ಗೌರಿ ಲಂಕೇಶ್‌ ಹತ್ಯೆ; ಕೆ.ಟಿ. ನವೀನ್‌ ಕುಮಾರ್ ಬಂಧನ

7

ಗೌರಿ ಲಂಕೇಶ್‌ ಹತ್ಯೆ; ಕೆ.ಟಿ. ನವೀನ್‌ ಕುಮಾರ್ ಬಂಧನ

Published:
Updated:
ಗೌರಿ ಲಂಕೇಶ್‌ ಹತ್ಯೆ; ಕೆ.ಟಿ. ನವೀನ್‌ ಕುಮಾರ್ ಬಂಧನ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಮದ್ದೂರಿನ ಕೆ.ಟಿ.ನವೀನ್‌ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು, ‘ಹತ್ಯೆಗೆ ಒಳಸಂಚು’ ರೂಪಿಸಿದ್ದ ಆರೋಪದಡಿ ಶುಕ್ರವಾರ ಬಂಧಿಸಲಾಗಿದೆ.

ಫೆ. 16ರಂದು ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನವೀನ್‌ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡ ಪಿಸ್ತೂಲ್ ಹಾಗೂ ‘ಪಾಯಿಂಟ್ 32’ ರಿವಾಲ್ವರ್‌ನ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಯಲ್ಲೂ ಕೈವಾಡವಿರಬಹುದು ಎಂಬ ಅನುಮಾನದಡಿ ಎಸ್‌ಐಟಿ ಅಧಿಕಾರಿಗಳು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು.

ಆರೋಪಿಯ ಬಂಧನದ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದ ತನಿಖಾಧಿಕಾರಿ, 'ವಶದಲ್ಲಿದ್ದ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಆತನನ್ನು ಬಂಧಿಸಿದ್ದೇವೆ. ಸದ್ಯ ಆತ, ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಮೊದಲ ಆರೋಪಿ' ಎಂದರು.

ತನಿಖೆ ಪ್ರಗತಿ ಕುರಿತ ವಿವರವುಳ್ಳ ಸಿ.ಡಿ ಹಾಗೂ ಆರೋಪಿಯ ಹೇಳಿಕೆಯನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ನೀಡಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಿರ್ಮಲಾ ರಾಣಿ, ‘ಆರೋಪಿ ನೀಡಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಬೇಕಿದೆ. ಹೀಗಾಗಿ, ಆತನನ್ನು ಪುನಃ ಎಸ್‌ಐಟಿ ಕಸ್ಟಡಿಗೆ ನೀಡಬೇಕು’ ಎಂದು ಮನವಿ ಮಾಡಿದರು.

ನವೀನ್‌ ಪರ ವಕೀಲ ಎ.ವೇದಮೂರ್ತಿ, ‘ಪೊಲೀಸರು ಈಗಾಗಲೇ 20 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಯಾವುದೇ ಮಾಹಿತಿ ಸಿಗದಿದ್ದರಿಂದ, ಬಲವಂತವಾಗಿ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ನನ್ನ ಕಕ್ಷಿದಾರನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ. ಮತ್ತೆ ಕಸ್ಟಡಿಗೆ ನೀಡಬಾರದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಾದ– ಪ್ರತಿವಾದ ಆಲಿಸಿದ ನ್ಯಾಯಾಲಯ, ನವೀನ್‌ನನ್ನು 5 ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry