ಕನ್ನಡ ಕಲಿಯಿರಿ, ಇಲ್ಲವೇ ಜಾಗ ಖಾಲಿ ಮಾಡಿ

7
ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎ.ಜೆ.ಸದಾಶಿವ ಕಿಡಿ ನುಡಿ

ಕನ್ನಡ ಕಲಿಯಿರಿ, ಇಲ್ಲವೇ ಜಾಗ ಖಾಲಿ ಮಾಡಿ

Published:
Updated:
ಕನ್ನಡ ಕಲಿಯಿರಿ, ಇಲ್ಲವೇ ಜಾಗ ಖಾಲಿ ಮಾಡಿ

ಬೆಂಗಳೂರು: ‘ನೀವು ನೆಲೆಸಿರುವ ರಾಜ್ಯದ ಭಾಷೆಯಾದ ಕನ್ನಡವನ್ನು ಕಲಿಯಿರಿ, ಇಲ್ಲ ಜಾಗ ಖಾಲಿ ಮಾಡಿ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಕಿಡಿ ಕಾರಿದರು.

ಕನ್ನಡ ಬೇಡವೆಂದವರಿಗೆ ಕರ್ನಾಟಕದಲ್ಲಿ ನೆಲೆಸಲು ಅವಕಾಶವಿರಬಾರದು ಎಂದು ಸ್ಪಷ್ಟವಾಗಿ ಹೇಳಿದರು.

ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕದ ಆಶ್ರಯದಲ್ಲಿ ಸೀಗೇಹಳ್ಳಿ ದ್ವಾರದ ಬಳಿ ಆರ್‌.ಗೋಪಾಲ ಸ್ವಾಮಿ ಅಯ್ಯರ್‌ ವೇದಿಕೆಯಲ್ಲಿ ಗುರುವಾರ ಆರಂಭವಾದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನೆಲೆಸಿರುವವರು ಕನ್ನಡ ಕಲಿಕೆಗೆ ನಿರಾಸಕ್ತಿ ತೋರಿಸುತ್ತಿರುವ ಕುರಿತು ಕಟುಶಬ್ದಗಳಿಂದ ಟೀಕಿಸಿದ ಅವರು, ‘ನಾಡಭಾಷೆಯನ್ನು ಕಲಿಯದವ, ಪ್ರೀತಿಸದವ ನಾಡನ್ನು ಹೇಗೆ ತಾನೇ ಪ್ರೀತಿಸಿಯಾನು. ಅಂತಹವರಿಗೆ ಧಿಕ್ಕಾರವಿರಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರೀತಿಯಿಂದ, ವಿಶ್ವಾಸದಿಂದ ಕೇಳಿಕೊಳ್ಳುತ್ತೇನೆ. ನೀವು ನಿಮ್ಮ ಮಾತೃಭಾಷೆಯನ್ನು ಗೌರವಿಸುವ ಹಾಗೆ ನೆಲೆಸಿರುವ ರಾಜ್ಯದ ಭಾಷೆಯನ್ನೂ ಗೌರವಿಸಿ. ಪರದೇಶಿ ಭಾಷೆಯ ದಾಸ್ಯದಿಂದ ಬಿಡುಗಡೆ ಹೊಂದಿ. ನಿಮಗಿಷ್ಟವಾದ ಭಾಷೆಯೊಡನೆ ಕನ್ನಡವನ್ನೂ ಕಲಿಯಿರಿ’ ಎಂದು ಅನ್ಯಭಾಷಿಕರಲ್ಲಿ ಮನವಿ ಮಾಡಿದರು.

ಮಕ್ಕಳಿಗೆ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕಾದ ಅಗತ್ಯವನ್ನು ಶಿಕ್ಷಣ ತಜ್ಞರು ಮನವರಿಕೆ ಮಾಡಿಕೊಟ್ಟಿದ್ದರೂ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಹೆಚ್ಚುತ್ತಿವೆ. ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದು ತಾಯಿನುಡಿಯ ಬಗ್ಗೆ ಸರ್ಕಾರ ಹೊಂದಿರುವ ಅನಾದರವನ್ನು, ಅಭಿಮಾನಶೂನ್ಯತೆಯನ್ನು ತೋರಿಸುತ್ತಿದೆ. ಇದಕ್ಕೆ ಸರ್ಕಾರದ ಭಾಗವೇ ಆಗಿರುವ ರಾಜಕಾರಣಿಗಳೇ ನೇರ ಹೊಣೆ ಎಂದರು.

ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳನ್ನು ಆಕರ್ಷಿಸಲಾಗುತ್ತಿದೆ. ಶಿಕ್ಷಣ ಈಗ ಪವಿತ್ರ ಕಾರ್ಯವಾಗಿ ಉಳಿದಿಲ್ಲ. ಕ್ಷಿಪ್ರವಾಗಿ ಭಾರಿ ಲಾಭ ತಂದುಕೊಡುವ ಉದ್ಯಮವಾಗಿದೆ. ವ್ಯಾಪಾರದಲ್ಲಿ ದ್ರೋಹ ಚಿಂತನೆಯೇ ಪ್ರಧಾನ. ಬಂಡವಾಳ ಹೂಡಿ, ಯಥೇಚ್ಛ ಲಾಭ ಸಂಪಾದಿಸುವುದು ಅವರ ಉದ್ದೇಶ. ಈ ಪಾಪಕಾರ್ಯದಲ್ಲಿ ಎಲ್ಲ ರಾಜಕಾರಣಿಗಳೂ ಪಾಲುದಾರರು ಎಂದು ಟೀಕಿಸಿದರು.

‘ಕೆಲವು ರಾಜಕಾರಣಿಗಳು ತಮ್ಮ ಹೆಸರಿನಲ್ಲಿ, ಹೆಂಡತಿ– ಮಕ್ಕಳ ಹೆಸರಿನಲ್ಲಿ, ಬಂಧುಗಳ ಹೆಸರಿನಲ್ಲಿ ಈ ಪಾಪದ ಉದ್ಯಮ ನಡೆಸಿ ಕೋಟ್ಯಧೀಶರಾಗಿದ್ದಾರೆ. ಇವರಿಗೆ ಕನ್ನಡದ ಬಗ್ಗೆ ಯಾವ ಕಾಳಜಿಯೂ ಇಲ್ಲ. ಕನ್ನಡದ ಕೊರಳನ್ನು ಕಿಂಚಿತ್‌ ನಾಚಿಕೆಯೂ ಇಲ್ಲದೇ ಹಿಸುಕುತ್ತಿರುವ ಇಂಥವರನ್ನು ಅಧಿಕಾರಕ್ಕೆ ತಂದರೆ ನಮ್ಮ ಭಾಷೆಯ ಕಗ್ಗೊಲೆಯನ್ನು ನಾವೇ ಪ್ರೋತ್ಸಾಹಿಸಿದಂತೆ. ಈ ಬಗ್ಗೆ ಮತದಾರರು ತೀವ್ರವಾಗಿ ಚಿಂತಿಸಬೇಕು’ ಎಂದರು.

ಬೆಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಪೋಷಕರು ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದ ಶಾಲೆಗೆ ಕಳುಹಿಸುತ್ತಿದ್ದಾರೆ. ಇಂಗ್ಲಿಷ್‌ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಕನ್ನಡದ ತಂದೆ ತಾಯಿಗಳ ಮನಸ್ಸು ಬದಲಾಯಿಸಲು ಹೊಸತೊಂದು ಮಾರ್ಗವನ್ನು ಕಂಡುಕೊಳ್ಳಬೇಕು. ಖಾಸಗಿ ಶಾಲೆಗಳೂ ಕನ್ನಡವನ್ನು ಪ್ರಧಾನ ಭಾಷೆಯಾಗಿ, ಇಂಗ್ಲಿಷ್‌ಗೆ ಸರಿಸಮಾನವಾಗಿ ಬೋಧಿಸಬೇಕು. ಈ ನಿಟ್ಟಿನಲ್ಲಿ ಪರಿಷತ್ತಿನ ಅಂಗಸಂಸ್ಥೆಗಳು ಹಾಗೂ ಕನ್ನಡದ ಸಾಂಸ್ಕೃತಿಕ ಸಂಸ್ಥೆಗಳು ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸ್ಮರಣ ಸಂಚಿಕೆ ‘ಸಾಹಿತ್ಯ ಸಿರಿ’ಯನ್ನು ಶಿಕ್ಷಣ ತಜ್ಞ ವೂಡೆ ಪಿ.ಕೃಷ್ಣ ಬಿಡುಗಡೆ ಮಾಡಿದರು. ಎ.ವಿ.ಲಕ್ಷ್ಮಿನಾರಾಯಣ್‌ ಇದನ್ನು ಸಂಪಾದಿಸಿದ್ದಾರೆ.

ಕರ್ನಾಟಕದ ಮಹಿಳಾ ಹೋರಾಟಗಳ ಕುರಿತು ವಿಚಾರಗೋಷ್ಠಿ, ಯುವ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಾಹಿತ್ಯ ಹಬ್ಬದ ಅಂಗವಾಗಿ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನವು ಶುಕ್ರವಾರ ಸಮಾರೋಪಗೊಳ್ಳಲಿದೆ.

ಕನ್ನಡ ಜಾಗೃತಿ ಮೆರವಣಿಗೆ

ಮಾಗಡಿ ರಸ್ತೆಯ ಬಳಿಯ ನೈಸ್‌ರಸ್ತೆ ಜಂಕ್ಷನ್‌ನಿಂದ ಸಮ್ಮೇಳನ ಸಭಾಂಗಣದವರೆಗೆ ಕನ್ನಡ ಜಾಗೃತಿ ಮೆರವಣಿಗೆ ನಡೆಯಿತು. ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಪೀಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಚಾಲನೆ ನೀಡಿದರು.

ಭುವನೇಶ್ವರಿ ಪ್ರತಿಮೆಯನ್ನು ಕೂರಿಸಿದ್ದ ಅಲಂಕೃತ ವಾಹನದಲ್ಲಿ ಸ್ವಾಮೀಜಿ ಹಾಗೂ ಎ.ಜೆ.ಸದಾಶಿವ ಅವರನ್ನು ಕರೆತರಲಾಯಿತು.

ಕಲಶ ಹೊತ್ತ ಮಹಿಳೆಯರು, ಜಾನಪದ ಕಲಾ ತಂಡಗಳು ಭಾಗವಹಿಸಿದವು. ನಂದಿಕೋಲು, ಪಟಕುಣಿತ, ಕಂಸಾಳೆ, ಡೊಳ್ಳುಕುಣಿತ. ಯಕ್ಷಗಾನ ಹಾಗೂ ಕೋಲಾಟ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು.

‘ಪದೇ ಪದೇ ಸಮ್ಮೇಳನ ಒಳ್ಳೆಯದಲ್ಲ’

ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ವಾರ್ಟ್‌ ಮಟ್ಟಗಳಲ್ಲಿ ಪದೇ ಪದೇ ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ಇದರಿಂದ ಸಾಹಿತ್ಯ ಸಮ್ಮೇಳನದ ನಿಜವಾದ ಉದ್ದೇಶ ಈಡೇರುತ್ತಿಲ್ಲ. ಇವುಗಳಲ್ಲಿನ ನಿರ್ಣಯಗಳು ಏನಾದವು ಎಂಬ ಬಗ್ಗೆ ಅರಿವೇ ಇರುವುದಿಲ್ಲ ಎಂದು ಸದಾಶಿವ ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಣಯ ಮಂಡನೆ ನಾಮಕಾವಸ್ತೆ ಆಗಬಾರದು. ಅವುಗಳ ಜಾರಿಗೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕು. ದಕ್ಷಿಣ ಭಾರತ ವಿವಿಧ ಭಾಷೆಗಳು ಸೇರಿಕೊಂಡು ಐದು ವರ್ಷಗಳಿಗೊಮ್ಮೆ ಸರ್ವ ಭಾಷಾ ಸಾಹಿತ್ಯ ಸಮ್ಮೇಳನವನ್ನು ಆಚರಿಸಬೇಕು. ಪ್ರತಿ ಮೂರು ವರ್ಷಗಳಿಗೊಮ್ಮೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು, ಪ್ರತಿ ಎರಡು ವರ್ಷಗಳಿಗೊಮ್ಮೆ ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಏರ್ಪಡಿಸಬೇಕು. ತಾಲ್ಲೂಕು, ಹೋಬಳಿ ಹಾಗೂ ವಾರ್ಡ್‌ ಮಟ್ಟದ ಸಮ್ಮೇಳನಗಳು ಪ್ರತಿ ವರ್ಷ ನಡೆಸಬಹುದು ಎಂದು ಅವರು ಸಲಹೆ ನೀಡಿದರು.

ಕನ್ನಡ ಧ್ವಜ ಅಂಗೀಕಾರ– ಸಮ್ಮೇಳನದಲ್ಲಿ ಹರ್ಷ

ಹೊಸತಾಗಿ ವಿನ್ಯಾಸಗೊಳಿಸಿದ ಕನ್ನಡ ಧ್ವಜಕ್ಕೆ ರಾಜ್ಯ ಸರ್ಕಾರವು ಅಂಗೀಕಾರ ನೀಡಿದ್ದಕ್ಕೆ ಸಮ್ಮೇಳನದಲ್ಲಿ ಸ್ವಾಗತಿಸಲಾಯಿತು.

ಸಭಿಕರೆಲ್ಲ ಎದ್ದು ನಿಂತು ಚಪ್ಪಾಳೆ ಬಡಿಯುವ ಮೂಲಕ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸಿದರು.

‘ನಮಗೆ ರಾಷ್ಟ್ರಧ್ವಜದಷ್ಟೇ ನಾಡ ಧ್ವಜವೂ ಪವಿತ್ರವಾದುದು. ರಾಷ್ಟ್ರಧ್ವಜಕ್ಕೆ ನೀಡುವಷ್ಟೇ ಗೌರವವನ್ನು ಇದಕ್ಕೂ ನೀಡಬೇಕು’ ಎಂದು ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ತಿಳಿಸಿದರು.

*

ಕರ್ನಾಟಕ  ರಚನೆಯಾಗಿದ್ದು ಕನ್ನಡದ ಏಕತೆಗಾಗಿ. ಆದರೆ, ಇಂಗ್ಲಿಷ್‌ ವ್ಯಾಮೋಹದಿಂದಾಗಿ ಕನ್ನಡಕ್ಕೆ ಕನ್ನಡಿಗರೇ ಹಿತಶತ್ರುಗಳಾಗಿದ್ದಾರೆ.

– ಎ.ಜೆ.ಸದಾಶಿವ, ಸಮ್ಮೇಳನದ ಸರ್ವಾಧ್ಯಕ್ಷ

*

ಕನ್ನಡದ ಕುರಿತು ಪ್ರೀತಿಗಿಂತ ಹೆಚ್ಚಾಗಿ ಭಕ್ತಿ ಇರಬೇಕು. ಭಕ್ತಿಯು ಸಮರ್ಪಣಾ ಭಾವ. ಇಲ್ಲಿ ಸ್ವಾರ್ಥಕ್ಕೆ ಅವಕಾಶ ಇಲ್ಲ.

– ಗೀತಾ ರಾಮಾನುಜಂ, ಶಿಕ್ಷಣ ತಜ್ಞೆ

*

ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಯಕ್ಷಗಾನ ಪ್ರಸ್ತುತ ಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry