7

ಮಂಡ್ಯ: ಮತ್ತೊಮ್ಮೆ ಅನುಕಂಪದ ಅಲೆ?

Published:
Updated:
ಮಂಡ್ಯ: ಮತ್ತೊಮ್ಮೆ ಅನುಕಂಪದ ಅಲೆ?

ಮಂಡ್ಯ: ಕೆ.ಎಸ್‌. ಪುಟ್ಟಣ್ಣಯ್ಯ ನಿಧನದಿಂದಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪದ ಅಲೆ ಸೃಷ್ಟಿಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದಿಂದ ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಅಥವಾ ಪತ್ನಿ ಸುನಿತಾ ಸ್ಪರ್ಧಿಸುವ ಸಾಧ್ಯತೆ ಇದೆ.

ಜಿಲ್ಲೆಯ ಇತಿಹಾಸದ ಪುಟಗಳನ್ನು ತೆರೆದಾಗ ಅನುಕಂಪದ ಅಲೆ ಐದು ಚುನಾವಣೆಗಳಲ್ಲಿ ಪ್ರಭಾವ ಬೀರಿದ್ದು, ಐದರಲ್ಲೂ ಮೃತಪಟ್ಟ ನಾಯಕರ ಪತ್ನಿಯರೇ ಗೆಲುವು ಸಾಧಿಸಿದ್ದಾರೆ.

ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದ ಎಂ. ಮಂಚೇಗೌಡ 1984ರಲ್ಲಿ ನಿಧನರಾದರು. ಅದೇ ವರ್ಷ ಎದುರಾದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮಂಚೇಗೌಡ ಪತ್ನಿ ಜಯವಾಣಿ ಅವರಿಗೆ ಟಿಕೆಟ್‌ ನೀಡಿತು. ಅನುಕಂಪದ ಅಲೆಯಲ್ಲಿ ಜಯಗಳಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎ.ಎಸ್‌. ಬಂಡಿಸಿದ್ದೇಗೌಡ 1985ರಲ್ಲಿ ನಿಧನರಾದರು. 1986ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾ ಪಕ್ಷ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಟಿಕೆಟ್‌ ನೀಡಿತು. ಅವರು ಕೂಡ ವಿಜಯಮಾಲೆ ಧರಿಸಿದರು.

1997ರಲ್ಲಿ ಜನತಾದಳ ಶಾಸಕರಾಗಿದ್ದ ಎಸ್‌.ಡಿ. ಜಯರಾಂ ನಿಧನರಾದರು. ಆಗ ನಡೆದ ಮಂಡ್ಯ ಉಪ ಚುನಾವಣೆಯಲ್ಲಿ ಜಯರಾಂ ಪತ್ನಿ ಪ್ರಭಾವತಿ ಗೆಲುವು ಸಾಧಿಸಿದ್ದರು. ಎಂ. ಶ್ರೀನಿವಾಸ್‌, ಎಂ.ಬಿ. ಶ್ರೀಕಾಂತ್‌ ನಡುವಿನ ಪೈಪೋಟಿಯಲ್ಲಿ ಅನುಕಂಪದ ಅಲೆ ಅವರನ್ನು ಗೆಲುವಿನ ದಡ ಸೇರಿಸಿತ್ತು.

2004ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಾಗ ಕಿರುಗಾವಲು ಕ್ಷೇತ್ರದ ಮಾಜಿ ಶಾಸಕ ಕೆ.ಎನ್‌. ನಾಗೇಗೌಡ ನಿಧನರಾದರು. 1999ರ ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿದ್ದ ಕೆ.ಎನ್‌. ನಾಗೇಗೌಡರು ಕಾಂಗ್ರೆಸ್‌ನ ಡಿ.ಸಿ. ತಮ್ಮಣ್ಣ ವಿರುದ್ಧ 724 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಂತರ ಅವರು ನಿಧನರಾದಾಗ ಕ್ಷೇತ್ರದಲ್ಲಿ ಅನುಕಂಪದ ಅಲೆ ಸೃಷ್ಟಿಯಾಯಿತು. 2004ರ ಚುನಾವಣೆಯಲ್ಲಿ ಸಂಯುಕ್ತ ಜನತಾದಳ ನಾಗೇಗೌಡರ ಪತ್ನಿ ನಾಗಮಣಿ ಅವರಿಗೆ ಟಿಕೆಟ್‌ ನೀಡಿತು. ಅನುಕಂಪದ ಅಲೆಯಲ್ಲಿ ಗೆದ್ದರು. ಮಧು ಮಾದೇಗೌಡ ಸೋತರು.

2009ರಲ್ಲಿ ಮದ್ದೂರು ಶಾಸಕ ಎಂ.ಎಸ್‌. ಸಿದ್ದರಾಜು ಅಕಾಲಿಕ ಮರಣಕ್ಕೀಡಾದರು. ಆಗ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕಲ್ಪನಾ ಸಿದ್ದರಾಜು ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿತು. ಡಿ.ಸಿ. ತಮ್ಮಣ್ಣ ಬಿಜೆಪಿ ಅಭ್ಯರ್ಥಿಯಾಗಿ, ಎಸ್‌.ಎಂ. ಕೃಷ್ಣ ಸಹೋದರನ ಪುತ್ರ ಗುರುಚರಣ್‌ ಕಾಂಗ್ರೆಸ್‌ ಅಭ್ಯರ್ಥಿಯಾದರು. ಚುನಾವಣೆಯಲ್ಲಿ ಕಲ್ಪನಾ ಅವರಿಗೆ ಗೆಲುವು ಒಲಿಯಿತು.

‘ಮಂಡ್ಯ ಜಿಲ್ಲೆಯಲ್ಲಿ ಅನುಕಂಪದ ಅಲೆಗೆ ಸೋಲೇ ಆಗಿಲ್ಲ. ಈಗ ಮೇಲುಕೋಟೆ ವಿಧಾನಸಭಾಚುನಾವಣೆಯಲ್ಲಿ ಅದೇ ವಾತಾವರಣ ಸೃಷ್ಟಿಯಾಗಿದೆ. ಜತೆಗೆ ಪುಟ್ಟಣ್ಣಯ್ಯಉತ್ತರಾಧಿಕಾರಿಗೆ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೊಮ್ಮೆ ಅನುಕಂಪದ ಅಲೆ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಆತ್ಮಾನಂದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry