ರಾತ್ರಿ ಹೊರಗೆ ಹೋಗಲು ಭಯವಾಗುತ್ತೆ

ಸೋಮವಾರ, ಮಾರ್ಚ್ 25, 2019
33 °C

ರಾತ್ರಿ ಹೊರಗೆ ಹೋಗಲು ಭಯವಾಗುತ್ತೆ

Published:
Updated:
ರಾತ್ರಿ ಹೊರಗೆ ಹೋಗಲು ಭಯವಾಗುತ್ತೆ

ಬಣ್ಣದ ಬಟ್ಟೆಗಳ ಮೇಲೆ ಸುಂದರ ಚಿತ್ತಾರ ಮೂಡಿಸುವ ಈ ಕಲೆಗಾರ್ತಿ ನಗರದ ಖ್ಯಾತ ವಸ್ತ್ರವಿನ್ಯಾಸಕಿ. ಹೆಣ್ಣು ಎಂಬ ಕಾರಣಕ್ಕೆ ಫ್ಯಾಷನ್‌ ಲೋಕಕ್ಕೆ ಅಡಿ ಇಡಲು ಮನೆಯವರ ವಿರೋಧವಿತ್ತು. ಆದರೂ ಸವಾಲುಗಳನ್ನು ಮೆಟ್ಟಿ ಸಾಧನೆಯ ಶಿಖರವೇರಿದ ದೀಪಿಕಾ ಗೋವಿಂದ್ ಮಹಿಳಾ ದಿನಾಚರಣೆ ಹಾಗೂ ಹೆಣ್ಣಿನ ಆಂತರ್ಯದ ಬಗ್ಗೆ ಮಾತನಾಡಿದ್ದು ಹೀಗೆ...

* ‘ನಾನು ಹೆಣ್ಣಾಗಿ ಹುಟ್ಟಿದ್ದೇ ನನಗೆ ಹೆಮ್ಮೆ’ ಎನಿಸಿದ ಕ್ಷಣ?

ಹೆಣ್ಣು ಎಂದರೆ ಹೊಂದಾಣಿಕೆ. ಹೆಣ್ಣಾದವಳು ವೃತ್ತಿ, ಮನೆ–ಮಕ್ಕಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲಳು. ಬದುಕಿನ ಒತ್ತಡಗಳೆಲ್ಲವನ್ನೂ ಸರಿದೂಗಿಸಿ ಹೆಣ್ಣು ಬದುಕು ಸಾಗಿಸುವ ರೀತಿಯೇ ನಿಜಕ್ಕೂ ಖುಷಿ ಕೊಡುತ್ತದೆ. ಈ ವೃತ್ತಿಯಲ್ಲಿ ನಾನು ಪಡೆದ ಗೌರವ, ಪ್ರಶಸ್ತಿಗಳನ್ನು ನೋಡಿದಾಗ ಹೆಮ್ಮೆಯ ಭಾವ ಮೂಡುತ್ತದೆ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆಯ ಜೊತೆಗೆ ಖುಷಿಯೂ ಇದೆ.

* ಬಾಲ್ಯದ ದಿನಗಳ ಬಗ್ಗೆ ಹೇಳಿ?

ಬಾಲ್ಯದಲ್ಲಿ ನಾನು ಹೆಣ್ಣು ಎಂಬ ಕಾರಣಕ್ಕೆ ತಂದೆ–ತಾಯಿ ಷರತ್ತು ಹಾಗೂ ನಿಯಮಗಳನ್ನು ಹೇರುತ್ತಿದ್ದರು. ಆದರೆ ಅವರ ಯಾವುದೇ ನಿಯಮ, ಷರತ್ತುಗಳು ನನ್ನು ಆಸೆ–ಕನಸುಗಳನ್ನು ತಡೆಹಿಡಿಯಲಿಲ್ಲ. ನಾನು ನನ್ನದೇ ದಾರಿಯಲ್ಲಿ ಸಾಗಿ ಯಶಸ್ಸು ಕಂಡಿದ್ದೇನೆ. ಫ್ಯಾಷನ್ ಡಿಸೈನಿಂ‌ಗ್ ವೃತ್ತಿ ಆಯ್ದುಕೊಂಡಾಗ ನನ್ನನ್ನು ಪ್ರೋತ್ಸಾಹಿಸಲಿಲ್ಲ. ಅವರಿಗೆ ನಾನು ಐಎಎಸ್ ಅಧಿಕಾರಿ ಆಗಬೇಕು ಎಂಬ ಹಂಬಲವಿತ್ತು. ತಂದೆ–ತಾಯಿಗಳ ಆಸೆಯನ್ನು ಪೂರೈಸದೆ ನನ್ನದೇ ದಾರಿಯಲ್ಲಿ ಸಾಗಿದೆ. ನನ್ನ ವೃತ್ತಿ ನನಗೆ ತೃಪ್ತಿ ನೀಡಿದೆ.

* ಬೆಂಗಳೂರಲ್ಲಿ ಲಿಂಗ ಸಮಾನತೆ ಇದೆ ಎಂದು ನಿಮಗೆ ಅನ್ನಿಸುತ್ತದೆಯೇ?

‌ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಪರಿಸ್ಥಿತಿ ಅಷ್ಟೇನು ಖುಷಿ ಅನಿಸಲ್ಲ. ನಗರದಲ್ಲಿ ಲಿಂಗ ಸಮಾನತೆ ಇಲ್ಲದಿರಲು ಮುಖ್ಯ ಕಾರಣ ವಲಸಿಗರು. ಕುಟುಂಬ, ತಂದೆ–ತಾಯಿಯಿಂದ ದೂರವಿರುವ ವಲಸಿಗರು ಯಾವುದೇ ಭಯವಿಲ್ಲದೇ ಇಲ್ಲಿ ಬೆಳೆಯುತ್ತಾರೆ. ಮಹಿಳೆಯರಿಗೆ ಗೌರವ ನೀಡುವುದಿಲ್ಲ. ವಲಸೆ ಬಂದವರ ವರ್ತನೆಯನ್ನು ನೋಡಿ, ಇಲ್ಲಿನ ಹುಡುಗರು ಕಲಿಯುತ್ತಾರೆ. ಒಟ್ಟಾರೆಯಾಗಿ ಹೆಣ್ಣುಮಕ್ಕಳಿಗೆ ಇಂಥವರಿಂದ ನೆಮ್ಮದಿ ಇಲ್ಲ.

* ಭವಿಷ್ಯದ ಸಮಾಜದಲ್ಲಿ ಹೆಣ್ಣು ನೆಮ್ಮದಿಯಾಗಿರಲು ಗಂಡು ಹೆತ್ತವರು ಯಾವ ರೀತಿ ಕಾಳಜಿ ಇರಿಸಿಕೊಳ್ಳಬೇಕು ಎಂದು ನಿಮಗೆ ಅನ್ನಿಸುತ್ತದೆ?

ಮೊದಲು ಮನೆಯಲ್ಲಿ ಹುಡುಗರಿಗೆ ಹುಡುಗಿಯರನ್ನು ಗೌರವಿಸುವ ಸಂಸ್ಕೃತಿ ಕಲಿಸಬೇಕು. ಒಂದು ವಯಸ್ಸಿನವರೆಗೆ ಉತ್ತಮವಾದ ಸಂಸ್ಕೃತಿಯನ್ನು ನೀಡಿ ಬೆಳೆಸಬೇಕು. ಹುಡುಗಿಯು ನಿನ್ನ ಹಾಗೆ, ಅವಳಿಗೂ ನಿನ್ನಷ್ಟೇ ಶಕ್ತಿ–ಸಾಮರ್ಥ್ಯವಿದೆ ಎಂಬ ಅರಿವನ್ನು ಮೂಡಿಸಬೇಕು. ನನಗೆ ಇಬ್ಬರು ಗಂಡು ಮಕ್ಕಳು, ಪ್ರತಿದಿನ ಇದನ್ನು ಹೇಳುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುತ್ತೇನೆ.

* ಮಹಿಳಾದಿನ ಎಂದರೆ ನಿಮ್ಮ ಅರ್ಥದಲ್ಲಿ ಏನು?

ನನ್ನ ಪ್ರಕಾರ ಮಹಿಳೆ ಎಂದರೆ ಒಬ್ಬ ತಾಯಿ ಹಾಗೂ ಒಂದು ಶಕ್ತಿ. ಮಹಿಳಾದಿನ ಎನ್ನುವುದು ಹುಟ್ಟಿದ ದಿನದ ಥರ. ಮಹಿಳೆಯರಿಗಾಗಿ ಒಂದು ದಿನ ವಿಶೇಷವಾಗಿ ಏನಾದರೂ ಮಾಡಬೇಕು, ಹೆಣ್ಣಿನ ಹುಟ್ಟನ್ನು ಸಂಭ್ರಮಿಸಬೇಕು. ಅದಕ್ಕಾಗಿ ಒಂದು ದಿನ ಬೇಕು. ಸ್ತ್ರೀಶಕ್ತಿಯನ್ನು ಸಂಭ್ರಮಿಸುವ ದಿನವೇ ಮಹಿಳಾ ದಿನ.

******

* ‘ಛೇ! ನಾನು ಹುಡುಗ ಆಗಬೇಕಿತ್ತು’ ಎಂದು ಅನ್ನಿಸಿದ್ದು ಇದೆಯೇ?

ನನಗೆ ಅನೇಕ ಸಂದರ್ಭಗಳಲ್ಲಿ ಹಾಗೆ ಅನ್ನಿಸಿದೆ. ಮೊದಲಿಗಿಂತ ಇತ್ತೀಚೆಗೆ ಹೀಗೆ ಹೆಚ್ಚು ಅನಿಸುತ್ತಿದೆ. ರಾತ್ರಿ ವೇಳೆ ಒಬ್ಬಳೇ ಓಡಾಡುವಾಗ ಭಯದಿಂದಲೇ ಓಡಾಡುವಂತಾಗಿದೆ. ಹಿಂದಿನ ಬೆಂಗಳೂರು ಹೀಗಿರಲಿಲ್ಲ. ಮೊದಲೆಲ್ಲಾ ನಾನು ಫ್ಯಾಷನ್ ಷೋಗಳಿಗೆ ಒಬ್ಬಳೇ ಹೋಗಿ ಬರುತ್ತಿದ್ದೆ. ಆದರೆ ಈಗ ರಾತ್ರಿ ವೇಳೆ ಮನೆಯಿಂದ ಹೊರಗೆ ಹೆಜ್ಜೆ ಇಡಲೂ ಯೋಜನೆ ಮಾಡುತ್ತೇನೆ. ಇದಕ್ಕೆ ನಾನು ಹೆಣ್ಣಾಗಿ ಹುಟ್ಟಿರುವುದು ಕಾರಣವಲ್ಲ, ಸರ್ಕಾರ–ಸಮಾಜ ನಮ್ಮ ರಕ್ಷಣೆಗೆ ಇನ್ನಷ್ಟು ಗಮನ ಕೊಡಬೇಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry