ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಕಚೇರಿಗೆ ತಾತ್ಕಾಲಿಕ ಮೆಟಲ್ ಡಿಟೆಕ್ಟರ್ ಅಳವಡಿಕೆ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿಗೆ ಚಾಕುವಿನಿಂದ ಇರಿದ ಕೃತ್ಯದ ಬಳಿಕ ಎಚ್ಚೆತ್ತಿರುವ ಪೊಲೀಸರು, ಲೋಕಾಯುಕ್ತ ಕಚೇರಿಗೆ ಮೆಟಲ್ ಡಿಟೆಕ್ಟರ್ (ಲೋಹ ಶೋಧಕ) ಜೊತೆಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ವಿವಿಐಪಿ (ಅತಿ ಗಣ್ಯರ) ಭದ್ರತಾ ಘಟಕದ ಸಿಬ್ಬಂದಿ ಡಿಎಫ್‌ಎಂಡಿ (ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್) ತಂದು ತಾತ್ಕಾಲಿಕವಾಗಿ ಅಳವಡಿಸಿದ್ದಾರೆ.  ಎಚ್‌ಎಚ್‌ಎಂಡಿ (ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್) ಹಿಡಿದು ತಪಾಸಣೆ ಮಾಡುವ ಮೂವರು ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಇವರಲ್ಲಿ ಮಹಿಳಾ ಸಿಬ್ಬಂದಿಯೂ ಇದ್ದಾರೆ.

ಲೋಕಾಯುಕ್ತ ಕಚೇರಿಗೆ ಬರುವ ಎಲ್ಲರನ್ನೂ ತಪಾಸಣೆ ಮಾಡಿ ಒಳ ಬಿಡಲಾಗುತ್ತಿದ್ದು, ಬ್ಯಾಗ್‌ಗಳನ್ನೂ ಪರಿಶೀಲಿಸಲಾಗುತ್ತಿದೆ. ಅಗತ್ಯ ಇದ್ದರೆ ಮಾತ್ರ ಬ್ಯಾಗ್ ಕೊಂಡೊಯ್ಯಲು ಅವಕಾಶ ನೀಡಲಾಗುತ್ತಿದೆ. ಸಂದರ್ಶಕರ ನೋಂದಣಿ ಪುಸ್ತಕ ನಿರ್ವಹಣೆಗಿರುವ ಸ್ವಾಗತಕಾರ ಸಿಬ್ಬಂದಿ ಸಂಖ್ಯೆಯನ್ನು ಎರಡಕ್ಕೆ ಏರಿಸಲಾಗಿದೆ.

‘ಲೋಕಾಯುಕ್ತ ಸಂಸ್ಥೆಯಲ್ಲಿ ಪೊಲೀಸ್ ವಿಭಾಗ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಕೀಲರು ಮತ್ತು ಸಾರ್ವಜನಿಕರು ಸೇರಿ ನಿತ್ಯ ಸಾವಿರಾರು ಜನ ಕಚೇರಿಗೆ ಬಂದು ಹೋಗುತ್ತಾರೆ. ಮಹತ್ವದ ದಾಖಲೆಗಳು ಇರುವ ಕಾರಣ ಹೆಚ್ಚಿನ ಭದ್ರತೆಯ ಅಗತ್ಯವಿದೆ ಎಂದು ಆಂತರಿಕ ಭದ್ರತಾ ದಳ ವರದಿ ನೀಡಿದ್ದರೂ, ಪ್ರತಿ ಪಾಳಿಯಲ್ಲಿ ಮೂವರು ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿದೆ’ ಎನ್ನುತ್ತಾರೆ ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ.

ಮೊದಲು ನೆನಪಾದ ಮಗ
ಚಾಕು ಇರಿತದಿಂದ ಗಾಯಗೊಂಡಿದ್ದ ನ್ಯಾಯಮೂರ್ತಿ ಪಿ. ವಿಶ್ವನಾಥ್‌ ಶೆಟ್ಟಿ, ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ‌ತಮ್ಮ ಮಗ ಡಾ. ರವಿಶಂಕರ ಶೆಟ್ಟಿ ಅವರನ್ನೇ ಮೊದಲು ನೆನಪಿಸಿಕೊಂಡಿದ್ದಾರೆ.

‘ಆಸ್ಪತ್ರೆಗೆ ಹೋಗೋಣ ಎಂದ ಕೂಡಲೇ ರಾಮಯ್ಯ ಆಸ್ಪತ್ರೆ ಎಂದು ನ್ಯಾಯಮೂರ್ತಿಯವರು ಸಲಹೆ ನೀಡಿದರು. ಆದರೆ, ಹತ್ತಿರದಲ್ಲೆ ಇರುವ ಮಲ್ಯ ಆಸ್ಪತ್ರೆಗೆ ಕರೆದೊಯ್ಯೋಣ, ನನಗೆ ಪರಿಚಯ ಇರುವ  ವೈದ್ಯರಿದ್ದಾರೆಂದು ಎಡಿಜಿಪಿ ಸಂಜಯ್ ಸಹಾಯ್‌ ಸಲಹೆ ನೀಡಿದ್ದರಿಂದ ಅಲ್ಲಿಗೆ ಕರೆದೊಯ್ದೆವು’ ಎಂದು ಲೋಕಾಯುಕ್ತ ರಿಜಿಸ್ಟ್ರಾರ್ ನಂಜುಂಡಸ್ವಾಮಿ ತಿಳಿಸಿದರು.

‘ಕಚೇರಿ ಮುಂದೆ ನಿಂತಿದ್ದ ಎಸ್ಪಿಯೊಬ್ಬರ ಕಾರಿನಲ್ಲೆ ಕರೆದೊಯ್ದೆವು. ಸಿಗ್ನಲ್‌ಗಳನ್ನು ಲೆಕ್ಕಿಸದೆ ಮುನ್ನೆಡೆಯುವಂತೆ ಚಾಲಕರಿಗೆ ತಿಳಿಸಿದ್ದೆವು. ಘಟನೆಯಾದ ಏಳೇ ನಿಮಿಷದಲ್ಲಿ ಆಸ್ಪತ್ರೆಗೆ ತಲುಪಿದೆವು’ ಎಂದು ನಂಜುಂಡಸ್ವಾಮಿ ಘಟನೆ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT