ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡ ಶಫೀನ್‌ ಜತೆ ಬದುಕಲು ಹಾದಿಯಾ ಸ್ವತಂತ್ರಳು: ಸುಪ್ರೀಂ

ಮದುವೆ ರದ್ದು ಮಾಡಿದ್ದ ಹೈಕೋರ್ಟ್‌ ಆದೇಶ ವಜಾ ಮಾಡಿದ ‘ಸುಪ್ರೀಂ’
Last Updated 10 ಮಾರ್ಚ್ 2018, 10:51 IST
ಅಕ್ಷರ ಗಾತ್ರ

ನವದೆಹಲಿ: ಕೇರಳದ ಯುವತಿ ಹಾದಿಯಾ (24) ಮದುವೆಯನ್ನು ರದ್ದು ಮಾಡಿದ್ದ ಕೇರಳ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾ ಮಾಡಿದೆ.

ತಮ್ಮ ಗಂಡನ ಜತೆ ಬದುಕಲು ಹಾದಿಯಾಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಅವರ ಮದುವೆ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಬಾರ
ದಿತ್ತು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ಹಾದಿಯಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಶಫೀನ್‌ ಜಹಾನ್‌ ಎಂಬ ಮುಸ್ಲಿಂ ಯುವಕನನ್ನು ಕಳೆದ ವರ್ಷ ಮದುವೆಯಾಗಿದ್ದರು.

‘ಬಲವಂತದಿಂದ ಮತಾಂತರ ಮಾಡಲಾಗಿದೆ’ ಎಂದು ಆರೋಪಿಸಿ ಹಾದಿಯಾ ತಂದೆ ಕೆ.ಎಂ. ಅಶೋಕನ್‌ ಹೈಕೋರ್ಟ್‌ಗೆ ದೂರು ನೀಡಿದ್ದರು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮದುವೆಯನ್ನು ರದ್ದು ಮಾಡಿತ್ತು. ಹೆತ್ತವರ ಮನೆಗೆ ಹಿಂದಿರುಗುವಂತೆ ಹಾದಿಯಾಗೆ ಆದೇಶಿಸಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಶಫೀನ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಾದಿಯಾ ಅವರನ್ನು ಕರೆಸಿಕೊಂಡಿದ್ದ ಸುಪ್ರೀಂ ಕೋರ್ಟ್‌ ಅವರ ಹೇಳಿಕೆ ಪಡೆದುಕೊಂಡಿತ್ತು. ಸ್ವ ಇಚ್ಛೆಯಿಂದ ಶಫೀನ್‌ರನ್ನು ಮದುವೆ ಆಗಿರುವುದಾಗಿಯೂ, ಅವರ ಜತೆಯೇ ಬದುಕಲು ಬಯಸುವುದಾಗಿಯೂ ನ್ಯಾಯಪೀಠದ ಮುಂದೆ ಹಾದಿಯಾ ಹೇಳಿದ್ದರು.

ಬಳಿಕ, ಹೆತ್ತವರ ಮನೆಯಿಂದ ಅವರನ್ನು ಬಿಡುಗಡೆ ಮಾಡಿ ತಮಿಳುನಾಡಿನ ಸೇಲಂನಲ್ಲಿರುವ ಕಾಲೇಜಿನಲ್ಲಿ ಹೋಮಿಯೋಪಥಿ ಶಿಕ್ಷಣ ಮುಂದುವರಿಸಲು ನ್ಯಾಯಾಲಯ ಸೂಚಿಸಿತ್ತು. ಗಂಡನ ಜತೆಗೆ ಇರುವುದಕ್ಕೆ ತಮಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂದು ಹಾದಿಯಾ ಆಗ ಕೋರಿದ್ದರು.

ಒಮಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಶಫೀನ್‌ ಇತ್ತೀಚೆಗೆ ಭಾರತಕ್ಕೆ ಮರಳಿದ್ದರು. ಸಂಘಟನೆಯೊಂದಕ್ಕೆ ಸೇರಿದ ವೈವಾಹಿಕ ವೆಬ್‌ಸೈಟ್‌ ಮೂಲಕ ಹಾದಿಯಾಗೆ ಶಫೀನ್‌ ಪರಿಚಯವಾಗಿದ್ದರು. ಈ ಸಂಘಟನೆಯ ಹಿನ್ನೆಲೆ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.

ಹಾದಿಯಾ ಪ್ರೌಢ ವಯಸ್ಕರಾಗಿರುವುದರಿಂದ ಶಫೀನ್‌ ಜತೆಗಿನ ಅವರ ಮದುವೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಶಫೀನ್‌ ಬಗೆಗಿನ ತನಿಖೆಯನ್ನು ಎನ್‌ಐಎಮುಂದುವರಿಸಬಹುದು, ಆದರೆ ಅವರ ಮದುವೆಯ ಸಿಂಧುತ್ವವನ್ನು ಪ್ರಶ್ನಿಸಲು ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಮದುವೆ ಬೋಗಸ್‌’

ಶಫೀನ್‌ ಜತೆಗೆ ಹಾದಿಯಾ ಮದುವೆ ‘ಬೋಗಸ್‌’. ಶಫೀನ್‌ ವಿರುದ್ಧದ ತಮ್ಮ ಆರೋಪಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿಲ್ಲ ಎಂದು ಹಾದಿಯಾ ತಂದೆ ಕೆ.ಎಂ. ಅಶೋಕನ್‌ ಹೇಳಿದ್ದಾರೆ.

‘ನಾನು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರಿಂದ ನಮ್ಮ ಮನೆಗೆ ಬಂದು ಇರುವಂತೆ ಹಾದಿಯಾಗೆ ಹೈಕೋರ್ಟ್‌ ಆದೇಶ ಕೊಟ್ಟಿತು. ಆದರೆ ಮದುವೆ ಆದ ಬಳಿಕವೇ ಆಕೆಯನ್ನು ಹೈಕೋರ್ಟ್‌ಗೆ ಹಾಜರುಪಡಿಸಲಾಯಿತು. ಹಾಗಾಗಿ ಈ ಮದುವೆ ಸುಳ್ಳು ಎಂಬುದರಲ್ಲಿ ನನಗೆ ಅನುಮಾನವೇ ಇಲ್ಲ’ ಎಂದು ಅಶೋಕನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT