ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ ಉಳಿಸಿ, ಮೂಢನಂಬಿಕೆ ತೊಡೆದುಹಾಕಿ: ವೀರೇಂದ್ರ ಹೆಗ್ಗಡೆ

Last Updated 8 ಮಾರ್ಚ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಂಬಿಕೆ, ಅಪನಂಬಿಕೆ ಹಾಗೂ ಮೂಢನಂಬಿಕೆ ಸಮಾಜದಲ್ಲಿ ಅಸ್ತಿತ್ವ ಕಂಡುಕೊಂಡಿವೆ. ಅವುಗಳನ್ನು ಗುರುತಿಸುವುದು ಕಷ್ಟ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಭಾರತೀಯ ವಿದ್ಯಾಭವನವು ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ನಂಬಿಕೆ ಮತ್ತು ಅದರಾಚೆಗೆ’ ಕುರಿತ ಜಾಗತಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಗುರಿ ತಲುಪಲು ಅನೇಕ ಮಾರ್ಗಗಳಿದ್ದರೂ, ಅವುಗಳಲ್ಲಿ ಉತ್ತಮವಾದವುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ವೇಳೆ ನಂಬಿಕೆ ಉಳಿಸಿಕೊಂಡು ಅಪನಂಬಿಕೆ ಹಾಗೂ ಮೂಢನಂಬಿಕೆಗಳನ್ನು ತೊಡೆದುಹಾಕಬೇಕು. ಸೂರ್ಯನಿಗೆ ಮೋಡ ಅಡ್ಡ ಬಂದ ಹಾಗೆ ಮೂಢನಂಬಿಕೆಯು ನಂಬಿಕೆಯನ್ನು ಮರೆಮಾಚುತ್ತದೆ ಎಂದು ಹೇಳಿದರು.

‘ನಂಬಿಕೆಗಳಲ್ಲಿ ಇತ್ತೀಚೆಗೆ ಜೊಳ್ಳು ಜಾಸ್ತಿಯಾಗಿ ಅದರೊಳಗಿನಿಂದ ಕಾಳುಗಳನ್ನು ಹೆಕ್ಕಬೇಕಾದ ಸ್ಥಿತಿಗೆ ಬಂದಿದ್ದೇವೆ. ಜೊಳ್ಳುಗಳ ನಡುವೆ ಕಾಳುಗಳ ಹುಡುಕಾಟ ಕಷ್ಟವಾದರೂ ಹುಡುಕಲೇಬೇಕು’ ಎಂದು ಹೇಳಿದರು.

‘ಧರ್ಮಸ್ಥಳಕ್ಕೆ ಬರುವುದು ಪ್ರಾರ್ಥನೆ ಸಲ್ಲಿಸುವುದಕ್ಕೇ ಹೊರತು ಸಂಶಯ ಪಡುವುದಕ್ಕಲ್ಲ. ಆಗದೆ ಇರುವುದನ್ನು ಆಗುವಂತೆ ಮಾಡುವುದು ದೇವರು. ಅದು ನಂಬಿಕೆ. ಆದರೆ, ಧರ್ಮಸ್ಥಳಕ್ಕೆ ಬರುವ ಕೆಲವರು, ಸ್ವಾಮಿ ನನಗೆ ಮಕ್ಕಳು ಆಗುತ್ತವೆಯೇ ಎಂದು ಕೇಳುತ್ತಾರೆ. ಅದಕ್ಕೆ ಟಿ.ವಿ.ವಾಹಿನಿಗಳಿಗೆ ಕರೆ ಮಾಡಿ ಎಂದು ಉತ್ತರಿಸುವೆ’ ಎಂದು ಚಟಾಕಿ ಹಾರಿಸಿದರು.

ನಂಬಿಕೆಗಳು ದಾರಿ ತಪ್ಪಿದಾಗ ಸಮಾಜ ಸುಧಾರಕರು ಹುಟ್ಟಿಕೊಳ್ಳುತ್ತಾರೆ. ನಂಬಿಕೆ ಆಧಾರದ ಮೇಲೆ ಸರಿ ದಾರಿಯಲ್ಲಿ ನಡೆಯುವಂತೆ ತಿಳಿಸುತ್ತಾರೆ ಎಂದು ಹೇಳಿದರು.

‘ನಮ್ಮ ಪೂರ್ವಜರು ದೂರದರ್ಶಕದ ಸಹಾಯವಿಲ್ಲದೆ ಬಾಹ್ಯಾಕಾಶ ಗುರುತಿಸಿದ್ದರು. ಕೇವಲ ತಪಸ್ಸು ಹಾಗೂ ಜ್ಞಾನದಿಂದ ಗ್ರಹಗಳು ಎಂದರೇನು ಮತ್ತು ಅವುಗಳ ಚಲನೆಯಿಂದ ಮನುಷ್ಯನ ಮೇಲೆ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಅರಿತಿದ್ದರು. ಜೋತಿಷ್ಯಕ್ಕೆ ವೈಜ್ಞಾನಿಕ ತಳಹದಿ ಇದೆ’ ಎಂದು ಪ್ರತಿಪಾದಿಸಿದರು.

‘ನಮ್ಮ ಜ್ಞಾನವನ್ನು ದೇಶದ ಹೊರಗೆಲ್ಲೂ ಪ್ರಸಾರ ಮಾಡಬಾರದೆಂಬ ಅಲಿಖಿತ ನಿಯಮ ವಿದ್ವಾಂಸರಲ್ಲಿ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ವಿದೇಶಗಳಿಗೆ ನಮ್ಮ ವಿದ್ವಾಂಸರು ಹೋಗಿ ಜ್ಞಾನ ಹಂಚಿಕೊಳ್ಳುತ್ತಿದ್ದಾರೆ. ಹಿಂದೆ ಪ್ರಶ್ನೆ ಮಾಡಲು ಅವಕಾಶ ಇರಲಿಲ್ಲ. ಈಗ ಅದಕ್ಕೆ ಅವಕಾಶ ಸಿಕ್ಕಿದೆ’ ಎಂದು ಹೇಳಿದರು.

ನೈರೋಬಿ ಪ್ರತಿನಿಧಿ ಸಾಲಾಟನ್ ಒಲೆ ನಟುಟು, ‘ಶಾಲೆಗೆ ಹೋಗದೆ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳನ್ನು ನನ್ನ ಪೂರ್ವಜರಿಂದ ಕಲಿತುಕೊಂಡೆ. ಆ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಹೆಮ್ಮೆ ಇದೆ. ಆ ಜ್ಞಾನವನ್ನು ಮಕ್ಕಳಿಗೂ ಕಲಿಸುವೆ. ಅದು ಹಾಗೆಯೇ ಮುಂದುವರೆಯಲಿದೆ’ ಎಂದರು.

ಭಾರತೀಯ ಅಂತರಿಕ್ಷ ಇಲಾಖೆಯ ಸಲಹೆಗಾರ ಡಾ.ಆರ್.ರಾಧಾಕೃಷ್ಣನ್, ‘ಈ ಮೊದಲು ಬಾಹ್ಯಾಕಾಶದ ಬಗ್ಗೆ ಚಿಂತನೆ ಮಾಡಲಾಗುತ್ತಿತ್ತು. ಆದರೆ, ಈಗ ಅದರ ಆಚೆಗೂ ಸಂಶೋಧನೆ ನಡೆಯುತ್ತಿದೆ. ಆದರೆ, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಬ್ರಹ್ಮಾಂಡದ ಕಲ್ಪನೆ ಕಟ್ಟಿಕೊಟ್ಟಿದ್ದರು. ಅವರ ನಂಬಿಕೆ ಈಗ ಸತ್ಯವಾಗಿದೆ’ ಎಂದರು.

‘ವಿಜ್ಞಾನಕ್ಕೆ ನಂಬಿಕೆಯೇ ತಳಹದಿ’
ನಂಬಿಕೆಯ ತಳಹದಿಯಲ್ಲೇ ವಿಜ್ಞಾನ ಬಂದಿದೆ. ವಿಜ್ಞಾನ ಬೆಳೆದು ಬಂದ ಇತಿಹಾಸ ನೋಡಿದರೆ ಅದು ಗೊತ್ತಾಗುತ್ತದೆ ಎಂದು ಬೆಂಗಳೂರಿನ ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಹೇಳಿದರು.

ಕನಸೊಂದು ಬಿದ್ದಿದ್ದರಿಂದ ನ್ಯೂಟನ್‌ನಲ್ಲಿ ವಿಜ್ಞಾನದ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಅದರ ಆಧಾರವಾಗಿ ಪ್ರಯೋಗ ಮಾಡಿದಾಗ ಅದು ನನಸಾಗಿದೆ. ಭೌತವಿಜ್ಞಾನದ ಅನೇಕ ನಿಯಮಗಳು ಕನಸುಗಳ ನೆಲೆಗಟ್ಟಿನಿಂದಲೇ ರೂಪುಗೊಂಡಿವೆ ಎಂದರು.

ವಿಜ್ಞಾನ ಒಂದು ಪರಿಕಲ್ಪನೆ. ಪ್ರಯೋಗದ ಮೂಲಕ ಸಂಶೋಧನೆಯನ್ನು ಪರೀಕ್ಷಿಸಲಾಗುತ್ತದೆ. ನಂಬಿಕೆಯನ್ನು ಪರೀಕ್ಷೆ ಮಾಡಲು ಸಾಧ್ಯವಿಲ್ಲ. ನಂಬಿಕೆಯುಳ್ಳ ಜನರಲ್ಲಿ ‘ನಿಮ್ಮ ಬಳಿ ಆತ್ಮವಿದೆಯೇ’ ಎಂದು ಕೇಳುವುದೂ ಹಾಗೂ ವಿಜ್ಞಾನಿಗಳಲ್ಲಿ ‘ಎಲೆಕ್ಟ್ರಾನ್ ಇದೆಯೇ’ ಎಂದು ಕೇಳುವುದು, ಎರಡೂ ಒಂದೇ. ವಿಜ್ಞಾನದ ಅಧ್ಯಯನದಂತೆ ನಂಬಿಕೆಯಲ್ಲೂ ಅಧ್ಯಯನ ನಡೆಯಬೇಕು ಎಂದು ಸಲಹೆ ನೀಡಿದರು.

**

ಒಂದು ವಿಚಾರವನ್ನು ಹಲವು ದೃಷ್ಟಿಕೋನಗಳಲ್ಲಿ ನೋಡಬೇಕು. ಆದರೆ, ಕೆಲವರು ತಾವು ನೋಡಿದ್ದನ್ನೇ ನಂಬಿಕೆ ಎಂದು ಭಾವಿಸಿದ್ದಾರೆ. ಆ ಬಗ್ಗೆ ಪರಮಾರ್ಶೆ ಮಾಡಿ ನಂಬಬೇಕು

– ಮಮ್ತಾಜ್ ಅಲಿ, ಆಧ್ಯಾತ್ಮಿಕ ಚಿಂತಕ

ಭಯವಿದ್ದಾಗ ಹಾಗೂ ವಿಶ್ವಾಸ ಇಲ್ಲದಿದ್ದಾಗ ನಮ್ಮಲ್ಲಿ ನಂಬಿಕೆ ಮೂಡುತ್ತದೆ. ಅದು ಇಲ್ಲವಾದರೆ ನಾವು ಖಾಲಿ. ಸ್ವಲ್ಪವೂ ನಂಬಿಕೆ ಇಲ್ಲದಿದ್ದರೆ ಜೀವನವೇ ನಾಶವಾಗುತ್ತದೆ.

–ಎಂ.ಎನ್.ವೆಂಕಟಾಚಲಯ್ಯ, ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT