ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ

ಗುರುವಾರ , ಮಾರ್ಚ್ 21, 2019
25 °C

ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ

Published:
Updated:
ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ತ್ರಿವರ್ಣ ಕನ್ನಡ ಧ್ವಜಕ್ಕೆ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಗುರುವಾರ ಒಪ್ಪಿಗೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ನಾಡ ಹೊಂದುವ ನಿರ್ಣಯಕ್ಕೆ ಎಲ್ಲರಿಂದಲೂ ಬೆಂಬಲ ದೊರೆಯಿತು.

ಚಕ್ರವರ್ತಿ ಮೋಹನ್‌ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ಜೊತೆಗೆ ರಾಜ್ಯದ ಲಾಂಛನ ಇರುವ ಧ್ವಜ ಸಿದ್ಧಪಡಿಸಿದೆ. ಲಾಂಛನದಲ್ಲಿರುವ ‘ಸತ್ಯಮೇವ ಜಯತೆ’ ಎಂಬ ಸಾಲು ಧ್ವಜದಲ್ಲಿ ಇರುವುದಿಲ್ಲ. ಒಂದು ಕಡೆ ಮುದ್ರಿಸಿದರೆ, ಇನ್ನೊಂದು ಕಡೆ ಉಲ್ಟಾ ಕಾಣಲಿದೆ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಸಭೆಯ ಬಳಿಕ ಸಿದ್ದರಾಮಯ್ಯ ತಿಳಿಸಿದರು.

ಕಾನೂನಿನ ಅಂಶಗಳ ಬಗ್ಗೆಯೂ ತಜ್ಞರ ಸಮಿತಿ ಅಧ್ಯಯನ ನಡೆಸಿದ್ದು, ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ತೊಡಕಿಲ್ಲ ಎಂದು ವರದಿ ನೀಡಿದೆ ಎಂದು  ವಿವರಿಸಿದರು.

‘ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದಾಗ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂಬ ಸಲಹೆಯನ್ನು ನಾನೇ ನೀಡಿದ್ದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಂಪುಟ ಸಭೆ ನನಗೆ ನೀಡಿತ್ತು. ಐತಿಹಾಸಿಕ ನಿರ್ಧಾರ ಕೈಗೊಳ್ಳುವಾಗ ಒಡಕಿನ ಧ್ವನಿ ಇರಬಾರದು ಎಂಬ ಕಾರಣಕ್ಕೆ ಸಭೆ ನಡೆಸಿದ್ದೇನೆ. ಕೆಲವರಿಗಿದ್ದ ಗೊಂದಲ ನಿವಾರಿಸಿದ್ದೇನೆ’ ಎಂದು ಅವರು ಹೇಳಿದರು.

‘ನಾಡಧ್ವಜವನ್ನು ನಾವೇ ಘೋಷಣೆ ಮಾಡುವಂತಿಲ್ಲ. ಕೇಂದ್ರದ ಒಪ್ಪಿಗೆ ಬೇಕು. ಹೀಗಾಗಿ ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ. ರಾಷ್ಟ್ರ ಧ್ವಜಕ್ಕಿರುವ ಗೌರವಕ್ಕೆ ನಾಡಧ್ವಜದಿಂದ ಚ್ಯುತಿ ಬರುವುದಿಲ್ಲ. ರಾಷ್ಟ್ರಧ್ವಜದ ಕೆಳಗೆ ರಾಜ್ಯ ಧ್ವಜ ಹಾರಾಡಲಿದೆ ಎಂಬ ಸಂಗತಿಯನ್ನು ನಾವು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಒಪ್ಪಿಗೆ ಸೂಚಿಸುವಂತೆ ಒತ್ತಡವನ್ನೂ ಹೇರುತ್ತೇವೆ’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಕೆ. ಮರುಳಸಿದ್ಧಪ್ಪ, ಹಿರಿಯ ಕವಿ ಸಿದ್ಧಲಿಂಗಯ್ಯ, ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಬಿ.ಟಿ. ಲಲಿತಾ ನಾಯಕ್, ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ರಕ್ಷಣಾ ವೇದಿಕೆಯ ಮತ್ತೊಂದು ಬಣದ ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಲಿಂಗಾಯತ ಸ್ವತಂತ್ರ ಧರ್ಮ ಸಂಪುಟದಲ್ಲಿ ಭಿನ್ನಮತ ಸ್ಫೋಟ

ಬೆಂಗಳೂರು: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ನ್ಯಾ. ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಿನ್ನಮತ ಸ್ಫೋಟವಾಗಿದೆ.

ಈ ವರದಿ ಕುರಿತು ಚರ್ಚಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಂಜೆ ಸಚಿವ ಸಂಪುಟ ಸಭೆ ಸೇರಿತ್ತು. ವರದಿ ಪರ ಹಾಗೂ ವಿರುದ್ಧದ ಜಟಾಪಟಿಯಿಂದಾಗಿ ಮುಖ್ಯಮಂತ್ರಿ ತೀವ್ರ ಇಕ್ಕಟ್ಟಿಗೆ ಸಿಲುಕಿದರು ಎಂದು ಮೂಲಗಳು ತಿಳಿಸಿವೆ.

ತಜ್ಞರ ಸಮಿತಿ ವರದಿ ಒಪ್ಪಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹಾಗೂ ಗಣಿ ಖಾತೆ ಸಚಿವ ವಿನಯ್‌ ಕುಲಕರ್ಣಿ ಹಟ ಹಿಡಿದರು.

ಈ ಮೂವರು ಸಚಿವರ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ‍ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹಾಗೂ ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ವರದಿ ಒಪ್ಪಿಕೊಂಡರೆ ತಾವು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಸಂಪುಟ ಸಭೆಯಲ್ಲಿ ಜಟಾಪಟಿಗಿಳಿದ ಎರಡೂ ಬಣ

ಗಳನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಹರಸಾಹಸ ಪಟ್ಟರು.

‘ಚುನಾವಣೆ ಸಮೀಪಿಸುತ್ತಿದೆ. ಈ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡುವ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಹೇಳಿದರು. ಚರ್ಚೆ ಅಪೂರ್ಣವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry