ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಸಿಗದ ಪ್ರತಿಮೆ ಭಂಜನೆ ಸನ್ನಿ

Last Updated 9 ಮಾರ್ಚ್ 2018, 5:43 IST
ಅಕ್ಷರ ಗಾತ್ರ

ತಿರುವನಂತಪುರ/ ಲಖನೌ/ಚೆನ್ನೈ: ದೇಶದ ವಿವಿಧ ಭಾಗಗಳಲ್ಲಿ ಪ್ರತಿಮೆಗಳನ್ನು ವಿರೂಪಗೊಳಿಸುವ ಮತ್ತು ಧ್ವಂಸಗೊಳಿಸುವ ದುಷ್ಕೃತ್ಯಗಳು ಗುರುವಾ
ರವೂ ಮುಂದುವರಿಯಿತು.

ದುಷ್ಕರ್ಮಿಗಳು ಗಾಂಧೀಜಿ ಪುತ್ಥಳಿಯನ್ನೂ ಬಿಟ್ಟಿಲ್ಲ. ಕೇರಳದಲ್ಲಿ ಗಾಂಧೀಜಿ, ಉತ್ತರ ಪ್ರದೇಶದಲ್ಲಿ ಹನುಮಾನ್‌ ಮತ್ತು ಚೆನ್ನೈಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗಳನ್ನು ಹಾನಿಗೆಡವಲಾಗಿದೆ.

ತ್ರಿಪುರಾದಲ್ಲಿ ಸ್ಥಾಪಿಸಲಾಗಿದ್ದ ರಷ್ಯಾ ಕಮ್ಯುನಿಸ್ಟ್‌ ನಾಯಕ ಲೆನಿನ್‌ನ ಪ್ರತಿಮೆಗಳನ್ನು ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಸೋಲಿನ ಬಳಿಕ ಭಾನುವಾರ ಮತ್ತು ಸೋಮವಾರ ಧ್ವಂಸ ಮಾಡಲಾಗಿತ್ತು. ನಂತರ ಮಹಾ ಪುರುಷರ ಪುತ್ಥಳಿಗಳನ್ನು ಭಗ್ನಗೊಳಿಸುವ ಕುಕೃತ್ಯಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಎಂಬಲ್ಲಿನ ತಾಲ್ಲೂಕು ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಪ್ರತಿಮೆಗೆ ಗುರುವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಹಾನಿ ಮಾಡಲಾಗಿದೆ. ಗಾಂಧೀಜಿ ಪ್ರತಿಮೆಯ ಕನ್ನಡಕದ ಕೆತ್ತನೆ ಒಡೆದು ಹೋಗಿದೆ. ಪ್ರತಿಮೆಗೆ ಹಾಕಿದ್ದ ಹೂವಿನ ಹಾರವನ್ನು
ಕಿತ್ತೆಸೆಯಲಾಗಿದೆ.

ಪ್ರತಿಮೆಗೆ ಕಲ್ಲೆಸೆದ ವ್ಯಕ್ತಿ ಓಡಿ ಹೋಗಿದ್ದನ್ನು ಕಂಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ‘ಈತ ಮಾನಸಿಕ ಅಸ್ವಸ್ಥ. ಚಿಕಿತ್ಸೆ ಪಡೆಯುತ್ತಿದ್ದ ಈತ ಮನೆ ಬಿಟ್ಟು ಓಡಿ ಹೋಗಿದ್ದ’ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಧೀಜಿ ಪ್ರತಿಮೆಗೆ ಹಾನಿ ಮಾಡಿದ್ದರ ಹಿಂದೆ ಯಾವುದೇ ರಾಜಕೀಯ ಕಾರಣ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶದ ಕರುವಾ ಗ್ರಾಮದಲ್ಲಿ ಹನುಮಾನ್‌ ಮೂರ್ತಿಯನ್ನು ವಿರೂಪಗೊಳಿಸಲಾಗಿದೆ. ಇದು ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು.

ಹನುಮಾನ್‌ ಮೂರ್ತಿಗೆ ಹಾನಿ ಮಾಡಿ ಅದರ ಮೇಲೆ ಭಿತ್ತಿಪತ್ರ ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಉತ್ತರ ಚೆನ್ನೈನ ತಿರುವತ್ರಿಯೂರು ಎಂಬಲ್ಲಿ ಸ್ಥಾಪಿಸಲಾಗಿದ್ದ ಅಂಬೇಡ್ಕರ್‌ ಪ್ರತಿಮೆಯನ್ನು ಗುರುವಾರ ವಿರೂಪಗೊಳಿಸಲಾಗಿದೆ. ಪ್ರತಿಮೆಯ ಮೇಲೆ ಬಣ್ಣ ಎರಚಲಾಗಿದೆ.

ಸುದ್ದಿ ಹರಡುತ್ತಿದ್ದಂತೆಯೇ ಉತ್ತರ ಚೆನ್ನೈನ ಜನರು ಪ್ರತಿಭಟನೆ ನಡೆಸಿದ್ದಾರೆ. ಡಿಸಿಪಿ ಜಿ. ಶಶಾಂಕ್‌ ಸಾಯಿ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದುಷ್ಕರ್ಮಿಗಳನ್ನು ಪತ್ತೆ ಮಾಡಲು ಎರಡು ತಂಡ ಗಳನ್ನು ರಚಿಸಲಾಗಿದೆ.

ದೆಹಲಿಯಲ್ಲಿ ಭದ್ರತೆ ಬಿಗಿ
ರಾಜಧಾನಿ ದೆಹಲಿಯಲ್ಲಿರುವ ಮಹಾಪುರುಷರ ಪ್ರತಿಮೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಪ್ರತಿಮೆಗಳಿಗೆ ಅಪಾಯ ಇದೆ ಎಂಬ ನಿರ್ದಿಷ್ಟ ಮಾಹಿತಿಯೇನೂ ಬಂದಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಮೆಗಳ ಮೇಲೆ ನಿಗಾ ಇರಿಸುವಂತೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಬಂಧನ
ಜನಸಂಘ ಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ಪ್ರತಿಮೆಗೆ ಹಾನಿ ಮಾಡಲಾದ ಕೋಲ್ಕತ್ತದ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ತಡೆಯಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಈ ಸ್ಥಳಕ್ಕೆ ನುಗ್ಗಲು ಯತ್ನಿಸಿದರು. ಜಲಫಿರಂಗಿಯ ಜತೆಗೆ ಸನ್ನದ್ಧರಾಗಿದ್ದ ಪೊಲೀಸರು ಅವರನ್ನು ತಡೆದರು. ಇಬ್ಬರು ಮಹಿಳೆಯರು ಸೇರಿ 59 ಮಂದಿಯನ್ನು ಬಂಧಿಸಲಾಗಿದೆ.

ಪ್ರತಿಮೆಯನ್ನು ಮರುಸ್ಥಾಪಿಸಲು ಬೇಕಾದ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಘೋಷ್‌ ಒತ್ತಾಯಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

**

ಪೆರಿಯಾನ್‌ ಪ್ರತಿಮೆ ಧ್ವಂಸಕ್ಕೆ ಬಿಜೆಪಿ ಮುಖಂಡ ರಾಜಾ ನೀಡಿದ ಕರೆ ಅನಾಗರಿಕ. ಆದರೆ ಅವರು ಈಗಾಗಲೇ ವಿಷಾದ ವ್ಯಕ್ತಡಿಸಿರುವುದರಿಂದ ವಿಷಯವನ್ನು ಇನ್ನಷ್ಟು ಬೆಳೆಸಬಾರದು

–ರಜನಿಕಾಂತ್‌, ನಟ, ರಾಜಕಾರಣಿ

ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ಆದ್ಯತೆ. ಅದಕ್ಕೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿಮೆಗಳ ಭದ್ರತೆಯನ್ನು ಖಾತರಿಪಡಿಸಿಕೊಳ್ಳಲು ಜಿಲ್ಲಾ ‍ಪೊಲೀಸ್‌ ವರಿಷ್ಠರಿಗೆ ಸೂಚಿಸಲಾಗಿದೆ

– ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ಪ್ರತಿಮೆ ಧ್ವಂಸದ ಮೂಲಕ ಶಾಂತಿ ಮತ್ತು ಸೌಹಾರ್ದವನ್ನು ಕೆಡಿಸುವ ಜನರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಪ್ರತಿಮೆ ಧ್ವಂಸ ದೇಶದ ಹಿತಾಸಕ್ತಿಗೆ ಪೂರಕವಾದ ಕೆಲಸ ಅಲ್ಲ

– ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT