ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿರ್ವಹಣೆಗೆ ವಿಶೇಷ ಯೋಜನೆ

Last Updated 8 ಮಾರ್ಚ್ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 16 ಜಿಲ್ಲೆಗಳೂ ಸೇರಿದಂತೆ ದೇಶದ 151 ಬರಪೀಡಿತ ಜಿಲ್ಲೆಗಳಲ್ಲಿ ಸಮರ್ಪಕ ಬರ ನಿರ್ವಹಣೆಗೆ ವಿಶೇಷ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂದು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್‌ ದಳವಾಯಿ ತಿಳಿಸಿದರು.

ಬರ ನಿರ್ವಹಣೆ ಕಾರ್ಯತಂತ್ರಗಳ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿ, ಮೊದಲ ಹಂತದಲ್ಲಿ ಒಟ್ಟು 24 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕರ್ನಾಟಕದ 16 ಜಿಲ್ಲೆಗಳು ಸೇರಿವೆ. ಹಂತ– ಹಂತವಾಗಿ ಉಳಿದ ಬರಪೀಡಿತ ಜಿಲ್ಲೆಗಳಲ್ಲೂ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂಬಂಧ ಕ್ರಿಯಾ ಯೋಜನೆಗಳನ್ನು ರಾಜ್ಯ ಸರ್ಕಾರಗಳು ರೂಪಿಸಿಕೊಡಬೇಕು. ಆದರೆ, ಈವರೆಗೂ ಕ್ರಿಯಾಶೀಲ ಎನಿಸುವ ಪ್ರಸ್ತಾವಗಳು ಬಂದಿಲ್ಲ. ಅಧಿಕಾರಿಗಳು, ವಿಜ್ಞಾನಿಗಳು ಮತ್ತು ತಜ್ಞರು ಸೇರಿಕೊಂಡು ಉತ್ತಮ ಅನನ್ಯ ಆಲೋಚನೆಗಳು ಮತ್ತು ಯೋಜನೆಗಳನ್ನು ರೂಪಿಸಿಕೊಡಬೇಕು. ಈ ಯೋಜನೆಗೂ ರೈತರ ಆದಾಯ ದ್ವಿಗುಣಗೊಳಿಸುವುದಕ್ಕೂ ಪರಸ್ಪರ ಸಂಬಂಧವಿದೆ ಎಂದರು.

ಬರ ಎದುರಿಸುವಲ್ಲಿ ಸರ್ಕಾರಗಳ ಆಡಳಿತ ಯಂತ್ರ, ವಿಜ್ಞಾನಿಗಳ ಜೊತೆ ಸಾರ್ವಜನಿಕರೂ ಕೈಜೋಡಿಸಬೇಕು. ಅತ್ಯಂತ ಭೀಕರ ಕ್ಷಾಮ ಎದುರಿಸಿದ ಒಡಿಶಾದ ಕಾಳಹಂಡಿಯಲ್ಲಿ ವರ್ಷದಲ್ಲಿ ಸಾಕಷ್ಟು ಮಳೆ ಬೀಳುತ್ತದೆ. ಆದರೆ, ಅದನ್ನು ಸಂಗ್ರಹಿಸಿ ಸರಿಯಾಗಿ ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲ. ಮಳೆ ನೀರು ಸಂಗ್ರಹಿಸಿ ಬಳಕೆ ಮಾಡಿಕೊಂಡರೆ ಬಹಳಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದರು.

ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಲು ರೈತರು ಗಮನಹರಿಸಬೇಕು. ಉದಾಹರಣೆಗೆ ಭತ್ತದ ಹೊಟ್ಟನ್ನು ಅಣಬೆ ಬೆಳೆಯಲು ಬಳಸಿಕೊಳ್ಳಬಹುದು. ಮಳೆ ಕಡಿಮೆ ಆದ ವರ್ಷದಲ್ಲಿ ವಿವಿಧ ರೀತಿಯ ಬೇಳೆ–ಕಾಳುಗಳನ್ನು ಬೆಳೆದುಕೊಳ್ಳಬಹುದು. ಈಗ ದೇಶದಲ್ಲಿ ಲಭ್ಯವಿರುವ ತಂತ್ರಜ್ಞಾನದ ಮೂಲಕ ಮುಂಗಾರಿನಲ್ಲಿ ಹವಾಮಾನ ಹೇಗಿರುತ್ತದೆ, ಏನು ಬೆಳೆಯಬಹುದು ಎಂಬ  ಸಲಹೆ ನೀಡಬಹುದು. ಮಳೆ ಕೈಕೊಟ್ಟರೂ ಪರ್ಯಾಯ ಬೆಳೆಗಳತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬರಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಬರದಿಂದಾಗಿ ದೇಶದ ಆಹಾರ ಉತ್ಪಾದನೆ ಶೇ 25 ರಷ್ಟು ಕಡಿಮೆ ಆಗಿದೆ ಎಂದು ಕೇಂದ್ರದ ಆರ್ಥಿಕಸಮೀಕ್ಷೆ ಹೇಳಿದೆ. ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದರು.

ಕರ್ನಾಟಕದಲ್ಲಿ ಬರ ಸಾಮಾನ್ಯ ಎನಿಸಿದೆ. ದಕ್ಷಿಣದ ಇತರ ರಾಜ್ಯಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆದ್ದರಿಂದ, ಇತರ ರಾಜ್ಯಗಳನ್ನು ಸೇರಿಸಿಕೊಂಡು ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರಾಜ್ಯದಲ್ಲಿ 15 ವರ್ಷಗಳಲ್ಲಿ 13 ವರ್ಷ ಬರಗಾಲವಿತ್ತು. ಇದನ್ನು ನಿಭಾಯಿಸುವಲ್ಲಿ ಹೊಸತನ
ದಿಂದ ಕೂಡಿದ ಕಾರ್ಯತಂತ್ರಗಳ ಅಗತ್ಯವಿದೆ ಎಂದು ಹೇಳಿದರು.

‘ರಾಜ್ಯದಲ್ಲಿ ಬರಗಾರದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಂಡೆವು. ಇದರಿಂದ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ತಲುಪಿತು. ರೈತರಿಂದ ಒಂದೇ ಒಂದೂ ದೂರು ಬರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT