ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಧ್ಯಸ್ಥಿಕೆಗೂ ಜಗ್ಗದ ಚಂದ್ರಬಾಬು ನಾಯ್ಡು

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೂ ಕೇಂದ್ರ ಸಂಪುಟದಲ್ಲಿ ಟಿಡಿಪಿ ಸಚಿವರನ್ನು ಉಳಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಸಂಪುಟದಲ್ಲಿದ್ದ ಟಿಡಿಪಿಯ ಇಬ್ಬರು ಸಚಿವರು ಗುರುವಾರ ರಾಜೀನಾಮೆ ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ, ಆಂಧ್ರ ಸಂಪುಟದಲ್ಲಿದ್ದ ಬಿಜೆಪಿಯ ಇಬ್ಬರು ಸಚಿವರೂ ರಾಜೀನಾಮೆ ನೀಡಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡುವ ವಿಚಾರದಲ್ಲಿ ಕೇಂದ್ರ ಅಸಡ್ಡೆ ತೋರಿದೆ ಎಂಬ ಕಾರಣಕ್ಕೆ ಮುನಿಸಿಕೊಂಡಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ಸಚಿವರಿಗೆ ರಾಜೀನಾಮೆ ನೀಡುವಂತೆ ಬುಧವಾರ ಸೂಚಿಸಿದ್ದರು.

ಅಸಮಾಧಾನ ಹೊರ ಹಾಕಿರುವ ನಾಯ್ಡು ಜತೆಗೆ ಮೋದಿ ಅವರು ಗುರುವಾರ ಸಂಜೆ ದೂರವಾಣಿ ಮೂಲಕ ಮಾತನಾಡಿದ್ದಾರೆ. 20 ನಿಮಿಷ ಈ ಮಾತುಕತೆ ನಡೆದಿದೆ. ರಾಜೀನಾಮೆ ನೀಡಲೇಬೇಕಾದ ಸ್ಥಿತಿ ನಿರ್ಮಾಣವಾಗಲು ಏನು ಕಾರಣ ಎಂಬುದನ್ನು ಪ್ರಧಾನಿಗೆ ನಾಯ್ಡು ವಿವರಿಸಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಈ ಮಾತುಕತೆ ಬಳಿಕ ಸಚಿವರಿಬ್ಬರು ರಾಜೀನಾಮೆ ನೀಡಿದರು.

ಕೇಂದ್ರ ಸಂಪುಟದಿಂದ ಹೊರಬರುವ ನಿರ್ಧಾರ ಕೈಗೊಳ್ಳುವುದಕ್ಕೆ ಮೊದಲು ಬುಧವಾರ ರಾತ್ರಿ ಪ್ರಧಾನಿಯನ್ನು ಸಂಪರ್ಕಿಸಲು ನಾಯ್ಡು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಿಜೆಪಿ ಜತೆಗೆ ನಾಲ್ಕು ವರ್ಷಗಳಿಂದ ಇದ್ದ ಮೈತ್ರಿ ಕೊನೆಗೊಳ್ಳಲಿಕ್ಕಿಲ್ಲ, ಕೊನೆ ಕ್ಷಣದಲ್ಲಿ ರಾಜಿ ಸಾಧ್ಯವಾಗಬಹುದು ಎಂಬ ಭಾವನೆ ಟಿಡಿಪಿಯ ಕೆಲವು ಮುಖಂಡರಲ್ಲಿ ಇತ್ತು. ಆದರೆ ಅದು ಸಾಧ್ಯವಾಗಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಅತ್ಯಂತ ದೊಡ್ಡ ಮೈತ್ರಿ ಪಕ್ಷ ಟಿಡಿಪಿ. ಲೋಕಸಭೆಯಲ್ಲಿ 16, ರಾಜ್ಯಸಭೆಯಲ್ಲಿ 6 ಸದಸ್ಯರನ್ನು ಹೊಂದಿದೆ.

ಬಿರುಕಿಗೆ ಕಾರಣವೇನು: ರಾಜ್ಯ ವಿಭಜನೆಯಿಂದಾಗಿ ವರಮಾನ ಕೊರತೆ ಎದುರಿಸುತ್ತಿರುವ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕು ಎಂಬುದು ಟಿಡಿಪಿಯ ಒತ್ತಾಯವಾಗಿದೆ. 2014ರಲ್ಲಿ ಆಗಿನ ಪ್ರಧಾನಿ ಮನಮೋಹನಸಿಂಗ್‌ ಅವರು ವಿಶೇಷ ಸ್ಥಾನ ನೀಡುವುದಾಗಿ ಲೋಕಸಭೆಯಲ್ಲಿ ಭರವಸೆ ನೀಡಿದ್ದರು.

ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಅನುದಾನ, ಪೋಲವರಂ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ಮತ್ತು ವಿಶಾಖಪಟ್ಟಣ ರೈಲ್ವೆ ವಲಯ ಸ್ಥಾಪನೆ ಟಿಡಿಪಿಯ ಬೇಡಿಕೆಗಳಾಗಿವೆ.

ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನ ನೀಡುವುದಕ್ಕೆ ಅವಕಾಶ ಇಲ್ಲ ಎಂದು 14ನೇ ಹಣಕಾಸು ಆಯೋಗದ ವರದಿ ಹೇಳಿದೆ. ಹಾಗಾಗಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡುವುದು ಸಾಧ್ಯವಿಲ್ಲ ಎಂಬುದು ಬಿಜೆಪಿಯ ವಾದವಾಗಿದೆ.

ಎನ್‌ಡಿಎಯಲ್ಲಿ ಮುಂದುವರಿಕೆ
ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರೂ ಪಕ್ಷವು ಎನ್‌ಡಿಎ ಮೈತ್ರಿಕೂಟದಿಂದ ಹೊರಗೆ ಬರುವುದಿಲ್ಲ ಎಂದು ರಾಜೀನಾಮೆ ನೀಡಿರುವ ಸಚಿವ ವೈ.ಎಸ್‌. ಚೌದರಿ ತಿಳಿಸಿದ್ದಾರೆ.

‘ಆಂಧ್ರ ವಿಶೇಷ ಸ್ಥಾನ ವಿಚಾರ ಪ್ರಧಾನಿ ನಿರ್ವಹಿಸಬೇಕಾದುದಲ್ಲ. ಸಂಬಂಧಪಟ್ಟ ಇಲಾಖೆ ಈ ವಿಚಾರವನ್ನು ಕೈಗೆತ್ತಿಕೊಳ್ಳಬೇಕಿತ್ತು. ಈಗಾಗಲೇ ಸಾಕಷ್ಟು ಸಮಯ ಕಳೆದಿದೆ’ ಎಂದಿದ್ದಾರೆ.

ಕೇಂದ್ರ ಸಂಪುಟದಿಂದ ಹೊರಬಂದವರು‌
(ಟಿಡಿಪಿ): ಅಶೋಕ್‌ ಗಜಪತಿರಾಜು– ನಾಗರಿಕ ವಿಮಾನಯಾನ ಸಚಿವ

ವೈ.ಎಸ್‌. ಚೌದರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ

ಆಂಧ್ರ ಸಂಪುಟದಿಂದ ಹೊರಬಂದವರು (ಬಿಜೆಪಿ):  ಕಾಮಿನೇನಿ ಶ್ರೀನಿವಾಸ ರಾವ್‌– ಆರೋಗ್ಯ ಸಚಿವ, ಪಿ. ಮಾಣಿಕ್ಯಲಾ ರಾವ್‌–ದತ್ತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT