ಕೊನೆಯ ದಿನವೂ ಜಮೀನು ವಶ

ಮಂಗಳವಾರ, ಮಾರ್ಚ್ 26, 2019
27 °C

ಕೊನೆಯ ದಿನವೂ ಜಮೀನು ವಶ

Published:
Updated:
ಕೊನೆಯ ದಿನವೂ ಜಮೀನು ವಶ

ಬೆಂಗಳೂರು: ವರ್ಗಾವಣೆಗೊಂಡಿರುವ ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಕೊನೆಯ ದಿನವೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.

ಗುರುವಾರದ ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಮುನವರ್ತೆ ಕಾವಲ್‌ ಗ್ರಾಮದಲ್ಲಿ 85 ಎಕರೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ರಾಮೋಹಳ್ಳಿ ಗ್ರಾಮದಲ್ಲಿ 9 ಎಕರೆ ಜಮೀನನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ ₹ 480 ಕೋಟಿ ಎಂದು ವಿ.ಶಂಕರ್‌ ತಿಳಿಸಿದರು.

ಮುನವರ್ತೆ ಕಾವಲ್‌ ಗ್ರಾಮದ ಸರ್ವೇನಂಬ್ರ 18/18 ರಲ್ಲಿ 43 ಎಕರೆ 18 ಗುಂಟೆ ಜಮೀನು ಇದೆ. ಇದರಲ್ಲಿ 42 ಎಕರೆ 08 ಗುಂಟೆ ಜಮೀನನ್ನು ಕೆ.ಎಸ್‌.ಹುಚ್ಚವೀರಪ್ಪ ಎಂಬುವರು ಗಜೇಂದ್ರ ಸಿಂಗ್‌ ಅವರಿಂದ ₹ 14.77 ಕೋಟಿಗೆ 2012ರಲ್ಲಿ ಖರೀದಿಸಿದ್ದರು. ಸರ್ವೇ ನಂಬರ್‌ 18/19ರಲ್ಲಿ ಒಟ್ಟು 44 ಎಕರೆ 16 ಗುಂಟೆ ಜಮೀನು ಇದೆ. ಇದರಲ್ಲಿ 43 ಎಕರೆ ಜಮೀನನ್ನು ಬಿ.ಧರ್ಮಪ್ಪ ಎಂಬುವರು ಹಂಸದೇವಿ ಅವರಿಂದ ₹ 15.05 ಕೋಟಿಗೆ ಖರೀದಿಸಿದ್ದರು.

‘ಈ ಜಮೀನುಗಳ ಖಾತಾ ಮಾಡಿಸುವ ಸಂದರ್ಭದಲ್ಲಿ ಅವರಿಬ್ಬರೂ ಕೃಷಿ ಕುಟುಂಬಕ್ಕೆ ಸೇರಿದ ಕುರಿತು ಹಾಗೂ ಆದಾಯದ ಮೂಲಗಳ ಕುರಿತು ದಾಖಲೆಗಳನ್ನು ಹಾಜರುಪಡಿಸಿರಲಿಲ್ಲ. 2015ರಲ್ಲಿ ಈ ಕುರಿತು 1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕಲಂ 83ರ ಅಡಿ ಅವರಿಬ್ಬರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇದರ ವಿಚಾರಣೆಗೂ ನಿರಂತರ ಗೈರಾಗಿದ್ದರು. ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ಇದೇ ಫೆಬ್ರುವರಿ 6ರಂದು ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ಮಾಡಿತ್ತು’ ಎಂದು ಶಂಕರ್‌ ತಿಳಿಸಿದರು.

‘ಇಲ್ಲಿ ಪ್ರತಿ ಎಕರೆಗೆ ₹ 5 ಕೋಟಿ ಮೌಲ್ಯ ಇದೆ. ಮುಟ್ಟುಗೋಲು ಹಾಕಿಕೊಂಡ ಜಮೀನಿನ ಆಸುಪಾಸಿನಲ್ಲಿದ್ದ  3 ಎಕರೆ ಖರಾಬು ಜಮೀನು ಕೂಡಾ ಒತ್ತುವರಿಯಾಗಿದ್ದು, ಅದನ್ನೂ ವಶಕ್ಕೆ ಪಡೆದಿದ್ದೇವೆ’ ಎಂದರು.

ರಾಮೋಹಳ್ಳಿ ಗ್ರಾಮದ ಸರ್ವೆ ನಂಬರ್‌ 90ರಲ್ಲಿ  9 ಎಕರೆ 28 ಗುಂಟೆ ಗೋಮಾಳ ಜಾಗವಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಈ ಜಾಗವನ್ನು ಬಗರ್‌ಹುಕುಂ ಯೋಜನೆಯಡಿ ಕೆಲವರು ಮಂಜೂರು ಮಾಡಿಸಿಕೊಂಡಿದ್ದರು. ಈ ಕುರಿತು ಜಿಲ್ಲಾಡಳಿತವು ಭೂಕಂದಾಯ ಕಾಯ್ದೆಯ ಕಲಂ 108 (ಕೆ) ಅಡಿ ಪ್ರಕರಣ ದಾಖಲಿಸಿಕೊಂಡಿತ್ತು.

ಎಚ್‌ ಮೈಲಾರಯ್ಯ ಅವರಿಗೆ ಮಂಜೂರಾಗಿದ್ದ 2ಎಕರೆ 20 ಗುಂಟೆ, ಕೃಷ್ಣಪ್ಪ ಅವರ 2 ಎಕರೆ, ಅನಿತಾ ಆರ್‌.ಪ್ರಭು ಅವರ 2 ಎಕರೆ, ಎ.ರಾಜೇಂದ್ರ ಕುಮಾರ್‌ ಅವರ 2 ಎಕರೆ 38 ಗುಂಟೆ ಜಮೀನುಗಳನ್ನು ಮತ್ತೆ ಸ್ವಾಧೀನಕ್ಕೆ ಪಡೆಯುವಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ಇದೇ ಫೆಬ್ರುವರಿ 15ರಂದು ಆದೇಶ ಮಾಡಿತ್ತು. ಈ ಜಮೀನುಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ.

‘ರಾಮೋಹಳ್ಳಿ ಗ್ರಾಮದಲ್ಲಿ ಒಟ್ಟು 50 ಕೋಟಿ ಮೌಲ್ಯದ ಜಮೀನು ವಶಕ್ಕೆ ಪಡೆಯಲಾಗಿದೆ. ಈ ಜಾಗಕ್ಕೆ ತಂತಿ ನಿರ್ಮಿಸಲು ಕ್ರಮವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌, ಉಪವಿಭಾಗಾಧಿಕಾರಿ ಬಿ.ಅರ್‌.ಹರೀಶ್‌ ನಾಯಕ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry