ಇಲ್ಲವೇ ಅವರ ಮೂರ್ತಿ ಭಂಜನೆ ಮಾಡುವ ಕೆಲಸವನ್ನು ಯಾರೂ ಮಾಡಿಲ್ಲ. ಅದ್ವೈತವನ್ನು ಖಂಡಿಸಲು ಮಧ್ವರು ‘ಮಾಯಾವಾದ ಖಂಡನೆ’ ಎಂದೇ ಗ್ರಂಥ ರಚಿಸಿದ್ದಾರೆ.

ಲೆನಿನ್‌ನ ಮೂರ್ತಿ ಭಂಜನೆಯ ಇಂಥ ಅಕೃತ್ಯವನ್ನು ಎಲ್ಲ ವಿವೇಕಿಗಳೂ ಪ್ರಬಲವಾಗಿ ಖಂಡಿಸಬೇಕು. ಅದರಲ್ಲೂ ಉದಾತ್ತ ಪರಂಪರೆಯ ಉತ್ತರಾಧಿಕಾರಿಗಳೆಂದು ಮತ್ತೆ ಮತ್ತೆ ಎದೆ ಉಬ್ಬಿಸಿ ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷ ಮತ್ತು ಹಾರ್ವರ್ಡ್ ಪ್ರಾಧ್ಯಾಪಕರೆಂದೇ ಹೆಸರಾದ ಸುಬ್ರಮಣಿಯನ್‌ ಸ್ವಾಮಿಯಂಥವರು ಅವಿವೇಕಿಗಳ ಜಗದ್ಗುರು ಪೀಠಕ್ಕೆ ಅತ್ಯಂತ ಅರ್ಹರೆನ್ನುವಂಥ ರೀತಿಯಲ್ಲಿ ನಡೆದುಕೊಳ್ಳುವುದು, ಮಾತನಾಡುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT