ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು: ಬಹುಕಾರ್ಯ ಚತುರೆ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೆಣ್ಣು, ಸ್ತ್ರೀ, ಮಹಿಳೆ ಇತ್ಯಾದಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ನಾವು, ಮತ್ತೊಂದು ಹೆಸರಿಗೂ ಖಂಡಿತ ಯೋಗ್ಯರು; ಅದೇ ‘ಮಲ್ಟಿ ಟಾಸ್ಕರ್’ ಅಥವಾ ‘ಬಹುಕಾರ್ಯಚತುರೆಯರು’; ಏಕೆಂದರೆ, ನಿಜವಾಗಲೂ ಹೆಣ್ಣುಮಕ್ಕಳು ಮಾಡದೇ ಇರುವ ಕಾರ್ಯಗಳು ಈ ಜಗತ್ತಿನಲ್ಲಿ ಇರೋದು ಬೆರಳೆಣಿಕೆಯಷ್ಟು ಮಾತ್ರ. ಅದೂ ಬೇರೆ ಬೇರೆ ಕೆಲಸಗಳನ್ನು ಬೇರೆ ಬೇರೆ ಸಮಯದಲ್ಲಿ ಮಾಡುವುದಲ್ಲ, ಒಟ್ಟೊಟ್ಟಿಗೇ ಹತ್ತು ಹಲವೆಡೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಸುಲಲಿತವಾಗಿ ಎಲ್ಲವನ್ನೂ ನಿಭಾಯಿಸುವ ನಿಪುಣೆಯರದ್ದು ಹೆಚ್ಚುಗಾರಿಕೆಯೇ ಸರಿ. ಇದನ್ನು ಕೆಲವರು ಅನಿವಾರ್ಯ ಕಾರಣಗಳಿಂದ ಮಾಡಬೇಕಾದರೆ, ಹಲವರು ಸ್ವ–ಇಚ್ಛೆಯಿಂದ ಮಾಡುವುದುಂಟು. ಮುಖ್ಯವಾಗಿ ಹೊರಗಿನ ಕೆಲಸ, ಮನೆಯೊಳಗಿನ ಕೆಲಸವಲ್ಲದೇ ತಮ್ಮ ಹವ್ಯಾಸಗಳಿಗೂ ಸಮಯ ಕೊಡುತ್ತಾ, ಸಮಾಜಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಿರುವ ಹೆಣ್ಣುಮಕ್ಕಳ ಸಂಖ್ಯೆಯೂ ಬಹಳ ದೊಡ್ಡದಿದೆ.

ಹಲವು ದಶಕಗಳ ಹಿಂದೆ ಹೆಣ್ಣು ಮನೆಯ ಕೆಲಸ ಮತ್ತು ಗಂಡು ಹೊರಗಿನ ಕೆಲಸ ನೋಡಿಕೊಳ್ಳುವ ಪರಿಪಾಠವಿತ್ತು. ಈಗ ಇಬ್ಬರೂ ಹೊರಗಿನ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸರ್ವೇಸಾಮಾನ್ಯ; ಹಾಗೆಂದು, ಹೆಣ್ಣು ಹೊರಗೆ ದುಡಿದು ಬಂದರೂ ಮನೆಯಲ್ಲೂ ತಾನೊಬ್ಬಳೇ ದುಡಿಯಬೇಕು ಎಂಬ ಮನಃಸ್ಥಿತಿ ಮರೆಯಾಗುತ್ತಿರುವುದು ಸಮಾಧಾನಕರ; ಈಗೀಗ ಮನೆಯ ಹೊರಗಿನ ಮತ್ತು ಒಳಗಿನ ಕೆಲಸಗಳನ್ನೂ, ಮಕ್ಕಳ ಜವಾಬ್ದಾರಿಯನ್ನೂ ಪತಿ–ಪತ್ನಿ ಇಬ್ಬರೂ ಸರಿದೂಗಿಸಿಕೊಂಡು ಹೋಗುತ್ತಿರು ವುದು ಆರೋಗ್ಯಕರ ಬೆಳವಣಿಗೆ; ಹಾಗಿದ್ದೂ, ಜೀವರಾಸಾಯನಿಕ ಕಾರಣಗಳಿಂದಲೋ ಅಥವಾ ತಾಯಿಯ ಮನಃಸ್ಥಿತಿಯ ಕಾರಣದಿಂದಲೋ, ತಂದೆಯ ಕಚೇರಿಯ ಸಮಯದ ಕಾರಣದಿಂದಲೋ, ಮಕ್ಕಳ ದಿನನಿತ್ಯದ ಜವಾಬ್ದಾರಿಯಲ್ಲಿ ತುಸು ಹೆಚ್ಚೇ ಪಾಲು ತಾಯಿಯದ್ದಾಗುವುದು ಸಾಮಾನ್ಯ ಸಂಗತಿ; ಅಷ್ಟೇ ಅಲ್ಲದೆ, ನಮ್ಮ ಭಾರತೀಯ ಸಂಸ್ಕೃತಿಗೆ ತಕ್ಕಂತೆ, ಮನೆಯವರ ಮನಗಳನ್ನು ಬೆಸೆದುಕೊಂಡು ಸಾಗುವ ಅತಿಮುಖ್ಯ ಜವಾಬ್ದಾರಿಯು ನೈಸರ್ಗಿಕ ವಾಗಿ ಹೆಣ್ಣಿನ ಮೇಲೆಯೇ ಹೆಚ್ಚಿರುವುದು ರೂಢಿಗತ ಸಂಗತಿ. ಇವೆಲ್ಲಾ ಸರಿದೂಗಿಸಿಕೊಂಡು ಹೋಗುವ ಜೊತೆಜೊತೆಗೇ, ವರ್ಷದ 365 ದಿನಗಳೂ ಮುಗಿಯದ ಮನೆಯ ಕೆಲಸಗಳನ್ನು ತಾನಾಗಿಯೇ, ಅಥವಾ ಮನೆಯವರ, ಕೆಲಸದವರ ಸಹಾಯದಿಂದ ಒಂದಿನಿತೂ ಚ್ಯುತಿ ಬರದಂತೆ ಮುನ್ನಡೆಸಿಕೊಂಡು ಸಾಗುವ ರೀತಿಗೆ ಸಾಟಿಯೇ ಇಲ್ಲವೇನೋ.

ಮದುವೆಗೆ ಮುನ್ನ ಗೆಳತಿಯರ ಜೊತೆ ಪಾನಿಪೂರಿ ತಿನ್ನುತ್ತಾ, ಪುಟ್ಟ ಪುಟ್ಟ ಚಟಾಕಿಗಳಿಗೆ ಅದೆಷ್ಟು ನಗುತ್ತಿರ್ತೀವಿ ಆಲ್ವಾ? ಕೆಮಿಸ್ಟ್ರಿ ಬಯಾಲಜಿ ರೆಕಾರ್ಡ್ ಅಥವಾ ಅಕೌಂಟ್ಸ್, ಎಕನಾಮಿಕ್ಸ್ ನೋಟ್ಸ್ ಬರೆದು ಕಂಪ್ಲೀಟ್ ಮಾಡೋದೇ ಕಾಲೇಜ್ ಬದುಕಿನ ದೊಡ್ಡ ಕೆಲಸವಾಗಿರುತ್ತದೆ; ಮನೆಗೆ ಬಂದಮೇಲೆ ಕಾದಂಬರಿಗೋ, ಟಿ.ವಿ.ಗೋ ಅಂಟಿಕೊಂಡರೆ ಜಗತ್ತೇ ಮರೆತು ಹೋಗಿರುತ್ತದೆ. ಸೂರ್ಯಾಸ್ತವನ್ನು ಸವಿಯುತ್ತಾ ಅಮ್ಮ ಮಾಡಿದ ಕಾಫಿ ಕುಡಿಯುತ್ತಾ ಮಹಡಿ ಮೇಲೆ ತಂಗಾಳಿಯನ್ನು ಅನುಭವಿಸೋಕೆ ಎಷ್ಟು ಸಮಯ ಇದ್ದರೂ ಸಾಕಾಗಿರೋಲ್ಲ; ಅದೇ ಮದುವೆ ಆದ ನಂತರ ಬಟ್ಟೆ ಒಣಗಿಸೋಕೆ ಮಹಡಿ ಮೇಲೆ ಹೋಗೋಕೆ ಸಮಯ ಸಿಕ್ಕರೆ ಅದೇ ದೊಡ್ಡ ವಿಷಯ. ಮನೆಯ ಸ್ವಚ್ಛತೆ, ಅಡುಗೆ–ತಿಂಡಿ ಇತ್ಯಾದಿ ಕೆಲಸಗಳ ಜೊತೆಜೊತೆಗೇ ಮನೆಯವರೊಂದಿಗೆ ಬೆರೆತು ಸಂಸಾರನೌಕೆಯನ್ನು ದಡ ಸೇರಿಸುವ ಕೆಲಸ ಅನುಗಾಲದ್ದು; ಆದರೆ, ಇವೆಲ್ಲವನ್ನೂ ಮುಗುಳುನಗೆಯೊಂದಿಗೆ ಮುಂದುವರೆಸುತ್ತಾ, ತನ್ನ ಹವ್ಯಾಸ, ಆಶಯ, ಆಸಕ್ತಿಗಳನ್ನೂ ನೀರೆರೆದು ಪೋಷಿಸಿಕೊಳ್ಳುವ ಮಹಿಳೆಯರು ನಮ್ಮ ಸುತ್ತಮುತ್ತ ಬೇಕಾದಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಯಾವುದಕ್ಕೂ ಟೈಮೇ ಇಲ್ಲ ಅಂತ ಗೊಣಗೋ ಕೆಲವರ ನಡುವೆ ಇಂಥವರು ವಿಶಿಷ್ಟವಾಗಿ ಕಾಣುತ್ತಾರೆ. ಹಾಗೆಂದು ಇವರಿಗೆ ದಿನದಲ್ಲಿ ಯಾರಿಗೂ ಇಲ್ಲದ 25ನೆಯ ಗಂಟೆಯುಂಟೆ? ಇದರ ಹಿಂದಿರುವುದು ಕೇವಲ ಮಾನಸಿಕ ಸಿದ್ಧತೆ, ಅದಮ್ಯ ಜೀವನೋತ್ಸಾಹ, ಕಾರ್ಯಸಿದ್ಧಿ, ಆನಂದದ ಬಯಕೆ. ಅಷ್ಟೇ ಅಲ್ಲದೆ, ಸ್ವಾನುಕಂಪ ಇಲ್ಲದಿರುವಿಕೆ ಕೂಡ ಇವರ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹಾಗೆಂದು ಸಾಧನೆಯೆಂದರೆ ಯಾವುದೋ ಪ್ರಶಸ್ತಿಯನ್ನೋ ಪದಕವನ್ನೋ ಗೆಲ್ಲುವ ಏನನ್ನೋ ಇವರು ಮಾಡಿರಲೇಬೇಕೆಂದೇನೂ ಅಲ್ಲ; ಕುಕ್ಕರ್ ಎಷ್ಟು ಕೂಗು ಹಾಕಿತು ಅಂತ ಕಿವಿಗೊಡುತ್ತಾ, ಮಕ್ಕಳಿಗೆ ಹೋಂವರ್ಕ್ ಮಾಡಿಸುತ್ತಾ, ಮಕ್ಕಳ ನಡವಳಿಕೆಯನ್ನು ಒಳಗಣ್ಣಿನಿಂದ ಗಮನಿಸುತ್ತಾ, ಮರುದಿನದ ಆಫೀಸ್ ಮೀಟಿಂಗ್‌ಗೆ
ಪಿ.ಪಿ.ಟಿ. ಪ್ರೆಸೆಂಟೇಶನ್ ತಯಾರಿಸುವುದು ಕಡಿಮೆ ಸಾಧನೆಯೇನಲ್ಲ. ಎಲ್ಲೆಡೆಯೂ ತನ್ನ ನೂರು ಪ್ರತಿಶತ ಆಸಕ್ತಿ, ಸಮರ್ಪಣಾ ಮನೋಭಾವ ನೀಡಬೇಕೆಂಬ ಉದ್ದೇಶವೇ ಇವರನ್ನು ಸಾಧಕಿಯರನ್ನಾಗಿ ಮಾಡಿಬಿಡುತ್ತದೆ; ಏಕೆಂದರೆ ಯಾವುದೇ ಕಾರ್ಯದ ಅಂತಿಮಘಟ್ಟ ಮುಖ್ಯವೇ ಆದರೂ ಅದರ ಪ್ರಕ್ರಿಯೆ ಅದಕ್ಕಿಂತಲೂ ಮುಖ್ಯವೆನಿಸುತ್ತದೆ. ಅಂಥ ಪ್ರಕ್ರಿಯೆಯಲ್ಲಿ ದಿನವೂ ಗೆಲ್ಲುತ್ತಾ ಪರಿಪೂರ್ಣತೆ ಯೆಡೆಗೆ ಸಾಗುತ್ತಾಳೆ ಜೀವನೋತ್ಸಾಹಿ ಮಹಿಳೆ.

ಆಗ ಅಳುತ್ತಿರುವ ಮಗುವನ್ನು ಸಮಾಧಾನಿಸು ತ್ತಲೇ, ಮರುದಿನದ ಸಂಗೀತಕಛೇರಿಯಲ್ಲಿ ತಾನು ಹಾಡಬೇಕಾಗಿರುವ ಕೀರ್ತನೆಯನ್ನು ಗುನುಗಿ ಕೊಳ್ಳೋದು ಆಕೆಗೆ ಕಷ್ಟವೆನಿಸೋಲ್ಲ. ಪಲ್ಯಕ್ಕೆ ತರಕಾರಿ ಹೆಚ್ಚುವಾಗ ತಾನು ಪಾತ್ರ ಮಾಡಬೇಕಾದ ನಾಟಕದ ಮಾತುಗಳನ್ನು ಬಾಯಿಪಾಠ ಮಾಡುವುದು ಆಕೆಗೆ ನೀರು ಕುಡಿದಷ್ಟೇ ಸಲೀಸು. ಮಗುವಿಗೆ ಹಾಲುಡಿಸುತ್ತಾ ತಾನು ಬರೆಯಬೇಕಿರುವ ಲೇಖನದ ವಿಷಯವನ್ನು ಮನನ ಮಾಡಿಕೊಳ್ಳುವುದು ಆಕೆಗೆ ಸುಲಭಸಾಧ್ಯ.

ಮನೆಯ ಹೊರಗಿನ ತನ್ನ ಕಾರ್ಯಕ್ಷೇತ್ರದಲ್ಲಷ್ಟೇ ಅಲ್ಲದೆ, ಮನೆಯ ಮೂಲಭೂತ ಕೆಲಸಕಾರ್ಯ ಗಳಲ್ಲೂ, ತನ್ನ ಹವ್ಯಾಸದ ಕ್ಷೇತ್ರಗಳಲ್ಲೂ, ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು, ಅಲ್ಲಿ ಸಂತೋಷ ಹಾಗೂ ಯಶಸ್ಸನ್ನು ಪಡೆಯುವುದು ಕುಟುಂಬದವರ, ಸಹೋದ್ಯೋಗಿಗಳ ಸಹಕಾರ ಖಂಡಿತ ಬೇಡುತ್ತದೆ; ಆದರೆ ಅದನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಾ ಸಾಗುವುದು, ಬದುಕಿನ ಪ್ರತಿಘಳಿಗೆಯನ್ನೂ ಸಂಪೂರ್ಣವಾಗಿ ಜೀವಿಸುವುದು ಜೀವನದ ಬಹುದೊಡ್ಡ ಸಾರ್ಥಕತೆ. ಇದರಲ್ಲಿ ಸಿಗುವ ಕಾರ್ಯಸಿದ್ಧಿ ಆನಂದ, ಆತ್ಮಸಂತೃಪ್ತಿಗೆ ಹೋಲಿಸಿದರೆ ಪ್ರತಿ ಕ್ಷಣವೂ ಅವಿಶ್ರಾಂತವಾಗಿ ಕಾರ್ಯತತ್ಪರವಾಗಿದ್ದುದು ಖಂಡಿತ ದೊಡ್ಡದಲ್ಲ ಎನಿಸಿಬಿಡುತ್ತದೆ. ನೀವೇನಾದರೂ ಸಮಯದ ಅಭಾವ ಎಂಬ ನೆಪ ಹೂಡಿ ನಿಮ್ಮ ಹವ್ಯಾಸಗಳನ್ನು ಮರೆತು ಕೂತಿದ್ದರೆ, ಒಮ್ಮೆ ಮೈಕೊಡವಿಕೊಂಡು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ; ಆಗ ಹೊಮ್ಮುವ ಜೀವನೋತ್ಸಾಹದ ಮುಂದೆ ಜೀವನದ ಸಮಸ್ಯೆಗಳು ಹೇಗೆ ತಮ್ಮ ಶಕ್ತಿ ಉಡುಗಿಸಿ ಮೂಲೆಗುಂಪಾಗುತ್ತವೆ ಅಂತ ನೀವು ಅನುಭವಿಸಿಯೇ ಅರಿಯಬೇಕು. ಬದುಕೆಂದರೆ, ಎಲ್ಲ ಬೇಕು ಬೇಡಗಳ, ಇಷ್ಟ ಅನಿಷ್ಟಗಳ, ಅನಿವಾರ್ಯ ಮತ್ತು ಆಸಕ್ತಿಗಳ, ಲೌಕಿಕ ಮತ್ತು ಪಾರಮಾರ್ಥಿಕ ಉದ್ದೇಶಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವುದೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT