‘ಪುಟ್ಟಣ್ಣಯ್ಯ ಉತ್ತರಾಧಿಕಾರಿಗೆ ಬೆಂಬಲ’

7

‘ಪುಟ್ಟಣ್ಣಯ್ಯ ಉತ್ತರಾಧಿಕಾರಿಗೆ ಬೆಂಬಲ’

Published:
Updated:
‘ಪುಟ್ಟಣ್ಣಯ್ಯ ಉತ್ತರಾಧಿಕಾರಿಗೆ ಬೆಂಬಲ’

ಪಾಂಡವಪುರ: ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಕೆ.ಎಸ್‌.ಪುಟ್ಟಣ್ಣಯ್ಯ ಕುಟುಂಬದವರು ಸ್ಪರ್ಧಿಸಿದರೆ ಕಾಂಗ್ರೆಸ್‌ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.

ಕೆ.ಎಸ್‌.ಪುಟ್ಟಣ್ಣಯ್ಯ ಅವರಿಗೆ ಏರ್ಪಡಿಸಿದ್ದ ಹಸಿರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪುಟ್ಟಣ್ಣಯ್ಯ ಬದುಕಿದ್ದಾಗ ಕಾಂಗ್ರೆಸ್‌ ಅನ್ನು ಬೆಂಬಲಿಸಿದ್ದರು. ಜಾತ್ಯತೀತ ನಿಲುವು ಹೊಂದಿದ್ದು, ಕೋಮುವಾದಿಗಳ ವಿರುದ್ಧ ಹೋರಾಡುತ್ತಿದ್ದರು. ಹಾಗಾಗಿ ಅವರ ಉತ್ತರಾಧಿಕಾರಿಗೆ ಕಾಂಗ್ರೆಸ್‌ ಬೆಂಬಲ ನೀಡಲಿದೆ’ ಎಂದು ಹೇಳಿದರು.

‘ರೈತ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಪುಟ್ಟಣ್ಣಯ್ಯ ಒತ್ತಾಯಿಸಿದ್ದರು. ಈಗಾಗಲೇ ಪ್ರಕರಣಗಳನ್ನು ಹಿಂಪಡೆಯುವ ಪಕ್ರಿಯೆ ಪೂರ್ಣಗೊಳಿಸಲು ಸಚಿವ ಸಂಪುಟ ಉಪ ಸಮಿತಿಗೆ ಸೂಚಿಸಿದ್ದೇನೆ. ಪ್ರಕರಣಗಳು ಶೀಘ್ರ ರದ್ದಾಗಲಿವೆ’ ಎಂದು ತಿಳಿಸಿದರು.

ದರ್ಶನ್‌ ಪರ: ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾರಾಜೇಂದ್ರ ಶರಣರು ಮಾತನಾಡಿ, ಪುಟ್ಟಣ್ಣಯ್ಯ ಉತ್ತರಾಧಿಕಾರಿಯಾಗಿ ಅವರ ಪುತ್ರ ದರ್ಶನ್‌ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಬಯಸುವ ಜನರು ಕೈ ಎತ್ತಿ ಎಂದು ಕೋರಿದರು. ಸಾವಿರಾರು ಜನರು ಕೈ ಎತ್ತಿ ದರ್ಶನ್‌ ಸ್ಪರ್ಧಿಸುವಂತೆ ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುರುಘಾ ಶರಣರು, ನಮ್ಮ ಒಲವೂ ದರ್ಶನ್‌ ಪರವಾಗಿದೆ. ರೈತಸಂಘ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ‘ಇಂದು ಮಾರ್ಚ್‌ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೂ ಆಗಿದ್ದು, ಪುಟ್ಟಣ್ಣಯ್ಯ ಉತ್ತರಾಧಿಕಾರಿಯಾಗಿ ಅವರ ಪತ್ನಿ ಸುನಿತಾ ಸ್ಪರ್ಧೆ ಮಾಡಬೇಕು ಎಂಬುದು ನಮ್ಮ ವೈಯಕ್ತಿಕ ಅಭಿಪ್ರಾಯ’ ಎಂದು ಹೇಳಿದರು.

ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಚುಕ್ಕಿ ನಂಜುಂಡಸ್ವಾಮಿ, ‘ಪುಟ್ಟಣ್ಣಯ್ಯ ಮೃತಪಟ್ಟು ತಿಂಗಳೂ ಕಳೆದಿಲ್ಲ. ನುಡಿನಮನ ಕಾರ್ಯಕ್ರಮದಲ್ಲಿ ರಾಜಕಾರಣದ ಮಾತನಾಡುವುದು ಬೇಡ’ ಎಂದು ಮನವಿ ಮಾಡಿದರು. ಸ್ವರಾಜ್‌ ಇಂಡಿಯಾ ಪಕ್ಷದ ಮುಖಂಡ, ಸಾಹಿತಿ ದೇವನೂರ ಮಹಾದೇವ ಹಾಜರಿದ್ದರು.

ಕಾಂಗ್ರೆಸ್‌ಗೆ ಮತ ಹಾಕಿ: ಸ್ವಾಮೀಜಿ

‘ದೇಶದಲ್ಲಿ ಈಚೆಗೆ ಸರ್ವಾಧಿಕಾರಿ ಪ್ರಜಾಪ್ರಭುತ್ವದ ನಾಯಕತ್ವ ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾರರು ವಿವೇಕ ಬಳಸಿ ತಮ್ಮ ಹಕ್ಕು ಚಲಾಯಿಸಬೇಕು. ಸಂವಿಧಾನದ ಮೌಲ್ಯಗಳು ಉಳಿಯಬೇಕಾದರೆ ಜನರು ಕಾಂಗ್ರೆಸ್‌ ಪಕ್ಷಕ್ಕೆ ಮತ ಚಲಾಯಿಸಬೇಕು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

‘ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಸ್ಥಿರ ಸರ್ಕಾರ ನೀಡುವ ಹಂತದಲ್ಲಿದ್ದಾರೆ. ಇಡೀ ದೇಶದಲ್ಲಿ

ಕಾಂಗ್ರೆಸ್‌ ಸರ್ಕಾರ ಅತೀ ಹೆಚ್ಚು ಬಂಡವಾಳ ಆಕರ್ಷಣೆ ಮಾಡಿದೆ. ಈ ಬಗ್ಗೆ ಹಲವರಿಂದ ಅಪಪ್ರಚಾರ ನಡೆಯುತ್ತಿದ್ದು ಜನರಿಗೆ ಸತ್ಯ ತಿಳಿದಿದೆ. ಮುಂದಿನ ವಿಧಾನಸಭಾ ಚುನಾವಣೆ ದೇಶದ ರಾಜಕಾರಣವನ್ನು ಬದಲಾಯಿಸುವ ದಿಕ್ಸೂಚಿಯಾಗಿದ್ದು ಜನರು ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry