‘ಪರಿಶಿಷ್ಟ ಪಂಗಡಕ್ಕೆ ತಳವಾರ, ಪರಿವಾರ’

7

‘ಪರಿಶಿಷ್ಟ ಪಂಗಡಕ್ಕೆ ತಳವಾರ, ಪರಿವಾರ’

Published:
Updated:
‘ಪರಿಶಿಷ್ಟ ಪಂಗಡಕ್ಕೆ ತಳವಾರ, ಪರಿವಾರ’

ನವದೆಹಲಿ: ರಾಜ್ಯದ ವಿವಿಧೆಡೆ ಇರುವ ‘ತಳವಾರ’ ಮತ್ತು ‘ಪರಿವಾರ’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸಂಸತ್‌ ಭವನದಲ್ಲಿರುವ ಸಂಸದೀಯ ವ್ಯವಹಾರಗಳ ಸಚಿವಾಲಯದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹತೆ ಇದ್ದರೂ ಪರಿಶಿಷ್ಟ ಪಂಗಡಕ್ಕೆ ಸೇರದೆ ಹಿಂದುಳಿದ ವರ್ಗದಲ್ಲಿ ಗುರುತಿಸಿಕೊಂಡಿರುವ ಈ ಸಮುದಾಯದ ಜನರ ಬೇಡಿಕೆ ಕೂಡಲೇ ಈಡೇರಲಿದೆ ಎಂದರು.

‘ನಾಯಕ’, ‘ವಾಲ್ಮೀಕಿ’, ‘ಬೇಡ’ ಹಾಗೂ ಇತರ ಹೆಸರುಗಳಿಂದ ಗುರುತಿಸಿಕೊಂಡಿರುವ ಸಮುದಾಯವನ್ನು ಕೇಂದ್ರ ಸರ್ಕಾರ 1991ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಆದರೆ, ರಾಜ್ಯದ ಕೆಲವು ಕಡೆ ಇದೇ ಸಮುದಾಯಕ್ಕೆ ಸೇರಿರುವ ಜನರು ‘ತಳವಾರ’ ಮತ್ತು ‘ಪರಿವಾರ’ ಎಂದು ಗುರುತಿಸಿಕೊಂಡಿದ್ದು, ಅವರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೋರಲಾಗಿದೆ. ಶೀಘ್ರವೇ ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬೆಳೆಯಲಾಗುವ ಅಡಿಕೆಯಲ್ಲಿ ವಿಷಕಾರಿ ಅಂಶ ಅಡಗಿದೆ ಎಂಬ ತಪ್ಪು ವರದಿಯ ಕಾರಣ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಕೇಂದ್ರದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ, ಅಡಿಕೆಯು ಪುರಾತನ ಕಾಲದಿಂದಲೂ ಆರೋಗ್ಯ ವೃದ್ಧಿಗೆ ಬಳಕೆಯಾಗಿದೆ ಎಂಬ ಅಂಶದ ಕುರಿತು ಗಮನ ಸೆಳೆಯಲಾಗಿದೆ. ಕೇಂದ್ರವೂ ಅಡಿಕೆಯಿಂದ ಅಪಾಯವಿಲ್ಲ ಎಂಬ ನಿರ್ಧಾರ ಪ್ರಕಟಿಸಲಿದೆ ಎಂದು ಅವರು ಹೇಳಿದರು.

ಯಾರಿಗೂ ರಕ್ಷಣೆ ಇಲ್ಲ: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಮೇಲೇ ದಾಳಿ ನಡೆದಿರುವುದು ರಾಜ್ಯದ ಜನರನ್ನು ದಿಗ್ಭ್ರಾಂತಿಗೆ ಈಡು ಮಾಡಿದೆ. ಉನ್ನತ ಸ್ಥಾನದಲ್ಲಿ ಇರುವವರಿಗೇ ರಾಜ್ಯದಲ್ಲಿ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಜನರ ಸ್ಥಿತಿ ಏನು ಎಂಬ ಪ್ರಶ್ನೆ ಎದುರಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇನ್ನೆರಡು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ ಎಂಬುದು ಲೋಕಾಯುಕ್ತರ ಮೇಲಿನ ದಾಳಿಯಿಂದ ಸಾಬೀತಾಗಿದೆ ಎಂದು ಅವರು ಟೀಕಿಸಿದರು.

ಹೆಚ್ಚುವರಿಯಾಗಿ 1 ಲಕ್ಷ ಟನ್‌ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರಾಜ್ಯ ಸರ್ಕಾರ ಮೀನ–ಮೇಷ ಎಣಿಸದೆ ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಿ ರೈತರ ನೆರವಿಗೆ ಬರಬೇಕು ಎಂದು ಅವರು ಆಗ್ರಹಿಸಿದರು.

ಸಿದ್ಧಗಂಗಾಶ್ರೀ ನಿಲುವಿಗೆ ಬೆಂಬಲ

‘ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ತಜ್ಞರ ಸಮಿತಿಯ ವರದಿ ಆಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದರೂ, ನಾವು ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ನಿಲುವಿಗೆ ಬೆಂಬಲ ನೀಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

‘ವೀರಶೈವ– ಲಿಂಗಾಯತ ಎಂಬ ಹೆಸರಿನಡಿಯೇ ಪ್ರತ್ಯೇಕ ಧರ್ಮದ ಸ್ಥಾನಮಾನ ದೊರೆಯಲಿ’ ಎಂಬ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿಲುವನ್ನೇ ಲಿಂಗಾಯತರು ಬೆಂಬಲಿಸಿದ್ದಾರೆ ಎಂದರು.

‘ನಾನು ಇತ್ತೀಚೆಗೆ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ ಲಿಂಗಾಯತರೆಲ್ಲರೂ ವೀರಶೈವ ಎಂಬ ಪದ ಬೇಡ ಎಂದು ತಿಳಿಸಿಲ್ಲ’ ಎಂದು ಅವರು ಹೇಳಿದರು.

‘ತುಘಲಕ್‌ ಉತ್ಸವ ಆಚರಿಸಿದರೂ ಅಚ್ಚರಿಯಿಲ್ಲ’

ನವದೆಹಲಿ: ‘ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿ ವಿವಾದ ಉಂಟು ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಬಹುಮನಿ ಉತ್ಸವ ಆಚರಿಸಲು ಹೊರಟಿದೆ. ಮುಂದೆ ತುಘಲಕ್‌ ಉತ್ಸವ ಆಚರಿಸಿದರೂ ಅಚ್ಚರಿ ಪಡಬೇಕಿಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕೊಲೆ, ಸುಲಿಗೆ, ಹತ್ಯೆ ಯತ್ನಗಳು ಮುಂದುವರಿದಿವೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಗಮನ ಹರಿಸುತ್ತಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸಂಸತ್‌ನ ಬಜೆಟ್‌ ಅಧಿವೇಶನದ ಸತತ 4ನೇ ದಿನವೂ ಉಭಯ ಸದನಗಳಲ್ಲಿ ಕಾಂಗ್ರೆಸ್‌ ಪಕ್ಷ ಕಲಾಪ ನಡೆಯದಂತೆ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿಯೇ ಬ್ಯಾಂಕ್‌ಗಳು ಸಾವಿರಾರು ಕೋಟಿ ಸಾಲ ನೀಡಿದ್ದು, ತಮ್ಮದೇ ಅನೇಕ ಮುಖಂಡರ ಬಣ್ಣ ಬಯಲಾಗಲಿದೆ ಎಂಬ ಭಯದಿಂದಲೇ ಕಾಂಗ್ರೆಸ್ ಅಧಿವೇಶನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ದೂರಿದರು.

ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಮ್‌ ನಬಿ ಆಜಾದ್‌ ಅವರು ನಿಯಮ 193ರ ಅಡಿ ಚರ್ಚೆಗೆ ಸಿದ್ಧ ಎಂದು ಮೊದಲು ತಿಳಿಸಿದ್ದರು. ಆದರೆ, ಇಟಲಿಯಿಂದ ಮರಳಿದ ರಾಹುಲ್‌ ಗಾಂಧಿ ಅವರು ಚರ್ಚೆಗೆ ಅಡ್ಡಿ ಉಂಟುಮಾಡಿದ್ದಾರೆ ಎಂದು ಅನಂತಕುಮಾರ್‌ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry