ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ರಾಜ್ಯಕ್ಕೆ ಎಲ್‌ಇಡಿ: ನಿರ್ಧಾರ

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್‌
Last Updated 8 ಮಾರ್ಚ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇಡೀ ರಾಜ್ಯದಲ್ಲಿ ಹಂತಹಂತವಾಗಿ ಎಲ್ಲ ವಿದ್ಯುತ್‌ ದೀಪಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಎಲ್‌ಇಡಿ ಬಲ್ಬ್‌ಗಳಿಗೆ ಬದಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ತಿಳಿಸಿದರು.

ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟೆರಿ) ಮತ್ತು ‘ಗ್ಲೋಬಲ್ ಸೌತ್’ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸುಸ್ಥಿರ ಕಟ್ಟಡಗಳ ನಿರ್ಮಾಣ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಕಟ್ಟಡಗಳ ತ್ಯಾಜ್ಯ ವಿಲೇವಾರಿಯ ದೊಡ್ಡ ಸವಾಲು ನಮ್ಮೆದುರಿಗೆ ಇದೆ. ಪ್ರತಿಷ್ಠಿತ ಬಡಾವಣೆ ಡಾಲರ್ಸ್‌ ಕಾಲೊನಿಯಲ್ಲಿ ಜನರು ರಾತ್ರಿಯಾಗುತ್ತಿದ್ದಂತೆ ಐಷಾರಾಮಿ ಕಾರುಗಳಲ್ಲಿ ಕಸ ತಂದು ರಸ್ತೆ ಬದಿ ಹಾಕುವುದನ್ನು ಕಾಣುತ್ತಿದ್ದೇವೆ. ತ್ಯಾಜ್ಯದಿಂದ ಇಂಧನ ತಯಾರಿಸಲು ನಾವು ಯೋಜನೆ ರೂಪಿಸಿದ್ದೇವೆ. ಮನೆಗಳ ಚಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೂ ಒತ್ತು ನೀಡಿದ್ದೇವೆ’ ಎಂದರು.

‘ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ದೀರ್ಘ ಕಾಲದಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿವೆ. ಭವಿಷ್ಯದಲ್ಲಿ ಇಂತಹ ಸೆಣಸಾಟ ಜಿಲ್ಲೆ, ಜಿಲ್ಲೆಗಳ ನಡುವೆ, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ನಡುವೆ ಕಾಣಿಸಿದರೂ ಅಚ್ಚರಿಪಡಬೇಕಿಲ್ಲ. ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್‌ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕಿದೆ. ನಗರದ ಹಲವು ಕಟ್ಟಡಗಳಲ್ಲಿ ಎಸ್‌ಟಿಪಿಗಳು ನೆಪಮಾತ್ರಕ್ಕೆ ಇವೆ. ಅವು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎನ್ನುವುದರ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಗಮನ ಇಡಬೇಕಿದೆ’ ಎಂದರು.

ಟೆರಿ ಮಹಾನಿರ್ದೇಶಕ ಡಾ.ಅಜಯ್ ಮಾಥುರ್ ಮಾತನಾಡಿ ‘ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಕಡೆಗೆ ದಾಪುಗಾಲು ಇಡುವಾಗ ಪರಿಸರ ಸುಸ್ಥಿರತೆ ನಿರ್ಲಕ್ಷಿಸುವಂತಿಲ್ಲ. ವೇಗದ ನಗರೀಕರಣ, ಶಕ್ತಿ ಸಂಪನ್ಮೂಲದ ಕೊರತೆ ಹಾಗೂ ಪರಿಸರ ಮಾಲಿನ್ಯ ಹೆಚ್ಚುತ್ತಿರುವಾಗ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯ’ ಎಂದರು.

ಡ್ಯಾನ್‌ಫೋಸ್‌ ಸಿಇಒ ಪಿ.ರವಿಚಂದ್ರನ್‌ ಮಾತನಾಡಿ, ‘ಈಗ ಎಲ್ಲ ಕಡೆಗಳಲ್ಲೂ ಒಂದೇ ರೀತಿ ಮತ್ತು ಒಂದೇ ಬಗೆಯ ಸಾಮಗ್ರಿ ಬಳಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆಯಾ ಪ್ರದೇಶದ ಹವಾಮಾನ ಮತ್ತು ಸ್ಥಳೀಯ ಸಾಮಗ್ರಿಗಳ ಲಭ್ಯತೆಗೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸಿದರೆ ಸುಸ್ಥಿರವಾಗಿಯೂ ಇರುತ್ತವೆ. ದೀರ್ಘ ಬಾಳಿಕೆಯೂ ಬರುತ್ತವೆ’ ಎಂದರು.

ಸಮ್ಮೇಳನದ ಪ್ರದರ್ಶನ ಮಳಿಗೆಗಳಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಗಳು, ನಿರ್ಮಾಣ ಕ್ಷೇತ್ರದ ಹೊಸ ಆವಿಷ್ಕಾರ, ಪ್ರೀ- ಕಾಸ್ಟ್ ತಂತ್ರಜ್ಞಾನ ಮತ್ತು ರೇಡಿಯಂಟ್ ಕೂಲಿಂಗ್ ತಂತ್ರಜ್ಞಾನ ಪ್ರದರ್ಶಿಸಿದವು. ಚಿಕ್ಕಮಗಳೂರು ಮೂಲದ ಫಾರ್ಮ ಲ್ಯಾಂಡ್‌ ಕಂಪನಿಯ ಮಳೆ ನೀರು ಸಂಗ್ರಹ ತಂತ್ರಜ್ಞಾನದ ಮಾದರಿ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT