ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಇದ್ದ ಬಾಡಿಗೆ ಕೋಣೆ ಪರಿಶೀಲನೆ

Last Updated 8 ಮಾರ್ಚ್ 2018, 19:35 IST
ಅಕ್ಷರ ಗಾತ್ರ

ತುಮಕೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್‌ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ ಆರೋಪಿ ತೇಜರಾಜ್ ಶರ್ಮಾನನ್ನು ಹೆಚ್ಚಿನ ತನಿಖೆಗೆ ಗುರುವಾರ ಇಲ್ಲಿನ ಬಿದಿರುಮೇಳೆ ಬಡಾವಣೆಗೆ ಕರೆತರಲಾಗಿತ್ತು.

ಆರೋಪಿಯು ಬಡಾವಣೆಯಲ್ಲಿ ವಾಸವಿದ್ದ ಬಾಡಿಗೆ ಕೋಣೆಯನ್ನು ವಿಧಾನಸೌಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಿ.ಶಂಕರಾಚಾರ್ ನೇತೃತ್ವದ 9 ಜನರ ತಂಡವು ಪರಿಶೀಲನೆ ನಡೆಸಿತು.

ಮಧ್ಯಾಹ್ನ 12.30ರ ಹೊತ್ತಿಗೆ ನಗರಕ್ಕೆ ಆರೋಪಿ ಕೈಗಳಿಗೆ ಕೊಳ ಹಾಕಿಕೊಂಡು ಕರೆತಂದ ತಂಡವು ಮೂರನೇ ಅಂತಸ್ತಿನಲ್ಲಿದ್ದ ಆರೋಪಿಯ ಕೋಣೆಗೆ ಕರೆದೊಯ್ದರು. ಕೊಠಡಿಯಲ್ಲಿದ್ದ ಏಕಾಗ್ರತೆ, ಇಂದ್ರಜಾಲ ಕುರಿತ ಪುಸ್ತಕಗಳು, ದೇವರ ಫೋಟೊ ಹಾಗೂ ಕೆಲ ದಾಖಲಾತಿಗಳ ಫೈಲ್‌ಗಳನ್ನು ತನಿಖಾ ತಂಡವು ವಶಕ್ಕೆ ಪಡೆಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಈ ಪುಸ್ತಕಗಳನ್ನು ಯಾಕೆ ಓದುತ್ತಿದ್ದೆ? ಎಷ್ಟು ದಿವಸಗಳಿಂದ ಓದುತ್ತಿದ್ದೆ? ಓದುವ ಉದ್ದೇಶವೇನು? ಬಾಗಿಲಿಗೆ ದೃಷ್ಟಿ ಗೊಂಬೆ ತರಹದ ಗೊಂಬೆ ಕಟ್ಟಿದ್ದೇಕೆ? ಎಂಬ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಆರೋಪಿಗೆ ಕೇಳಿದರು ಎಂದು ತಿಳಿದಿದೆ.

ಕೊಠಡಿ ಪರಿಶೀಲನೆ ಬಳಿಕ ತನಿಖಾಧಿಕಾರಿ ಬಿ.ಶಂಕರಾಚಾರ್ ಅವರು ಮನೆಯ ಮಾಲೀಕರಾದ ವೆಂಕಟಮ್ಮ ಅವರ ಕುಟುಂಬದ ಸದಸ್ಯರಿಂದ ಆರೋಪಿ ಬಗ್ಗೆ ಮಾಹಿತಿ ಪಡೆದರು.

ಮಾಲೀಕರ ವಿಚಾರಣೆ: ಯಾವ ಆಧಾರದ ಮೇಲೆ ಆರೋಪಿ ತೇಜರಾಜ್ ಶರ್ಮಾಗೆ ಮನೆ ಬಾಡಿಗೆ ಕೊಡಲಾಗಿತ್ತು? ಮನೆ ಬಾಡಿಗೆ ಕೊಡುವ ಮುನ್ನ ಒಪ್ಪಂದ ಪತ್ರ( ಅಗ್ರಿಮೆಂಟ್‌) ಮಾಡಿಕೊಳ್ಳಲಾಗಿದೆಯೇ? ಈತನ ಬಗ್ಗೆ ನಿಮಗೇನೇನು ಗೊತ್ತು? ಏನು ಕೆಲಸ ಮಾಡುತ್ತಿದ್ದ? ಯಾವ ಊರಿನವರು ಎಂಬುದರ ಬಗ್ಗೆ ಏನು ಮಾಹಿತಿ ನೀಡಿದ್ದ ಎಂಬ ಪ್ರಶ್ನೆಗಳನ್ನು ಕೇಳಿದರು.

ಬಳಿಕ ಎಸ್.ಎಸ್.ಪುರಂ ಬಡಾವಣೆಯಲ್ಲಿ ಮೂರು ತಿಂಗಳ ಹಿಂದೆ ಆರೋಪಿಯು ವಾಸವಿದ್ದ ಬಾಡಿಗೆ ಮನೆಗೂ ತನಿಖಾ ತಂಡವು ಭೇಟಿ ನೀಡಿತ್ತು. ಆದರೆ, ಅಲ್ಲೇನೂ ಇರಲಿಲ್ಲ.

ನಂತರ ಹೊಸ ಬಡಾವಣೆಗೆ ಆರೋಪಿಯನ್ನು ಕರೆತಂದು ಊಟ ಮಾಡಿಸಲಾಯಿತು. ಸಂಜೆ 4.30ಕ್ಕೆ ಬೆಂಗಳೂರಿಗೆ ವಾಪಸ್‌ ಕರೆದೊಯ್ದರು. ಡಿವೈಎಸ್ಪಿ ಕೆ.ಎಸ್.ನಾಗರಾಜ್, ಇನ್‌ಸ್ಪೆಕ್ಟರ್ ರಾಧಾಕೃಷ್ಣ ತನಿಖಾ ತಂಡಕ್ಕೆ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT