ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಡಬ್ಬಿಯೂ ‘ಕ್ರಾಂತಿ’ ಜ್ಯೋತಿಯಾಯಿತು

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದೆಹಲಿಯ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಜ್ಯೋತಿ ಪಹಾಡ್‍ಸಿಂಗ್, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎಂಬಿಎ ಪದವೀಧರೆಯಾಗಿರುವ ಇವರು ಉದ್ಯಮ ಸಮಾಲೋಚಕಿ. ತಮ್ಮ ಮನೆಯ ಕಸ ವಿಲೇವಾರಿಗೆ ಪ್ಲಾಸ್ಟಿಕ್ ಡಸ್ಟ್‌ಬಿನ್‌ ಕವರ್‌ಗಳ ಬಳಕೆ ಬೇಡ. ಇದಕ್ಕೆ ಪರ್ಯಾಯಗಳನ್ನು ಹುಡುಕೋಣ ಎಂದು ಅವರು ಕೈಗೊಂಡ ಒಂದು ನಿರ್ಧಾರ ಹೊಸ ಉತ್ಪನ್ನದ ಅನ್ವೇಷಣೆಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ.

ಕಸ ವಿಲೇವಾರಿಗೆ ಬಳಸುವ, ಪ್ಲಾಸ್ಟಿಕ್‍ನಿಂದ ತಯಾರಿಸಿದ ಡಸ್ಟ್‌ಬಿನ್‌ ಕವರ್‌ಗಳ ಬದಲು ನ್ಯೂಸ್ ಪೇಪರ್ ಮತ್ತು ಮೈದಾ ಹಿಟ್ಟಿನ ಗೋಂದು ಬಳಸಿ ಡಸ್ಟ್‌ಬಿನ್‌ ಕವರ್‌ ತಯಾರಿಸಿದ್ದಾರೆ. ಅದಕ್ಕೆ ’ಗ್ರೀನ್‍ಬಗ್ ಡಸ್ಟ್‌ಬಿನ್‌ ಲೈನರ್’ ಎಂಬ ಹೆಸರು ನೀಡಿದ್ದಾರೆ. ಮೊದಲು ತಮ್ಮ ಮನೆಗೆ, ನಂತರ ಸಂಬಂಧಿಕರಿಗೆ, ಸ್ನೇಹಿತರಿಗೆ ನೀಡುವಷ್ಟು ಕವರ್‌ಗಳನ್ನು ತಯಾರಿಸಲಾರಂಭಿಸಿದರು. ಹೆಚ್ಚಿನ ಬೇಡಿಕೆ ಬಂದಾಗ ದೊಡ್ಡಮಟ್ಟದಲ್ಲಿ ತಯಾರಿಸುವ ಯೋಜನೆ ರೂಪಿಸಿದರು.

ಮಹಿಳೆಯರಿಗೆ ತರಬೇತಿ ನೀಡಿ, ಅವರ ಮೂಲಕ ಇದನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವ ಯೋಚನೆ ಬಂದಾಗ ಅವರ ನೆರವಿಗೆ ಬಂದವರು ಅವರ ಪತಿ ಅರುಣ್ ಬಾಲಚಂದ್ರನ್.

ಅರುಣ್ ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ, ವಿವಿಧ ಪ್ರದೇಶಗಳ ಮಹಿಳೆಯರನ್ನು ಮಾತನಾಡಿಸಿ, ‘ಗ್ರೀನ್‍ಬಗ್ ಲೈನರ್’ಗಳ ತಯಾರಿಕೆ ಕುರಿತು ವಿವರಿಸಿದರು. ಕೊಳಗೇರಿ ವಾಸಿಗಳು, ಅನಕ್ಷರಸ್ಥರು, ದೌರ್ಜನ್ಯಕ್ಕೆ ಒಳಗಾದವರು, ಆರ್ಥಿಕವಾಗಿ ಹಿಂದುಳಿದವರು ಹೀಗೆ ವಿವಿಧ ಸ್ತರದ ಮಹಿಳೆಯರಿಗೆ ಕವರ್ ತಯಾರಿ ತರಬೇತಿ ನೀಡಿದರು.

ಕಾಗದ ಕತ್ತರಿಸುವಿಕೆ, ಅದರ ಸುತ್ತಳತೆ, ಮಡಚಬೇಕಾದ ರೀತಿ, ತಳ ಭಾಗ ದಪ್ಪವಾಗಿರಲು ಅನುಸರಿಸಬೇಕಾದ ವಿಧಾನ, ಗೋಂದು ಬಳಸಿ ಅಂಟಿಸುವುದು ಹೀಗೆ ಪ್ರತಿಯೊಂದನ್ನೂ ತಾಳ್ಮೆಯಿಂದ ಜ್ಯೋತಿ ಅವರು ಮಹಿಳೆಯರಿಗೆ ಕಲಿಸಿದ್ದಾರೆ. ತರಬೇತಿ ಪಡೆದವರಿಗೆ ದುಡಿಯುವ ಅವಕಾಶವನ್ನೂ ಕಲ್ಪಿಸಿದ್ದಾರೆ.

ಮಹಿಳೆಯರು ತಮ್ಮ ಮನೆಯಲ್ಲೇ, ಬಿಡುವಿನ ವೇಳೆಯಲ್ಲೇ ಕವರ್‌ಗಳನ್ನು ತಯಾರಿಸಬಹುದು. ಪ್ರತಿದಿನ ಇಂತಿಷ್ಟೇ ಕವರ್‌ಗಳನ್ನು ತಯಾರಿಸಬೇಕು ಎಂಬ ಷರತ್ತು ಇರುವಿದಿಲ್ಲ. ‘ಸಾಧ್ಯವಾದಾಗ ಸಾಧ್ಯವಾದಷ್ಟು’ ಎಂಬ ಸರಳ ನಿಯಮ. ಅವರಿದ್ದ ಜಾಗಕ್ಕೇ ಬಂದು, ಅವರು ತಯಾರಿಸಿದ ಅಷ್ಟೂ ಕವರ್‌ಗಳನ್ನು ಕೊಳ್ಳುವ ವ್ಯವಸ್ಥೆ ಇದರಲ್ಲಿದೆ. ಮಹಿಳೆಯವರು ಪ್ರತಿದಿನ ಸರಾಸರಿ ₹400 ಸಂಪಾದಿಸುತ್ತಿದ್ದಾರೆ. ಯಾವುದೇ ಮಧ್ಯವರ್ತಿಗೆ ಅವಕಾಶ ಇಲ್ಲ. ಪ್ರತಿ ಹಂತದಲ್ಲೂ ಪಾರದರ್ಶಕತೆ ಇದೆ.

‘ನಾವು ಉದ್ಯೋಗ ನೀಡುವುದಿಲ್ಲ. ಆ ಮಹಿಳೆಯರ ಸಾಮರ್ಥ್ಯ ಹೊರ ತೆಗೆಯುತ್ತಿದ್ದೇವೆ. ಗಳಿಸಿದ ಆದಾಯದಲ್ಲಿ ಶೇ65ರಷ್ಟನ್ನು ಇವರಿಗೆ ನೀಡುತ್ತಿದ್ದೇವೆ. ನನ್ನ ಕುಟುಂಬಕ್ಕೆ ಮಾತ್ರ ಎಂದು ವಿನ್ಯಾಸಗೊಳಿಸಿದ ಉತ್ಪನ್ನ ಇಂದು ಹಲವು ಮಹಿಳೆಯರ ಸ್ವಾವಲಂಬಿ ಬದುಕಿಗೆ ಕಾರಣವಾಗಿದೆ. ಮಹಿಳಾ ಸಬಲೀಕರಣದಲ್ಲಿ ತಮ್ಮದೊಂದು ಪುಟ್ಟ ಹೆಜ್ಜೆಯಷ್ಟೇ’ ಎನ್ನುವುದು ಜ್ಯೋತಿ ಅವರ ಮಾತು.

ಬಿಡುಗಡೆ ಮಾಡಿದ ಮೊದಲ 50 ದಿನಗಳಲ್ಲಿಯೇ 100 ಆರ್ಡರ್‌ಗಳನ್ನು ಪಡೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಸ್ಟ್‌ಬಿನ್ ಬೆಲೆ ₹400. ಖರೀದಿ ಮತ್ತು ಇತರ ಮಾಹಿತಿಗೆ facebook.com/grnbug ನೋಡಿ. www.amazon.in ಮೂಲಕವೂ ಖರೀದಿಗೆ ಅವಕಾಶವಿದೆ.
***
ರಾಷ್ಟ್ರಮಟ್ಟದ ಸಾಧನೆ
ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಗೋಲ್ಡ್‌ಮನ್‌ ಸಾಕ್ಸ್ 2016ರಲ್ಲಿ ಜಂಟಿಯಾಗಿ ಮಹಿಳೆಯರ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಇದರಲ್ಲಿ 1700 ಮಹಿಳಾ ಉದ್ಯಮಿಗಳು ತಮ್ಮ ಯೋಜನೆಗಳನ್ನು ವಿವರಿಸಿದರು. ಎರಡನೇ ಹಂತಕ್ಕೆ ಆಯ್ಕೆಯಾದ 50 ಯೋಜನೆಗಳಲ್ಲಿ ಜ್ಯೋತಿ ಅವರ ಈ ಯೋಜನೆಯೂ ಇತ್ತು. ಯೋಜನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು 2017ರ ಏಪ್ರಿಲ್‌ನಲ್ಲಿ ಆಯ್ಕೆ ಮಾಡಿದ 15 ಉದ್ಯಮಿಗಳಲ್ಲಿ ಜ್ಯೋತಿ ಸಹ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT