ತಡ ಮಾಡಿದ ನಾಡಾ: ಸೀಮಾಗೆ ‘ಪರೀಕ್ಷೆ’

7

ತಡ ಮಾಡಿದ ನಾಡಾ: ಸೀಮಾಗೆ ‘ಪರೀಕ್ಷೆ’

Published:
Updated:
ತಡ ಮಾಡಿದ ನಾಡಾ: ಸೀಮಾಗೆ ‘ಪರೀಕ್ಷೆ’

ಪಟಿಯಾಲ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಅಧಿಕಾರಿಗಳು ವಿಳಂಬ ಮಾಡಿದ್ದರಿಂದ ಡಿಸ್ಕಸ್ ಥ್ರೋ ಅಥ್ಲೀಟ್‌ ಸೀಮಾ ಪೂನಿಯಾ ಅವರು ಈಗ ‘ಪರೀಕ್ಷೆ’ಗೆ ಒಳಗಾಗಬೇಕಾಗಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳುವ ಮೊದಲು ಅವರನ್ನು ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿ ಪರೀಕ್ಷೆಗೆ ಒಳಪಡಿಸುವುದಕ್ಕಾಗಿ ಅಧಿಕಾರಿಗಳು ಪಾಣಿಪತ್‌ನತ್ತ ತೆರಳಿದ್ದಾರೆ. ಇಲ್ಲಿನ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ ಕ್ರೀಡಾಕೂಟದ ಮೊದಲ ದಿನ ಸೀಮಾ ಚಿನ್ನ ಗೆದ್ದಿದ್ದರು. 61.5 ಮೀಟರ್‌ ದೂರ ಎಸೆದು ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ನಂತರ ಅವರು ತಮ್ಮ ಊರು ಪಾಣಿಪತ್‌ಗೆ ತೆರಳಿದ್ದರು.

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಅಧಿಕಾರಿಗಳು ಒಂದು ದಿನ ತಡವಾಗಿ ಬಂದ ಕಾರಣ ಸ್ಪರ್ಧೆಗೂ ಮೊದಲು ಅವರನ್ನು ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ. ಗುರುವಾರ ಭಾರತ ಅಥ್ಲೆಟಿಕ್ ಫೆಡರೇಷನ್ ಅನ್ನು ಸಂಪರ್ಕಿಸಿದ ನಾಡಾ ಅಧಿಕಾರಿಗಳು ಪೂನಿಯಾ ಅವರ ಪರೀಕ್ಷೆಗೆ ಅವಕಾಶ ಕೋರಿದ್ದಾರೆ. ಅವರಿಗೆ ಅನುಮತಿ ಲಭಿಸಿದ್ದು ಮೂತ್ರದ ಮಾದರಿ ಸಂಗ್ರಹಿಸಲು ಪಾಣಿಪತ್‌ಗೆ ತೆರಳಿದ್ದಾರೆ.

‘ನಾಡಾ ಅಧಿಕಾರಿಗಳು ಇಲ್ಲಿಗೆ ಒಂದು ದಿನ ತಡವಾಗಿ ಬಂದಿದ್ದರು. ಸೀಮಾ ಅವರ ಸ್ಪರ್ಧೆ ಮೊದಲ ದಿನವೇ ಇತ್ತು. ಅವರು ಅಧಿಕಾರಿಗಳಿಗಾಗಿ ಕಾಯುವಂತಿರಲಿಲ್ಲ. ಹೀಗಾಗಿ ಅವರಿಂದ ಯಾವುದೇ ತಪ್ಪು ಆಗಲಿಲ್ಲ’ ಎಂದು ಫೆಡರೇಷನ್‌ ಅಧಿಕಾರಿಯೊಬ್ಬರು ತಿಳಿಸಿದರು. 2006ರಿಂದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಸೀಮಾ ಪೂನಿಯಾ ಮೆಲ್ಬರ್ನ್‌ನಲ್ಲಿ ಬೆಳ್ಳಿ, ದೆಹಲಿಯಲ್ಲಿ ಕಂಚು ಮತ್ತು ಗ್ಲಾಸ್ಗೊದಲ್ಲಿ ಬೆಳ್ಳಿ ಗೆದ್ದಿದ್ದರು.

ಸುಬ್ರಮಣಿ ಶಿವಗೂ ಪರೀಕ್ಷೆ: ಪೋಲ್‌ ವಾಲ್ಟ್‌ನಲ್ಲಿ ಸ್ವಂತ ರಾಷ್ಟ್ರೀಯ ದಾಖಲೆಯನ್ನು ಹಿಂದಿಕ್ಕಿ ಚಿನ್ನ ಗೆದ್ದ ತಿಮಿಳುನಾಡಿನ ಸುಬ್ರಮಣಿ ಶಿವ ಅವರನ್ನೂ ಮೊದಲ ದಿನ ಪರೀಕ್ಷೆಗೆ ಒಳಪಡಿಸಲಿಲ್ಲ. ಅವರ ಮೂತ್ರದ ಮಾದರಿಯನ್ನು ಮರುದಿನ ಸಂಗ್ರಹಿಸಲಾಗಿತ್ತು. ಕಾಮನ್‌ವೆಲ್ತ್ ಕೂಟಕ್ಕೆ ತೆರಳಲು ಸಜ್ಜಾಗಿರುವ ಇತರ ಕ್ರೀಡಾಪಟುಗಳೆಲ್ಲರೂ ಮಾದರಿಯನ್ನು ಈಗಾಗಲೇ ನೀಡಿದ್ದಾರೆ. ಹೀಗಾಗಿ ಅವರೆಲ್ಲ ಸದ್ಯ ನಿರಾಳರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry