ರಾಜಧಾನಿಯಲ್ಲಿ ಮಹಿಳಾ ದಿನದ ಕಲರವ

7

ರಾಜಧಾನಿಯಲ್ಲಿ ಮಹಿಳಾ ದಿನದ ಕಲರವ

Published:
Updated:
ರಾಜಧಾನಿಯಲ್ಲಿ ಮಹಿಳಾ ದಿನದ ಕಲರವ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ನಗರದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು. ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಮಹಿಳಾ ಸಿಬ್ಬಂದಿಗೆ ವಿವಿಧ ಸೌಕರ್ಯಗಳನ್ನು ನೀಡಲಾಯಿತು.

ಮಹಿಳೆಯರಿಗೆ ಪ್ರಶಸ್ತಿ: ಉತ್ತಮವಾಗಿ ಕಾರ್ಯನಿರ್ವಹಿಸಿದ 57 ಮಹಿಳಾ ಸಿಬ್ಬಂದಿಗೆ ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್ ಯಾದವ್ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಕೌಶಲಾಭಿವೃದ್ಧಿ ತರಬೇತಿ: ಆರ್‌.ವಿ.ದೇವರಾಜ್‌ ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಕೌಶಲಾಭಿವೃದ್ಧಿ ಮಂಡಳಿ ವತಿಯಿಂದ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗಿತ್ತು. ಪ್ರತಿಷ್ಠಾನದ ಅಧ್ಯಕ್ಷೆ ಮಮತಾ ದೇವರಾಜ್, ‘ಮಹಿಳೆಯರು ಕೌಶಲ ತರಬೇತಿ ಪಡೆದು ಉದ್ಯೋಗಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು. ಶುಕ್ರವಾರ ಬೃಹತ್ ಉದ್ಯೋಗ ಮೇಳ ನಡೆಯಲಿದೆ’ ಎಂದು ಹೇಳಿದರು.

ಎಂಜಿನಿಯರಿಂಗ್‌ನಲ್ಲಿ ಮಹಿಳೆ

ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ‘ಎಂಜಿನಿಯರಿಂಗ್‌ನಲ್ಲಿ ಮಹಿಳೆ’ ಎನ್ನುವ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳ ಸಾಧಕಿಯರು ಅನುಭವ  ಹಂಚಿಕೊಂಡರು. ನಗರದ ವಿವಿಧ ಕಾಲೇಜುಗಳ 485 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅಂಚೆ ಲಕೋಟೆ ಬಿಡುಗಡೆ: ಜ‌ಲಮಂಡಳಿ ನೌಕರರ ಸಂಘ ಹಾಗೂ ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಮಾಜದಲ್ಲಿ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡಬೇಕು’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಸುನಂದಾ ಜಯರಾಮ್‌, ’ಸಂವಿಧಾನಾತ್ಮಕವಾಗಿ ಇರುವ ಹಕ್ಕುಗಳು ಎಲ್ಲಾ ಮಹಿಳೆಯರಿಗೂ ದೊರೆಯಬೇಕು. ಶೋಷಣೆಯನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕು. ತುಳಿತಕ್ಕೆ ಒಳಗಾಗುವವರು ಸಿಡಿಯುವವರಿಗೂ ದೌರ್ಜನ್ಯ ನಿಲ್ಲುವುದಿಲ್ಲ’ ಎಂದು ಹೇಳಿದರು.

ವಿನೂತನ ಸ್ಪರ್ಧೆ: ಬನಶಂಕರಿಯ ಸಾಗರ್ ಆಸ್ಪತ್ರೆಯಲ್ಲಿ ವಿನೂತನ ಸ್ಪರ್ಧೆಗಳನ್ನು ಆಯೋಜಿಸಿತ್ತು. ಅಡುಗೆ ಸಿದ್ಧಪಡಿಸುವುದು ಮಹಿಳೆಯರಿಗೆ ಸಹಜವಾದ ಕೆಲಸ. ಆದರೆ, ಬೆಂಕಿ ಬಳಸದೆಯೇ ಅಡುಗೆ ಸಿದ್ಧಪಡಿಸುವ ಸವಾಲು ಇಲ್ಲಿತ್ತು. 10 ನಿಮಿಷಗಳಲ್ಲಿ ಹೆಚ್ಚು ಚಪಾತಿಗಳನ್ನು ಸಿದ್ಧಪಡಿಸುವುದು, ಕಡಿಮೆ ಸಮಯದಲ್ಲಿ ಕೇಶ ವಿನ್ಯಾಸ.. ಮುಂತಾದ ಸ್ಪರ್ಧೆಗಳೂ ನಡೆದವು.

ಬಾಣಸವಾಡಿ ರೈಲು ನಿಲ್ದಾಣ ಸೇರಿದಂತೆ ದೇಶದ 5 ರೈಲು ನಿಲ್ದಾಣಗಳನ್ನು ಮೂರು ಪಾಳಿಯಲ್ಲಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಬೆಂಗಳೂರು–ದಾನಾಪುರ ನಡುವೆ ಸಂಚರಿಸುವ ಸಂಘಮಿತ್ರ ಎಕ್ಸ್‌ಪ್ರೆಸ್‌ ರೈಲನ್ನು (ಚಾಲನೆ, ಭದ್ರತೆ ಸೇರಿ ಎಲ್ಲ ವಿಭಾಗದ ಕರ್ತವ್ಯ) ಮಹಿಳಾ ಸಿಬ್ಬಂದಿಯೇ ಮುನ್ನಡೆಸಿದರು. ಈ ಸಿಬ್ಬಂದಿಗೆ ಸಚಿವ ಪೀಯೂಷ್ ಗೋಯಲ್‌ ಅಭಿನಂದನೆ ಸಲ್ಲಿಸಿದರು.

ಮೌನ ಪ್ರತಿಭಟನೆ: ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿ, ನ್ಯೂ ಇಂಡಿಯಾ ಚಾರಿಟಬಲ್‌ ಸಂಸ್ಥೆ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಯಿತು.

ಟ್ರಸ್ಟ್‌ನ ಸಂಸ್ಥಾಪಕ ವಿಜಯ್ ಟಾಟಾ, ‘ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿದಿನವೂ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಹೊರತು ಈ ಸಂಖ್ಯೆ ಕಡಿಮೆಯಾಗುವುದಿಲ್ಲ. ಹಾಗಾಗಿ ನ್ಯಾಯಾಲಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮಹಿಳೆಯರಿಗೆ ಗುಲಾಬಿ ಹೂವು ನೀಡಿ, ಸ್ವಾಗತಿಸುವ ಮೂಲಕ ಸರಳವಾಗಿ ವಿಶ್ವ ಮಹಿಳೆಯರ ದಿನಾಚರಣೆಯನ್ನು ನಡೆಸಲಾಯಿತು.

ಕರ್ನಾಟಕ ಮಿಡಿಯಾ ಜರ್ನಲಿಸ್ಟ್ ಯುನಿಯನ್ ಹಾಗೂ ಇಂಡಿಯನ್ ಮೀಡಿಯಾ ಜನರ್ಲಿಸ್ಟ್ ಯೂನಿಯನ್ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮೇಯರ್ ಆರ್‌.ಸಂಪತ್‌ರಾಜ್‌, ‘ಮಕ್ಕಳ ಶಿಕ್ಷಣಕ್ಕೆ ನನ್ನ ತಾಯಿ ಹೆಚ್ಚು ಆದ್ಯತೆ ನೀಡುತ್ತಿದ್ದರು. ಮಹಿಳಾ ಮಹತ್ವದ ಬಗ್ಗೆ ಅವರು ನಮಗೆ ತಿಳಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿದ್ದೇನೆ’ ಎಂದು ಹೇಳಿದರು.

‘ಬಿಬಿಎಂಪಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯ 198 ವಾರ್ಡ್‌ಗಳ ಪೈಕಿ 101 ವಾರ್ಡ್‌ಗಳಲ್ಲಿ ಮಹಿಳೆಯರು ಪಾಲಿಕೆ ಸದಸ್ಯರಾಗಿರುವುದು ಹೆಮ್ಮೆಯ ವಿಚಾರ. ವಾಹನ ನಿಲುಗಡೆ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿದ್ದೇವೆ. ಈ ಸೌಲಭ್ಯ ವಿಶ್ವದಲ್ಲೇ ಮೊದಲು. ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಬಿಬಿಎಂಪಿಯಲ್ಲಿ ಆದ್ಯತೆ ನೀಡಿದ್ದೇವೆ’ ಎಂದರು.

ಸೂಲಗಿತ್ತಿ ನರಸಮ್ಮಗೆ ಉಚಿತ ಬಸ್‌ಪಾಸ್‌

ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಮಹಿಳಾ ದಿನದ ಪ್ರಯುಕ್ತ ‍ಸೂಲಗಿತ್ತಿ ನರಸಮ್ಮ ಅವರಿಗೆ ₹25 ಸಾವಿರ ನಗದು ಪುರಸ್ಕಾರ ಹಾಗೂ ಜೀವಿತಾವಧಿ ಉಚಿತ ಬಸ್‌ ಪಾಸನ್ನು ನೀಡಲಾಯಿತು. ಭದ್ರಾವತಿಯ ಸರ್ಕಾರಿ ಶಾಲಾ ಶಿಕ್ಷಕಿ ಅನಿತಾ ಮೇರಿ ಅವರಿಗೆ ₹25 ಸಾವಿರ ನಗದು ಪುರಸ್ಕಾರ ನೀಡಲಾಯಿತು.

ಸಂಸ್ಥೆಯ 12 ವಿಭಾಗ ಮತ್ತು 9 ಕಾರ್ಯಾಗಾರಗಳಿಂದ ನಿರ್ವಾಹಕಿ, ತಾಂತ್ರಿಕ ಸಿಬ್ಬಂದಿ (ಮ್ಯೆಕಾನಿಕ್‌) ಹಾಗೂ ಭದ್ರತಾ ಮಹಿಳಾ ಸಿಬ್ಬಂದಿ ಸೇರಿ ಒಟ್ಟು 50 ಮಹಿಳೆಯರಿಗೆ ಸನ್ಮಾನಿಸಲಾಯಿತು. ನಿಗಮದಲ್ಲಿ 256 ಮಹಿಳಾ ನಿರ್ವಾಹಕರು, 926 ತಾಂತ್ರಿಕ ಮಹಿಳಾ ಸಿಬ್ಬಂದಿ ಸೇರಿ ಸುಮಾರು 2,500 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಿಗಮದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಇನ್ನೊಂದು ವರ್ಷದಲ್ಲಿ ಮಹಿಳಾ ವಿಶ್ರಾಂತಿ ಗೃಹ ಹಾಗೂ ಮಕ್ಕಳ ಪೋಷಣಾ ಕೇಂದ್ರಗಳನ್ನು ನಿರ್ಮಿಸಲಾಗುವುದು. ಕೆಎಸ್‌ಆರ್‌ಟಿಸಿ ವ್ಯಾಪ್ತಿಯ ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಆಸನಗಳು ಇನ್ನು ಮುಂದೆ ಪಿಂಕ್ ಸೀಟ್‌ಗಳಾಗಲಿವೆ. 2000 ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಂಸ್ಥೆ ನಿರ್ಧರಿಸಿದೆ.

ಮಹಿಳಾ ಮತದಾರರ ಸಂಖ್ಯೆ ಶೇ 13ರಷ್ಟು ಏರಿಕೆ

ಮಾರತ್ತಹಳ್ಳಿಯ ಬರ್ತ್‌ರೈಟ್‌ ಬೈ ರೇನ್‌ಬೋ ಮಕ್ಕಳ ಆಸ್ಪತ್ರೆ ಆಯೋಜಿಸಿದ್ದ ವಾಕಥಾನ್‌ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಚಾಲನೆ ನೀಡಿದರು.

2018ರ ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ 4.95 ಕೋಟಿ ಮತದಾರರಿದ್ದು ಅವರಲ್ಲಿ 2.44 ಕೋಟಿ ಮಹಿಳೆಯರಿದ್ದಾರೆ. ನಗರದಲ್ಲಿ 41.92 ಲಕ್ಷ ಮಹಿಳಾ ಮತದಾರರಿದ್ದಾರೆ. ಐದು ವರ್ಷದಲ್ಲಿ ಶೇ 13ರಷ್ಟು ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದು ಅವರು ಹೇಳಿದರು.

*

ಇಂದಿರಾ ಕ್ಯಾಂಟೀನ್‌: ಮಹಿಳೆಯರಿಗೆ ಉಚಿತ ತಿಂಡಿ–ಊಟ

ಬೆಂಗಳೂರು:
ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಹಿಳೆಯರಿಗೆ ತಿಂಡಿ ಹಾಗೂ ಊಟವನ್ನು ಉಚಿತವಾಗಿ ನೀಡಲಾಯಿತು.

ಪಾಲಿಕೆಯ ಈ ಕ್ರಮಕ್ಕೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಿಳೆಯರು, ಶಾಲಾ ಮಕ್ಕಳು ಕ್ಯಾಂಟೀನ್‌ಗಳಲ್ಲಿ ತಿಂಡಿ–ಊಟದ ರುಚಿಯನ್ನು ಸವಿದರು.

‘ಬೆಳಗಿನ ತಿಂಡಿಗೆ ಇಡ್ಲಿ, ವಾಂಗಿಬಾತ್‌, ಮಧ್ಯಾಹ್ನದ ಊಟಕ್ಕೆ ಅನ್ನ, ತರಕಾರಿ ಸಾಂಬಾರ್‌ ಹಾಗೂ ಪಾಯಸ ನೀಡಲಾಯಿತು. ಪ್ರತಿದಿನ 2.24 ಲಕ್ಷ ಮಂದಿ ಊಟ ಮಾಡುತ್ತಾರೆ. ಆದರೆ, ಮಹಿಳಾ ದಿನದ ಪ್ರಯುಕ್ತ ಆಹಾರದ ಪ್ರಮಾಣವನ್ನು ಶೇ 5ರಷ್ಟು ಹೆಚ್ಚಾಗಿ ಪೂರೈಸಲಾಗಿತ್ತು. ಒಟ್ಟಾರೆ ಶೇ 40ರಷ್ಟು ಮಹಿಳೆಯರು ತಿಂಡಿ ಹಾಗೂ ಊಟ ಮಾಡಿದ್ದಾರೆ. ಈ ಹಣವನ್ನು ಪಾಲಿಕೆಯು ಭರಿಸಲಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಆರ್‌. ಮನೋಜ್‌ ರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry