ಪಕ್ಷಿಗಳ ಪ್ರಪಂಚಕ್ಕೆ ಕ್ಯಾಮೆರಾ ಭಾಷ್ಯ

ಗುರುವಾರ , ಮಾರ್ಚ್ 21, 2019
26 °C

ಪಕ್ಷಿಗಳ ಪ್ರಪಂಚಕ್ಕೆ ಕ್ಯಾಮೆರಾ ಭಾಷ್ಯ

Published:
Updated:
ಪಕ್ಷಿಗಳ ಪ್ರಪಂಚಕ್ಕೆ ಕ್ಯಾಮೆರಾ ಭಾಷ್ಯ

ಸಾವಿರ ಪದಗಳಿಗೆ ಸರಿದೂಗುವ ಛಾಯಾಚಿತ್ರ, ಬರಿಗಣ್ಣಿನಲ್ಲಿ ಗ್ರಹಿಸಲಾರದ ಅಪೂರ್ವ ಸೌಂದರ್ಯವನ್ನು ಸೆರೆಹಿಡಿಯುವ ತಾಂತ್ರಿಕ ಕೌಶಲ. ಈ ಸೌಂದರ್ಯವನ್ನು ಸೆರೆಹಿಡಿಯುವ ಕಲೆಯನ್ನು ಕೆಲವರು ವೃತ್ತಿಯಾಗಿ ಒಲಿಸಿಕೊಂಡಿದ್ದರೆ, ಮತ್ತೆ ಹಲವರು ಪ್ರವೃತ್ತಿಯಾಗಿ ರೂಢಿಸಿಕೊಂಡಿರುತ್ತಾರೆ. 

ಅಂತಹದೇ ಛಾಯಾಚಿತ್ರ ಕಲೆಯನ್ನು ಬೆನ್ನತ್ತಿ ಕ್ಯಾಮೆರಾ ಕಣ್ಣಲ್ಲಿ ಸೌಂದರ್ಯವನ್ನು ಸೆರೆಹಿಡಿಯಲು ನಿರತರಾದವರು ನಗರದ ಪದ್ಮನಾಭನಗರದ ನಿವಾಸಿ ಬಿ.ಸಿ. ಶರ್ಮಾ. ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಶರ್ಮಾ ಅವರಿಗೆ ವನ್ಯಪಕ್ಷಿ ಲೋಕದ ವಿಸ್ಮಯಗಳ ಕೌತುಕವನ್ನು ಅರಿಯುವ ತವಕ  ಚಿಕ್ಕಂದಿನಿಂದಲೇ ಇತ್ತು. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದ ಶರ್ಮಾ ಅವರಿಗೆ ಸಹಜವಾಗಿಯೇ ಸಹ್ಯಾದ್ರಿ ಮಡಿಲಿನ ಪ್ರಾಣಿ, ಪಕ್ಷಿ ಜಗತ್ತಿನ ವಿಸ್ಮಯಗಳ ಪರಿಚಯವಿತ್ತು. ನಗರಕ್ಕೆ ಬಂದ ನಂತರ ಆ ಆಸಕ್ತಿಗೊಂದು ವೇದಿಕೆ ದೊರೆತಂತಾಗಿ ವೃತ್ತಿಯೊಂದಿಗೆ ಪ್ರವೃತ್ತಿಯ ಪೋಷಣೆಗೂ ಸಮಾನ ಗಮನ ನೀಡಿದರು. ಪ್ರತಿ ವಾರಾಂತ್ಯಗಳಲ್ಲಿ ಕ್ಯಾಮೆರಾ ಹೆಗಲಿಗೇರಿಸಿ ರಾಜ್ಯ ಹೊರರಾಜ್ಯಗಳಲ್ಲಿನ ಪಕ್ಷಿಗಳು ವಲಸೆ ಬರುವ ಸ್ಥಳಗಳಿಗೆ ತೆರಳಿ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಕಲೆಯನ್ನು ಅವರು ಕರಗತಮಾಡಿಕೊಂಡರು.

ನಗರದಲ್ಲಿ ಕನಕಪುರ ರಸ್ತೆ ಪಕ್ಷಿಗಳ ಛಾಯಾಗ್ರಹಣಕ್ಕೆ ಪ್ರಶಸ್ತ ಸ್ಥಳ ಎನ್ನವ ಅವರು, ರಾಜ್ಯದ ಇತರೆಡೆ ಹಾಗೂ ಹೊರರಾಜ್ಯಗಳಿಗೂ ತೆರಳಿ ಛಾಯಾಗ್ರಹಣ ಮಾಡುತ್ತಾರೆ. ಈಚೆಗೆ ಒಡಿಸಾಕ್ಕೆ ತೆರಳಿ ಛಾಯಾಚಿತ್ರಗಳನ್ನು ಸೆರೆಹಿಡಿದಿರುವ ಅವರು, ಛಾಯಾಗ್ರಹಣ ಪೂರ್ವದಲ್ಲಿ ಆ ಪಕ್ಷಿಯ ಇತಿಹಾಸ ಹಾಗೂ ಚಲನವಲನಗಳ ಕುರಿತು ಸಮಗ್ರವಾದ ಅಧ್ಯಯನ ಅಗತ್ಯ ಎನ್ನುವ ನಿಲುವು ವ್ಯಕ್ತಪಡಿಸುತ್ತಾರೆ. ಹಾಗಾಗಿಯೇ ಶರ್ಮಾ ಅವರು ಬಿಡುವಿನ ಸಮಯದಲ್ಲೆಲ್ಲಾ ಪಕ್ಷಿಗಳ ಕುರಿತು ಅಧ್ಯಯನ ಮಾಡುತ್ತಾರೆ.

ಪೇಲ್ ಬಿಲ್ಡ್‌ ಫ್ಲವರ್ ಪೆಕರ್

ಶರ್ಮಾ ಅವರ ಕ್ಯಾಮೆರಾ ಕಣ್ಣಲ್ಲಿ ಶ್ರೀಲಂಕನ್ ಫ್ರಾಗ್‌ಮೌತ್, ಮಂಗಲ್‌ಜೋಡಿ, ಮಾಂಟಾಗೂಸ್ ಹ್ಯಾರಿಯಾರ್‌ ಸೇರಿದಂತೆ ವಿವಿಧ ಪಕ್ಷಿಗಳು ಸೆರೆಯಾಗಿವೆ. ಅವರಿಗೆ ಉದ್ದ ಕೊಕ್ಕಿನ ಬಿಳಿ ಗರುಡದ ಛಾಯಾಚಿತ್ರ ತೆಗೆಯುವುದು ಅಚ್ಚುಮೆಚ್ಚು. ಗರುಡದ ಚಲನವಲನ, ಹೊಂಚುಹಾಕಿ ಆಹಾರ ಪಡೆಯುವ ಅದರ ತಂತ್ರಗಾರಿಕೆ, ಸೂಕ್ಷ್ಮ ನೋಟ ಬೀರುತ್ತಾ ನೀಲಿ ಬಾನಿನಲ್ಲಿ ವೃತ್ತಾಕಾರವಾಗಿ ಸುತ್ತುವ ಅದರ ವೈಖರಿಯೇ ವಿಶೇಷ ಎನ್ನುವುದು ಶರ್ಮಾ ಅವರ ಅಂಬೋಣ.

‘ಕಾಡಿನ ಬಗ್ಗೆ ಚಿಕ್ಕಂದಿನಿಂದಲೇ ಆಸಕ್ತಿ ಇತ್ತು. ಉದ್ಯೋಗ ಅರಸಿ ನಗರಕ್ಕೆ ಬಂದ ನಂತರ ಅಂತರ್ಜಾಲ ನನ್ನ ಆಸಕ್ತಿಗೆ ನೀರೆರೆಯಿತು. ಅಂತರ್ಜಾಲದಲ್ಲಿ ವನ್ಯಮೃಗ ಹಾಗೂ ಪ‍ಕ್ಷಿಗಳ ಕುರಿತು ಹೆಚ್ಚು ವೀಕ್ಷಿಸತೊಡಗಿದೆ. ಜೊತೆಗೆ ಛಾಯಾಗ್ರಹಣದ ಪ್ರಾಥಮಿಕ ಪಾಠವೂ ಅದರಿಂದಲೇ ಪ್ರಾಪ್ತವಾಯಿತು. ನಂತರ ಅನುಭವವೇ ಪಾಠವಾಗಿ ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಕೊಂಡೆ’ ಎನ್ನುತ್ತಾರೆ ಶರ್ಮಾ

ಜೊರ್ಡಾನ್ ಲೀಫ್ ಬರ್ಡ್ (ಎಲೆಯಕ್ಕಿ)

‘ಪಕ್ಷಿಗಳ ಛಾಯಾಗ್ರಹಣಕ್ಕೆ ಅಗಾಧವಾದ ತಾಳ್ಮೆಬೇಕು. ಪಕ್ಷಿಯ ಒಂದು ಅಪೂರ್ವ ಚಟುವಟಿಕೆಯನ್ನು ಸೆರೆಹಿಡಿಯಲು ಬಹುಕಾಲ ತಾಳ್ಮೆಯಿಂದ ಕಾಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆ ಪಕ್ಷಿಗೆ ಯಾವುದೇ ರೀತಿಯ ಹಾನಿಯಾಗಬಾರದು. ಕೆಲವೊಮ್ಮೆ ಕಾಡಿನಲ್ಲಿ ಪಕ್ಷಿಗಳ ಛಾಯಾಗ್ರಹಣ ಮಾಡುವಾಗ ಇತರ ಪ್ರಾಣಿಗಳು ದಾಳಿ ಮಾಡುವ ಭಯವೂ ಇರುತ್ತದೆ. ಹಾಗಾಗಿಯೇ ಪಕ್ಷಿಗಳ ಅಕ್ಷಿಯಷ್ಟೇ ಛಾಯಾಗ್ರಾಹಕನ ಮನಸು ಮತ್ತು ಕಣ್ಣು ಸೂಕ್ಷ್ಮವಾಗಿರಬೇಕು’ ಎನ್ನುತ್ತಾರೆ ಶರ್ಮಾ.ಬಿ.ಸಿ.ಶರ್ಮಾ

‘ಛಾಯಾಗ್ರಹಣ ಬೆಳಕಿನೊಂದಿಗೆ ಆಡುವ ಆಟವಾದ ಕಾರಣ ಬೆಳಕಿನ ಸಂಯೋಜನೆ ಹಾಗೂ ಚೌಕಟ್ಟು ಸಹ ಪಕ್ಷಿಗಳ ಛಾಯಾಗ್ರಹಣದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ದಟ್ಟ ಕಾಡುಗಳಲ್ಲಿ ಛಾಯಾಗ್ರಹಣ ಮಾಡುವಾಗ ಬೆಳಕಿನ ಪ್ರಮಾಣ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಶರ್ಮಾ ಮಾಹಿತಿ ನೀಡುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry