ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಧ್ವಜ: ಮೂರು ರಂಗು, ನೂರಾರು ಗುಂಗು

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರ ರೂಪಿಸಿರುವ ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳನ್ನೊಳಗೊಂಡ ಕನ್ನಡಧ್ವಜ ಅಧಿಕೃತ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರದ ಮುಂದೆ ಹೋಗಲಿದೆ. ರಾಜ್ಯದ ಲಾಂಛನವನ್ನು ಒಳಗೊಂಡಿರುವ ಈ ತ್ರಿವರ್ಣ ಧ್ವಜವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ರೂಪಿಸಿದೆ.

ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ತೊಡಕಿಲ್ಲ ಎಂದೂ ತಜ್ಞರ ಸಮಿತಿಯ ವರದಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಕನ್ನಡಧ್ವಜದಿಂದ ರಾಷ್ಟ್ರಧ್ವಜಕ್ಕಿರುವ ಗೌರವಕ್ಕೆ ಧಕ್ಕೆಯಾಗುವುದಿಲ್ಲ. ರಾಷ್ಟ್ರಧ್ವಜದ ಕೆಳಗೆ ರಾಜ್ಯಧ್ವಜ ಹಾರಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕನ್ನಡಧ್ವಜ ರೂಪುಗೊಂಡಿದ್ದು ಏಕೆ? ಹೇಗೆ?
‘ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜ ಹಾರಿಸುವುದು ಕಡ್ಡಾಯ’ ಎಂದು 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಆದರೆ, ‘ವಿವಿಧ ಸಂಘಟನೆಗಳು ಕನ್ನಡಧ್ವಜವನ್ನು ತಮಗಿಷ್ಟ ಬಂದಂತೆ ಬಳಸುತ್ತಿರುವುದಕ್ಕೆ ನಿಯಂತ್ರಣ ಹೇರಬೇಕು’ ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಖಟ್ಲೆ ಹಿನ್ನೆಲೆಯಲ್ಲಿ- ‘ಕನ್ನಡಧ್ವಜ ಎನ್ನುವುದು ಇದೆಯೇ? ಅದಕ್ಕೆ ಕರ್ನಾಟಕ ಸರ್ಕಾರದ ಮಾನ್ಯತೆ ಇದೆಯೇ?’ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.

2012ರ ಅಕ್ಟೋಬರ್‌ 4ರಂದು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರವು ‘ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಿದ ಆದೇಶ ವಾಪಸ್ ಪಡೆಯಲಾಗಿದೆ’ ಎಂದು ತಿಳಿಸಿತ್ತು. ಇವೆಲ್ಲ ಘಟನೆಗಳು ಕನ್ನಡಧ್ವಜದ ಅಧಿಕೃತತೆಯ ಕುರಿತ ಜಿಜ್ಞಾಸೆಗೆ ಕಾರಣವಾದವು. ಕನ್ನಡಧ್ವಜದ ಬಗೆಗಿನ ಗೊಂದಲಗಳನ್ನು ತಪ್ಪಿಸಲಿಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ‘ಕನ್ನಡಧ್ವಜ ಸಂಹಿತೆ’ ರೂಪಿಸಲು 9 ಜನರ ಸಮಿತಿಯೊಂದನ್ನು ರೂಪಿಸಿತ್ತು.

ಕನ್ನಡಧ್ವಜದ ಔಚಿತ್ಯದ ಕುರಿತು ರಾಜ್ಯಸರ್ಕಾರ ನೇಮಿಸಿದ ಸಮಿತಿ ದೇಶದ ಗಮನಸೆಳೆದಿತ್ತು. ‘ಕಾಶ್ಮೀರದಂತೆ ಕರ್ನಾಟಕ ಕೂಡ ಪ್ರತ್ಯೇಕ ಧ್ವಜಕ್ಕೆ ಬೇಡಿಕೆಯಿರಿಸಿದೆ. ಇದು ಒಂದು ದೇಶ, ಒಂದು ಧ್ವಜ ಎನ್ನುವ ನಿಲುವಿಗೆ ವಿರುದ್ಧ’ ಎನ್ನುವ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದ್ದವು.

ಕನ್ನಡಧ್ವಜದ ಹುಟ್ಟು
ಕರ್ನಾಟಕದ ಏಕೀಕರಣವು 1956ರಲ್ಲಿ ನಡೆದರೂ, 1966ರವರೆಗೂ ಕನ್ನಡಧ್ವಜದ ಅಗತ್ಯ ಯಾರಿಗೂ ಕಾಣಿಸಿರಲಿಲ್ಲ; ಅದರ ಚಿಂತನೆಯೂ ನಡೆದಿರಲಿಲ್ಲ. ಈ ಚಿಂತನೆಗೆ ಪ್ರೇರಣೆ ಒದಗಿಸಿದ್ದು ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಶುರುವಾದ ಕನ್ನಡ ಚಳವಳಿ. ತಮಿಳುನಾಡಿನ ಡಿಎಂಕೆ ಪಕ್ಷದ ಧ್ವಜವನ್ನು ಬೆಂಗಳೂರಿನಲ್ಲಿನ ಕೆಲವು ತಮಿಳು ಭಾಷಿಕರು ತಮ್ಮ ಮನೆಗಳ ಮೇಲೆ ಹಾರಿಸಿಕೊಂಡಿದ್ದರು.

ಕಂಟೋನ್ಮೆಂಟ್‍, ಪ್ರಕಾಶನಗರ, ಶ್ರೀರಾಮಪುರ, ಮಾಗಡಿರಸ್ತೆ ಹಾಗೂ ಹಲಸೂರಿನ ಪರಿಸರದಲ್ಲಿ ಕಪ್ಪು ಮತ್ತು ಕೆಂಪು ಬಣ್ಣದ ಡಿಎಂಕೆ ಧ್ವಜಗಳು ಕಾಣಿಸುವುದು ಸಾಮಾನ್ಯ ಎನ್ನುವಂತಾಯಿತು. ಇದನ್ನು ವಿರೋಧಿಸಿದ ಕನ್ನಡ ಹೋರಾಟಗಾರರು, ಮ. ರಾಮಮೂರ್ತಿ ನೇತೃತ್ವದಲ್ಲಿ ತಮಿಳುಧ್ವಜಗಳನ್ನು ಕೆಳಗಿಳಿಸುವ ಚಳವಳಿ ಕೈಗೊಂಡರು. ರಾಮಮೂರ್ತಿ ಪಾದಯಾತ್ರೆ ಮಾಡಿದರು, ಸಾರ್ವಜನಿಕ ಸಭೆ ನಡೆಸಿದರು.

ಇದೆಲ್ಲದರ ಫಲಿತಾಂಶವಾಗಿ ತಮಿಳುಧ್ವಜವೇನೋ ಕೆಳಗಿಳಿಯಿತು. ಅದರ ಜಾಗದಲ್ಲಿ ಬೇರೆ ಏನನ್ನು ಹಾರಿಸುವುದು? ಆಗ ಹೊಳೆದದ್ದು ಕನ್ನಡ ಧ್ವಜದ ಚಿಂತನೆ. ರಾಮಮೂರ್ತಿ ನೇತೃತ್ವದಲ್ಲಿ ರೂಪುಗೊಂಡ ‘ಕನ್ನಡ ಪಕ್ಷ’ ಕೂಡ ಕನ್ನಡ ಧ್ವಜದ ಅಗತ್ಯವನ್ನು ಪ್ರತಿಪಾದಿಸಿತು.

ಸಿನಿಮಾ ಹಚ್ಚಿದ ಕಿಚ್ಚು
‘ಕಂಚಿ ತಲೈವನ್‍’ (1963) ಎನ್ನುವ ತಮಿಳು ಸಿನಿಮಾ ಕನ್ನಡ ಚಳವಳಿಗಾರರ ಕೋಪಕ್ಕೆ ಗುರಿಯಾಗಿತ್ತು. ಈ ಕೋಪಕ್ಕೆ ಕಾರಣ, ಚಿತ್ರದಲ್ಲಿನ ಕಂಚಿಯ ರಾಜ, ಕನ್ನಡ ದೊರೆ ಮಯೂರವರ್ಮನನ್ನು ಹೀಯಾಳಿಸುವ ಹಾಗೂ ಕನ್ನಡ ಧ್ವಜವನ್ನು ಕಾಲಿನಿಂದ ತುಳಿಯುವ ಸನ್ನಿವೇಶ. ಕನ್ನಡಿಗರ ಪ್ರತಿಭಟನೆಗೆ ಮಣಿದು ಸಿನಿಮಾದಲ್ಲಿನ ಧ್ವಜಪ್ರಸಂಗವನ್ನು ಕತ್ತರಿಸಲಾಯಿತು. ಈ ಪ್ರಸಂಗ, ಕನ್ನಡಧ್ವಜ ರೂಪಿಸಲು ಒಂದು ಪ್ರೇರಣೆಯಾಗಿ ಪರಿಣಮಿಸಿತು.

ಕನ್ನಡಧ್ವಜದ ಮೊದಲ ಸ್ವರೂಪ ಹೇಗಿತ್ತು?
ರಾಮಮೂರ್ತಿ ಅಧ್ಯಕ್ಷತೆಯಲ್ಲಿ 1966ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡಿಗರ ಬೃಹತ್‍ ಸಮಾವೇಶದಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ರೂಪಿಸುವ ನಿರ್ಣಯ ಕೈಗೊಳ್ಳಲಾಯಿತು. ಶಾಂತಿ ಮತ್ತು ಕ್ರಾಂತಿಯನ್ನು ಸೂಚಿಸುವ ಬಣ್ಣಗಳಿವು. ಕರ್ನಾಟಕ ಚಿನ್ನದ ನಾಡು ಎನ್ನುವುದನ್ನು ಹಳದಿ ಸಂಕೇತಿಸುತ್ತದೆ.

ಕರ್ನಾಟಕ ಏಕೀಕರಣದ ಅಪೂರ್ಣತೆಯ ಹಿನ್ನೆಲೆಯಲ್ಲಿ, ಕನ್ನಡನಾಡಿನಿಂದ ಕೈತಪ್ಪಿಹೋದ ಪ್ರದೇಶಗಳನ್ನು ಮರಳಿ ತೆಕ್ಕೆಗೆ ಸೇರಿಸಿಕೊಳ್ಳಲು ನಡೆಸಬೇಕಾದ ಹೋರಾಟದ ಅಗತ್ಯವನ್ನು ಕೆಂಪು ಬಣ್ಣ ಸೂಚಿಸುತ್ತಿತ್ತು. ಹಸಿರು ಬಣ್ಣದ ಏಳು ತೆನೆಗಳನ್ನೊಳಗೊಂಡ ಕರ್ನಾಟಕದ ನಕ್ಷೆ ಬಾವುಟದ ಮಧ್ಯದಲ್ಲಿತ್ತು. ಈ ತೆನೆಗಳು ಕನ್ನಡನಾಡನ್ನು ಆಳಿದ ಏಳು ಸಾಮ್ರಾಜ್ಯಗಳ ಸಂಕೇತಗಳು. ತೆನೆಯ ಹಸಿರು ಸಮೃದ್ಧಿಯ ಸಂಕೇತ. ‘ಕನ್ನಡ ಪಕ್ಷ’ ಅಧಿಕಾರಕ್ಕೆ ಬಂದರೆ ಎಂಟನೇ ತೆನೆಯನ್ನು ಬಾವುಟಕ್ಕೆ ಸೇರಿಸುವ ಚಿಂತನೆಯೂ ಇತ್ತು.

ಬಾವುಟವೇನೋ ರೂಪುಗೊಂಡಿತು. ಅದರ ಬಳಕೆ ಕಷ್ಟಕರ ಎನ್ನುವಂತಾಯಿತು. ಬಾವುಟದ ಪರಿಷ್ಕರಣೆಗೆಂದು ಕನ್ನಡ ಚಳವಳಿಯ ನಾಯಕರು ಮತ್ತೆ ಸಭೆ ಸೇರಿದರು. ಆ ಸಭೆಯಲ್ಲಿ ಹಳದಿ-ಕೆಂಪಿನ ನಾಲ್ಕು ಮೂಲೆಗಳ ಧ್ವಜದ ಪರಿಕಲ್ಪನೆಯನ್ನು ರಾಮಮೂರ್ತಿ ಮಂಡಿಸಿದರು. ಸರ್ವಾನುಮತದಿಂದ ಕನ್ನಡಧ್ವಜಕ್ಕೆ ಮನ್ನಣೆ ದೊರೆಯಿತು. ಈ ಧ್ವಜವೇ ಕನ್ನಡ ಪ್ರಜ್ಞೆಯ ಅಭಿವ್ಯಕ್ತಿಯಾಗಿ ಬಳಕೆಯಾಗುತ್ತಾ ಬಂದಿದೆ.

ಬಿ.ಎಂ.ಶ್ರೀ. ಹಾರಿಸಿದ ಬಾವುಟ
ರಾಮಮೂರ್ತಿ ಅವರ ನೇತೃತ್ವದಲ್ಲಿ ಹಳದಿ-ಕೆಂಪಿನ ಧ್ವಜ ಕನ್ನಡಿಗರ ನಡುವೆ ಜನಪ್ರಿಯವಾಯಿತು. ಆದರೆ, ಈ ಧ್ವಜದ ಮಾನಸಿಕ ರೂಪವನ್ನು ಕರ್ನಾಟಕ ಏಕೀಕರಣಕ್ಕೆ ಮೊದಲೇ ಬಿ.ಎಂ. ಶ್ರೀಕಂಠಯ್ಯ ಸಿದ್ಧಪಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಸಮಯದಲ್ಲಿ ಅವರು, ಕರ್ನಾಟಕವನ್ನು ವರ್ಣಿಸುವ ಕವನಗಳ ಗುಚ್ಛವಾದ ‘ಕನ್ನಡ ಬಾವುಟ’ ಕೃತಿಯನ್ನು ಪ್ರಕಟಿಸಿದರು. ‘ಏರಿಸಿ, ಹಾರಿಸಿ, ಏರಿಸಿ, ಹಾರಿಸಿ, ಕನ್ನಡದ ಬಾವುಟ’ ಎನ್ನುತ್ತಾ, ‘ಕನ್ನಡದ ಬಾವುಟವ ಹಿಡಿಯದವರಾರು, ಕನ್ನಡದ ಬಾವುಟಕೆ ಮಡಿಯದವರಾರು, ನಮ್ಮ ಈ ಬಾವುಟಕೆ ಮಿಡಿಯದವರಾರು’ ಎಂದು ಕನ್ನಡಿಗರ ಮನಸ್ಸಿನಲ್ಲಿ ಕನ್ನಡಧ್ವಜದ ಸ್ವರೂಪವನ್ನು ಮೂಡಿಸಿದರು.

ಭಾರತದಲ್ಲಿ ರಾಜ್ಯಧ್ವಜಗಳಿವೆಯೇ?
1952ರಲ್ಲಿ ಕಾಶ್ಮೀರಕ್ಕೆ ಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನ ನೀಡಿದಾಗ ಪ್ರತ್ಯೇಕ ಧ್ವಜಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಾಶ್ಮೀರ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲೆಲ್ಲೂ ಅಧಿಕೃತ ಧ್ವಜಗಳಿಲ್ಲ. ಆದರೆ, ಪ್ರತ್ಯೇಕ ಧ್ವಜಕ್ಕೆ ಸಂಬಂಧಿಸಿದ ಪರ-ವಿರೋಧ ಚರ್ಚೆಗಳು ಸಾಕಷ್ಟು ನಡೆದಿವೆ.

ತಮಿಳುನಾಡಿನಲ್ಲಿ ಐವತ್ತು ವರ್ಷಗಳ ಹಿಂದೆಯೇ ಪ್ರತ್ಯೇಕ ಧ್ವಜದ ಕೂಗು ಜೋರಾಗಿ ಮೊಳಗಿತ್ತು. 1970ರಲ್ಲಿ ಡಿಎಂಕೆಯ ಕರುಣಾನಿಧಿ ತಮಿಳುಧ್ವಜದ ಪ್ರಸ್ತಾಪವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮುಂದಿಟ್ಟಿದ್ದರು.

ಭಾರತದ ತ್ರಿವರ್ಣ ಧ್ವಜವನ್ನು ಒಂದು ಮೂಲೆಯಲ್ಲಿ, ಇನ್ನೊಂದು ಮೂಲೆಯಲ್ಲಿ ತಮಿಳುನಾಡಿನ ಸರ್ಕಾರದ ಲಾಂಛನ ಹಾಗೂ ತಮಿಳು ಸಂಸ್ಕೃತಿಯನ್ನು ಸೂಚಿಸುವ ದೇಗುಲದ ಗೋಪುರಗಳನ್ನು ಈ ಧ್ವಜ ಒಳಗೊಂಡಿತ್ತು. ಅಮೆರಿಕದ ರಾಜ್ಯಗಳಲ್ಲಿ ಪ್ರತ್ಯೇಕ ಧ್ವಜಗಳಿ
ರುವಂತೆ ಭಾರತದಲ್ಲೂ ಇದ್ದರೆ ತಪ್ಪೇನಿಲ್ಲ ಎನ್ನುವ ಭಾವನೆ ಇಂದಿರಾ ಅವರದಾಗಿತ್ತು. ಆದರೆ, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ನಾಡಧ್ವಜದ ಬೇಡಿಕೆಯನ್ನು ವಿರೋಧಿಸಿದ್ದರು. ಅಂದಿನ ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‍ ಕೂಡ ರಾಜ್ಯಗಳು ಧ್ವಜ ಹೊಂದುವುದನ್ನು ವಿರೋಧಿಸಿದ್ದರು.

ಸದ್ಯಕ್ಕೆ ಕರ್ನಾಟಕ, ಸಿಕ್ಕಿಂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಾಡಧ್ವಜದ ರೂಪದಲ್ಲಿ ಧ್ವಜಗಳನ್ನು ಬಳಸುವುದಿದೆ. ಆದರೆ, ಅವುಗಳಿಗೆ ಸಂವಿಧಾನದ ಮಾನ್ಯತೆಯಿಲ್ಲ.

ಭಾರತದ ಧ್ವಜಸಂಹಿತೆ ಏನು ಹೇಳುತ್ತದೆ?
ಭಾರತದ ಧ್ವಜಸಂಹಿತೆ ರಾಷ್ಟ್ರಧ್ವಜದ ಪಾರಮ್ಯವನ್ನು ಎತ್ತಿಹಿಡಿಯುತ್ತದೆ. ಆದರೆ, ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿಲ್ಲ. ತ್ರಿವರ್ಣ ಧ್ವಜಕ್ಕೂ ಎತ್ತರದಲ್ಲಿ ಬೇರೆ ಯಾವ ಧ್ವಜವೂ ಹಾರಬಾರದು ಎನ್ನುವ ಸೂಚನೆಯಲ್ಲೇ ಇತರ ಧ್ವಜಗಳ ಬಗ್ಗೆ ಸಹಿಷ್ಣುತಾಭಾವ ಇರುವುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT