ಪರಿತ್ಯಕ್ತ ರೋಗಿಗಳ ಕರುಣಾಜನಕ ಕಥೆ

7

ಪರಿತ್ಯಕ್ತ ರೋಗಿಗಳ ಕರುಣಾಜನಕ ಕಥೆ

Published:
Updated:
ಪರಿತ್ಯಕ್ತ ರೋಗಿಗಳ ಕರುಣಾಜನಕ ಕಥೆ

ಕಾವೇರಿ ಕಣಿವೆಯ ಐದು ಜಿಲ್ಲೆಗಳ ಜನರಿಗೆ ಇಂದಿಗೂ ‘ದೊಡ್ಡಾಸ್ಪತ್ರೆ’ಯಾಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಇಂತಹ ‘ನಿರ್ಗತಿಕರ’ ಕಥೆಗಳು ಸಾಕಷ್ಟಿವೆ. ಅಪರಿಚಿತ ಶವದ ಗುರುತು ಪತ್ತೆಗೆ ಪೊಲೀಸರು ಹೊರಡಿಸುವ ಪ್ರಕಟಣೆಗಳ ಹಿನ್ನೆಲೆಯನ್ನು ಕೆದಕುತ್ತಾ ‘ಪ್ರಜಾವಾಣಿ’ ಹೊರಟಾಗ ಕಾಣಿಸಿದ ತಣ್ಣನೆಯ ಕ್ರೌರ್ಯದ ಚಿತ್ರಣ...

ಕುರುಚಲು ಗಡ್ಡ, ಸುಕ್ಕುಗಟ್ಟಿದ ಮುಖ, ನಿಸ್ತೇಜ ಕಣ್ಣುಗಳ ದೇಹ... ಸಾವನ್ನು ಎದುರು ನೋಡುತ್ತ ಮೈಸೂರಿನ ಕೆ.ಆರ್.ಆಸ್ಪತ್ರೆಯ ಕೆ.ರಾಜ ವಾರ್ಡಿನಲ್ಲಿತ್ತು. ಕೆಂಪು ಬಣ್ಣದ ಚಾದರ ಹೊದ್ದು ಮಲಗಿದ್ದ 65 ವರ್ಷದ ಶಶಿಧರ ಅವರ ಶರೀರದ ಮೇಲೆ ‘ಅಡಲ್ಟ್ ಡೈಪರ್’ ಬಿಟ್ಟು ತುಣುಕು ಬಟ್ಟೆ ಇರಲಿಲ್ಲ. ಎದ್ದು ಕೂರಲು ಸಾಧ್ಯವಾಗದಷ್ಟು ನಿತ್ರಾಣಗೊಂಡಿದ್ದ ಅವರಿಗೆ ಆಯಾ ಕುಮಾರಿ ಆಗಷ್ಟೇ ಸ್ನಾನ ಮಾಡಿಸಿದ್ದರು. ಬಾಯಿಂದ ಸೋರುತ್ತಿದ್ದ ರಕ್ತವನ್ನು ಒರೆಸಿ ಉಪಚರಿಸುತ್ತಿದ್ದರು. ಅವರ ತೊದಲು ನುಡಿ ಬೇರೊಬ್ಬರಿಗೆ ಅರ್ಥವಾಗುತ್ತಿರಲಿಲ್ಲ.

ಮಾತ್ರೆ ನೀಡಿ, ಔಷಧ ಕುಡಿಸುವುದು ಮುಗಿಯುವುದಕ್ಕೂ ಮುನ್ನವೇ ಕುಮಾರಿಗೆ ಮತ್ತೊಬ್ಬರಿಂದ ಕರೆ ಬಂದಿತು. ಆರ್ತನಾದ ಕಿವಿಗೆ ಬಿದ್ದ ದಿಕ್ಕಿನೆಡೆಗೆ ಲಗುಬಗೆಯಿಂದ ಸಾಗಿದರು. 70ರ ವೃದ್ಧನ ಬೆಡ್‌ಶೀಟ್ ತೆಗೆದು ಪರಿಶೀಲಿಸಿದರು. ಹಾಸಿಗೆಯಲ್ಲೇ ಮಲ ವಿಸರ್ಜನೆ ಮಾಡಿಕೊಂಡು ಒದ್ದಾಡುತ್ತಿದ್ದ ಅವರನ್ನು ಪಕ್ಕಕ್ಕೆ ಮಲಗಿಸಿ ಶುಚಿಗೊಳಿಸಿದರು. ಮತ್ತೊಬ್ಬರಿಗೆ ನೀರು ಕುಡಿಸಿ ತಲೆ ಒರೆಸಿದರು. ಇಲ್ಲಿರುವ 12 ‘ನಿರ್ಗತಿಕ’ರಿಗೆ ಆಸ್ಪತ್ರೆಯ ಆಯಾಗಳೇ ಮಕ್ಕಳು.

ಹಾಗಂತ ಶಶಿಧರ ಅನಾಥರಲ್ಲ ಎಂಬುದು ಆಯಾಗಳ ನಂಬಿಕೆ. ಆಸ್ಪತ್ರೆಯ ದಾಖಲೆ ಪ್ರಕಾರ ಇವರು ಸುಣ್ಣದಕೆರೆಯ ನಿವಾಸಿ. ಆಕಸ್ಮಿಕವಾಗಿ ಬಿದ್ದು ಸೊಂಟದ ಮೂಳೆ ಮುರಿದುಕೊಂಡಾಗ ಚಿಕಿತ್ಸೆಗೆ ದಾಖಲಿಸಿದ ಯುವಕನೊಬ್ಬ ರೋಗಿಯ ಮಗನೆಂದು ಹೇಳಿಕೊಂಡಿದ್ದರು. ಮತ್ತೊಬ್ಬ ಮಹಿಳೆ ಆಗಾಗ ಹಾಸಿಗೆ ಪಕ್ಕದಲ್ಲಿ ಕುಳಿತು ಬಿಕ್ಕಳಿಸುತ್ತಿದ್ದುದನ್ನು ಕುಮಾರಿ ಕಂಡಿದ್ದರು. ಮೂರು ತಿಂಗಳಿಂದ ಅವರನ್ನು ಕಾಣಲು ಯಾರೊಬ್ಬರೂ ಬಂದಿಲ್ಲ. ಕೆ.ರಾಜ ವಾರ್ಡಿಗೆ ಸ್ಥಳಾಂತರಗೊಂಡ ಬಳಿಕ ಕುಮಾರಿಯಂತೆ ಪಾಳಿವಾರು ಕೆಲಸ ಮಾಡುವ ಆಯಾಗಳು ಹಾಗೂ ಶುಶ್ರೂಷಕಿಯರೇ ಆರೈಕೆ ಮಾಡುತ್ತಿದ್ದಾರೆ. ವೈದ್ಯರು ನಿತ್ಯ ಎರಡು ಬಾರಿ ಭೇಟಿ ನೀಡಿ ಆರೋಗ್ಯ ಪರಿಶೀಲಿಸುತ್ತಾರೆ.

ಪಾರ್ಶ್ವವಾಯು, ಆಸ್ತಮ, ಎಚ್ಐವಿ, ಕ್ಯಾನ್ಸರ್, ಟಿ.ಬಿ. ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರು ಏಕಾಂಗಿಗಳಾಗುತ್ತಿರುವ ಪ್ರಸಂಗಗಳು ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚಾಗುತ್ತಿವೆ. ನಿತ್ಯ ಸರಾಸರಿ ಎರಡು ಸಾವಿರ ಹೊರರೋಗಿಗಳ ಆರೋಗ್ಯ ತಪಾಸಣೆ ಮಾಡುವ ಆಸ್ಪತ್ರೆಯಲ್ಲಿ ಇಷ್ಟೇ ಪ್ರಮಾಣದ ಒಳರೋಗಿಗಳಿಗೂ ಚಿಕಿತ್ಸೆ ದೊರೆಯುತ್ತಿದೆ. ಪಕ್ಕದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಮತ್ತೊಂದು ಬದಿಯಲ್ಲಿ ಚೆಲುವಾಂಬ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಇದೆ. ರೋಗಿಗಳನ್ನು ತೊರೆದು ಸಂಬಂಧ ಕಡಿದುಕೊಂಡವರಂತೆ ಪಲಾಯನ ಮಾಡುವವರ ಮೇಲೆ ನಿಗಾ ಇಡುವುದು ಆಸ್ಪತ್ರೆಯ ಸಿಬ್ಬಂದಿಗೂ ಕಷ್ಟಸಾಧ್ಯವಾಗಿದೆ.

‘ಜನವರಿ ಮೊದಲ ವಾರದಲ್ಲಿ ವೃದ್ಧೆಯೊಬ್ಬರು ಮೃತಪಟ್ಟರು. ವಾರಸುದಾರರನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಮಾಹಿತಿ ನೀಡಿದೆವು. ವ್ಯಕ್ತಿಯೊಬ್ಬರು ಬಂದು ಮೃತ ಮಹಿಳೆ ತಮ್ಮ ತಾಯಿಯೆಂದು ದಾಖಲೆ ತೋರಿಸಿ ಶವ ಪಡೆದರು. ಸಾವು– ಬದುಕಿನ ನಡುವೆ ಹೋರಾಡುತ್ತಿದ್ದ ತಾಯಿಯನ್ನು ನೋಡಲು ನಾಲ್ಕು ತಿಂಗಳಿನಿಂದ ಮಗ ಬಂದಿರಲಿಲ್ಲ. ಚಿಕಿತ್ಸೆಗೆ ದಾಖಲಿಸುವ ವೇಳೆ ನೀಡಿದ್ದ ವಿಳಾಸದಲ್ಲಿಯೂ ಕುಟುಂಬದವರು ಪತ್ತೆಯಾಗಿರಲಿಲ್ಲ. ಬಹುಶಃ ತಾಯಿ ಸತ್ತ ಬಳಿಕ ಆ ಮಗನನ್ನು ಪಾಪಪ್ರಜ್ಞೆ ಕಾಡಿರಬೇಕು’ ಎಂಬುದು ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚಂದ್ರಶೇಖರ್ ಅವರ ವಿವರಣೆ.

ವೃದ್ಧರನ್ನು ಚಿಕಿತ್ಸೆಗೆ ದಾಖಲಿಸುವ ಸಂದರ್ಭದಲ್ಲಿ ನೀಡುವ ವಿಳಾಸದ್ದು ಬೇರೆಯದೇ ಕಥೆಯಿದೆ. ಈ ವಿಳಾಸದ ಜಾಡು ಹಿಡಿದು ಸಾಗಿದ ದೇವರಾಜ ಠಾಣೆಯ ಪೊಲೀಸರಿಗೆ ಈ ಸಮಾಜದ ಅಮಾನವೀಯ ಮುಖವೊಂದು ದರ್ಶನವಾಗಿದೆ.

60 ವರ್ಷ ವಯಸ್ಸಿನ ಹನುಮಂತಪ್ಪ 2017ರ ನ.11ರಂದು ಕೊನೆಯುಸಿರೆಳೆದರು. ಶವವನ್ನು ಪಡೆಯಲು ಯಾರೊಬ್ಬರೂ ಬರಲಿಲ್ಲ. ಚಿಕಿತ್ಸೆಗೆ ದಾಖಲಾಗುವ ಸಂದರ್ಭದಲ್ಲಿ ನೀಡಿದ್ದ ವಿಳಾಸವನ್ನು ಆಸ್ಪತ್ರೆಯ ಸಿಬ್ಬಂದಿ ಪೊಲೀಸರ ಕೈಗಿಟ್ಟರು. ಶ್ರೀರಂಗಪಟ್ಟಣ ತಾಲ್ಲೂಕಿನ ಹೊಸ ಆನಂದೂರಿನಲ್ಲಿ ಹನುಮಂತಪ್ಪ ಅವರ ಮನೆ ಸಿಗಲೇ ಇಲ್ಲ. ಫೋಟೊ ತೋರಿಸಿ ವಿಚಾರಿಸಿದರೂ ಗುರುತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

‘ಇಂತಹ ಪ್ರಕರಣ ಬಾಳ ಆಗಿವೆ ಬುಡಿ ಸಾರ್. ಸುಳ್ಳು ಅಡ್ರೆಸ್ ಬರೆಸ್ತಾರೆ. ಯಾರೂ ಬರದಿದ್ದರೆ ನಾವೇ ಶವಸಂಸ್ಕಾರ ಮಾಡುತ್ತೇವೆ. ಇಂಥ ಶವಗಳಿಗೆ ನಾವೇ ವಾರಸುದಾರರಾಗಿದ್ದೇವೆ’ ಎನ್ನುತ್ತಾ ದಾಖಲಾತಿ ಪುಸ್ತಕ ತಿರುವಿ ಹಾಕಿದ ಹೆಡ್‌ಕಾನ್‌ಸ್ಟೆಬಲ್ ಬೋರಪ್ಪ ಮುಖದಲ್ಲಿ ನಿರ್ಭಾವುಕತೆಯಿತ್ತು.

ದೇವರಾಜ ಠಾಣೆಯ ಬೋರಪ್ಪ ಏಳು ವರ್ಷಗಳಿಂದ ಅಪರಿಚಿತ ಶವಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನಜರಬಾದ್, ಉದಯಗಿರಿ, ಎನ್.ಆರ್.ಮೊಹಲ್ಲಾ, ಬೆಳವಾಡಿ, ಇಲವಾಲ ಸೇರಿ ಹಲವೆಡೆ ಇಂತಹವರ ವಿಳಾಸ ಪತ್ತೆಗೆ ಯತ್ನಿಸಿದ್ದಾರೆ. ವಾರಸುದಾರರು ಸಿಕ್ಕ ನಿದರ್ಶನ ಅಪರೂಪ ಎಂಬುದನ್ನು ಠಾಣೆಯ ಅಂಕಿ–ಸಂಖ್ಯೆಗಳೇ ದೃಢಪಡಿಸುತ್ತಿವೆ. 2018ರ ಜನವರಿಯಲ್ಲಿಯೇ ಕೆ.ಆರ್.ಆಸ್ಪತ್ರೆಯಲ್ಲಿ ಐವರು ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ವರ ಗುರುತು ಪತ್ತೆ ಆಗಿಲ್ಲ.

ನಿರ್ಗತಿಕ ರೋಗಿಗಳ ಹಣೆಪಟ್ಟಿ ಅಂಟಸಿಕೊಂಡ ವೃದ್ಧರು ಆಸ್ಪತ್ರೆ ಸೇರುವ ರೀತಿಯೂ ಭಿನ್ನ. ವೃದ್ಧ ರೋಗಿಯನ್ನು ಮನೆಯಿಂದ ಹೊರಹಾಕಲು ನಿರ್ಧರಿಸಿದವರು ನೇರವಾಗಿ ಆಸ್ಪತ್ರೆಗೂ ದಾಖಲಿಸುವುದಿಲ್ಲ. ರಸ್ತೆ ಬದಿಯ ತಂಗುದಾಣ, ಪಾದಚಾರಿ ಮಾರ್ಗ, ಆಸ್ಪತ್ರೆಯ ಉದ್ಯಾನಕ್ಕೆ ರಾತ್ರಿ ವೇಳೆ ಕರೆತಂದು ಬಿಟ್ಟು ಹೋಗುತ್ತಾರೆ. ಕೊರೆಯುವ ಚಳಿಯಲ್ಲಿ ಈ ಸ್ಥಳದಲ್ಲೇ ಪ್ರಾಣ ಬಿಟ್ಟವರೂ ಇದ್ದಾರೆ.

‘ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ವೃದ್ಧರೊಬ್ಬರನ್ನು ಬಸ್‌ ತಂಗುದಾಣದಲ್ಲಿ ಮಲಗಿಸುತ್ತಿರುವುದು ಕಣ್ಣಿಗೆ ಬಿದ್ದಿತು. ಆಟೊ ಬಳಿ ಸಾಗಿ ಚಾಲಕನನ್ನು ಪ್ರಶ್ನಿಸಿದೆ. ಕೆ.ಆರ್. ಆಸ್ಪತ್ರೆಯ ಎದುರು ಬಿಡುವಂತೆ ಸೂಚಿಸಿ ಹಣ ನೀಡಿದ್ದು ಗೊತ್ತಾಯಿತು. ವಿಚಾರಣೆಯಿಂದ ಗಲಿಬಿಲಿಗೊಂಡ ಆಟೊ ಚಾಲಕ ಹೆಚ್ಚಿನ ಮಾಹಿತಿ ನೀಡದೇ ಪರಾರಿಯಾಗಿಬಿಟ್ಟ. ರಸ್ತೆಬದಿಯಲ್ಲಿ ಹೀಗೆ ಪರಿತ್ಯಕ್ತರಾದವರು 108 ಆಂಬುಲೆನ್ಸ್‌ ಮೂಲಕ ಕೆ.ಆರ್.ಆಸ್ಪತ್ರೆ ಸೇರುತ್ತಾರೆ’ ಎಂಬುದು ಕೆ.ರಾಜ ವಾರ್ಡಿನ ಉಸ್ತುವಾರಿ ಜಗದೀಶ ಅವರ ವಿಶ್ಲೇಷಣೆ.

ಮಕ್ಕಳು, ಸೊಸೆಯ ತಾತ್ಸಾರ ಧೋರಣೆಯೂ ಅನೇಕರನ್ನು ಇಲ್ಲಿಗೆ ಕರೆತಂದಿದೆ. ಕೌಟುಂಬಿಕ ಕಲಹದಿಂದ ಮನೆ ತೊರೆದವರೂ ಇಲ್ಲಿಗೆ ತಲುಪುತ್ತಾರೆ. ಆಸ್ಪತ್ರೆಯ ಸಿಬ್ಬಂದಿ, ಪೊಲೀಸರು ವಿಚಾರಿಸಿದರೂ ವಿಳಾಸ ನೀಡುವುದಿಲ್ಲ. ಭರವಸೆಗಳನ್ನೆಲ್ಲ ಕಳೆದುಕೊಂಡವರು ಬದುಕಿನ ಕೊನೆಯ ಗಳಿಗೆಯನ್ನು ಎದುರು ನೋಡುತ್ತ ಮಂಕಾಗುತ್ತಾರೆ. ಕುಳಿತಲ್ಲೇ ಮಲ, ಮೂತ್ರವಾದರೂ ಅರಿವಿಗೆ ಬರುವುದಿಲ್ಲ. ಪರಿತ್ಯಕ್ತ ರೋಗಿಗಳಲ್ಲಿ ಜಾತಿ, ಅಂತಸ್ತಿನ ಭೇದವಿಲ್ಲ ಎಂಬುದು ವೈದ್ಯ ಯೋಗೇಶ್ ಅಭಿಪ್ರಾಯ. ಶ್ರೀಮಂತರಲ್ಲಿಯೂ ಈ ಮನಸ್ಥಿತಿ ಬೆಳೆಯುತ್ತಿದೆ ಎಂಬುದನ್ನು ಅನುಭವದ ಮೂಲಕವೇ ಅವರು ಬಿಚ್ಚಿಡುತ್ತಾರೆ.

‘ರಾತ್ರಿಪಾಳಿಯಲ್ಲಿದ್ದಾಗ ತುರ್ತು ನಿಗಾ ಘಟಕಕ್ಕೆ ರೋಗಿಯೊಬ್ಬರು ದಾಖಲಾದರು. ನಾಲ್ಕು ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡರೂ ವಿಳಾಸ ನೀಡಲಿಲ್ಲ. ದೀರ್ಘಕಾಲದ ಅನಾರೋಗ್ಯದಿಂದ ಅವರು ಮೃತಪಟ್ಟರು. ಬಟ್ಟೆಯನ್ನು ಪರಿಶೀಲಿಸಿದಾಗ ಜೇಬಿನಲ್ಲೊಂದು ದೂರವಾಣಿ ಸಂಖ್ಯೆ ಸಿಕ್ಕಿತು. ಇವರ ಪತ್ನಿ ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥಾಪಕಿ ಎಂಬುದು ಖಾತರಿಯಾಯಿತು. ವೈವಾಹಿಕ ಸಂಬಂಧ ಕಡಿದುಕೊಂಡಿದ್ದರೂ ವಿಚ್ಛೇದನ ಪಡೆದಿರಲಿಲ್ಲ. ಶವ ಪಡೆಯಲು ಬಂದವರು ಐಷಾರಾಮಿ ಕಾರುಗಳಿಂದ ಕೆಳಗಿಳಿದರು’ ಎಂಬ ಪ್ರಸಂಗವನ್ನು ನೆನಪಿಸಿಕೊಂಡರು.

‘ನಿರ್ಗತಿಕ’ರೆಂದು ಗುರುತಿಸಿಕೊಂಡವರಿಗೆ ಜನರಲ್‌ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡುವುದಕ್ಕೆ ಸಾಮಾನ್ಯ ರೋಗಿಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ. ಜನವರಿ ಮೊದಲ ವಾರದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ಗಲಾಟೆಯೂ ನಡೆದಿದೆ. ಸಾಮಾನ್ಯ ರೋಗಿಗಳಿಂದ ಇವರನ್ನು ಪ್ರತ್ಯೇಕಿಸಲು ವೈದ್ಯರು ಒಪ್ಪದೇ ಇದ್ದಾಗ ಕೆಲವರು ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆ.ರಾಜ ವಾರ್ಡ್‌ನಲ್ಲಿ ‘ನಿರ್ಗತಿಕ’ರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ.

ಅನಾರೋಗ್ಯದಿಂದ ಬಳಲಿ ಸಹಜವಾಗಿಯೇ ಮೃತಪಟ್ಟಿದ್ದರೂ ಪೊಲೀಸರು ಮೆಡಿಕೊ ಲೀಗಲ್ ಪ್ರಕರಣವೆಂದೇ (ಪೊಲೀಸ್ ತನಿಖೆಗೆ ವೈದ್ಯರು ಸೂಚಿಸುವ ಪ್ರಕರಣ) ಪರಿಗಣಿಸುತ್ತಾರೆ. ಮೃತರ ಚಹರೆಯನ್ನು ರಾಜ್ಯದ ಎಲ್ಲ ಠಾಣೆಗಳಿಗೂ ರವಾನಿಸುತ್ತಾರೆ. ಪತ್ರಿಕಾ ಪ್ರಕಟಣೆ ನೀಡಿ ಗುರುತು ಪತ್ತೆಗೆ ಯತ್ನಿಸುತ್ತಾರೆ. 10 ದಿನ ಕಳೆದರೂ ಯಾರೊಬ್ಬರೂ ಬಾರದೇ ಇದ್ದರೆ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯ ಸ್ಮಶಾನದಲ್ಲಿ ಮಣ್ಣು ಮಾಡಲಾಗುತ್ತದೆ.

‘ಇಲ್ಲೇ ನೋಡಿ ಸಾರ್, ಆ ಗೋರಿಯಿಂದ ಈ ತುದಿಯ ಮರದವರೆಗಿನ ಜಾಗ’ ಎಂದು ಅಪರಿಚಿತ ಶವಗಳನ್ನು ಹೂಳುವ ಉದ್ದೇಶಕ್ಕೆಂದೇ ಗುರುತಿಸಿದ ಸ್ಥಳವನ್ನು ಸ್ಮಶಾನದ ಕಾವಲುಗಾರ ವೆಂಕಟರಾಮು ತೋರಿಸಿದರು. ಅಲ್ಲೇ ಮತ್ತೊಂದು ಮರದ ಬುಡದಲ್ಲಿ ಕುಣಿ ತೆಗೆಯುವುದರಲ್ಲಿ ಮಗ್ನರಾದರು. 6 ಅಡಿ ಉದ್ದ, 3 ಅಡಿ ಅಗಲ ಹಾಗೂ 4 ಅಡಿ ಆಳದ ಕುಣಿ ಸಿದ್ಧವಾದ ನಂತರ ಹೆಡ್‌ ಕಾನ್‌ಸ್ಟೆಬಲ್ ಬೋರಪ್ಪ ಅವರು ಶವದೊಂದಿಗೆ ಬಂದರು. ಮೃತದೇಹದ ಕಾಲು ಮಡಚಿ ಕುಣಿಯೊಳಗಿಟ್ಟು ಮಣ್ಣು ಹಾಕಿದರು. ಸೇವಂತಿ, ಮಲ್ಲಿಗೆ ಹೂವಿನ ಮಾಲೆಯೊಂದನ್ನು ಮಣ್ಣಿನ ಮೇಲೆ ಹಾಕಿ, ಕರ್ಪೂರ ಬೆಳಗಿ ನಮಸ್ಕರಿಸಿದರು.

‘ಅದೇ ಅಲ್ಲಿ ಕಾಣುತ್ತಿದೆಯಲ್ಲ ಡೊಂಕು ಮರ’ ಎಂದು ಬೆರಳು ಮುಂದೆ ಮಾಡಿ ತೋರಿಸಿದರು. ಮರದ ಬುಡದಲ್ಲಿ ಮಣ್ಣಾಗಿದ್ದ ಅಪರಿಚಿತ ಶವವೊಂ

ದರ ಗೋರಿಯ ಎದುರು ಎಂಜಿನಿಯರ್ ಪತ್ನಿಯೊಬ್ಬರು ಕಣ್ಣೀರು ಸುರಿಸಿದ ಪ್ರಸಂಗವನ್ನು ವೆಂಕಟರಾಮು ತಂದೆ ಶ್ರೀನಿವಾಸ್ ಮೆಲುಕು ಹಾಕಿದರು. ಪಾರ್ಶ್ವವಾಯು ಪೀಡಿತರಾಗಿ ಪತ್ನಿ ಮತ್ತು ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಎಂಜಿನಿಯರ್‌, ನಿರ್ಗತಿಕರಂತೆ ಚಿಕಿತ್ಸೆ ಪಡೆದು ಮೃತಪಟ್ಟಿದ್ದರು.

ಆರೈಕೆ ಆದ್ಯತೆಯಾಗಿ ಉಳಿದಿಲ್ಲ: ‘ಆಧುನಿಕ ಜೀವನ ಶೈಲಿಯ ಪ್ರಭಾವದ ಪರಿಣಾಮವಾಗಿ ಮನುಷ್ಯನ ಆದ್ಯತೆಗಳೂ ಬದಲಾಗಿವೆ’ ಎಂಬುದು ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಪ್ಯಾಲಿಯೆಟಿವ್ ಕೇರ್ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಮುದ್ರೆ ಅವರ ಅಭಿಪ್ರಾಯ.

ಮೈಸೂರಿನ ಪೂರ್ವಭಾಗದ ಬಡಾವಣೆಯೊಂದರಲ್ಲಿ ಐದು ತಿಂಗಳ ಹಿಂದೆ ಈ ಸಂಸ್ಥೆ ಸಮೀಕ್ಷೆ ಕೂಡ ನಡೆಸಿದೆ. 35 ಸಾವಿರ ಜನರಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 157 ಮಂದಿಗೆ ಆರೈಕೆಯ ಅಗತ್ಯವಿದೆ ಎಂಬುದನ್ನು ಸಮೀಕ್ಷೆ ಋಜುವಾತುಪಡಿಸಿದೆ.

‘ಸಾವು ಕ್ರೂರವಲ್ಲ. ಸಾವಿನ ದವಡೆಯಲ್ಲಿರುವ ರೋಗಿಗಳ ನೋವಷ್ಟೇ ಭಯಾನಕ. ಅಂದಾಜಿನ ಪ್ರಕಾರ ದೇಶದಲ್ಲಿ ವರ್ಷಕ್ಕೆ 90 ಲಕ್ಷ ರೋಗಿಗಳು ಮೃತಪಡುತ್ತಾರೆ. ಎಲ್ಲರನ್ನೂ ಆಸ್ಪತ್ರೆಯಲ್ಲಿಟ್ಟು ಆರೈಕೆ ಮಾಡಲು ಸಾಧ್ಯವಿಲ್ಲ. ಅವಿಭಕ್ತ ಕುಟುಂಬಗಳಲ್ಲಿ ಯಾರಾದರೂ ಒಬ್ಬರು ನೋಡಿಕೊಳ್ಳುತ್ತಿದ್ದರು. ಕುಟುಂಬದ ಗಾತ್ರ ಕುಗ್ಗಿದಂತೆ ವೃದ್ಧರು, ರೋಗಿಗಳನ್ನು ಆರೈಕೆ ಮಾಡುವುದು ಆದ್ಯತೆಯಾಗಿ ಉಳಿದಿಲ್ಲ’ ಎಂದು ವಿಶ್ಲೇಷಿಸುತ್ತಾರೆ ಮುದ್ರೆ.

ಕ್ಯಾನ್ಸರ್ ರೋಗಿಯ ಗೆಡ್ಡೆ ಒಡೆದು ವಾಸನೆ ಬರಲು ಶುರುವಾದಾಗ ರೋಗಿಯ ಬಗೆಗೆ ತಾತ್ಸಾರ ಬೆಳೆಯುತ್ತದೆ ಎಂಬುದು ಬಹುತೇಕರನ್ನು ಆಪ್ತಸಮಾಲೋಚನೆಗೆ ಒಳಪಡಿಸಿದಾಗ ಮುದ್ರೆ ಅವರಿಗೆ ಗೊತ್ತಾದ ಸತ್ಯ. ‘ದುಬಾರಿ ಬೆಲೆಯ ಔಷಧ, ಮಾತ್ರೆಗಳನ್ನು ಖರೀದಿಸಲು ಸಾಧ್ಯವಾಗದೇ ತೊಳಲಾಡಿದ ಕುಟುಂಬಗಳನ್ನು ಕಂಡಿದ್ದೇನೆ. ತೀವ್ರ ನಿಗಾ ಘಟಕದ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಿತ್ಯ ₹ 5 ಸಾವಿರದಿಂದ 25 ಸಾವಿರ ವೆಚ್ಚ ಮಾಡಬೇಕು. ಈ ಸಾಮರ್ಥ್ಯ ಎಷ್ಟು ಜನರಿಗಿದೆ’ ಎಂಬ ಮುದ್ರೆ ಅವರ ಪ್ರಶ್ನೆಯಲ್ಲಿಯೇ ರೋಗಿಗಳನ್ನು ತೊರೆಯುವ ಸಮಸ್ಯೆಗೆ ಕಾರಣವೂ ಇದೆ.

ಕಾಯ್ದೆಯ ಅಸಮರ್ಪಕ ಅನುಷ್ಠಾನ: ‘ಮುಪ್ಪಿನಲ್ಲಿದ್ದ ತಂದೆ–ತಾಯಿಯನ್ನು ಕಾವಡಿಯಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ಸಾಗಿದ ಶ್ರವಣಕುಮಾರನ ನಾಡಿನ ದೌರ್ಭಾಗ್ಯ ನೋಡಿ ಇದು’ ಎಂದು ಪುರಾಣದ ಪ್ರಸಂಗವನ್ನು ನೆನಪಿಸಿಕೊಂಡವರು ಜೆಎಸ್‌ಎಸ್‌ ಕಾನೂನು ಕಾಲೇಜಿನ ಪ್ರೊ.ಎಸ್‌.ನಟರಾಜ್‌. ವೃದ್ಧರ ರಕ್ಷಣೆಗೆ ಕೇಂದ್ರ ಸರ್ಕಾರ ರೂಪಿಸಿದ ‘ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ– 2007’ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗದಿರುವ ವಿಷಾದ ಕೂಡ ಅವರ ಮಾತಿನಲ್ಲಿತ್ತು.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 125ರ ಪ್ರಕಾರ ಅವಲಂಬಿತರು ಜೀವನಾಂಶ ಕೇಳಬಹುದು. ವಿಚ್ಛೇದಿತ ಮಹಿಳೆಯರಿಗೆ ಈ ನಿಯಮದಡಿ ನ್ಯಾಯಾಲಯ ಜೀವನಾಂಶ ನೀಡುತ್ತದೆ. ಇದರಲ್ಲಿ ಪೋಷಕರೂ ಜೀವನಾಂಶ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ವೃದ್ಧರ ಮೇಲಿನ ದೌರ್ಜನ್ಯ ಹೆಚ್ಚಾದ ಪರಿಣಾಮ ಕೇಂದ್ರ ಸರ್ಕಾರವು 2007ರಲ್ಲಿ ಪ್ರತ್ಯೇಕ ಕಾಯ್ದೆ ರೂಪಿಸಿದೆ.

‘ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕಾನೂನುಬದ್ಧ ಕರ್ತವ್ಯ. ನಿರ್ಲಕ್ಷ್ಯ ತೋರುವ ಮಕ್ಕಳಿಂದ ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಪರಿಹಾರ ಕೇಳುವ ಹಕ್ಕು ಪೋಷಕರಿಗೆ ಇದೆ. ಊಟ, ವಸತಿ ಹಾಗೂ ಆರೋಗ್ಯದ ಖರ್ಚಿಗೆ ತಿಂಗಳಿಗೆ ಗರಿಷ್ಠ ₹ 10 ಸಾವಿರ ಪಡೆಯಬಹುದು ಎಂಬುದನ್ನು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆಸ್ತಿಯನ್ನು ಮರಳಿ ಪಡೆಯುವ ಅಧಿಕಾರವನ್ನೂ ನೀಡಲಾಗಿದೆ. ಮಕ್ಕಳ ಮೇಲಿನ ಪ್ರೀತಿ, ಮಮಕಾರದಿಂದ ನ್ಯಾಯಾಲಯದ ಮೆಟ್ಟಿಲು ತುಳಿಯಲು ಅನೇಕರು ಮುಂದಾಗುವುದಿಲ್ಲ’ ಎನ್ನುತ್ತಾರೆ ನಟರಾಜ್‌.

ಸಾವಿನ ಗುಣಮಟ್ಟ!

ಜೀವನದ ಗುಣಮಟ್ಟದ ಮಾದರಿಯಲ್ಲಿಯೇ ಗುಣಮಟ್ಟದ ಸಾವಿನ ಕುರಿತೂ ಜಾಗತಿಕ ಮಟ್ಟದಲ್ಲಿ ಅಧ್ಯಯನಗಳು ನಡೆದಿವೆ. ‘ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್’ 2015ರಲ್ಲಿ ಸಾವಿನ ಗುಣಮಟ್ಟಕ್ಕೆ ಸಂಬಂಧಿಸಿ ಸಮೀಕ್ಷೆಯೊಂದನ್ನು ನಡೆಸಿದೆ. ಸಾವಿನ ಮನೆಯ ಬಾಗಿಲ ಬಳಿ ಕುಳಿತ ರೋಗಿಗಳನ್ನು ಹೇಗೆ ಆರೈಕೆ ಮಾಡಲಾಗುತ್ತದೆ ಎಂಬುದು ಈ ಸಮೀಕ್ಷೆಯ ಮಾನದಂಡ. 80 ದೇಶಗಳ ಪಟ್ಟಿಯಲ್ಲಿ ಭಾರತ 67ನೇ ಸ್ಥಾನದಲ್ಲಿದೆ. ಅಮೆರಿಕ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮೊದಲ ಮೂರು ಸ್ಥಾನದಲ್ಲಿವೆ. ಸಿಂಗಪುರ 12, ಜಪಾನ್‌ 14ನೇ ಸ್ಥಾನದಲ್ಲಿವೆ.

‘ಆರೋಗ್ಯ ಕ್ಷೇತ್ರದಲ್ಲಾದ ಗಣನೀಯ ಸುಧಾರಣೆಯಿಂದ ಮಾನವನ ಜೀವಿತಾವಧಿ ವೃದ್ಧಿಸಿದೆ. ಸಂಧ್ಯಾಕಾಲದಲ್ಲಿರುವ ನಾಗರಿಕರು ಅವಲಂಬಿತರಾಗುತ್ತಿದ್ದಾರೆ. ಮಧುಮೇಹ, ಹೃದಯಬೇನೆ, ಕ್ಯಾನ್ಸರ್ ಸೇರಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಬಹುತೇಕರನ್ನು ಕಾಡುತ್ತಿವೆ. ಭಾರತವೂ ಒಳಗೊಂಡಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನೋವು ಉಪಶಮನದ ಆರೈಕೆ (ಪ್ಯಾಲಿಯೆಟಿವ್ ಕೇರ್) ಅರಿವು ಸಾರ್ವಜನಿಕರಲ್ಲಿ ಮೂಡಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry