ತುತ್ತಿಗೂ ಬಂತು ಪ್ಲಾಸ್ಟಿಕ್ ಕುತ್ತು

ಸೋಮವಾರ, ಮಾರ್ಚ್ 25, 2019
21 °C

ತುತ್ತಿಗೂ ಬಂತು ಪ್ಲಾಸ್ಟಿಕ್ ಕುತ್ತು

Published:
Updated:
ತುತ್ತಿಗೂ ಬಂತು ಪ್ಲಾಸ್ಟಿಕ್ ಕುತ್ತು

ಆರೋಗ್ಯದ ರಕ್ಷಣೆ ಮತ್ತು ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಹೆಚ್ಚು ಗಮನ ಹರಿಸುತ್ತಿಲ್ಲ ಎನ್ನುವುದು ವಾಸ್ತವ. ಶಸ್ತ್ರಚಿಕಿತ್ಸೆ, ರೇಡಿಯೇಷನ್, ಕೀಮೋಥೆರಪಿ – ಹೀಗೆ ಒಟ್ಟಿನಲ್ಲಿ ಹೊರರೋಗಿಗಳನ್ನು ಒಳರೋಗಿಗಳನ್ನಾಗಿ ಹೆಚ್ಚಿಸುವತ್ತ ನಮ್ಮ ಒಟ್ಟು ವ್ಯವಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ ಎನ್ನಬಹುದು. ಇಂದಿಗೂ ಶೇ 90ರಷ್ಟು ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಕಾಯಿಲೆಗಳನ್ನು ತಡೆಗಟ್ಟಬಹುದು. ಅವು ಸೊಳ್ಳೆಯಿಂದ ಬರುವ ಡೆಂಗಿ, ಚಿಕನ್ ಗುನ್ಯಾ, ಮಲೇರಿಯಾ, ಫಿಲೇರಿಯಾ ಇರಬಹುದು; ವೈರಸ್‌ಗಳಿಂದ ಬರುವ ಸೋಂಕುಗಳಾದ ಹೆಪಟೈಟೀಸ್‌ನಂತಹ ಕಾಯಿಲೆಗಳಿರಬಹುದು; ಅಥವಾ ಇನ್ನೂ ಜೀವಂತವಾಗಿದ್ದು ಮಾರಕರೋಗಗಳಾಗಿ ನಮ್ಮನ್ನು ಕಾಡುತ್ತಿರುವ ಹಳೆಯ ಕಾಯಿಲೆಗಳಾದ ಟೈಫಾಯ್ಡ್, ಕಾಲರಾ ಅಥವಾ ಕ್ಷಯರೋಗಗಳಿರಬಹುದು. ಇತ್ತೀಚಿನ ದಿನಗಳಲ್ಲಿ ಸೋಂಕುರೋಗಗಳಿಗಿಂತ ಹೆಚ್ಚು ನಮ್ಮ ನಡವಳಿಕೆ, ಅಭ್ಯಾಸ ಮತ್ತು ಪರಿಸರ ಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳು ಸೋಂಕುರೋಗಗಳ ಬಾಧೆಗಿಂತ ಹೆಚ್ಚಾಗಿವೆ ಎಂದು ಕಂಡುಬರುತ್ತಿವೆ. ಮುಂದುವರಿದ ರಾಷ್ಟ್ರಗಳಂತೂ ಸೋಂಕುರೋಗಗಳ ವಿರುದ್ಧ ಸ್ವಚ್ಛತೆಯ ಸಮರವನ್ನು ಸಾರಿ ಗೆದ್ದಿದ್ದರೂ, ಜೀವನಶೈಲಿಯ ‘ಸಿಸ್ಟಮಿಕ್ ರೋಗಗಳು’ ತಲೆಯೆತ್ತಿ ನಿಂತಿವೆ.

ಪರಿಸರ ಮತ್ತು ಪ್ರಕೃತಿಯ ಮೂಲಕ ಬರುವ ಹಾನಿಕಾರಕ ಅಂಶಗಳಲ್ಲಿ ಇಂದು ಪ್ಲಾಸ್ಟಿಕ್ ಮಾಲಿನ್ಯ ಗಂಭೀರ ಸ್ವರೂಪವನ್ನು ತಾಳಿದೆ ಎನ್ನುವುದು ಕಂಡುಬರುತ್ತಿದೆ. ಪ್ರತಿವರ್ಷ ಸುಮಾರು 38 ಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದನೆ ಜಗತ್ತಿನಲ್ಲಿದೆ. ಆಹಾರಪದಾರ್ಥಗಳ ಪ್ಯಾಕಿಂಗ್‌, ಕುಡಿಯುವ ನೀರು, ಲೋಟ, ನೀರು ಸರಬರಾಜಿನ ಪಿ.ವಿ.ಸಿ. ಪೈಪ್‌ಗಳಿಂದ ಹಿಡಿದು, ಆಸ್ಪತ್ರೆಯ ಗ್ಲೂಕೋಸ್ ಬಾಟಲ್ ಮತ್ತು ರಕ್ತಸಂಗ್ರಹಿಸುವ ಚೀಲದಿಂದ ಹಿಡಿದು ಕಾಂಡೋಮ್‌ವರೆಗೂ ಪ್ಲಾಸ್ಟಿಕ್‌ ಸಾಮ್ರಾಜ್ಯ ಹಬ್ಬಿದೆ. ಈ ಬಾರಿಯ ‘ದಿ ಎಕಾನಮಿಸ್ಟ್’ ವಾರಪತ್ರಿಕೆಯ ವಿಶೇಷ ಲೇಖನವೊಂದು ಈ ವಾರ ಇದರ ಬಗ್ಗೆ  ಬೆಳಕನ್ನು ಚೆಲ್ಲಿದೆ. ಸುಮಾರು ಒಂದೂಕಾಲು ಕೋಟಿ ಟನ್‌ನಷ್ಟು ಪ್ಲಾಸ್ಟಿಕ್ ಸಮುದ್ರದ ಹೊಟ್ಟೆ ಸೇರುತ್ತಿದೆ. ಒಟ್ಟು ಉತ್ಪಾದನೆಯ ಕೇವಲ ಶೇ 25ರಷ್ಟು ಮಾತ್ರ ಪ್ಲಾಸ್ಟಿಕ್ ಮರುಬಳಕೆಯಾಗುತ್ತಿದೆ; ಉಳಿದದ್ದು ಪ್ರಕೃತಿ ಮತ್ತು ಪರಿಸರ ಸೇರಿ ಕೊಳೆಯದೆ ನೂರಾರು ವರ್ಷಗಳು ಕಾಡುವ ಮಾಲಿನ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ.

ಸಮುದ್ರವನ್ನು ಸೇರಿದ ಪ್ಲಾಸ್ಟಿಕ್, ಛಿದ್ರಗೊಳ್ಳುತ್ತ ಸಣ್ಣ ಸಣ್ಣ ತುಣುಕುಗಳಾಗಿ ಮಾರ್ಪಾಡಾಗುತ್ತದೆ. ಅದನ್ನು ‘ಮೈಕ್ರೋಪ್ಲಾಸ್ಟಿಕ್’ ಎಂದು ಕರೆಯಲಾಗುತ್ತದೆ. ಇನ್ನು ಹೆಚ್ಚಿನ ಪ್ಲಾಸ್ಟಿಕ್ ಸಾಗರದೊಳಗಿನ ಸುಂಟರಗಾಳಿಗೆ ಸಿಕ್ಕಿ ಅನೇಕ ಕಡೆ ಪ್ಲಾಸ್ಟಿಕ್ ದ್ವೀಪಗಳನ್ನೇ ಸೃಷ್ಟಿ ಮಾಡಿವೆ. ಈ ಪ್ಲಾಸ್ಟಿಕ್ ದ್ವೀಪಗಳು ಐರೋಪ್ಯ ಖಂಡಕ್ಕಿಂತ ದೊಡ್ಡದಾಗಿದೆ ಎನ್ನಲಾಗಿದೆ. ಸಣ್ಣ ತುಂಡುಗಳಾಗಿ ಇಡೀ ಸಮುದ್ರದಲ್ಲಿ ಹರಡಿಕೊಂಡಿರುವ ಮೈಕ್ರೋಪ್ಲಾಸ್ಟಿಕ್, ಮೀನುಗಳ ಹೊಟ್ಟೆ ಸೇರಿ ಪುನಃ ನಮ್ಮ ಹೊಟ್ಟೆಗೆ ಬಂದು ಸೇರುತ್ತಿದೆ. ನಾವು ತಿನ್ನುವ ಸಮುದ್ರದ ಉಪ್ಪಿನಲ್ಲಿ ನಾವೇ ಸುರಿದ ಪ್ಲಾಸ್ಟಿಕ್ ಮತ್ತೆ ನಮ್ಮ ಹೊಟ್ಟೆಯನ್ನು ಸೇರುತ್ತಿದೆ.

ಎಲ್ಲ ರೀತಿಯ ಪ್ಲಾಸ್ಟಿಕ್‌ಗಳೂ ಆರೋಗ್ಯದ ದೃಷ್ಟಿಯಿಂದ ದೋಷಪೂರಿತವಲ್ಲ. ಪ್ಲಾಸ್ಟಿಕ್ ಮೃದುವಾಗಲು ಹಾಕುವ ‘ತಾಲೇಟ್’ ಎಂಬ ರಾಸಾಯನಿಕ ಮತ್ತು ಗಟ್ಟಿಯಾಗಲು ಬಳಸುವ ಬಿಪಿಎ ಎನ್ನುವ ಅಂಶ ಆರೋಗ್ಯಕ್ಕೆ ಹಾನಿಕಾರಕ ಎಂದು ದೃಢಪಟ್ಟಿದೆ. ಅನೇಕ ಪ್ಲಾಸ್ಟಿಕ್‌ನಲ್ಲಿ ಇಂದು ಇವುಗಳನ್ನು ಬಳಸದೇ ತಯಾರಿಸುವುದೂ ಉಂಟು. ತಾಲೇಟ್ ಮತ್ತು ಬಿಪಿಎ ನಮ್ಮ ಹಾರ್ಮೋನ್‌ಗಳನ್ನು ಅನುಕರಿಸುವ ರೀತಿಯಲ್ಲೇ ವರ್ತಿಸುತ್ತವೆ. ಅದರಲ್ಲೂ ಸೆಕ್ಸ್ ಹಾರ್ಮೋನ್‌ಗಳನ್ನು ಅನುಕರಿಸುವುದರಿಂದ ಸಂತಾನೋತ್ಪತ್ತಿಯ ಸಮಸ್ಯೆ ಉಂಟು ಮಾಡಬಹುದು ಎನ್ನಲಾಗುತ್ತಿದೆ. ಸ್ಪೇನ್‌ ದೇಶದಲ್ಲಿ ಹಂದಿಗಳು ಗರ್ಭ ಕಟ್ಟದಿದ್ದಾಗ, ಅದಕ್ಕೆ ಕಾರಣವನ್ನು ಹುಡುಕಲು ಹೋದಾಗ, ವೀರ್ಯಾಣುಗಳನ್ನು ಶೇಖರಿಸಿದ್ದ ಪ್ಲಾಸ್ಟಿಕ್ ಚೀಲಗಳು ವೀರ್ಯಾಣುಗಳನ್ನು ಕೊಂದಿತ್ತು ಎಂದು ಬೆಳಕಿಗೆ ಬಂದಿದೆ.

ಹೀಗಾಗಿ ನಾವು ಮತ್ತೆ ಕೈಚೀಲ ಸಂಸ್ಕೃತಿಗೆ ಒಗ್ಗಿಕೊಳ್ಳುವುದು ಬಹಳ ಮುಖ್ಯವೆನ್ನಿಸುತ್ತದೆ. ಜೊತೆಗೆ ತಾಲೇಟ್ ಮತ್ತು ಬಿಪಿಎಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಕಾನೂನಿನ ಮೂಲಕ ನಿಯಂತ್ರಿಸುವುದು ಮುಖ್ಯ. ಇಂದು ಕೀನ್ಯಾದೇಶದಲ್ಲಿ ಪ್ಲಾಸ್ಟಿಕ್ ಚೀಲ ಕೊಟ್ಟವನಿಗೆ ನಾಲ್ಕು ವರ್ಷ ಜೈಲು ಅಥವಾ 28 ಲಕ್ಷ ರೂಪಾಯಿಗಳ ದಂಡವನ್ನು ಹಾಕಲಾಗುತ್ತದೆ. ಪ್ಲಾಸ್ಟಿಕ್ ಚೀಲ ನಮ್ಮಲ್ಲಿ ಬಟ್ಟೆಯ ರೂಪದಲ್ಲಿಯೇ ವೇಷಧಾರಿಯಾಗಿ ಪ್ಲಾಸ್ಟಿಕ್ ಅಲ್ಲದಂತೆ ಬಳಸಲಾಗುತ್ತಿದೆ. ಇಂತಹ ಮಾನವನಿರ್ಮಿತ ಪರಿಸರ ಮಾಲಿನ್ಯ ಮತ್ತು ಮಾರಕ ಅವ್ಯವಸ್ಥೆಯತ್ತ ಜನರು ಶೀಘ್ರ ಗಮನವನ್ನು ಕೊಡುವುದು ಅವಶ್ಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry