ಸಂವಿಧಾನ ದುರ್ಬಲಗೊಳಿಸುವ ಯತ್ನ

ಶನಿವಾರ, ಮಾರ್ಚ್ 23, 2019
21 °C
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಗತಿಪರ ಚಿಂತಕಿ ಡಾ.ಮನಿಶಾ ಗುಪ್ತ ವಿಷಾದ

ಸಂವಿಧಾನ ದುರ್ಬಲಗೊಳಿಸುವ ಯತ್ನ

Published:
Updated:
ಸಂವಿಧಾನ ದುರ್ಬಲಗೊಳಿಸುವ ಯತ್ನ

ಶಿವಮೊಗ್ಗ: ಮೂಲಭೂತವಾದಿ ಹಾಗೂ ಫ್ಯಾಸಿಸ್ಟ್‌ ಶಕ್ತಿಗಳಿಗೆ ಅಲ್ಪಸಂಖ್ಯಾತರು, ದಲಿತರು, ವಿಚಾರವಾದಿಗಳು ಬಲಿಯಾಗುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡರೂ ಅವರ ಮೂಲ ಗುರಿ ಸಂವಿಧಾನವನ್ನು ದುರ್ಬಲಗೊಳಿಸುವುದೇ ಆಗಿದೆ ಎಂದು ಪುಣೆಯ ಪ್ರಗತಿಪರ ಚಿಂತಕಿ ಡಾ.ಮನಿಶಾ ಗುಪ್ತ ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮದು. ಕ್ರಾಂತಿಕಾರಕ ಅಂಶಗಳು ಇದರಲ್ಲಿವೆ. ಆದರೆ ಮೂಲಭೂತವಾದಿಗಳು ಇಂತಹ ಸಂವಿಧಾನವನ್ನು ದುರ್ಬಲಗೊಳಿಸುವ ಯತ್ನ ನಡೆಸುತ್ತಿದ್ದಾರೆ. ಜಾತಿ, ಧರ್ಮದ ಮೇಲೆ ನೀತಿಸಂಹಿತೆ ಜಾರಿಗೊಳಿಸಲು ಹವಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಅಸ್ತಿತ್ವ ಉಳಿಸಿಕೊಳ್ಳುವುದು ಬಹಳ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

‘ಪ್ರಶ್ನೆ ಕೇಳುವುದು, ಕನಸು ಕಾಣುವುದು, ಪ್ರತಿರೋಧಿಸುವುದು ನಿಲ್ಲಿಸಿದರೆ ನಾವು ಕೇವಲ ರಸ್ತೆಯ ಮೇಲೆ ನಡೆದಾಡುವ  ಜೀವಂತ ಶವಗಳಾಗುತ್ತೇವೆ. ಹಾಗಾಗಿ ನಾವು ಬದುಕಿರುವವರೆಗೂ ಸಂವಿಧಾನವನ್ನು ಬದಲಿಸಲು, ತಿರುಚಲು ಬಿಡುವುದಿಲ್ಲ. ಅಕಸ್ಮಾತ್ ಸಂವಿಧಾನವನ್ನು ತಿರುಚಿದರೆ, ಅದು ನನ್ನ ಶವದ ಮೇಲೆಯೇ ಎನ್ನುವ ಶಪಥವನ್ನು ನಾವಿಂದು ಕೈಗೊಳ್ಳಬೇಕಾಗಿದೆ’ ಎಂದು ಹೇಳಿದರು.

ಹಿರಿಯ ಲೇಖಕಿ ಸ.ಉಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸ್ವಾತಂತ್ರ್ಯದ ನಂತರ ಬಂಡವಾಳಶಾಹಿ ಹಾಗೂ ನವ ವಸಾಹತುಶಾಹಿಗಳು ತಮ್ಮದೇ ಆದ ಮೌಲ್ಯಗಳನ್ನು ಸಮಾಜಕ್ಕೆ ನೀಡುತ್ತಾ ಬಂದರು. ಇದರಿಂದ ಮಹಿಳೆಯರ ಬದುಕು ದುಸ್ತರವಾಯಿತು. ಆದರೆ ನಂತರ ಎದುರಾದ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಮೆಟ್ಟಿನಿಂತ ಮಹಿಳೆಯರು ಪುರುಷ ಸಮಾಜದ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವಷ್ಟು ಶಕ್ತರಾದರು. ಪ್ರತಿ ಗಂಡಿನ ಮನಸ್ಸಿನಲ್ಲಿ ಹೆಣ್ಣಿನ ತಾಳ್ಮೆ ಇರುತ್ತದೆ. ಅದೇ ರೀತಿ ಹೆಣ್ಣಿನ ಮನಸ್ಸಿನಲ್ಲಿ ಗಂಡಿನ ಧೈರ್ಯ ಮತ್ತು ಶಕ್ತಿ ಇರುತ್ತದೆ ಎಂದು ತೋರಿಸಿದರು’ ಎಂದು ಹೇಳಿದರು.

ಡಾ.ಸಬಿತಾ ಬನ್ನಾಡಿ ಮಾತನಾಡಿ, ‘ಇಂದು ರಕ್ಷಣೆಯ ಹೆಸರಿನಲ್ಲಿ ಅಸುರಕ್ಷತೆಯ ವಾತಾವರಣ ನಿರ್ಮಿಸಲಾಗುತ್ತಿದೆ. ಮಹಿಳೆಯರನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವುದೇ ಮೌಲ್ಯ ರಕ್ಷಣೆ ಎಂದು ಬಿಂಬಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಆಳುತ್ತಿರುವುದು ಲಿಖಿತ ಸಂವಿಧಾನವೋ, ಅಲಿಖಿತ ಸಂವಿಧಾನವೋ ಎನ್ನುವ ಅನುಮಾನ ದಟ್ಟವಾಗುತ್ತದೆ. ಹಾಗಾಗಿ ಸ್ವಪ್ರಜ್ಞೆ ಎನ್ನುವುದು ಮಹಿಳೆಯರ ಮೊದಲ ಮೆಟ್ಟಿಲಾಗಬೇಕು’ ಎಂದರು.

ಹಿರಿಯ ಸಾಹಿತಿ ಡಿ.ಬಿ.ರಜಿಯಾ ‘ಸಮತೆಯೆಡೆಗೆ ನಮ್ಮ ನಡಿಗೆ’ ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನಾಡಿನ ಲೇಖಕಿಯರು, ಪ್ರಗತಿಪರರು, ಮಹಿಳಾಪರ ಚಿಂತಕರು, ಮಹಿಳೆಯರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಉದ್ಘಾಟನೆ ಕಾರ್ಯಕ್ರಮದ ನಂತರ ‘ಸಂವಿಧಾನ ಮತ್ತು ಲಿಂಗರಾಜಕಾರಣ’, ‘ಸಂವಿಧಾನ ಮತ್ತು ದುಡಿಯುವ ವರ್ಗ’ ‘ಸಂವಿಧಾನ ಮತ್ತು ಧರ್ಮ’ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆದವು.

ಗುಲಾಬಿ ಹಾದಿ ನಿರ್ಮಿಸೋಣ: ಪ್ರಕಾಶ್‌ ರೈ

ಮಹಿಳಾ ಸಮಾವೇಶಕ್ಕೆ ನಟ ಪ್ರಕಾಶ್ ರೈ ಶುಭಕೋರಿ ಸಂದೇಶ ಕಳುಹಿಸಿದರು. ‘ನಿಮ್ಮ ಸಮಾವೇಶ ನನ್ನದೂ ಹೌದು, ನನ್ನ ಪ್ರಶ್ನೆಗಳು ನಿಮ್ಮವೂ ಹೌದು, ಮುಂದಿನ ದಾರಿ ಮುಳ್ಳಿನದ್ದೇ ಇರಲಿ, ಅದನ್ನು ಗುಲಾಬಿ ಹಾದಿಯನ್ನಾಗಿ ಮಾರ್ಪಡಿಸೋಣ’ ಎಂದು ರೈ ಕಳುಹಿಸಿದ್ದ ಸಂದೇಶವನ್ನು ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry